ಬುಧವಾರ, ಸೆಪ್ಟೆಂಬರ್ 20, 2023

ಮಹಿಳೆಯರಿಗೆ ಶೇ.33 ಮೀಸಲಾತಿ : ಬಿಜೆಪಿ ಸಂಭ್ರಮಾಚರಣೆ


ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೂತನ ಸಂಸತ್ ಭವನದಲ್ಲಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.33 ಮೀಸಲಾತಿ ಮಸೂದೆ ಯಶಸ್ವಿಯಾಗಿ ಮಂಡಿಸಿರುವ ಹಿನ್ನಲೆಯಲ್ಲಿ ಭದ್ರಾವತಿ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ ನಡೆಸಲಾಯಿತು.

    ಭದ್ರಾವತಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ನೂತನ ಸಂಸತ್ ಭವನದಲ್ಲಿ ಮಹಿಳೆಯರಿಗೆ ರಾಜಕೀಯ ಕ್ಷೇತ್ರದಲ್ಲಿ ಶೇ.33 ಮೀಸಲಾತಿ ಮಸೂದೆ ಯಶಸ್ವಿಯಾಗಿ ಮಂಡಿಸಿರುವ ಹಿನ್ನಲೆಯಲ್ಲಿ ನಗರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ ನಡೆಸಲಾಯಿತು.

    ರಂಗಪ್ಪ ವೃತ್ತದಲ್ಲಿ ಪಕ್ಷದ ಮಹಿಳಾ ಪ್ರಮುಖರು ಮೀಸಲಾತಿ ಮಸೂದೆ ಕುರಿತು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸುವ ಜೊತೆಗೆ ಸಂಭ್ರಮಾಚರಣೆ ನಡೆಸಿ ಸಿಹಿ ಹಂಚಿದರು.

    ಮಹಿಳಾ ಮೋರ್ಚಾ ಅಧ್ಯಕ್ಷೆ ಶೋಭಾ ಪಾಟೀಲ್, ಪಕ್ಷದ ಮುಖಂಡರಾದ ಮಂಗೋಟೆ ರುದ್ರೇಶ್, ಮಂಡಲ ಉಪಾಧ್ಯಕ್ಷೆ ಗೌರಮ್ಮ, ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜುಳ ಸೇರಿದಂತೆ ಪಕ್ಷದ ಮಹಿಳಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ಸೆ.21ರಂದು ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ

 


    ಭದ್ರಾವತಿ : ನಗರದ ತರೀಕೆರೆ ರಸ್ತೆಯ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ಆಶ್ರಮದ ವತಿಯಿಂದ ತಮಿಳುನಾಡು ದಿಂಡಿಕಲ್‌ನ ವಂಶಪಾರಂಪರೆ ಸಿದ್ದ ವೈದ್ಯರಾದ ಕೆ. ಮುತ್ತುಕೃಷ್ಣನ್ ಅವರಿಂದ ಜು.21ರಂದು ಉಚಿತ ಸಿದ್ದ ಕಣ್ಣಿನ ಹನಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಕಾರ್ಯಕ್ರಮ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 1.30ರವರೆಗೆ ನಡೆಯಲಿದ್ದು, ಕಣ್ಣಿಗೆ ಹನಿ ಹಾಕುವುದರಿಂದ ಕಣ್ಣಿನಲ್ಲಿ ನೀರು ಬರುತ್ತಿರುವುದು, ಕಣ್ಣು ಉರಿ, ಕಣ್ಣು ಕೆಂಪಗಾಗುವುದು, ಕಣ್ಣಿನಲ್ಲಿ ಪೊರೆ ಬರುವ ಹಂತದಲ್ಲಿರುವವರು ಹಾಗು ದೂರ ದೃಷ್ಠಿ ಮತ್ತು ಸಮೀಪ ದೃಷ್ಠಿ ತೊಂದರೆ ಇರುವವರಿಗೆ ಹೆಚ್ಚಿನ ಅನುಕೂಲವಾಗಲಿದೆ. ಹೆಚ್ಚಿನ ಮಾಹಿತಿಗೆ ಮೊ: 9480283030 ಅಥವಾ 9448255544 ಸಂಖ್ಯೆಗೆ ಕರೆ ಮಾಡಬಹುದಾಗಿದೆ.



