ಮಂಗಳವಾರ, ಆಗಸ್ಟ್ 5, 2025

ಮುಷ್ಕರದ ನಡುವೆಯೂ ಕೆಲವು ಬಸ್‌ಗಳ ಸಂಚಾರ : ಕೆಲವು ನೌಕರರು ಕರ್ತವ್ಯಕ್ಕೆ ಹಾಜರು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ಭದ್ರಾವತಿಯಲ್ಲಿ  ಮಂಗಳವಾರ ಬಸ್‌ಗಳ ಸಂಚಾರ ಕಂಡು ಬಂದಿತು. ಈ ನಡುವೆ ಖಾಸಗಿ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಕಂಡು ಬಂದರು. 
    ಭದ್ರಾವತಿ : ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಮುಷ್ಕರದ ನಡುವೆಯೂ ನಗರದಲ್ಲಿ ಮಂಗಳವಾರ ಬಸ್‌ಗಳ ಸಂಚಾರ ಕಂಡು ಬಂದಿತು. ಈ ನಡುವೆ ಕೆಲವು ನೌಕರರು ಕರ್ತವ್ಯ ಹಾಜರಾಗಿದ್ದು, ಉಳಿದಂತೆ ಬಹುತೇಕ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದಾರೆ. 
    ಶಿವಮೊಗ್ಗ-ಭದ್ರಾವತಿ ನಡುವಿನ ಬಸ್ ಸಂಚಾರ ಎಂದಿನಂತೆ ಕಂಡು ಬಂದಿತು. ಆದರೆ ವೇಗದೂತ ಬಸ್‌ಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು. ಸೋಮವಾರ ದೂರದ ಊರುಗಳಿಂದ ಪ್ರಯಾಣ ಬೆಳೆಸಿದ್ದ ಪ್ರಯಾಣಿಕರು ಮಾತ್ರ ನಿಲ್ದಾಣಗಳಲ್ಲಿ ಕಂಡು ಬಂದರು. 
    ನಗರದ ಸಾರಿಗೆ ಘಟಕದಲ್ಲಿ ಸುಮಾರು ೫೦ ರಿಂದ ೬೦ ಬಸ್‌ಗಳಿದ್ದು, ಪ್ರತಿದಿನ ಸುಮಾರು ೪೦-೪೫ ಬಸ್‌ಗಳು ಸೂಚಿತ ಮಾರ್ಗಗಳಲ್ಲಿ ಸಂಚರಿಸುತ್ತವೆ. ಮುಷ್ಕರದಿಂದಾಗಿ ಕೆಲವೇ ಕೆಲವು ಬಸ್‌ಗಳು ಸಂಚಾರ ಆರಂಭಿಸಿವೆ. ಉಳಿದಂತೆ ಖಾಸಗಿ ಬಸ್‌ಗಳ ಸಂಚಾರ ಎಂದಿನಂತೆ ಕಂಡು ಬಂದಿತು. ಬುಧವಾರ ಮುಷ್ಕರದಿಂದ ಪ್ರಯಾಣಿಕರ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಕಂಡು ಬರುತ್ತಿದೆ.

