Monday, May 12, 2025

ಭಾರತಕ್ಕೆ ಪಿಓಕೆ ಸೇರಲಿ, ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ತೆರಳಲು ಸಿದ್ದ : ಮಾಜಿ ಸೈನಿಕ ವೆಂಕಟಗಿರಿ

ಮಾಜಿ ಸೈನಿಕ ವೆಂಕಟಗಿರಿ
    ಭದ್ರಾವತಿ: ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆಯುತ್ತಿರುವ ಯುದ್ಧ ಕೊನೆಯಾಗಬೇಕು. ನಮ್ಮ ದೇಶಕ್ಕೆ ಪಿಓಕೆ ಸೇರಬೇಕು. ಆಗ ಮಾತ್ರ ದೇಶದ ಗಡಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ಸಾಧ್ಯ ಎಂದು ಮಾಜಿ ಸೈನಿಕ ವೆಂಕಟಗಿರಿ ತಿಳಿಸಿದ್ದಾರೆ. 
    ಸುಮಾರು ೧೭ ವರ್ಷ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ವೆಂಕಟಗಿರಿಯವರು ದೇಶದ ಗಡಿ ಭಾಗದಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ನಡೆಯುತ್ತಿವೆ. ದೇಶದ ಸಂಸತ್ ಮೇಲಿನ ದಾಳಿ, ಕಾರ್ಗಿಲ್ ಯುದ್ದ, ಪುಲ್ವಾಮ ದಾಳಿ ಮತ್ತು ಅಮಾಯಕ ಪ್ರವಾಸಿಗರ ಮೇಲಿನ ದಾಳಿ ಎಲ್ಲದಕ್ಕೂ ಮುಖ್ಯ ಕಾರಣ ಪಿಓಕೆಯಾಗಿದೆ. ನಮ್ಮ ಭಾರತೀಯ ಸೈನ್ಯ ಪಿಓಕೆ ವಶಪಡಿಸಿಕೊಂಡು ದೇಶದ ಗಡಿಯಲ್ಲಿ ಹೆಚ್ಚಿನ ಭದ್ರತೆ ಕೈಗೊಂಡಲ್ಲಿ ಭವಿಷ್ಯದಲ್ಲಿ ಈ ರೀತಿಯ ಘಟನೆಗಳು ಮರುಕಳುಹಿಸುವುದಿಲ್ಲ ಎಂದರು. 
    ಸೈನಿಕರಲ್ಲಿ ಯಾವುದೇ ಜಾತಿ, ಧರ್ಮ, ಪಕ್ಷ ಭೇದಭಾವವಿಲ್ಲ. ಸೈನಿಕರ ಗುರಿ ಒಂದೇ ಆಗಿದ್ದು, ಸಂಕಷ್ಟದ ಸಮಯದಲ್ಲಿ ದೇಶವನ್ನು ರಕ್ಷಿಸುವುದಾಗಿದೆ. ನಮ್ಮನ್ನು ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ಸ್ವಯಂ ಪ್ರೇರಣೆಯಿಂದ ತೆರಳುವುದಾಗಿ ತಿಳಿಸಿದ್ದಾರೆ. 
    ತಾಲೂಕು ಮಾಜಿ ಸೈನಿಕರ ಸಂಘದ ಕಾರ್ಯದರ್ಶಿಯಾಗಿರುವ ವೆಂಕಟಗಿರಿಯವರು ಈಗಾಗಲೇ ಸಂಘದ ವತಿಯಿಂದ ಯುದ್ಧಕ್ಕೆ ಆಹ್ವಾನಿಸಿದ್ದಲ್ಲಿ ತಾಲೂಕಿನ ಎಲ್ಲಾ ಮಾಜಿ ಸೈನಿಕರು ಸ್ವಯಂ ಪ್ರೇರಣೆಯಿಂದ ಬರುವುದಾಗಿ ರಕ್ಷಣಾ ಇಲಾಖೆಗೆ ಪತ್ರ ಬರೆದಿರುವುದಾಗಿ ತಿಳಿಸಿದ್ದಾರೆ. 

No comments:

Post a Comment