ಭದ್ರಾವತಿ ನಗರದ ವಿವಿಧ ಮಹಿಳಾ ಸಂಘಟನೆಗಳಿಂದ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಅಮಾಯಕ ಪ್ರವಾಸಿಗರ ಕಗ್ಗೊಲೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಂಜಾನಾಯ್ಕರವರಿಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ : ನಗರದ ವಿವಿಧ ಮಹಿಳಾ ಸಂಘಟನೆಗಳಿಂದ ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ನಡೆದ ಅಮಾಯಕ ಪ್ರವಾಸಿಗರ ಕಗ್ಗೊಲೆಯನ್ನು ಖಂಡಿಸಿ ಮಂಗಳವಾರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಉಪ ತಹಸೀಲ್ದಾರ್ ಮಂಜಾನಾಯ್ಕರವರಿಗೆ ಮನವಿ ಸಲ್ಲಿಸಲಾಯಿತು.
ಇದೊಂದು ಅತ್ಯಂತ ಹೇಯ ಕೃತ್ಯವಾಗಿದೆ. ಅಮಾಯಕ ಪ್ರವಾಸಿಗರ ಮೇಲೆ ಉಗ್ರವಾದಿಗಳ ಕೃತ್ಯ ಎಂದೂ ಊಹಿಸಲು ಅಸಾಧ್ಯ. ನಮ್ಮಲ್ಲಿ ಜಾತಿ ಜಾತಿಗಳ ನಡುವೆ ಒಗ್ಗಟ್ಟು ಇಲ್ಲದಿರುವುದು ಇಂತಹ ಕೃತ್ಯ ನಡೆಸಲು ನೆರವಾಗುತ್ತದೆ. ಮಂದಿನ ದಿನಗಳಲ್ಲಿ ಇಂತಹ ಕೃತ್ಯಗಳಿಗೆ ಕೇಂದ್ರ ಸರಕಾರ ಯಾವುದೇ ಮುಲಾಜಿಲ್ಲದೆ ಅಂತ್ಯ ಹಾಡಬೇಕೆಂದು ಆಗ್ರಹಿಸಲಾಯಿತು.
ನಮ್ಮ ದೇಶದ ಒಳಗೆ ಇದ್ದು ಹೊರಗಿನ ಉಗ್ರವಾದಿಗಳಿಗೆ ನೆರವು ನೀಡಿ ಸಹಾಯ ಮಾಡುವವರನ್ನು ಹುಡುಕಿ ಅಂತ್ಯ ಹಾಡಬೇಕು. ಇನ್ನು ಮುಂದೆ ಉಗ್ರವಾದಿಗಳಿಗೆ ಯಾರೂ ಸಹ ಸಹಾಯ ಮಾಡಲು ಹೆದರುವಂತಹ ಪರಿಸ್ಥಿತಿ ನಿರ್ಮಾಣ ಮಾಡಬೇಕು. ಗಡಿಯಲ್ಲಿ ಸೇನಾ ಭದ್ರತೆಯನ್ನು ಹೆಚ್ಚಿಸುವ ಮೂಲಕ ಉಗ್ರರು ದೇಶದ ಒಳಗೆ ನುಸುಳುವುದನ್ನು ತಡೆಯಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಯಿತು.
ವಿವಿಧ ಮಹಿಳಾ ಸಂಘಟನೆಗಳ ಪ್ರಮುಖರಾದ ರೂಪಾರಾವ್, ಆರ್.ಎಸ್ ಶೋಭಾ, ಯಶೋಧ, ನಾಗರತ್ನ, ಶೋಭಾ, ಶಾರದಾ, ಮಲ್ಲಿಕಾಂಬ, ವಾಣಿಶ್ರೀ, ಸ್ವಪ್ನ ಸೇರಿದಂತೆ ಇತರರು ಸಭೆಯನ್ನುದ್ದೇಶಿಸಿ ಮಾತನಾಡಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್, ವೀರಶೈವ ಲಿಂಗಾಯಿತ ಮಹಿಳಾ ಸಮಾಜ, ಕದಳಿ ವೇದಿಕೆ, ಶಾಶ್ಚತಿ ಮಹಿಳಾ ಸಮಾಜ, ಮಹಿಳಾ ಸೇವಾ ಸಮಾಜ ಮತ್ತು ಕಸ್ತೂರಬಾ ವುಮೆನ್ಸ್ ಅಸೋಸಿಯೇಷನ್ ಪದಾಧಿಕಾರಿಗಳು, ಸದಸ್ಯರು ಹಾಗು ನಿರ್ಮಲಾ ಆಸ್ಪತ್ರೆ ವಿದ್ಯಾರ್ಥಿನಿಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಇದಕ್ಕೂ ಮೊದಲು ರಂಗಪ್ಪ ವೃತ್ತದಲ್ಲಿ ರಸ್ತೆ ತಡೆಯೊಂದಿಗೆ ಮಾನವ ಸರಪಳಿ ನಿರ್ಮಿಸಿ ನಂತರ ತಾಲೂಕು ಕಚೇರಿವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.