Friday, March 5, 2021

ವಿಜ್ಞಾನ ರಸಪ್ರಶ್ನೆಯಲ್ಲಿ ದ್ವಿತೀಯ ಬಹುಮಾನ

ಶಿವಮೊಗ್ಗ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಭದ್ರಾವತಿ ಕಾಗದನಗರದ ಪೇಪರ್‌ಟೌನ್ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
   ಭದ್ರಾವತಿ, ಮಾ. ೫: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗು ಡಯಟ್ ವತಿಯಿಂದ ಶಿವಮೊಗ್ಗ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಕಾಗದನಗರದ ಪೇಪರ್‌ಟೌನ್ ಆಂಗ್ಲ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ದ್ವಿತೀಯ ಬಹುಮಾನ ಪಡೆದುಕೊಂಡಿದ್ದಾರೆ.
   ಶಾಲೆಯ ವಿದ್ಯಾರ್ಥಿಗಳಾದ ತೇಜಸ್ವಿ ಮತ್ತು ಭೂಮಿಕಾ ಬಹುಮಾನ ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ. ವಿದ್ಯಾರ್ಥಿಗಳಿಗೆ ಎಂಪಿಎಂ ಶಿಕ್ಷಣ ಸಂಸ್ಥೆ, ಶಾಲೆಯ ಪ್ರಾಂಶುಪಾಲರು, ಶಿಕ್ಷಕ ಹಾಗು ಸಿಬ್ಬಂದಿ ವೃಂದದವರು ಅಭಿನಂದಿಸಿದ್ದಾರೆ.

ಸ್ವಾರ್ಥಕ್ಕಾಗಿ ಬೆತ್ತಲಾದ ಸಂಗಮೇಶ್ವರ : ಪ್ರವೀಣ್ ಪಟೇಲ್

ಜಿ.ಆರ್ ಪ್ರವೀಣ್ ಪಟೇಲ್
    ಭದ್ರಾವತಿ, ಮಾ. ೫: ಶಾಸಕ ಬಿ.ಕೆ.ಸಂಗಮೇಶ್ವರ ಅವರು ಸದನದಲ್ಲಿ ಅಂಗಿ ಬಿಚ್ಚುವ ಮೂಲಕ ಮತ್ತೊಮ್ಮೆ ತಮ್ಮ ಕುಟುಂಬದ ಸಾರ್ಥಕ್ಕಾಗಿ ಬೆತ್ತಲಾಗಿದ್ದಾರೆ ಎಂದು ಬಿಜೆಪಿ ಮುಖಂಡ ಜಿ.ಆರ್.ಪ್ರವೀಣ್ ಪಟೇಲ್ ಟೀಕಿಸಿದ್ದಾರೆ.
   ತಮ್ಮ ಜೀವನದಲ್ಲಿ ಎಂದೂ ಕ್ಷೇತ್ರದ ಜನರ ಪರ ಧ್ವನಿ ಎತ್ತದ ಅವರಿಗೆ ತಾವು ಮತ್ತು ತಮ್ಮ ಕುಟುಂಬ ಹೊರತಾಗಿ ಏನೂ ಕಾಣುವುದಿಲ್ಲ. ಕ್ಷೇತ್ರದ ಅಭಿವೃದ್ಧಿ, ಜನರ ಸಮಸ್ಯೆಗಳಿಗಿಂತ ಕುಟುಂಬದ ಹಿತಾಸಕ್ತಿಗೆ ಮೊದಲ ಆದ್ಯತೆ ನೀಡುತ್ತಾರೆ. ಸದನದಲ್ಲಿ ಅಂಗಿ ಕಳಚುವ ಮೂಲಕ ಕ್ಷೇತ್ರದ ಜನರಿಗೂ ಮುಜುಗರ ತಂದಿದ್ದಾರೆ. ಇಂತಹ ನಡೆ ಸಭ್ಯ ರಾಜಕಾರಣಿಗಳಿಗೆ ಶೋಭೆ ತರುವುದಿಲ್ಲ ಎಂದು ಕಿಡಿಕಾರಿದ್ದಾರೆ.
   ತಮ್ಮ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ದೂರುವ ಅವರು ಮೊದಲು ಗೂಂಡಾಗಿರಿ ವರ್ತನೆ ತಿದ್ದಿಕೊಳ್ಳಬೇಕು. ಆಟದ ಉತ್ಸಾಹದಲ್ಲಿ ಜೈಶ್ರೀರಾಮ್ ಘೋಷಣೆ ಕೂಗಿದ ನೆಪ ಇಟ್ಟುಕೊಂಡು ಬಿಜೆಪಿ, ಭಜರಂಗ ದಳದ ಮುಖಂಡರು, ಕಾರ್ಯಕರ್ತರ ಮೇಲೆ ಶಾಸಕರು, ಅವರ ಮಕ್ಕಳು ಗಂಭೀರ ಹಲ್ಲೆ ನಡೆಸಿದ್ದಾರೆ. ಹಿಂಸೆ ಮೂಲಕವೇ ರಾಜಕೀಯ ಬದುಕು ಕಟ್ಟಿಕೊಂಡಿದ್ದಾರೆ. ಅವರ ವರ್ತನೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
   ಮುಖ್ಯಮಂತ್ರಿಗಳು, ಸಂಸದರು ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಇವರ ವಿರುದ್ಧ ಮಾತನಾಡುವ ನೈತಿಕತೆ ಶಾಸಕರಿಗಿಲ್ಲ. ಅದರಲ್ಲೂ ಕೀಳುಮಟ್ಟದಲ್ಲಿ ಮಾತನಾಡುವುದು ಶಾಸಕರ ವ್ಯಕ್ತಿತ್ವ ತೋರಿಸುತ್ತದೆ. ಶಾಸಕರು ತಮ್ಮ ನಡೆ ತಿದ್ದಿಕೊಳ್ಳದಿದ್ದರೆ ಜನರು ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆಂದು ಎಚ್ಚರಿಸಿದ್ದಾರೆ.

