Monday, April 25, 2022

ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತ ವೈದ್ಯ ಡಾ. ಡಿ.ಎಸ್ ಶಿವಪ್ರಕಾಶ್ ಕರ್ತವ್ಯಕ್ಕೆ ಶಾಸಕರ ಮೆಚ್ಚುಗೆ

ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಅಭಿನಂದನೆ

ಭದ್ರಾವತಿ, ಏ. ೨೫:  ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ಹಾಗು ಉದರ ದರ್ಶಕ ಹಿರಿಯ ತಜ್ಞ ವೈದ್ಯರಾಗಿರುವ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಡಾ. ಡಿ.ಎಸ್ ಶಿವಪ್ರಕಾಶ್‌ರವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.
    ಭದ್ರಾವತಿ, ಏ. ೨೫:  ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸಾ ಹಾಗು ಉದರ ದರ್ಶಕ ಹಿರಿಯ ತಜ್ಞ ವೈದ್ಯರಾಗಿರುವ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸರ್ವೋತ್ತಮ ಸೇವಾ ಪ್ರಶಸ್ತಿ ಪುರಸ್ಕೃತರಾದ ಡಾ. ಡಿ.ಎಸ್ ಶಿವಪ್ರಕಾಶ್‌ರವರನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಅಭಿನಂದಿಸಿದರು.
    ಮೂಲತಃ ಸೊರಬ ತಾಲೂಕಿನವರಾದ ಶಿವಪ್ರಕಾಶ್‌ರವರು ೧೯೯೭ರಲ್ಲಿ ವೈದ್ಯ ವೃತ್ತಿ ಆರಂಭಿಸಿದ್ದು, ಶಿಕಾರಿಪುರದ ಕಪ್ಪನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸುಮಾರು ೮ ವರ್ಷ,  ತೀರ್ಥಹಳ್ಳಿ ಜೆ.ಸಿ ಆಸ್ಪತ್ರೆಯ ವೈದ್ಯಾಧಿಕಾರಿಯಾಗಿ ಸುಮಾರು ೧೦ ವರ್ಷ ಹಾಗು ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಯಲ್ಲಿ ಸುಮಾರು ೨ ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಅಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
    ಇದುವರೆಗೂ ಸುಮಾರು ೧೦ ಸಾವಿರಕ್ಕೂ ಅಧಿಕ ಶಸ್ತ್ರ ಚಿಕಿತ್ಸೆ, ೫೦೦೦ಕ್ಕೂ ಹೆಚ್ಚು ಉದರ ದರ್ಶಕ ಶಸ್ತ್ರ ಚಿಕಿತ್ಸೆ ಹಾಗು ೨೦೦ಕ್ಕೂ ಹೆಚ್ಚು ಎನ್‌ವಿಎಸ್ ಶಸ್ತ್ರ ಚಿಕಿತ್ಸೆ ನೆರವೇರಿಸಿರುವುದು ಇವರ ವೈದ್ಯ ವೃತ್ತಿಯ ಸಾಧನೆಯಾಗಿದ್ದು, ವೈದ್ಯ ವೃತ್ತಿಯ ಜೊತೆಗೆ ಹಲವಾರು ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡು ಗಮನ ಸೆಳೆದಿದ್ದಾರೆ. ಇವರಿಗೆ ೨೦೧೭-೧೮ನೇ ಸಾಲಿನಲ್ಲಿ ರಾಜ್ಯ ಸರ್ಕಾರದ ಕಾಯಕಲ್ಪ ಪ್ರಶಸ್ತಿ ಸಹ ಲಭಿಸಿದೆ. ಅಲ್ಲದೆ ವಿವಿಧ ಸಂಘ-ಸಂಸ್ಥೆಗಳಿಂದ ಹಲವಾರು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
    ತಾಲೂಕು ಮಟ್ಟದ ಆರೋಗ್ಯ ಮೇಳದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್‌ರವರು ಶಿವಪ್ರಕಾಶ್‌ರವರ ವೃತ್ತಿ ಕರ್ತವ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಸುದೀಪ್‌ಕುಮಾರ್, ತಹಸೀಲ್ದಾರ್ ಆರ್. ಪ್ರದೀಪ್, ತಾ.ಪಂ. ಇ.ಓ ರಮೇಶ್, ನಗರಸಭೆ ಹಾಗು ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ವಿ ಅಶೋಕ್, ಹಿರಿಯ ವೈದ್ಯರಾದ ಡಾ. ಗುಡದಪ್ಪ ಕಸಬಿ, ಡಾ. ಶಂಕರಪ್ಪ, ಡಾ. ಓ. ಮಲ್ಲಪ್ಪ ಹಾಗು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಉಪಸ್ಥಿತರಿದ್ದರು.

