Thursday, January 28, 2021

ಬನದ ಹುಣ್ಣಿಮೆ ಪ್ರಯುಕ್ತ ಹೋಮ-ಪೂಜೆ

ಭದ್ರಾವತಿ ಹೊಸಸೇತುವೆ ರಸ್ತೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಮಹೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು.
   ಭದ್ರಾವತಿ, ಜ. ೨೮: ನಗರದ ಹೊಸಸೇತುವೆ ರಸ್ತೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಮಹೋತ್ಸವ ಗುರುವಾರ ಅದ್ದೂರಿಯಾಗಿ ಜರುಗಿತು.
    ಬನಶಂಕರಿ ದೇವಿಗೆ ಪಂಚಾಮೃತ ಅಭಿಷೇಕ, ಮಹಾ ಗಣಪತಿ ಹೋಮ, ದುರ್ಗಾಹೋಮ ಹಾಗೂ ಕಳಾಹೋಮ ಏರ್ಪಡಿಸಲಾಗಿತ್ತು. ಪೂರ್ಣಾಹುತಿಯ ನಂತರ ಮಹಾಮಂಗಳಾರತಿ ಮತ್ತು ಮಹಾಪ್ರಸಾದದ ವ್ಯವಸ್ಥೆ ಏರ್ಪಡಿಸಲಾಗಿತ್ತು. ನೂರಾರು ಭಕ್ತರು ಪಾಲ್ಗೊಂಡಿದ್ದರು. ಸಂಜೆ ರಾಜಬೀದಿ ಉತ್ಸವ ಏರ್ಪಡಿಸಲಾಗಿತ್ತು. ಪ್ರತಿ ವರ್ಷದಂತೆ ಈ ಬಾರಿ ಸಹ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು.
      ತಾಲೂಕು ಕಚೇರಿ ರಸ್ತೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲೂ ಸಹ ದೇವಿಗೆ  ಅಭಿಷೇಕ, ವಿಶೇಷಪೂಜೆ ಏರ್ಪಡಿಸಲಾಗಿತ್ತು. ನೂರಾರು ಭಕ್ತಾಧಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು.


ಭದ್ರಾವತಿ ಹೊಸಸೇತುವೆ ರಸ್ತೆಯ ಶ್ರೀ ಬನಶಂಕರಿ ದೇವಸ್ಥಾನದಲ್ಲಿ ಬನದ ಹುಣ್ಣಿಮೆ ಮಹೋತ್ಸವ ಅಂಗವಾಗಿ ಅಮ್ಮನವರಿಗೆ ವಿಶೇಷ ಅಲಂಕಾರ ಕೈಗೊಳ್ಳಲಾಗಿತ್ತು.