ಬಿ.ಎನ್ ರಾಜು ವಿರುದ್ಧ ಬಾಲಕೃಷ್ಣ ದೂರು

   ಭದ್ರಾವತಿ, ಮಾ. ೫: ಯಾವುದೇ ನೋಂದಾಯಿತ ಮಾನವ ಹಕ್ಕು ಹೋರಾಟ ಸಮಿತಿ ಅಧ್ಯಕ್ಷನಾಗಿರದಿದ್ದರೂ ಸಹ ಬಿ.ಎನ್ ರಾಜು ಎಂಬಾತ ನನ್ನ ವಿರುದ್ಧ ಸುಳ್ಳು ಜಾತಿನಿಂದನೆ ದೂರು ದಾಖಸುವುದಾಗಿ ಹೇಳಿ ಜೀವ ಬೆದರಿಕೆ ಹಾಕುತ್ತಿದ್ದು, ಸೂಕ್ತ ಕಾನೂನು ಕ್ರಮ ಕೈಗೊಂಡು ರಕ್ಷಣೆ ನೀಡುವಂತೆ ನಗರಸಭೆ ಮಾಜಿ ಸದಸ್ಯ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೂರ್ವ ವಲಯ ಪೊಲೀಸ್ ಮಹಾನಿರ್ದೇಶಕರಿಗೆ ಹಾಗು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಅಂಚೆ ಮೂಲಕ ದೂರು ಸಲ್ಲಿಸಿದ್ದಾರೆ.
   ಸಮಾಜದಲ್ಲಿ ಹಲವಾರು ವರ್ಷಗಳಿಂದ ಯಾವುದೇ ಜಾತಿಬೇಧಭಾವವಿಲ್ಲದೆ, ಯಾವುದೇ ಫಲಾಫೇಕ್ಷೆ ಇಲ್ಲದೆ ದೀನದಲಿತರ, ನೊಂದ ಬಡವರ, ಹಿಂದುಳಿದ ವರ್ಗದ ಜನರ ಕುಂದುಕೊರತೆಗಳಿಗೆ ಸ್ಪಂದಿಸುವ ಮೂಲಕ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಜೊತೆಗೆ ರೈತ ಕುಟುಂಬಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಜನಪರ ಹೋರಾಟಗಳಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ವೈಯಕ್ತಿಕ ಹಾಗು ರಾಜಕೀಯ ಬೆಳವಣಿಗೆಯನ್ನು ಸಹಿಸದ ಬಿ.ಎನ್ ರಾಜು ಎಂಬಾತ ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿ ಘನತೆಗೆ ಕುಂದು ತರುವಂತೆ ಮಾಡಿ ಸುಳ್ಳು ಜಾತಿನಿಂದನೆ ದೂರು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ.
   ಈತ ಯಾವುದೇ ನೋಂದಾಯಿತ ಸಂಘ-ಸಂಸ್ಥೆ ಅಧ್ಯಕ್ಷನಾಗಿರದಿದ್ದರೂ ಸಹ ಅಧ್ಯಕ್ಷ ಎಂದು ಹೇಳಿಕೊಂಡು ರಾಜಕಾರಣಿಗಳು, ಉನ್ನತ ಸರ್ಕಾರಿ ಅಧಿಕಾರಿಗಳಿಗೆ ಬ್ಲಾಕ್‌ಮೇಲೆ ಮಾಡಿಕೊಂಡು ಬಂದಿರುತ್ತಾನೆ. ಜೊತೆಗೆ ಪೊಲೀಸ್ ಅಧಿಕಾರಿಗಳಿಗೂ ಸಹ ಬಹಿರಂಗವಾಗಿ ಅವಹೇಳನಕಾರಿಯಾಗಿ ನಿಂದಿಸಿಕೊಂಡು ಹಾಗು ಜಾತಿಯನ್ನು ದುರ್ಬಳಕೆ ಮಾಡಿಕೊಂಡು ಜಾತಿನಿಂದನೆ ಕೇಸು ದಾಖಲಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ. ಅಲ್ಲದೆ ಈತ ಈ ಹಿಂದೆ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿ ಜೈಲು ಶಿಕ್ಷೆ ಸಹ ಅನುಭವಿಸಿರುತ್ತಾನೆ. ಅಲ್ಲದೆ ಈತನ ವಿರುದ್ಧ ಹಲವಾರು ಕ್ರಿಮಿನಲ್ ಪ್ರಕರಣಗಳು ನ್ಯಾಯಾಲಯದಲ್ಲಿವೆ.
   ಈ ಹಿನ್ನಲೆಯಲ್ಲಿ ಈತನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು ನನಗೆ ರಕ್ಷಣೆ ನೀಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.

