Friday, January 10, 2025

ಸಂಕ್ರಾಂತಿ, ಪೊಂಗಲ್ ಪ್ರಯುಕ್ತ ಗೂಳಿಗಳ ಓಟದ ಸ್ಪರ್ಧೆ

    ಭದ್ರಾವತಿ: ನಗರಸಭೆ ವ್ಯಾಪ್ತಿಯ ವಾರ್ಡ್ ನಂ.೨೭ರ ನ್ಯೂಟೌನ್ ಕೂಲಿಬ್ಲಾಕ್ ಶೆಡ್, ಆಂಜನೇಯ ಅಗ್ರಹಾರದಲ್ಲಿ ಶ್ರೀ ಮಾರಿಯಮ್ಮ ಅಖಾಡ ಪೊಂಗಲ್ ಕಮಿಟಿ ವತಿಯಿಂದ ೫೬ನೇ ವರ್ಷದ ಸಂಕ್ರಾಂತಿ ಹಾಗು ಪೊಂಗಲ್ ಹಬ್ಬದ ಪ್ರಯುಕ್ತ ಗೂಳಿಗಳ ಓಟದ ಸ್ಪರ್ಧೆ ಸೇರಿದಂತೆ ವಿವಿಧ ಸ್ಪರ್ಧೆಗಳು ಮತ್ತು ಲಾಟರಿ ಬಹುಮಾನ ಯೋಜನೆ ಹಾಗು ಧಾರ್ಮಿಕ ಆಚರಣೆಗಳನ್ನು ಜ.೧೫ ರಿಂದ ೧೭ರವರೆಗೆ ಹಮ್ಮಿಕೊಳ್ಳಲಾಗಿದೆ. 
    ಜ.೧೫ರಂದು ಬೆಳಿಗ್ಗೆ ೧೦ ಗಂಟೆಗೆ ಶ್ರೀ ಮಾರಿಯಮ್ಮ ದೇವಿಗೆ ಪೂಜಾ ಕಾರ್ಯಕ್ರಮ ಹಾಗು ಪ್ರಸಾದ ವಿನಿಯೋಗ ಮತ್ತು ಮಕ್ಕಳಿಗೆ ಆಟೋಟ ಸ್ಪರ್ಧೆ ಹಾಗು ಮಹಿಳೆಯರಿಗೆ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿದೆ. 
    ಜ.೧೬ರಂದು ಮಧ್ಯಾಹ್ನ ೧೨ ಗಂಟೆಗೆ ಗೂಳಿಗಳ ಓಟದ ಸ್ಪರ್ಧೆ ಆಯೋಜಿಸಲಾಗಿದ್ದು, ಮೊದಲ ಬಹುಮಾನ ರು. ೧೫,೦೦೦, ೨ನೇ ಬಹುಮಾನ ರು. ೧೦,೦೦೦ ಮತ್ತು ೩ನೇ ಬಹುಮಾನ ರು. ೭,೦೦೦ ನಿಗದಿಪಡಿಸಲಾಗಿದೆ. ಅಲ್ಲದೆ ಜೈ ಶ್ರೀ ಬಾಯ್ ವತಿಯಿಂದ ವಿಶೇಷ ಬಹುಮಾನ ಮೊದಲ ಬಹುಮಾನ ರೆಫ್ರಿಜರೇಟರ್, ದ್ವಿತೀಯ ಬಹುಮಾನ ಎಲ್‌ಸಿಡಿ ಟಿವಿ ನೀಡಲಾಗುವುದು. 
