ಮಂಗಳವಾರ, ಆಗಸ್ಟ್ 5, 2025

ಪ್ರತಿ ತಿಂಗಳು ೫ರೊಳಗೆ ಪಡಿತರ ಹಂಚಿಕೆ ನೀಡಿ, ಕಮಿಷನ್ ಹಣ ಪಾವತಿಸಿ : ಟಿ. ಕೃಷ್ಣಪ್ಪ

ಭದ್ರಾವತಿಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಮಾತನಾಡಿದರು. 
    ಭದ್ರಾವತಿ:  ಪ್ರತಿ ತಿಂಗಳು ನ್ಯಾಯಬೆಲೆ ಅಂಗಡಿಗಳಿಗೆ ೫ನೇ ದಿನಾಂಕದೊಳಗೆ ಪಡಿತರ ಹಂಚಿಕೆ ನೀಡಬೇಕು. ಪಡಿತರ ವಿತರಕರಿಗೆ ಕಮಿಷನ್ ಹಣ ಪ್ರತಿ ತಿಂಗಳು ನೀಡಬೇಕೆಂದು ಕರ್ನಾಟಕ ರಾಜ್ಯ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಮನವಿ ಮಾಡಿದರು. 
    ಅವರು ಈ ಕುರಿತು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಸ್ತುತ ಆಹಾರ ಭದ್ರತೆ ಯೋಜನೆಯಡಿ ಪಡಿತರದಾರರಿಗೆ ಕೇಂದ್ರ ಸರ್ಕಾರದ ೫ ಕೆ.ಜಿ ಹಾಗೂ ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಯಡಿ ೫ ಕೆ.ಜಿ ಅಕ್ಕಿ ನೀಡಲಾಗುತ್ತಿದೆ. ಪಡಿತರ ದಾಸ್ತಾನು ವಿವಿಧ ಕಾರಣಗಳಿಂದ ನ್ಯಾಯಬೆಲೆ ಅಂಗಡಿ ಮಾಲೀಕರಿಗೆ ೧೫ನೇ ದಿನಾಂಕದಿಂದ ಎತ್ತುವಳಿ ನೀಡಲಾಗುತ್ತಿದೆ. ಇದರಿಂದಾಗಿ ಪಡಿತರದಾರರಿಗೆ ಪ್ರತಿ ತಿಂಗಳು ೨೦ನೇ ದಿನಾಂಕದ ನಂತರ ಪಡಿತರ ವಿತರಣೆ ಮಾಡಲಾಗುತ್ತಿರುತ್ತದೆ. ಇದರಿಂದಾಗಿ ಎತ್ತುವಳಿಗೂ ಸಹ ವಿಳಂಬವಾಗಿ ಪಡಿತರದಾರರು ನ್ಯಾಯಬೆಲೆ ಅಂಗಡಿ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿರುತ್ತಾರೆ. ಈ ಹಿನ್ನಲೆಯಲ್ಲಿ ನ್ಯಾಯಬೆಲೆ ಅಂಗಡಿಗಳಿಗೆ ಈ ಹಿಂದಿನ ಪದ್ಧತಿಯಂತೆ ೫ನೇ ದಿನಾಂಕದೊಳಗೆ ಪಡಿತರ ಹಂಚಿಕಿ ನೀಡಬೇಕೆಂದು ಕೋರಿದರು.  ಮಾಲೀಕರಿಗೆ ಬರಬೇಕಾದ ಕಮೀಷನ್ ಹಣ ಆಯಾ ಆಯಾ ತಿಂಗಳಲ್ಲೇ ಪಾವತಿಗೆ ಕ್ರಮವಹಿಸಬೇಕು. ಸುಮಾರು ೭ ವರ್ಷಗಳಿಂದ ಇ.ಕೆ.ವೈ.ಸಿ ಮಾಡಿರುವ ಹಣ ಸಹ ಬಂದಿರುವುದಿಲ್ಲ. ಈ ಕೂಡಲೇ ಇ.ಕೆ.ವೈ.ಸಿ. ಹಣವನ್ನು ಬಿಡುಗಡೆ ಮಾಡಿಕೊಡಬೇಕೆಂದು ಆಗ್ರಹಿಸಿದರು. 
    ಪ್ರಸ್ತುತ ನ್ಯಾಯಬೆಲೆ ಅಂಗಡಿಗಳಿಗೆ ಬಿಲ್ಲಿಂಗ್ ಮಾಡಿದ ೨೪ ಗಂಟೆಗಳ ನಂತರ ಬಿಲ್ ಆಪ್ ಡೇಟ್ ಆಗುತ್ತಿರುತ್ತದೆ. ಆದುದರಿಂದ ಕೂಡಲೇ ಈ ತಾಂತ್ರಿಕ ಸಮಸ್ಯೆಗಳು ಬಗೆಹರಿಸಿ ಬಿಲ್ ಹಾಕಿದ ಕೂಡಲೇ ವಿತರಣೆ ಅವಕಾಶ ಮಾಡಿಕೊಡಬೇಕು. ಮಾರ್ಚ್‌ನಿಂದ ಜುಲೈವರೆಗೆ ಕೆಲವು ಜಿಲ್ಲೆಗಳಲ್ಲಿ ಅನ್ನಭಾಗ್ಯದ ೫ ಕೆ.ಜಿ. ಕಮೀಷನ್ ಹಣ ಬಿಡುಗಡೆಯಾಗಿದೆ. ಎನ್.ಎಫ್.ಎಸ್.ಐ. ಕಮೀಷನ್ ಹಣ ಏಪ್ರಿಲ್ ತಿಂಗಳು ಒಂದು ತಿಂಗಳು ಮಾತ್ರ ಬಿಡುಗಡೆಯಾಗಿದ್ದು, ಮೇ-ಜೂನ್-ಜುಲೈ ಕಮಿಷನ್ ಹಣ ಬಿಡುಗಡೆಯಾಗಿರುವುದಿಲ್ಲ. ತಕ್ಷಣ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.  
    ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಚನ್ನಕೇಶವೇಗೌಡ, ರಾಜ್ಯ ಕಾರ್ಯಾಧ್ಯಕ್ಷ ಡಿ.ತಾಯಣ್ಣ, ರಾಜ್ಯ ಸಂಘಟನಾ ಕಾರ್ಯದರ್ಶಿ ಸಿದ್ದಲಿಂಗಯ್ಯ, ತಾಲೂಕು ನಗರ ಘಟಕದ ಅಧ್ಯಕ್ಷ ಆರ್. ನಾಗೇಶ್, ರಾಜೇಂದ್ರ, ಮಣಿ, ಸಚ್ಚಿದಾನಂದ, ಲಕ್ಷ್ಮೀಕಾಂತ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