ಮಾ.೭ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಮಾ. ೫: ತಾಲೂಕಿನ ಕುವೆಂಪು ವಿಶ್ವ ವಿದ್ಯಾನಿಲಯದ ಬಳಿ ಲಿಂಕ್ ಲೈನ್ ಕಾಮಗಾರಿ ನಡೆಯುತ್ತಿದ್ದು, ಈ ಹಿನ್ನಲೆಯಲ್ಲಿ ಮಾ.೭ರಂದು ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೬ ಗಂಟೆವರೆಗೆ ಲಕ್ಕವಳ್ಳಿ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಗೋಣಿಬೀಡು, ಸಿಂಗನಮನೆ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ, ಶಂಕರಘಟ್ಟ, ತಾವರಘಟ್ಟ, ಎಚ್.ಕೆ ಜಂಕ್ಷನ್, ಕುವೆಂಪು ವಿಶ್ವ ವಿದ್ಯಾನಿಲಯ, ರಂಗನಾಥಪುರ, ತಮ್ಮಡಿಹಳ್ಳಿ, ಮಾಳೇನಹಳ್ಳಿ, ನಲ್ಲಿಸರ, ಮಲ್ಲಿಗೇನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಗಳು ಉಂಟಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಕೋರಿದ್ದಾರೆ.

ಶಾಸಕ ಸಂಗಮೇಶ್ವರ್ ವರ್ತನೆಗೆ ಬಿಜೆಪಿ ಆಕ್ರೋಶ :