    ಜ.೧೭ರಂದು ಸಂಜೆ ೭ ಗಂಟೆಗೆ ರಸಮಂಜರಿ ಕಾರ್ಯಕ್ರಮ ನಡೆಯಲಿದ್ದು, ನಂತರ ಲಾಟರಿ ಡ್ರಾ ಫಲಿತಾಂಶ ನಡೆಯಲಿದೆ. ಲಾಟರಿ ಬಹುಮಾನ ಯೋಜನೆಯಲ್ಲಿ ಮೊದಲ ಬಹುಮಾನ ಹಿರೋಹೊಂಡ ದ್ವಿಚಕ್ರ ವಾಹನ, ಎರಡನೇ ಬಹುಮಾನ ಡಬಲ್ ಡೋರ್ ಫ್ರೀಜ್, ಮೂರನೇ ಬಹುಮಾನ ವಾಷಿಂಗ್ ಮೆಷಿನ್, ನಾಲ್ಕನೇ ಬಹುಮಾನ ೩೨ ಇಂಚು ಕಲರ್ ಟಿ.ವಿ  ಹಾಗು ೫ನೇ ಬಹುಮಾನ ಸಮಾಧಾನಕರ ಬಹುಮಾನ ೫ ಜನರಿಗೆ ಮಿಕ್ಸಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊ: ೯೮೮೦೦೦೭೦೩೭ ಅಥವಾ ೭೮೯೨೨೨೫೪೩೬ ಮೊಬೈಲ್ ಸಂಖ್ಯೆಗೆ ಕರೆಮಾಡಬಹುದಾಗಿದೆ. 

ಯರೇಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಾರದಾ ಮಾತೆ ವಿಗ್ರಹ ಪ್ರತಿಷ್ಠಾಪನೆ

ಭದ್ರಾವತಿ ತಾಲೂಕಿನ ಅಂತರಗಂಗೆ ಕ್ಲಸ್ಟರ್, ಯರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾರದಾ ಮಾತೆ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಯಿತು. 
    ಭದ್ರಾವತಿ: ತಾಲೂಕಿನ ಅಂತರಗಂಗೆ ಕ್ಲಸ್ಟರ್, ಯರೇಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಶಾರದಾ ಮಾತೆ ವಿಗ್ರಹ ಪ್ರತಿಷ್ಠಾಪನೆ ನೆರವೇರಿಸಲಾಯಿತು. 
    ಶಾಲಾ ಮಕ್ಕಳ ಪೋಷಕರು, ಗ್ರಾಮಸ್ಥರು ಹಾಗು ಶಾಲಾಭಿವೃದ್ಧಿ ಸಮಿತಿ ಸಹಕಾರದೊಂದಿಗೆ ಶಾರದಾ ಮಾತೆ ವಿಗ್ರಹ ಪ್ರತಿಷ್ಠಾಪಿಸಲಾಗಿದ್ದು,  ಶಾಲೆಯ ಹಳೆಯ ವಿದ್ಯಾರ್ಥಿ, ಪುರೋಹಿತರಾದ ಲಕ್ಷ್ಮೀಕಾಂತ್ ಪ್ರತಿಷ್ಠಾಪನಾ ಧಾರ್ಮಿಕ ಆಚರಣೆಗಳ ನೇತೃತ್ವ ವಹಿಸಿದ್ದರು. 
  ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಸೇರಿದಂತೆ ಸದಸ್ಯರು, ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಹಾಗು ಶಾಲೆಯ ಮುಖ್ಯ ಶಿಕ್ಷಕ ಮತ್ತು ಶಿಕ್ಷಕ ವೃಂದ, ಸಿಬ್ಬಂದಿ ವರ್ಗದವರು, ಪೋಷಕರು, ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು. 
    ಜ.೧೧ರಂದು ಶಾಲಾ ಹಬ್ಬ: 
    ಶಾಲಾ ಆವರಣದಲ್ಲಿ ಜ.೧೧ರಂದು ಸಂಜೆ ೪ ಗಂಟೆಗೆ ಶಾಲಾ ಹಬ್ಬ ನಡೆಯಲಿದ್ದು, ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗು ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ನಡೆಯಲಿದೆ. ಶಾಲಾ ಮಕ್ಕಳು ಮತ್ತು ಪೋಷಕರು ಹಾಗು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ. 

ನಮ್ಮ ನಾಡು, ನುಡಿ ಉಳಿವಿಗೆ ಬದ್ಧರಾಗಿ : ಮನಿಷ್ ಪಿ ಯಾದವ್

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಭದ್ರಾವತಿ ತಾಲೂಕು ಘಟಕ, ಎಸ್‌ಎವಿ ಶಾಲೆಗಳು ಮತ್ತು ಕಾಲೇಜು, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಗುರುವಾರ ನ್ಯೂಟೌನ್ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ೧೧ನೇ ಮಕ್ಕಳ ಸಾಹಿತ್ಯ ಸಮ್ಮೇಳನ ನ್ಯೂಟೌನ್ ಅದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿ ಮನಿಷ್ ಪಿ ಯಾದವ್ ಉದ್ಘಾಟಿಸಿದರು. 