ಯಲ್ಲಮ್ಮ ದೇವಿಗೆ ೧ ಕೆ.ಜಿ ತೂಕದ ಬೆಳ್ಳಿ ಮುಖವಾಡ ಸಮರ್ಪಣೆ

ಭದ್ರಾವತಿ ಹಳೇನಗರದ ದೊಡ್ಡಕುರುಬರಬೀದಿಯಲ್ಲಿ (ರೇಣುಕಮ್ಮ ಕಾಂಪೌಂಡ್) ಮಾಲಾ ಜೋಗಮ್ಮ ರವರು ಲೋಕ ಕಲ್ಯಾಣಾರ್ಥವಾಗಿ ಪ್ರತಿಷ್ಠಾಪಿಸಿರುವ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ಸುಮಾರು ೧ ಕೆ.ಜಿ ತೂಕದ ಬೆಳ್ಳಿ ಮುಖವಾಡ ಸಮರ್ಪಿಸಿರುವುದು.
     ಭದ್ರಾವತಿ, ಜ. ೨೮ : ಹಳೇನಗರದ ದೊಡ್ಡಕುರುಬರಬೀದಿಯಲ್ಲಿ (ರೇಣುಕಮ್ಮ ಕಾಂಪೌಂಡ್) ಮಾಲಾ ಜೋಗಮ್ಮ ರವರು ಲೋಕ ಕಲ್ಯಾಣಾರ್ಥವಾಗಿ ಶ್ರೀ ರೇಣುಕಾ ಯಲ್ಲಮ್ಮ ದೇವಿಯನ್ನು ಅನೇಕ ವರ್ಷಗಳಿಂದ ಪ್ರತಿಷ್ಠಾಪಿಸಿ ಆರಾಧಿಸಿಕೊಂಡು ಬರುತ್ತಿದ್ದು,
     ಭಕ್ತರ ಕೋರಿಕೆಯಂತೆ ಶ್ರೀ ಯಲ್ಲಮ್ಮ ದೇವಿಗೆ ಸುಮಾರು ೧ ಕೆ.ಜಿ ತೂಕದ ಬೆಳ್ಳಿಯ ನೂತನ ಮುಖವಾಡವನ್ನು ಬನದ ಹುಣ್ಣಿಮೆಯಂದು ಗುರುವಾರ ಸಮರ್ಪಿಸಿದರು.  
    ಕಾರ್ಯಕ್ರಮದ ಅಂಗವಾಗಿ ಮಂಗಳವಾದ್ಯದೊಂದಿಗೆ ಭದ್ರಾನದಿಯಿಂದ ಗಂಗೆಪೂಜೆಯೊಂದಿಗೆ ಉತ್ಸವ ನಡೆಸಲಾಯಿತು .
    ಮಧ್ಯಾಹ್ನ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಯಸ್ಸಿಗೆ ಸಹಕರಿಸಿದ ಭಕ್ತರಿಗೆ ಮಾಲಾ ಜೋಗಮ್ಮ ಕೃತಜ್ಞತೆ ಸಲ್ಲಿಸಿದರು.

೧೭ ದಿನಗಳ ಹೋರಾಟಕ್ಕೆ ಸ್ಪಂದಿಸಿದ ಸಂಸದ ಬಿ.ವೈ ರಾಘವೇಂದ್ರ

ಅಂಬೇಡ್ಕರ್ ಭವನ ಕಾಮಗಾರಿಗೆ ಅಗತ್ಯವಿರುವ ಅನುದಾನಕ್ಕೆ ಭರವಸೆ

ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಭದ್ರಾವತಿ ತಾಲೂಕು ಕಛೇರಿ ಮುಂಭಾಗ ಸುಮಾರು ೧೭ ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಕೊನೆಗೂ ಸಂಸದ ಬಿ.ವೈ ರಾಘವೇಂದ್ರ ಗುರುವಾರ ಸ್ಪಂದಿಸಿದರು.
    ಭದ್ರಾವತಿ, ಜ. ೨೮: ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕಛೇರಿ ಮುಂಭಾಗ ಸುಮಾರು ೧೭ ದಿನಗಳಿಂದ ನಡೆಸುತ್ತಿರುವ ಧರಣಿ ಸತ್ಯಾಗ್ರಹಕ್ಕೆ ಕೊನೆಗೂ ಸಂಸದ ಬಿ.ವೈ ರಾಘವೇಂದ್ರ ಸ್ಪಂದಿಸಿದ್ದಾರೆ.  
    ಸಮಿತಿಯ ಪ್ರಮುಖ ಬೇಡಿಕೆಗಳಲ್ಲಿ ಒಂದಾದ ನಗರದಲ್ಲಿ ನೆನೆಗುದಿಗೆ ಬಿದ್ದಿರುವ ಅಂಬೇಡ್ಕರ್ ಭವನ ಕಾಮಗಾರಿಗೆ ಅಗತ್ಯವಿರುವ ಹೆಚ್ಚುವರಿ ಅನುದಾನ ೫.೫೦ ಕೋ. ರು. ಬಿಡುಗಡೆಗೊಳಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಖಾಸಗಿ ಕಾರ್ಯಕ್ರಮ ನಿಮಿತ್ತ ಗುರುವಾರ ನಗರಕ್ಕೆ ಆಗಮಿಸಿದ್ದ ಸಂಸದರು ಅಂಬೇಡ್ಕರ್ ಭವನ ಕಾಮಗಾರಿ ವೀಕ್ಷಿಸುವ ಮೂಲಕ ಅಗತ್ಯ ಕ್ರಮ ಕೈಗೊಳ್ಳುವ ಭರವಸೆಯನ್ನು ಸಮಿತಿಗೆ ನೀಡಿದರು.
    ಸಮಿತಿ ವತಿಯಿಂದ ಸಂಸದರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಸಮಿತಿ ಅಧ್ಯಕ್ಷ ಬಿ.ಎನ್ ರಾಜು, ಪ್ರಮುಖರಾದ ಆರ್. ಬಸವರಾಜ್, ಐ.ಎಲ್ ಅರುಣ್‌ಕುಮಾರ್, ಎಂ.ವಿ ಚಂದ್ರಶೇಖರ್, ಸುಬ್ಬೇಗೌಡ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

