ಬಡ ವಿದ್ಯಾರ್ಥಿನಿ ಜಿ. ಹರ್ಷಿತ ತಾಲೂಕಿಗೆ ಪ್ರಥಮ,
ರಾಜ್ಯಕ್ಕೆ ೬ನೇ ರ‍್ಯಾಂಕ್
ಭದ್ರಾವತಿ ಬೈಪಾಸ್ ರಸ್ತೆಯಲ್ಲಿರುವ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಜಿ. ಹರ್ಷಿತ ಹೆಚ್ಚಿನ ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ ಹಿನ್ನಲೆಯಲ್ಲಿ ಆಕೆಗೆ ಕಾಲೇಜಿನ ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರು ಸಿಹಿ ತಿನಿಸಿ ಅಭಿನಂದಿಸಿದರು.
ಭದ್ರಾವತಿ, ಜು. ೧೮: ನಗರದ ಬೈಪಾಸ್ ರಸ್ತೆಯಲ್ಲಿರುವ ಬಿಜಿಎಸ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದುಕೊಂಡಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ೫೭ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ೧೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ೩೪ ವಿದ್ಯಾರ್ಥಿಗಳು ಪ್ರಥಮ, ೧೧ ವಿದ್ಯಾರ್ಥಿಗಳು ದ್ವಿತೀಯ ಹಾಗೂ ಓರ್ವ ತೃತೀಯ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ೮೦ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೧೨ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಉಳಿಂದಂತೆ ೫೨ ಪ್ರಥಮ ಮತ್ತು ೧೧ ವಿದ್ಯಾರ್ಥಿಗಳು ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಬಡತನದಲ್ಲಿ ಅರಳಿದ ವಿದ್ಯಾರ್ಥಿನಿ ಜಿ.ಹರ್ಷಿತ:
ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಜಿ. ಹರ್ಷಿತ ೫೮೯ ಅಂಕಗಳೊಂದಿಗೆ ಶೇ.೯೮ ಫಲಿತಾಂಶದೊಂದಿಗೆ ತಾಲೂಕಿಗೆ ಪ್ರಥಮ ಸ್ಥಾನ, ರಾಜ್ಯಕ್ಕೆ ೬ನೇ ರ‍್ಯಾಂಕ್ ಪಡೆದುಕೊಂಡಿದ್ದಾಳೆ. ಈ ವಿದ್ಯಾರ್ಥಿನಿ ಸಾಧನೆ ಇತರರಿಗೆ ಮಾದರಿಯಾಗಿದೆ.
ಈಕೆ ನಗರದ ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕ, ಸಿದ್ದಾಪುರದ ನಿವಾಸಿ ಗಿರಿಗೌಡ ಮತ್ತು ಯಶೋಧ ದಂಪತಿ ಪುತ್ರಿಯಾಗಿದ್ದು, ಕುಟುಂಬದ ಆರ್ಥಿಕ ಸಂಕಷ್ಟದ ನಡುವೆಯೂ ಕಠಿಣ ಪರಿಶ್ರಮದಿಂದ ಗುರಿ ತಲುಪುವಲ್ಲಿ ಯಶಸ್ವಿಯಾಗಿದ್ದಾಳೆ.
ಈಕೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲೂ ಉತ್ತಮ ಫಲಿತಾಂಶ ಪಡೆದುಕೊಂಡಿದ್ದು, ಆರ್ಥಿಕ ಸಂಕಷ್ಟದಿಂದ ಮುಂದಿನ ವಿದ್ಯಾಭ್ಯಾಸಕ್ಕೆ ಎದುರು ನೋಡುತ್ತಿದ್ದ ಈಕೆಗೆ ಕಾಲೇಜಿನ ಆಡಳಿತ ಮಂಡಳಿ ಎರಡು ವರ್ಷ ಉಚಿತ ಶಿಕ್ಷಣ ನೀಡಿದ ಪರಿಣಾಮ ದ್ವಿತೀಯ ಪಿಯುಸಿಯಲ್ಲೂ ಉತ್ತಮ ಸಾಧನೆ ಮಾಡಲು ಸಾಧ್ಯವಾಗಿದೆ. ಇದೀಗ ಮುಂದಿನ ಉನ್ನತ ಶಿಕ್ಷಣದ ಚಿಂತೆ ಈ ವಿದ್ಯಾರ್ಥಿನಿಯನ್ನು ಕಾಡುತ್ತಿದೆ. ಪೋಷಕರು ವಿದ್ಯಾರ್ಥಿನಿಯ ಕನಸು ನನಸು ಮಾಡಲು ಹಗಲಿರುಳು ಶ್ರಮಿಸುತ್ತಿದ್ದಾರೆ. ಆದರೂ ಸಹ ಆರ್ಥಿಕ ಸಂಕಷ್ಟ ಎದುರಾಗುತ್ತಿದೆ.
ಧನ ಸಹಾಯಕ್ಕೆ ಮನವಿ:
ವಿದ್ಯಾರ್ಥಿನಿ ಹರ್ಷಿತ ಉನ್ನತ ಶಿಕ್ಷಣಕ್ಕೆ ನೆರವಾಗುವ ದಾನಿಗಳು ಆರ್ಥಿಕ ನೆರವು ನೀಡುವಂತೆ ಮನವಿ ಮಾಡಲಾಗಿದೆ. ದಾನಿಗಳು ಎಸ್‌ಬಿಐ ಬ್ಯಾಂಕ್, ಎಸ್.ಬಿ ಖಾತೆ ಸಂಖ್ಯೆ : ೩೫೯೨೭೭೬೧೦೨೨ ಐಎಫ್‌ಎಸ್‌ಸಿ ಎಸ್‌ಬಿಐಎನ್೦೦೧೧೩೩೫ ಸಂಖ್ಯೆಗೆ ಆರ್ಥಿಕ ನೆರವು ನೀಡಬಹುದಾಗಿದೆ.
ವಿದ್ಯಾರ್ಥಿಗಳಿಗೆ ಅಭಿನಂದನೆ:
ಆದಿಚುಂಚನಗಿರಿ ಶ್ರೀಕ್ಷೇತ್ರದ ಪೀಠಾಧಿಪತಿಗಳಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪ್ರಧಾನ ಕಾರ್ಯದರ್ಶಿ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಆಡಳಿತಾಧಿಕಾರಿ ಬಿ. ಜಗದೀಶ್, ಪ್ರಾಂಶುಂಪಾಲ ಜಿ.ಕೇಶವಮೂರ್ತಿ, ಉಪನ್ಯಾಸಕರು ಹಾಗೂ ಸಿಬ್ಬಂದಿ ವೃಂದದವರು ಕಾಲೇಜಿನ ವಿದ್ಯಾರ್ಥಿಗಳ ಸಾಧನೆಯನ್ನು ಅಭಿನಂದಿಸಿದ್ದಾರೆ.