ವಿಶ್ವ ಪುಸ್ತಕ ದಿನ : ಓದುವ ಉನ್ನತ ಸಂಸ್ಕೃತಿ ಉಳಿಯಲಿ

ವಿಶ್ವ ಪುಸ್ತಕ ದಿನದ ಅಂಗವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಸಾರ್ವಜನಿಕ ವಾಚನಾಲಯ ಮತ್ತು ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಗ್ರಂಥಾಲಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸ ಸಲ್ಲಸುತ್ತಿರುವ ರಾಜ್‌ಕುಮಾರ್ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಏ. ೨೫: ಪುಸ್ತಕ ಓದುವ, ಓದಿದ್ದನ್ನು ಅರ್ಥೈಸಿಕೊಳ್ಳುವ, ನಾಲ್ಕಾರು ಜನರಿಗೆ ತಿಳುವಳಿಕೆ ನೀಡುವ ಉನ್ನತ ಸಂಸ್ಕೃತಿ ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
    ಅವರು ವಿಶ್ವ ಪುಸ್ತಕ ದಿನದ ಅಂಗವಾಗಿ ಪರಿಷತ್ ವತಿಯಿಂದ ನಗರದ ನ್ಯೂಟೌನ್ ಜಯಶ್ರೀ ವೃತ್ತದ ಸಮೀಪದಲ್ಲಿರುವ ಡಾ.ಬಿ.ಆರ್ ಅಂಬೇಡ್ಕರ್ ಸಾರ್ವಜನಿಕ ವಾಚನಾಲಯ ಮತ್ತು ಗ್ರಂಥಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
    ಎಲ್ಲರೂ ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳುವ ಜೊತೆಗೆ ಪುಸ್ತಕ ಉಡುಗೊರೆ ನೀಡುವ ಸಂಸ್ಕೃತಿ ಮೈಗೂಡಿಸಿಕೊಳ್ಳಬೇಕೆಂದರು.
    ಗ್ರಂಥಾಲಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಜೊತೆಗೆ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಪುಸ್ತಕ ಪ್ರಕಾಶಕರಾಗಿ, ಕಲೆ ಮತ್ತು ಸಾಹಿತ್ಯವನ್ನು ಪ್ರೋತ್ಸಾಹಿಸಿಕೊಂಡು ಬರುತ್ತಿರುವ ರಾಜ್‌ಕುಮಾರ್ ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
    ಪರಿಷತ್ ಪದಾಧಿಕಾರಿಗಳಾದ ತಿಮ್ಮಪ್ಪ, ಜಗದೀಶ್, ಅನಿಲ್‌ಕುಮಾರ್, ನಗರಸಭಾ ಸದಸ್ಯ ಬಸವರಾಜ ಬಿ ಆನೇಕೊಪ್ಪ, ಸಾಹಿತ್ಯ ಪ್ರೇಮಿಗಳಾದ ಭಾಸ್ಕರ್, ಚಂದ್ರಶೇಖರಪ್ಪ, ರಂಗನಾಥ್, ರಾಜು, ರಾಮೇಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ರಂಗನಾಥ್  ಸ್ವಾಗತಿಸಿ,  ಗುರು ವಂದಿಸಿದರು.

ಪುರಂದರದಾಸರ, ತ್ಯಾಗರಾಜರ, ಕನಕದಾಸರ ಆರಾಧನೆ : ಪ್ರಶಸ್ತಿ ಪ್ರದಾನ

ಭದ್ರಾವತಿ ಹಳೆನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ  ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನೆ ಹಮ್ಮಿಕೊಳ್ಳಲಾಗಿತ್ತು. ಸಂಗೀತ ಹಾಗು ಭರತನಾಟ್ಯದಲ್ಲಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದವರಿಗೆ ಹನುಮಂತಮ್ಮ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
    ಭದ್ರಾವತಿ, ಏ. ೨೫: ಹಳೆನಗರದ ಮಹಿಳಾ ಸೇವಾ ಸಮಾಜದ ವತಿಯಿಂದ ಪ್ರತಿವರ್ಷದಂತೆ ಈ ಬಾರಿ ಸಹ  ಪುರಂದರದಾಸರ, ತ್ಯಾಗರಾಜರ ಮತ್ತು ಕನಕದಾಸರ ಆರಾಧನಾ ಮಹೋತ್ಸವ ಹಮ್ಮಿಕೊಳ್ಳಲಾಗಿತ್ತು.
     ತಾಲೂಕಿನಲ್ಲಿ ಪ್ರಥಮ ಸ್ಥಾನ ಪಡೆದ ಸಂಗೀತ ಜ್ಯೂನಿಯರ್ ವಿಭಾಗದಲ್ಲಿ ಉಲ್ಲಾಸ್, ವೀಣೆ ಜ್ಯೂನಿಯರ್ ವಿಭಾಗದಲ್ಲಿ ಆರ್. ಆದರ್ಶ್ ಮತ್ತು ಭರತನಾಟ್ಯ ಜ್ಯೂನಿಯರ್ ವಿಭಾಗದಲ್ಲಿ ಅಶ್ವಿನಿ ಹಾಗು ಸೀನಿಯರ್ ವಿಭಾಗದಲ್ಲಿ ವೈಷ್ಣವಿ ಸಿ ವಿದ್ವತ್ಪೂರ್ವ ಸ್ನೇಹಾ ಎಸ್  ಅವರಿಗೆ ಹನುಮಂತಮ್ಮ ಸ್ಮಾರಕ ಪ್ರಶಸ್ತಿ ನೀಡಿ ಸನ್ಮಾನಿಸಿ ಅಭಿನಂದಿಸಲಾಯಿತು.
    ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿದೂಷಿ ಪುಷ್ಪ ಕೃಷ್ಣಮೂರ್ತಿ, ಸೋಮು, ಗಾಯತ್ರಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕಾರ್ಯದರ್ಶಿ ಶೋಭಾ ಗಂಗರಾಜ್ ಸ್ವಾಗಸಿದರು. ಶಾರದ ಶ್ರೀನಿವಾಸ್ ನಿರೂಪಿಸಿದರು. ಖಜಾಂಚಿ ಶಾಂತಿ ಶೇಟ್ ವಂದಿಸಿದರು.