೩೨ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ : ಜಾಗೃತಿ ಜಾಥಾ

೩೨ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ರೋಟರಿ ಕ್ಲಬ್ ವತಿಯಿಂದ ಭದ್ರಾವತಿಯಲ್ಲಿ ಸಂಚಾರಿ ಪೊಲೀಸ್ ಸಹಯೋಗದೊಂದಿಗೆ ಗುರುವಾರ ಜಾಗೃತಿ ಜಾಥಾ ನಡೆಸಲಾಯಿತು.
   ಭದ್ರಾವತಿ, ಜ. ೨೮: ೩೨ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ಅಂಗವಾಗಿ ರೋಟರಿ ಕ್ಲಬ್ ವತಿಯಿಂದ ನಗರದ ಸಂಚಾರಿ ಪೊಲೀಸ್ ಸಹಯೋಗದೊಂದಿಗೆ ಗುರುವಾರ ಜಾಗೃತಿ ಜಾಥಾ ನಡೆಸಲಾಯಿತು.
    ಬಿ.ಎಚ್ ರಸ್ತೆ ಅಂಬೇಡ್ಕರ್ ವೃತ್ತದಿಂದ ಸಿ.ಎನ್ ರಸ್ತೆ ರಂಗಪ್ಪವೃತ್ತದ ವರೆಗೆ ಜಾಥಾ ನಡೆಯಿತು. ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಲಾಯಿತು.
ಪೊಲೀಸ್ ಉಪಾಧೀಕ್ಷಕ ಕೃಷ್ಣಮೂರ್ತಿ ಮತ್ತು ರೋಟರಿ ಕ್ಲಬ್ ಅಧ್ಯಕ್ಷ ಬಿ.ಎಂ ಶಾಂತಕುಮಾರ್ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಚಾಲನೆ ನೀಡಿದರು.
    ರೋಟರಿ ಕ್ಲಬ್ ಕಾರ್ಯದರ್ಶಿ ಎಂ.ಎನ್ ಗಿರೀಶ್, ಜೋನಲ್ ಲೆಫ್ಟಿನೆಂಟ್ ಕೆ. ನಾಗರಾಜ್, ಸುಂದರ್ ಬಾಬು, ತೀರ್ಥಯ್ಯ, ರಾಘವೇಂದ್ರ ಉಪಾಧ್ಯಾಯ, ಕಸಾಪ ಅಧ್ಯಕ್ಷ ಅಪೇಕ್ಷ ಮಂಜುನಾಥ್, ಬಿಜೆಪಿ ಯುವ ಘಟಕದ ಅಧ್ಯಕ್ಷ ವಿಜಯ್‌ರಾಜ್, ಸಂಚಾರಿ ಠಾಣಾಧಿಕಾರಿ ಕವಿತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೂರು ಪುಟಾಣಿ ಮಕ್ಕಳಿಂದ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕಾಣಿಕೆ ಹುಂಡಿ ಸಮರ್ಪಣೆ