    ಭದ್ರಾವತಿ : ನಮ್ಮ ನಾಡು, ನುಡಿ ಉಳಿವಿಗೆ ನಾವುಗಳು ಬದ್ಧರಾಗಬೇಕು. ನಮ್ಮ ನಿರ್ಲಕ್ಷ್ಯದಿಂದ ನಮ್ಮ ಕನ್ನಡ ತಾಯಿ ಎಂದಿಗೂ ಸಾಯುವಂತಾಗಬಾರದು ಎಂದು ನಗರದ ನ್ಯೂಟೌನ್ ಅದಿಚುಂಚನಗಿರಿ ವಿದ್ಯಾಸಂಸ್ಥೆ ಪ್ರೌಢಶಾಲೆ ವಿದ್ಯಾರ್ಥಿ ಮನಿಷ್ ಪಿ ಯಾದವ್ ಹೇಳಿದರು. 
    ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಎಸ್‌ಎವಿ ಶಾಲೆಗಳು ಮತ್ತು ಕಾಲೇಜು, ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಗುರುವಾರ ನ್ಯೂಟೌನ್ ಆದಿಚುಂಚನಗಿರಿ ಶಾಲಾ ಆವರಣದಲ್ಲಿ ಆಯೋಜಿಸಲಾಗಿದ್ದ ತಾಲೂಕು ೧೧ನೇ ಮಕ್ಕಳ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. 
    ಕನ್ನಡ ನಾಡು, ನುಡಿಯನ್ನು ಕನ್ನಡ ತಾಯಿಯ ಮಕ್ಕಳಾದ ನಾವುಗಳು ಉಳಿಸಿ ಬೆಳೆಸಬೇಕು. ಈ ನಮ್ಮ ಕನ್ನಡ ನಾಡು ಶೈವ, ವೈಷ್ಣವ, ಜೈನ, ಬೌದ್ಧ, ಇಸ್ಲಾಂ, ಕ್ರೈಸ್ತ ಸೇರಿ ಹಲವಾರು ಧರ್ಮಗಳಿಗೆ ಆಶ್ರಯ ನೀಡಿದೆ.  ಪಂಪ, ರನ್ನ, ಬಸವಾದಿ ಶರಣರು, ದಾಸಶ್ರೇಷ್ಠರು, ಹರಿಹರ, ರಾಘವಾಂಕ, ಕುವೆಂಪು, ಬೇಂದ್ರೆ, ಜಿ.ಎಸ್ ಶಿವರುದ್ರಪ್ಪ, ಚಿನ್ನವೀರ ಕಣವಿ ಸೇರಿದಂತೆ ಸಾವಿರಾರು ಕವಿಗಳು, ಸಾಹಿತಿಗಳು ಕನ್ನಡ ಭಾಷೆಯನ್ನು ಸಮೃದ್ಧಿಗೊಳಿಸಿದ್ದಾರೆ ಎಂದರು. 
    ತಮಿಳು ಭಾಷೆಯು ದ್ರಾವಿಡ ಭಾಷೆಯಿಂದ ಬೇರ್ಪಟ್ಟ ಸಮಯದಲ್ಲಿಯೇ ಕನ್ನಡವೂ ಕೂಡ ಆಡುಭಾಷೆಯಾಗಿ ಬೇರ್ಪಟ್ಟು ೫ನೇ ಶತಮಾನದ ಹಲ್ಮಿಡಿ ಶಾಸನದ ಸಮಯಕ್ಕಾಗಲೇ ಸಾಕಷ್ಟು ಅಭಿವೃದ್ಧಿ ಹೊಂದಿತ್ತು ಎಂದರು.