ಬಿಜೆಪಿ ನಗರ, ಗ್ರಾಮಾಂತರ ಮಂಡಲಗಳಿಗೆ ನೂತನ ಪದಾಧಿಕಾರಿಗಳ ನೇಮಕ

ಭದ್ರಾವತಿ ಬಿಜೆಪಿ ನಗರ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್
    ಭದ್ರಾವತಿ: ವಿಧಾನಸಭಾ ಕ್ಷೇತ್ರದ ಬಿಜೆಪಿ ನಗರ ಮತ್ತು ಗ್ರಾಮಾಂತರ ಮಂಡಲಗಳಿಗೆ ನೂತನ ಪದಾಧಿಕಾರಿಗಳನ್ನು ನೇಮಕಗೊಳಿಸಿ ಆದೇಶ ಹೊರಡಿಸಲಾಗಿದೆ.  
       ನಗರ ಮಂಡಲ ಅಧ್ಯಕ್ಷರಾಗಿ ೪ನೇ ಬಾರಿಗೆ ಜಿ. ಧರ್ಮಪ್ರಸಾದ್ ಮುಂದುವರೆದಿದ್ದಾರೆ. ಉಳಿದಂತೆ ಉಪಾಧ್ಯಕ್ಷರಾಗಿ ಸುಲೋಚನ ಪ್ರಕಾಶ್, ಎಚ್.ಎಸ್ ಸುಬ್ರಮಣ್ಯ, ರವಿಚಂದ್ರನ್, ಶ್ರೀನಾಥ್ ಆಚಾರಿ, ಕೃಷ್ಣಮೂರ್ತಿ(ಕಿಟ್ಟಿ) ಮತ್ತು ಯೋಗೇಶ್ ಗುಜ್ಜಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್. ಚನ್ನೇಶ್ ೩ನೇ ಬಾರಿಗೆ ಮುಂದುವರೆದಿದ್ದು, ಹೊಸದಾಗಿ ರಘುರಾವ್ ಸೇರ್ಪಡೆಗೊಂಡಿದ್ದಾರೆ. 
    ಕಾರ್ಯದರ್ಶಿಗಳಾಗಿ ಸಾಗರ್, ಆರ್.ಪಿ ವೆಂಕಟೇಶ್, ಕವಿತಾ ರಾವ್, ಲತಾ ಪ್ರಭಾಕರ್, ಆಶಾ ಪುಟ್ಟಸ್ವಾಮಿ ಮತ್ತು ಧನುಷ್ ಬೋಸ್ಲೆ ಹಾಗು ಖಜಾಂಚಿಯಾಗಿ ಸಂಪತ್ ರಾಜ್ ಬಾಂಟಿಯ ೯ನೇ ಬಾರಿಗೆ ನೇಮಕಗೊಂಡಿದ್ದು, ಮಾಧ್ಯಮ್ ಪ್ರಮುಖರಾಗಿ ಕಾ.ರಾ ನಾಗರಾಜ್, ಸಾಮಾಜಿಕ ಜಾಲ ತಾಣಕ್ಕೆ ಪ್ರೇಮ ಮಂಜುನಾಥ್ ನೇಮಿಸಲಾಗಿದೆ. 


ಭದ್ರಾವತಿ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕೆ.ಎಚ್ ತೀರ್ಥಯ್ಯ. 
    ಗ್ರಾಮಾಂತರ ಮಂಡಲ ಅಧ್ಯಕ್ಷರಾಗಿ ಮೊದಲ ಬಾರಿಗೆ ಕೆ.ಎಚ್ ತೀರ್ಥಯ್ಯ ನೇಮಕಗೊಂಡಿದ್ದು, ಉಪಾಧ್ಯಕ್ಷರಾಗಿ ಶಿವಾನಂದ ಮೂರ್ತಿ, ಕೆ.ಟಿ ಪ್ರಸನ್ನ, ಪಿ. ರಂಗಸ್ವಾಮಿ, ಗಣಪತಿಭಟ್ಟರು, ಗೌರಮ್ಮ ಮತ್ತು ಕೆ.ಎಚ್ ರವಿಕುಮಾರ್, ಪ್ರಧಾನ ಕಾರ್ಯದರ್ಶಿಗಳಾಗಿ ಬಿ. ಅಣ್ಣಪ್ಪ ಮತ್ತು ಹನುಂತನಾಯ್ಕ ಎರಡನೇ ಬಾರಿಗೆ ಮುಂದುವರೆದಿದ್ದಾರೆ. ಕಾರ್ಯದರ್ಶಿಗಳಾಗಿ ಎಂ.ಬಿ ವಿಶ್ವನಾಥ್, ಲೋಲಾಕ್ಷಿ ರಾಜಗುರು, ಎನ್. ದಿವ್ಯಾದರ್ಶ, ಟಿ.ಜೆ ರಾಕೇಶ್, ಆರ್. ದೀಪಕ್ ಮತ್ತು ಜೆ.ಬಿ ರುದ್ರೇಶ್, ಖಜಾಂಚಿಯಾಗಿ ಸಚಿನ್ ಛಾಯಾಪತಿ ನೇಮಕವಾಗಿದ್ದಾರೆ.