ಭದ್ರಾವತಿ, ಜ. ೨೮: ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಗರದ ಹೊಸಮನೆಯ ಮೂರು ಪುಟಾಣಿ ಮಕ್ಕಳು ಪ್ರತಿದಿನ ಸಂಗ್ರಹಿಸಿದ್ದ ಕಾಣಿಕೆ ಹುಂಡಿ ಹಣ ನೀಡುವ ಮೂಲಕ ಗಮನ ಸೆಳೆದಿದ್ದಾರೆ.
     ಹೊಸಮನೆ ನಿವಾಸಿಗಳಾದ ಗಿರೀಶ್ ಪುಟ್ಟೇಗೌಡ ಹಾಗೂ ಮೋಹನ್ ಪುಟ್ಟೆಗೌಡರ ಮಕ್ಕಳಾದ ಶಿಖರ್, ಕೌಶಿಕ್ ಮತ್ತು ದಿಗಂತ್ ಅಯೋಧ್ಯೆ ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನ ಕೈಗೊಂಡಿರುವ ಮಾಹಿತಿ ಅರಿತು ಪ್ರತಿದಿನ ಕಾಣಿಕೆ ಹುಂಡಿಯಲ್ಲಿ ಹಣ ಸಂಗ್ರಹಿಸಿದ್ದರು. ಒಟ್ಟು ೩,೦೧೦ ರು. ಹಣ ನೀಡುವ ಗಮನ ಸೆಳೆದಿದ್ದಾರೆ.
   ಶ್ರೀರಾಮ ಮಂದಿರದ ನಿಧಿ ಸಮರ್ಪಣಾ ಅಭಿಯಾನದ ಪ್ರಮುಖರಾದ ರಾಮನಾಥ್ ಬರ್ಗೆ, ಸುಬ್ರಮಣ್ಯ, ಸುನಿಲ್‌ಗಾಯಕ್‌ವಾಡ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಭದ್ರಾವತಿ ಹೊಸಮನೆಯ ಮೂರು ಪುಟಾಣಿ ಮಕ್ಕಳು ಪ್ರತಿದಿನ ಸಂಗ್ರಹಿಸಿದ್ದ ಕಾಣಿಕೆ ಹುಂಡಿ ಹಣ ನೀಡುವ ಮೂಲಕ ಗಮನ ಸೆಳೆದಿದ್ದಾರೆ.


ಭದ್ರಾವತಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ

ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆ

ಭದ್ರಾವತಿ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದಲ್ಲಿ ನಡೆದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಸಭೆಯಲ್ಲಿ ಕೆಲವು ಪಂಚಾಯಿತಿಗಳ ಸದಸ್ಯರು ಮೀಸಲಾತಿ ನಿಗದಿ ಸಂಬಂಧ ಉಂಟಾದ ಗೊಂದಲಗಳನ್ನು ಸ್ಥಳದಲ್ಲಿಯೇ ಚರ್ಚಿಸಿ ಬಗೆಹರಿಸಿಕೊಂಡರು.
     ಭದ್ರಾವತಿ, ಜ. ೨೮: ತಾಲೂಕಿನ ೪೧ ಗ್ರಾಮ ಪಂಚಾಯಿತಿಗಳ ಪೈಕಿ ೩೭ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿಪಡಿಸಲಾಯಿತು.
ನಗರದ ಚನ್ನಗಿರಿ ರಸ್ತೆಯಲ್ಲಿರುವ ಶ್ರೀ ವೆಂಕಟೇಶ್ವರ ಚಿತ್ರ ಮಂದಿರ(ಡಬಲ್ ಟಾಕೀಸ್)ದಲ್ಲಿ ಜಿಲ್ಲಾಧಿಕಾರಿ ಕೆ.ಬಿ ಶಿವಕುಮಾರ್ ನೇತೃತ್ವದಲ್ಲಿ ಮೀಸಲಾತಿ ನಿಗದಿ ಸಭೆ ನಡೆಯಿತು.