    ಗಂಗ, ಕದಂಬ, ಚಾಲುಕ್ಯ, ಹೊಯ್ಸಳರು ಈ ಮುಂತಾದ ರಾಜವಂಶದವರು ಕನ್ನಡನಾಡಿನಲ್ಲಿ ಅಳ್ವಿಕೆ ನಡೆಸಿ, ರಾಷ್ಟ್ರದಲ್ಲಿ ಇತಿಹಾಸದಲ್ಲಿ ತಮ್ಮ ಕೀರ್ತಿಗಾಥೆಯನ್ನು ಸುವರ್ಣಾಕ್ಷರಗಳಿಂದ ದಾಖಲಿಸಿದ್ದಾರೆ. ಬೇಲೂರು, ಹಳೆಬೀಡು, ಹಂಪಿ, ಬಾದಾಮಿ ಸೇರಿ ಇನ್ನಿತರ ಸ್ಥಳಗಳು ನಮ್ಮ ಇತಿಹಾಸ, ಪರಂಪರೆಗೆ ಸಾಕ್ಷಿಯಾಗಿವೆ ಎಂದರು. 
    ಸಮ್ಮೇಳನದ ಸರ್ವಾಧ್ಯಕ್ಷೆ  ನಗರದ ಪೂರ್ಣಪ್ರಜ್ಞ ವಿದ್ಯಾಸಂಸ್ಥೆ ವಿದ್ಯಾರ್ಥಿನಿ ಜಿ.ಲಿಖಿತಾ ಮಾತನಾಡಿ, ನಾವು ಜ್ಞಾನಕ್ಕಾಗಿ, ತಿಳಿವಳಿಕೆಗಾಗಿ, ವ್ಯವಹಾರಕ್ಕೆ ಯಾವುದೇ ಭಾಷೆಯನ್ನು ಕಲಿತರೂ ನಮ್ಮ ಆಡುಭಾಷೆ ಕನ್ನಡವಾಗಿರಬೇಕು, ಮಾತೃಭಾಷೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದರು. 
    ಜಿಲ್ಲೆಯು ಸಾಂಸ್ಕೃತಿಕ, ಸಾಹಿತ್ಯಿಕವಾಗಿಯೂ ಮಂಚೂಣಿಯಲ್ಲಿದೆ. ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದ ಕುವೆಂಪು ಹಾಗೂ ರಾಷ್ಟ್ರಕವಿ ಜಿ.ಎಸ್ ಶಿವರುದ್ರಪ್ಪ ನಮ್ಮ ಜಿಲ್ಲೆಯವರೇ ಎಂಬುದು ನಮ್ಮ ಹೆಮ್ಮೆ. ೮ ಜ್ಞಾನಪೀಠ ಪ್ರಶಸ್ತಿಗಳನ್ನು ತಂದುಕೊಟ್ಟ ಈ ಸುಂದರವಾದ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಹೊಣೆ ಎಂದರು. 
    ಕಸಾಪ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಸಾಹಿತ್ಯ ಎಲ್ಲರಿಗೂ ಒಲಿಯುವುದಿಲ್ಲ. ಸಾಹಿತ್ಯದ ಓದು ಹಾಗೂ ಅರಿವಿನ ಪ್ರಜ್ಞೆ ಇದ್ದವರಿಗೆ ಮಾತ್ರ ಒಲಿಯುತ್ತದೆ. ಸಾಹಿತ್ಯವನ್ನು ಬಿತ್ತುವ ಕೆಲಸವನ್ನು ಕಸಾಪ ಕಾವ್ಯ, ಕಮ್ಮಟ, ಸಮ್ಮೇಳನಗಳು ಸೇರಿದಂತೆ ಇನ್ನಿತರ ಕಾರ್ಯಕ್ರಮಗಳ ಮೂಲಕ ಮಾಡುತ್ತಿದೆ. ಪ್ರತಿಭೆ ಯಾರ ಸ್ವತ್ತೂ ಅಲ್ಲ. ಪ್ರತಿಭೆಯನ್ನು ಹೊರತೆಗೆಯುವ ಕೆಲಸ ನಾವೆಲ್ಲರೂ ಒಟ್ಟಾಗಿ ಮಾಡಬೇಕು. ಯುನೆಸ್ಕೋ ವರದಿಯಂತೆ ದೇಶದಲ್ಲಿ ೮ ಸಾವಿರ ಭಾಷೆಗಳಿದ್ದು, ಎಲ್ಲವೂ ಉಳಿಯಬೇಕು. ಯಾವುದೂ ಸಾಯಬಾರದು ಎಂದರು. 
    ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷ ಎಂ.ಎಸ್.ಸುಧಾಮಣಿ, ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ ನಾಗೇಂದ್ರಪ್ಪ, ಕಸಾಪ ತಾಲೂಕು ಅಧ್ಯಕ್ಷ ಕೋಡ್ಲು ಯಜ್ಜಯ್ಯ, ಉದ್ಯಮಿ ಬಿ.ಕೆ. ಜಗನ್ನಾಥ್, ಶಾಲಾ ಮುಖ್ಯಶಿಕ್ಷಕಿ ಕೋಮಲಾ, ಕೋಗಲೂರು ತಿಪ್ಪೇಸ್ವಾಮಿ, ಎಂ.ಆರ್. ರೇವಣಪ್ಪ, ಶಿಕ್ಷಕಿ ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಕವಿಗೋಷ್ಠಿ, ಕಥಾಗೋಷ್ಠಿ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಗೋಷ್ಠಿಗಳು ಜರುಗಿದವು. 

ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ವೈಕುಂಠ ಏಕಾದಶಿ-ಸಹಸ್ರ ದೀಪೋತ್ಸವ


ಭದ್ರಾವತಿ ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ತಾಲೂಕು ವೈಷ್ಣವ ಪರಿಷತ್ ವತಿಯಿಂದ ಶುಕ್ರವಾರ ವೈಕುಂಠ ಏಕಾದಶಿ ಹಾಗು ಸಹಸ್ರ ದೀಪೋತ್ಸವ ಜರುಗಿತು. ಶ್ರೀಕ್ಷೇತ್ರದ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಭದ್ರಾವತಿ : ಕಾಗದನಗರ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ತಾಲೂಕು ವೈಷ್ಣವ ಪರಿಷತ್ ವತಿಯಿಂದ ಶುಕ್ರವಾರ ವೈಕುಂಠ ಏಕಾದಶಿ ಹಾಗು ಸಹಸ್ರ ದೀಪೋತ್ಸವ ಜರುಗಿತು. 
    ಭಕ್ತರಿಗೆ ಬೆಳಿಗ್ಗೆ ೬ ಗಂಟೆಯಿಂದ ವೈಕುಂಠನಾಥ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು.  ನಂತರ ಪಲ್ಲಕ್ಕಿ ಉತ್ಸವ ಮತ್ತು ಸಂಜೆ ವೆಂಕಟೇಶ್ವರ ಸ್ವಾಮಿಯವರಿಗೆ ದಾಸನ ಸೇವೆ ಹಾಗು ದೀಪೋತ್ಸವ ಜರುಗಿತು. ಶ್ರೀಕ್ಷೇತ್ರದ ಪ್ರಧಾನ ಅರ್ಚಕ ರಮೇಶ್ ಭಟ್ಟರು ತರಳಿಮಠರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ಸ್ಥಳೀಯ ಮುಖಂಡರು, ಸುತ್ತಮುತ್ತಲ ಪ್ರದೇಶಗಳ ಭಕ್ತರು ಪಾಲ್ಗೊಂಡಿದ್ದರು. 
    ಸಂಕಷ್ಟದ ನಡುವೆಯೂ ಅದ್ದೂರಿ ಆಚರಣೆ : 
    ಕಾರ್ಖಾನೆ ಸ್ಥಗಿತಗೊಂಡು ಸುಮಾರು ೯ ವರ್ಷಗಳು ಕಳೆದಿದ್ದು, ಕಾಗದನಗರ ಸಂಪೂರ್ಣ ತನ್ನ ಅಸ್ತಿತ್ವ ಕಳೆದುಕೊಂಡಿದೆ. ಕಾರ್ಮಿಕರ ವಸತಿ ಗೃಹಗಳು ಪಾಳು ಬಿದ್ದಿವೆ. ಈ ಭಾಗದಲ್ಲಿ ಸ್ಮಶಾನ ಮೌನ ಆವರಿಸಿಕೊಂಡಿದೆ. ಇಂತಹ ಸ್ಥಳದಲ್ಲಿರುವ ೭ನೇ ವಾರ್ಡ್ ಶ್ರೀ ಕ್ಷೇತ್ರ ನಾಗರಕಟ್ಟೆಯಲ್ಲಿ ಈ ಬಾರಿ ಸಹ ವಿಜೃಂಭಣೆಯಿಂದ ವೈಕುಂಠ ಏಕಾದಶಿ ಹಾಗು ಸಹಸ್ರ ದೀಪೋತ್ಸವ ಆಚರಿಸಲಾಯಿತು. 