ಚಂದ್ರಯಾನ-3 ಸಾಧನೆಗೆ ಗಣೇಶನೂ ಮೆಚ್ಚುಗೆ

 


ಭದ್ರಾವತಿ ಉಂಬ್ಳೆಬೈಲು ರಸ್ತೆಸಂಜಯ್ ನಗರದ ಬಳಿ ಸಂಜಯ್ ಯುವಕರ ಸಂಘ ಈ ಬಾರಿ ಚಂದ್ರಯಾನ-3 ಸಾಧನೆ ಬಿಂಬಿಸುವ ವಿಶಿಷ್ಟವಾದ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. 

    ಭದ್ರಾವತಿ: ಚಂದ್ರಯಾನ-3 ಸಾಧನೆ ಭಾರತ ದೇಶವನ್ನು ಇಡೀ ಜಗತ್ತು ತಿರುಗಿ ನೋಡುವತೆ ಮಾಡಿದೆ. ಇಂತಹ ಅದ್ಭುತ ಸಾಧನೆಯನ್ನು ಗಣೇಶ ಚತುರ್ಥಿಯಲ್ಲಿ ಯುವಕರ ತಂಡವೊಂದು ಸದ್ಬಳಕೆ ಮಾಡಿಕೊಂಡು ಗಮನ ಸೆಳೆಯುತ್ತಿದೆ.

     ನಗರದ ಉಂಬ್ಳೆಬೈಲು ರಸ್ತೆ, ಸಂಜಯ್ ನಗರದ ಬಳಿ ಸಂಜಯ್ ಯುವಕರ ಸಂಘ ಈ ಬಾರಿ ವಿಶಿಷ್ಟವಾದ ಗಣೇಶ ಪ್ರತಿಷ್ಠಾಪನೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಇಸ್ರೋ ವಿಜ್ಞಾನಿಗಳ ಚಂದ್ರಯಾನ-3 ಸಾಧನೆಯನ್ನು ತೆರೆದಿಡುವ ಮೂಲಕ ಪ್ರತಿಯೊಬ್ಬರಿಗೆ ಅದರ ಮಹತ್ವ ತಿಳಿಸಿಕೊಡುವಲ್ಲಿ ಯಶಸ್ವಿಯಾಗಿದೆ.

    ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಮೂಲಕ ರೋವರ್ ಇಳಿಯುತ್ತಿರುವುದು. ದೇಶದ ತ್ರಿವರ್ಣ ಧ್ವಜ ಹಿಡಿದು ಗಗನಯಾತ್ರಿ ವೇಷಧಾರಿಯಾಗಿ ಇದನ್ನು ವಿಘ್ನ ನಿವಾರಕ ಗಣೇಶ ಯಶಸ್ಸಿನ ಸಂಕೇತ ಪ್ರದರ್ಶಿಸುತ್ತಿರುವುದು. ಮತ್ತೊಂದೆಡೆ ಭವಿಷ್ಯದಲ್ಲಿ ಮಾನವ ಚಂದ್ರನ ಮೇಲೆ ನೆಲೆಸುವ ಕನಸು ನನಸಾಗಿಸುವ ಚಿತ್ರಣ ತೆರೆದಿಟ್ಟಿರುವುದು ಭಕ್ತರ ಗಮನ ಸೆಳೆಯುತ್ತಿದೆ.

    ಇಲ್ಲಿನ ಯುವಕರು ಪ್ರತಿವರ್ಷ ವಿಭಿನ್ನವಾದ, ಆಕರ್ಷಕವಾದ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡುವ ಗಮನ ಸೆಳೆಯುತ್ತಿದ್ದಾರೆ.



 

 