ಇಲ್ಲಸಲ್ಲದ ಆರೋಪಕ್ಕೆ ಹೋರಾಟದ ಎಚ್ಚರಿಕೆ

    ಭದ್ರಾವತಿ, ಮಾ. ೫: ವಿಧಾನಸಭೆಯಲ್ಲಿ ಗುರುವಾರ ಕ್ಷೇತ್ರದ ಶಾಸಕ ಬಿ.ಕೆ ಸಂಗಮೇಶ್ವರ್ ದುರ್ವರ್ತನೆಯಿಂದ ನಡೆದುಕೊಂಡಿದ್ದು, ಇವರ ವರ್ತನೆಯಿಂದ ಕ್ಷೇತ್ರದ ಜನರು ತಲೆತಗ್ಗಿಸುವಂತಾಗಿದೆ. ಬಿಜೆಪಿ ಪಕ್ಷ ಇವರ ದುರ್ವರ್ತನೆಯನ್ನು ಎಂದಿಗೂ ಬೆಂಬಲಿಸುವುದಿಲ್ಲ ಎಂದು ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹಾಗು ಜಿಲ್ಲಾ ಕಾರ್ಯದರ್ಶಿಗಳಾದ ಬಿ.ಕೆ ಶ್ರೀನಾಥ್ ಮತ್ತು ಜಿ. ಧರ್ಮಪ್ರಸಾದ್ ತಿಳಿಸಿದ್ದಾರೆ.
     ವಿಧಾನಸಭಾಧ್ಯಕ್ಷರು ಒಂದು ರಾಷ್ಟ್ರ-ಒಂದು ಚುನಾವಣೆ ವಿಷಯ ಪ್ರಸ್ತಾಪಿಸಿದ ವೇಳೆ ಏಕಾಏಕಿ ಶಾಸಕ ಸಂಗಮೇಶ್ವರ್ ವೈಯಕ್ತಿಕ ಕಾರಣಕ್ಕೆ ಅಂಗಿ ಬಿಚ್ಚಿ ದುರ್ವರ್ತನೆಯಿಂದ ನಡೆದುಕೊಂಡಿದ್ದಾರೆ. ಇವರ ವರ್ತನೆ ಕಾಂಗ್ರೆಸ್ ಸಂಸ್ಕೃತಿಗೆ ಹಿಡಿದ ಕೈಗನ್ನಡಿಯಾಗಿದೆ. ೩ ಬಾರಿ ಶಾಸಕರಾಗಿರುವ ಸಂಗಮೇಶ್ವರ್ ಕ್ಷೇತ್ರದ ಅಭಿವೃದ್ಧಿ ಕುರಿತು ಪ್ರಸ್ತಾಪಿಸದಿರುವುದು ವಿಪರ್ಯಾಸದ ಸಂಗತಿಯಾಗಿದೆ.
    ಕ್ಷೇತ್ರದಲ್ಲಿ ಸಂಗಮೇಶ್ವರ್ ದುರಾಡಳಿತ, ದುರ್ವರ್ತನೆ ಹಾಗು ದೌರ್ಜನ್ಯದಿಂದ ಜನರು ಬೇಸತ್ತಿದ್ದಾರೆ. ಕಬಡ್ಡಿ ಪಂದ್ಯಾವಳಿ ವೇಳೆ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಸಂಗಮೇಶ್ವರ್ ಹಾಗು ಕುಟುಂಬದವರ ವಿರುದ್ಧ ದೂರು ದಾಖಲಾಗಿದೆ. ಈ ದೂರಿನ ಮೂಲಕ ಇವರ ಅಕ್ರಮ ಚಟುವಟಿಕೆಗಳು ಬೆಳಿಕಿಗೆ ಬರಲಿವೆ. ಈ ಹಿನ್ನಲೆಯಲ್ಲಿ ಕ್ಷೇತ್ರದ ಜನರ ಗಮನ ಬೇರೆಡೆ ಸೆಳೆಯಲು ಈ ರೀತಿಯಾಗಿ ನಡೆದುಕೊಳ್ಳುತ್ತಿದ್ದಾರೆಂದು ಆರೋಪಿಸಿದ್ದಾರೆ.
   ಶಿವಮೊಗ್ಗ ಜಿಲ್ಲೆಯ ಸರ್ವಾಂಗಿಣ ಅಭಿವೃದ್ಧಿಗೆ ಶ್ರಮಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರರವರು ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಲ್ಲದೆ ಶಾಸಕರಾಗಿರುವ ಕಾರಣಕ್ಕೆ ಸಂಗಮೇಶ್ವರ್‌ಗೆ ಎಲ್ಲಾ ರೀತಿಯ ಸಹಕಾರ ನೀಡುತ್ತಿದ್ದಾರೆ. ಈ ವಿಚಾರ ಕ್ಷೇತ್ರದ ಎಲ್ಲರಿಗೂ ತಿಳಿದಿದೆ. ಆದರೆ ಇದೀಗ ಅಕ್ರಮ ಚಟುವಟಿಕೆಗಳು, ದೌರ್ಜನ್ಯ, ದಬ್ಬಾಳಿಕೆಗಳಿಗೆ ಬೆಂಬಲ ನೀಡದಿದ್ದಾಗ ಮುಖ್ಯಮಂತ್ರಿಗಳು, ಜಿಲ್ಲಾ ಉಸ್ತುವಾರಿ ಸಚಿವರು ಹಾಗು ಸಂಸದರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇವರ ಆರೋಪಗಳಿಗೆ ಬಿಜೆಪಿ ಪಕ್ಷ ಸುಮ್ಮನೆ ಕೂರುವುದಿಲ್ಲ ಹೋರಾಟ ನಡೆಸಲಿದೆ ಎಚ್ಚರಿಸಿದ್ದಾರೆ.