ಭಕ್ತರ ಮನಸೂರೆಗೊಂಡ ವೈಕುಂಠನಾಥನ ದರ್ಶನ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ಜರುಗಿದ ವೈಕುಂಠನಾಥನ ದರ್ಶನ ಭಕ್ತರ ಮನಸೂರೆಗೊಳಿಸಿತು. 
     ಭದ್ರಾವತಿ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ವೈಕುಂಠ ಏಕಾದಶಿ ಪ್ರಯುಕ್ತ ಜರುಗಿದ ವೈಕುಂಠನಾಥನ ದರ್ಶನ ಭಕ್ತರ ಮನಸೂರೆಗೊಳಿಸಿತು. 
    ದೇವಸ್ಥಾನದ ಆವರಣದಲ್ಲಿ ಬೆಳಿಗ್ಗೆ ೪.೩೦ಕ್ಕೆ ಶ್ರೀ ಸ್ವಾಮಿಯ ಉತ್ಸವ ನಡೆಯಿತು. ಉತ್ಸವ ಮೂರ್ತಿಯನ್ನು ವೈಕುಂಠ ಮಂಟಪದಲ್ಲಿನ ಜೋಕಾಲಿಯಲ್ಲಿ ಪ್ರತಿಷ್ಠಾಪಿಸಲಾಯಿತು. ನಂತರ ಶ್ರೀ ಗೋದಾದೇವಿ ಅಮ್ಮನವರ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದಲ್ಲಿ ಮಹಿಳೆಯರು, ಮಕ್ಕಳು ಹಾಗು ವಿದ್ಯಾರ್ಥಿಗಳಿಂದ ಕೋಲಾಟ ನೃತ್ಯ ನಡೆಯಿತು. ಅನಾಗ ಕಲಾನಿಧಿ ಶ್ರೀ ಮೈತಿಲಿ ಶ್ರೀನಿವಾಸ್‌ರವರ ತಂಡದಿಂದ ಸಹ ಕಾರ್ಯಕ್ರಮ ಜರುಗಿತು. 
    ದೇವಸ್ಥಾನದ ಪ್ರಧಾನ ಅರ್ಚಕ ಶ್ರೀ ರಂಗನಾಥಶರ್ಮ ಹಾಗು ಸಹಾಯಕ ಅರ್ಚಕ ಎಸ್. ಶ್ರೀನಿವಾಸನ್‌ರವರ ನೇತೃತ್ವದಲ್ಲಿ ಧಾರ್ಮಿಕ ಆಚರಣೆಗಳು ಜರುಗಿದವು. ತಾಲೂಕು ಮುಜರಾಯಿ ಅಧಿಕಾರಿಯಾಗಿರುವ ತಹಸೀಲ್ದಾರ್ ಕೆ. ಪರುಸಪ್ಪ, ದೇವಸ್ಥಾನದ ಆಡಳಿತಾಧಿಕಾರಿ ಕೆ.ಆರ್ ಪ್ರಶಾಂತ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಜಿ. ರಮಾಕಾಂತ(ಪುಟ್ಟಣ್ಣ), ಮಲ್ಲಿಕಾರ್ಜುನ್, ನಾಗಣ್ಣ, ಕೃಷ್ಣಪ್ಪ, ಶ್ರೀಕಾಂತ್, ಶರತ್, ಸತೀಶ್ ಅಯ್ಯರ್, ಶ್ರೀವತ್ಸ ಮತ್ತುನರಸಿಂಹಾಚಾರ್ ಹಾಗು ವೇದ ಪಾಠ ಶಾಲೆಯ ವಿದ್ಯಾರ್ಥಿಗಳು ಹಾಗೂ ವಿಷ್ಣು ಸಹಸ್ರನಾಮ ಮಹಿಳಾ ಮಂಡಳಿ ಹಾಗೂ ಲಕ್ಷ್ಮೀನರಸಿಂಹ ಸ್ವಾಮಿಯ ಭಜನಾ ಮಂಡಳಿಯವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.