ದೇಶ, ಸೈನಿಕರ ಮೇಲಿನ ಅಭಿಮಾನಕ್ಕೆ ಕೃತಜ್ಞತೆ ಸಲ್ಲಿಸಿದ ಮಾಜಿ ಸೈನಿಕ ಫ್ರಾನ್ಸಿಸ್
ವಿಶ್ವನಾಥ್
ಭದ್ರಾವತಿ : ಪ್ರಸ್ತುತ ಭಾರತ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಯುದ್ಧದ ಹಿನ್ನಲೆಯಲ್ಲಿ ಅನಿವಾರ್ಯ ಸಂದರ್ಭದಲ್ಲಿ ಮಾಜಿ ಸೈನಿಕರನ್ನು ಯುದ್ಧಕ್ಕೆ ಆಹ್ವಾನಿಸಬಹುದು ಎಂಬ ಉದ್ದೇಶದೊಂದಿಗೆ ಅವರಿಗೆ ನೆರವಾಗಲು ಮಾಜಿ ಸೈನಿಕರೊಬ್ಬರಿಗೆ ವ್ಯಕ್ತಿಯೋರ್ವ ಸ್ವಯಂ ಪ್ರೇರಣೆಯಿಂದ ತನ್ನ ಬಳಿ ಜೇಬಿನಲ್ಲಿದ್ದ ಹಣ ನೀಡಲು ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.
ತಾಲೂಕಿನ ಮಾವಿನಕೆರೆ ಗ್ರಾಮದ ನಿವಾಸಿ ಎಲೆಕ್ಟ್ರಿಕಲ್ ಮತ್ತು ಫ್ಲಂಬರ್ ಕೆಲಸ ಮಾಡುವ ವಿಶ್ವನಾಥ್ ಎಂಬುವರು ಮಾಜಿ ಸೈನಿಕ, ಪ್ರಸ್ತುತ ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಫ್ರಾನ್ಸಿಸ್ ಅವರಿಗೆ ಯುದ್ಧಕ್ಕೆ ಆಹ್ವಾನಿಸಿರಬಹುದು ಅವರಿಗೆ ಯುದ್ಧದ ಸಂದರ್ಭದಲ್ಲಿ ನೆರವಾಗಲಿ ಎಂಬ ದೇಶಾಭಿಮಾನದೊಂದಿಗೆ ತಮ್ಮ ಜೇಬಿನಲ್ಲಿದ್ದ ಸುಮಾರು ೫ ಸಾವಿರ ರು. ನಗದು ಹಣ ನೀಡಲು ಮುಂದಾಗಿದ್ದು, ಈ ಸಂದರ್ಭದಲ್ಲಿ ಫ್ರಾನ್ಸಿಸ್ ಅವರು ನಮಗೆ ಇನ್ನೂ ಯಾವುದೇ ಆಹ್ವಾನ ಬಂದಿಲ್ಲ. ಹಣ ನಿಮ್ಮ ಬಳಿಯೇ ಇರಲಿ ಎಂದು ಹೇಳಿ ಮರಳಿಸಿದ್ದಾರೆ.
ಈ ಕುರಿತು ಪತ್ರಿಕೆಗೆ ಪ್ರತಿಕ್ರಿಯಿಸಿರುವ ವಿಶ್ವನಾಥ್ ಅವರು ನಮ್ಮ ದೇಶದ ಸೈನಿಕರು ಪಿಓಕೆ ವಶಪಡಿಸಿಕೊಳ್ಳಬೇಕೆಂಬುದು ನನ್ನ ಆಸೆಯಾಗಿದೆ. ಸೈನಿಕರಿಗೆ ದೇಶದ ಪ್ರತಿಯೊಬ್ಬರು ಎಲ್ಲಾ ರೀತಿಯಿಂದಲೂ ನೆರವಾಗಬೇಕೆಂದರು.
ಫ್ರಾನ್ಸಿಸ್ ಅವರು ಈ ಸಂಬಂಧ ಪ್ರತಿಕ್ರಿಯಿಸಿ ದೇಶ ಮತ್ತು ಸೈನಿಕರ ಮೇಲೆ ಇಟ್ಟಿರುವ ಅಭಿಮಾನಕ್ಕೆ ಚಿರಋಣಿಯಾಗಿದ್ದು, ವಿಶ್ವನಾಥ್ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಒಂದು ವೇಳೆ ನಮ್ಮನ್ನು ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ಸ್ವಯಂ ಪ್ರೇರಣೆಯಿಂದ ತೆರಳುತ್ತೇನೆ ಎಂದರು.