     ಅರಕೆರೆ ಅಧ್ಯಕ್ಷ 'ಎ' ವರ್ಗಕ್ಕೆ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ದೊಣಬಘಟ್ಟ ಅಧ್ಯಕ್ಷ 'ಎ' ವರ್ಗಕ್ಕೆ, ಉಪಾಧ್ಯಕ್ಷ ಎಸ್.ಸಿ ಮಹಿಳೆ, ಕಲ್ಲಹಳ್ಳಿ ಅಧ್ಯಕ್ಷ 'ಎ'ವರ್ಗಕ್ಕೆ, ಉಪಾಧ್ಯಕ್ಷ ಸಾಮಾನ್ಯ, ಯರೇಹಳ್ಳಿ ಅಧ್ಯಕ್ಷ 'ಎ' ವರ್ಗಕ್ಕೆ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಸೈದರಕಲ್ಲಹಳ್ಳಿ ಅಧ್ಯಕ್ಷ 'ಎ' ವರ್ಗ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಸಿದ್ಲೀಪುರ ಅಧ್ಯಕ್ಷ 'ಎ'ವರ್ಗ ಮಹಿಳೆ, ಉಪಾಧ್ಯಕ್ಷ ಪರಿಶಿಷ್ಟ ಜಾತಿ, ಮಾರಶೆಟ್ಟಿಹಳ್ಳಿ ಅಧ್ಯಕ್ಷ 'ಎ' ವರ್ಗ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ತಡಸ ಅಧ್ಯಕ್ಷ 'ಎ'ವರ್ಗ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕಾಗೇಕೋಡಮಗ್ಗಿ ಅಧ್ಯಕ್ಷ 'ಎ' ವರ್ಗ ಮಹಿಳೆ, ಉಪಾಧ್ಯಕ್ಷ 'ಬಿ' ವರ್ಗ ಮಹಿಳೆ, ದಾಸರಕಲ್ಲಹಳ್ಳಿ ಅಧ್ಯಕ್ಷ 'ಬಿ' ವರ್ಗ, ಉಪಾಧ್ಯಕ್ಷ 'ಎ' ವರ್ಗ ಮಹಿಳೆ, ಬಾರಂದೂರು ಅಧ್ಯಕ್ಷ 'ಬಿ'ವರ್ಗ ಮಹಿಳೆ, ಉಪಾಧ್ಯಕ್ಷ 'ಎ' ವರ್ಗ ಮಹಿಳೆ, ಗುಡಮಘಟ್ಟ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಆಗರದಹಳ್ಳಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಯಡೇಹಳ್ಳಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಅರಹತೊಳಲು ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಕಲ್ಲಿಹಾಳ್ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಅರಬಿಳಚಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.
     ವೀರಾಪುರ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ 'ಬಿ'ವರ್ಗ, ದೊಡ್ಡೇರಿ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಮಾವಿನಕೆರೆ ಅಧ್ಯಕ್ಷ ಸಾಮಾನ್ಯ, ಉಪಾಧ್ಯಕ್ಷ 'ಎ' ವರ್ಗ ಮಹಿಳೆ, ಅರಳಿಕೊಪ್ಪ ಸಾಮಾನ್ಯ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ತಾವರಘಟ್ಟ ಅಧ್ಯಕ್ಷ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ಆನವೇರಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ 'ಎ' ವರ್ಗ, ಮಂಗೋಟೆ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪರಿಶಿಷ್ಟ ಜಾತಿ, ನಾಗತಿಬೆಳಗಲು ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕೂಡ್ಲಿಗೆರೆ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕೊಮಾರನಹಳ್ಳಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಅರಳಿಹಳ್ಳಿ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ 'ಎ' ವರ್ಗ, ಅಂತರಗಂಗೆ ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ 'ಎ'ವರ್ಗ, ಕಂಬದಾಳ್ ಹೊಸೂರು ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪರಿಶಿಷ್ಟ ಪಂಗಡ ಮಹಿಳೆ, ಮೈದೊಳಲು ಅಧ್ಯಕ್ಷ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಪರಿಶಿಷ್ಟ ಜಾತಿ, ಸನ್ಯಾಸಿಕೋಡಮಗ್ಗೆ ಅಧ್ಯಕ್ಷ ಪರಿಶಿಷ್ಟ ಜಾತಿ, ಉಪಾಧ್ಯಕ್ಷ 'ಎ'ವರ್ಗ ಮಹಿಳೆ, ಹನುಮಂತಪುರ ಅಧ್ಯಕ್ಷ ಪರಿಶಿಷ್ಟ ಜಾತಿ, ಉಪಾಧ್ಯಕ್ಷ 'ಎ' ವರ್ಗ ಮಹಿಳೆ, ಸಿಂಗನಮನೆ ಅಧ್ಯಕ್ಷ ಪರಿಶಿಷ್ಟ ಜಾತಿ, ಉಪಾಧ್ಯಕ್ಷ ಸಾಮಾನ್ಯ ಮಹಿಳೆ, ನಿಂಬೆಗೊಂದಿ ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಅತ್ತಿಗುಂದ ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ,  ಉಪಾಧ್ಯಕ್ಷ 'ಎ' ವರ್ಗ, ಬಿಳಿಕಿ ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ, ಕಾರೇಹಳ್ಳಿ ಅಧ್ಯಕ್ಷ ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮತ್ತು ಹಿರಿಯೂರು ಅಧ್ಯಕ್ಷ ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ ಸಾಮಾನ್ಯ ಮೀಸಲಾಗಿದೆ.