ಪ್ರತಿ ತಿಂಗಳು ೫ರೊಳಗೆ ಪಡಿತರ ಹಂಚಿಕೆ ನೀಡಿ, ಕಮಿಷನ್ ಹಣ ಪಾವತಿಸಿ : ಟಿ. ಕೃಷ್ಣಪ್ಪ

ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಮಾತನಾಡಿದರು. 
    ಭದ್ರಾವತಿ:  ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ೫ನೇ ದಿನಾಂಕದೊಳಗೆ ಪಡಿತರ ಹಂಚಿಕೆ ನೀಡಬೇಕು. ಪಡಿತರ ವಿತರಕರಿಗೆ ಕಮಿಷನ್ ಹಣ ಪ್ರತಿ ತಿಂಗಳು ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಮನವಿ ಮಾಡಿದರು. 
    ಅವರು ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಆಹಾರ ಭದ್ರತೆ ಯೋಜನೆಯಡಿ ಪಡಿತರದಾರರಿಗೆ ಕೇಂದ್ರ ಸರ್ಕಾರದ ೫ ಕೆ.ಜಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ೫ ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಪಡಿತರ ದಾಸ್ತಾನು ವಿವಿಧ ಕಾರಣಗಳಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ೧೫ನೇ ದಿನಾಂಕದಿಂದ ಎತ್ತುವಳಿ ನೀಡಲಾಗುತ್ತಿದೆ. ಇದರಿಂದಾಗಿ ಪಡಿತರದಾರರಿಗೆ ಪ್ರತಿ ತಿಂಗಳು ೨೦ನೇ ದಿನಾಂಕದ ನಂತರ ಪಡಿತರ ವಿತರಣೆ ಮಾಡಲಾಗುತ್ತಿರುತ್ತದೆ. ಇದರಿಂದಾಗಿ ಎತ್ತುವಳಿಗೂ ಸಹ ವಿಳಂಬವಾಗಿ ಪಡಿತರದಾರರು ನ್ಯಾಯಬೆಲೆ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿರುತ್ತಾರೆ. ಈ ಹಿನ್ನಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಈ ಹಿಂದಿನ ಪದ್ಧತಿಯಂತೆ ೫ನೇ ದಿನಾಂಕದೊಳಗೆ ಪಡಿತರ ಹಂಚಿಕಿ ನೀಡಬೇಕೆಂದು ಕೋರಿದರು.  ಮಾಲೀಕರಿಗೆ ಬರಬೇಕಾದ ಕಮೀಷನ್ ಹಣ ಆಯಾ ಆಯಾ ತಿಂಗಳಲ್ಲೇ ಪಾವತಿಗೆ ಕ್ರಮವಹಿಸಬೇಕು. ಸುಮಾರು ೭ ವರ್ಷಗಳಿಂದ ಇ.ಕೆ.ವೈ.ಸಿ ಮಾಡಿರುವ ಹಣ ಸಹ ಬಂದಿರುವುದಿಲ್ಲ. ಈ ಕೂಡಲೇ ಇ.ಕೆ.ವೈ.ಸಿ. ಹಣವನ್ನು ಬಿಡುಗಡೆ ಮಾಡಿಕೊಡಬೇಕೆಂದು ಆಗ್ರಹಿಸಿದರು. 
    ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಿಗೆ ಬಿಲ್ಲಿಂಗ್ ಮಾಡಿದ ೨೪ ಗಂಟೆಗಳ ನಂತರ ಬಿಲ್ ಆಪ್ ಡೇಟ್ ಆಗುತ್ತಿರುತ್ತದೆ. ಆದುದರಿಂದ ಕೂಡಲೇ ಈ ತಾಂತ್ರಿಕ ಸಮಸ್ಯೆಗಳು ಬಗೆಹರಿಸಿ ಬಿಲ್ ಹಾಕಿದ ಕೂಡಲೇ ವಿತರಣೆ ಅವಕಾಶ ಮಾಡಿಕೊಡಬೇಕು. ಮಾರ್ಚ್‌ನಿಂದ ಜುಲೈವರೆಗೆ ಕೆಲವು ಜಿಲ್ಲೆಗಳಲ್ಲಿ ಅನ್ನಭಾಗ್ಯದ ೫ ಕೆ.ಜಿ. ಕಮೀಷನ್ ಹಣ ಬಿಡುಗಡೆಯಾಗಿದೆ. ಎನ್.ಎಫ್.ಎಸ್.ಐ. ಕಮೀಷನ್ ಹಣ ಏಪ್ರಿಲ್ ತಿಂಗಳು ಒಂದು ತಿಂಗಳು ಮಾತ್ರ ಬಿಡುಗಡೆಯಾಗಿದ್ದು, ಮೇ-ಜೂನ್-ಜುಲೈ ಕಮಿಷನ್ ಹಣ ಬಿಡುಗಡೆಯಾಗಿರುವುದಿಲ್ಲ. ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.  
    ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಕೇಶವೇಗೌಡ, ರಾಜ್ಯ ಕಾರ್ಯಾಧ್ಯಕ್ಷ ಡಿ.ತಾಯಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ತಾಲೂಕು ನಗರ ಘಟಕದ ಅಧ್ಯಕ್ಷ ಆರ್. ನಾಗೇಶ್, ರಾಜೇಂದ್ರ, ಮಣಿ, ಸಚ್ಚಿದಾನಂದ, ಲಕ್ಷ್ಮೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಕಡದಕಟ್ಟೆಯಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಮನವಿ

ಭದ್ರಾವತಿ ನಗರಸಭೆ ವಾರ್ಡ್ ನಂ.೧ರ ವ್ಯಾಪ್ತಿಯ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿ ಬಸ್ ತಂಗುದಾಣ ನಿರ್ಮಿಸಬೇಕೆಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.  
ಭದ್ರಾವತಿ : ನಗರಸಭೆ ವಾರ್ಡ್ ನಂ.೧ರ ವ್ಯಾಪ್ತಿಯ ಬಿ.ಎಚ್ ರಸ್ತೆ, ಕಡದಕಟ್ಟೆಯಲ್ಲಿ ಬಸ್ ತಂಗುದಾಣ ನಿರ್ಮಿಸಬೇಕೆಂದು ಸಾಮಾಜಿಕ ಹೋರಾಟಗಾರ ಶಶಿಕುಮಾರ್ ಎಸ್. ಗೌಡ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ. 
  ರೈಲ್ವೆ ಮೇಲ್ಸೇತುವೆ ನಿರ್ಮಿಸಲು ಈ ಹಿಂದೆ ಬಸ್ ತಂಗುದಾಣ ನೆಲಸಮಗೊಳಿಸಿದ್ದು, ಕೆಲವು ತಿಂಗಳ ಹಿಂದೆ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಗಿದೆ. ಸೇತುವೆ ಮೇಲೆ ವಾಹನಗಳು ಸಂಚರಿಸುತ್ತಿವೆ. ಆದರೆ ಈ ಭಾಗದ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವಿದ್ಯಾರ್ಥಿಗಳಿಗೆ ಮತ್ತು ಸ್ಥಳೀಯರಿಗೆ ಬಸ್ ತಂಗುದಾಣವಿಲ್ಲದೆ ಪರದಾಡುವಂತಾಗಿದೆ. ಈ ಹಿನ್ನಲೆಯಲ್ಲಿ ತಾಲೂಕು ಆಡಳಿತ ಬಸ್ ತಂಗುದಾಣ ನಿರ್ಮಿಸಿ ಅನುಕೂಲ ಕಲ್ಪಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ. 
    ವೈ. ಶಶಿಕುಮಾರ್, ಜಿಟ್ಟೋಜಿ, ಹನುಮಂತಪ್ಪ ಮತ್ತು ಶ್ರೀನಿವಾಸ್ ಉಪಸ್ಥಿತರಿದ್ದರು. ಗ್ರೇಡ್-೨ ತಹಸೀಲ್ದಾರ್ ಮಂಜಾನಾಯ್ಕರವರು ಮನವಿ ಸ್ವೀಕರಿಸಿದರು.