    ಮೀಸಲಾತಿ ನಿಗದಿ ಸಂಬಂಧ ಕೆಲವು ಪಂಚಾಯಿತಿಗಳ ಸದಸ್ಯರು ಜಿಲ್ಲಾಧಿಕಾರಿಗಳೊಂದಿಗೆ ಪ್ರಶ್ನಿಸಿ ಗೊಂದಲ ಬಗೆಹರಿಸಿಕೊಂಡರು. ಪ್ರಸ್ತುತ ೩೦ ತಿಂಗಳ ಅವಧಿಗೆ ಮೀಸಲಾತಿ ನಿಗದಿಪಡಿಸಲಾಗಿದೆ.
ತಾಲೂಕಿನ ಒಟ್ಟು ೪೧ ಗ್ರಾಮ ಪಂಚಾಯಿತಿಗಳ ಪೈಕಿ ಕಳೆದ ತಿಂಗಳು ಡಿಸೆಂಬರ್‌ನಲ್ಲಿ ೩೫ ಪಂಚಾಯಿತಿಗಳಿಗೆ ಮಾತ್ರ ಚುನಾವಣೆ ನಡೆಸಲಾಯಿತು. ಅವಧಿ ಮುಗಿಯದ ಕಾರಣ ಕೊಮಾರನಹಳ್ಳಿ ಮತ್ತು ವೀರಾಪುರ ಈ ಎರಡು ಗ್ರಾಮ ಪಂಚಾಯಿತಿಗಳಿಗೆ ಹಾಗು ಉಳಿದಂತೆ ಸರ್ಕಾರ ಹೊಳೆಹೊನ್ನೂರು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿಸಲು ಅಧಿಸೂಚನೆ ಹೊರಡಿಸಿರುವ ಹಿನ್ನಲೆಯಲ್ಲಿ ಹೊಳೆಹೊನ್ನೂರು, ಹನುಮಂತಾಪುರ, ಸಿದ್ಲಿಪುರ ಮತ್ತು ಎಮ್ಮೆಹಟ್ಟಿ ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯಲಿಲ್ಲ. ಇದೀಗ ಮೀಸಲಾತಿ ೩೭ ಗ್ರಾಮ ಪಂಚಾಯಿತಿಗಳಿಗೆ ನಿಗದಿಪಡಿಸಲಾಗಿದೆ.  
     ಹಿರಿಯ ಅಧಿಕಾರಿ ವೆಂಕಟೇಶ್ ಬನಕಟ್ಟಿ, ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್ ಮತ್ತು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕೆ.ಜೆ ತಮ್ಮಣ್ಣಗೌಡ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.