ವಸತಿರಹಿತರಿಗೆ ನಿವೇಶನ, ಭೂ ಮಂಜೂರಾತಿ, ಸ್ಮಶಾನಕ್ಕಾಗಿ ಪ್ರತಿಭಟನೆ

 ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಡಿಎಸ್ಎಸ್ ಮನವಿ


ಭದ್ರಾವತಿ ತಾಲೂಕಿನಲ್ಲಿ ನಿವೇಶನ ಮತ್ತು ವಸತಿ ರಹಿತರ ಬಗ್ಗೆ, ಭೂ ಮಂಜೂರಾತಿ ಬಗ್ಗೆ ಹಾಗು ಸ್ಮಶಾನ ಭೂಮಿ ಬಗ್ಗೆ ಸಾಕಷ್ಟು ಸಮಸ್ಯೆಗಳಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಒಂದು ತಿಂಗಳೊಳಗಾಗಿ ಬಗೆಹರಿಸುವಂತೆ ಆಗ್ರಹಿಸಿ ಬುಧವಾರ ದಲಿತ ಸಂಘರ್ಷ ಸಮಿತಿ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-2 ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಭದ್ರಾವತಿ: ತಾಲೂಕಿನಲ್ಲಿ ನಿವೇಶನ ಮತ್ತು ವಸತಿ ರಹಿತರ ಬಗ್ಗೆ, ಭೂ ಮಂಜೂರಾತಿ ಬಗ್ಗೆ ಹಾಗು ಸ್ಮಶಾನ ಭೂಮಿ ಬಗ್ಗೆ ಸಾಕಷ್ಟು ಸಮಸ್ಯೆಗಳಿದ್ದು, ಈ ಎಲ್ಲಾ ಸಮಸ್ಯೆಗಳನ್ನು ಒಂದು ತಿಂಗಳೊಳಗಾಗಿ ಬಗೆಹರಿಸುವಂತೆ ಆಗ್ರಹಿಸಿ ಬುಧವಾರ ದಲಿತ ಸಂಘರ್ಷ ಸಮಿತಿ(ಸಂಯೋಜಕ) ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗ್ರೇಡ್-2 ರಂಗಮ್ಮ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

    ಪ್ರತಿಭಟನೆಯಲ್ಲಿ ಮಾತನಾಡಿ ಪ್ರಮುಖರು, ತಾಲೂಕು ಕಸಬಾ 2ನೇ ಹೋಬಳಿ ಎಚ್.ಕೆ ಜಂಕ್ಷನ್ ಬಿ.ಬಿ ಮೈನ್ಸ್ ಗ್ರಾಮದ ಸರ್ವೆ ನಂ.8ರಲ್ಲಿ 29 ಎಕರೆ ರೆವಿನ್ಯೂ ಜಾಗದಲ್ಲಿ ವಾಸಿಸುತ್ತಿರುವ ಸುಮಾರು 350 ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡಬೇಕು. ತಕ್ಷಣ ಕುಡಿಯುವ ನೀರು, ಅಂಗನವಾಡಿ, ವಿದ್ಯುತ್, ರಸ್ತೆ ನಿರ್ಮಾಣ ಮಾಡುವುದು. ಹಿರಿಯೂರು ಗ್ರಾಮದಲ್ಲಿ ಸುಮಾರು 500 ಕುಟುಂಬಗಳು ನಿವೇಶನಕ್ಕಾಗಿ ಗ್ರಾಮ ಪಂಚಾಯಿತಿಗೆ ಅರ್ಜಿ ಸಲ್ಲಿಸಿದ್ದು, ಗೊಂದಿ ಕೈಮರದ ಹತ್ತಿರ ತಾರೀಕಟ್ಟೆ ಸರ್ವೆ ನಂ.41ರಲ್ಲಿ ಸರ್ಕಾರಿ ಭೂಮಿ ಲಭ್ಯವಿದ್ದು, ಇದನ್ನು ನಿವೇಶನಕ್ಕಾಗಿ ಕಾಯ್ದಿರಿಸಿ ಮಂಜೂರು ಮಾಡುವುದು. ಕಸಬಾ 1ನೇ ಹೋಬಳಿ ಶೆಟ್ಟಿಹಳ್ಳಿ ಅಂಚೆ, ಹಾತಿಕಟ್ಟೆ ಗ್ರಾಮದಲ್ಲಿ ಸುಮಾರು 300 ಕುಟುಂಬಗಳು ನಿವೇಶನ ರಹಿತರಾಗಿರುತ್ತಾರೆ. ಇವರಿಗೂ ಸೂಕ್ತ ಜಾಗ ಗುರುತಿಸಿ ನಿವೇಶನ ಕಲ್ಪಿಸಿಕೊಡುವಂತೆ ಒತ್ತಾಯಿಸಿದರು.

    ಕಾಳಿಂಗನಾಳ್ ಸರ್ವೆ ನಂ.1ರಲ್ಲಿ ಲಭ್ಯವಿರುವ 97 ಎಕರೆ ಸರ್ಕಾರಿ ಭೂಮಿಯಲ್ಲಿ ಹಾಲಿ ಸಾಗುವಳಿ ಮಾಡುತ್ತಿರುವವರಿಗೆ ತಕ್ಷಣ ಸಾಗುವಳಿ ನೀಡಬೇಕು. ಹಿರಿಯೂರು ಸರ್ವೆ ನಂ.37 ಮತ್ತು ಇತರೆಡೆ ಸಾಗುವಳಿ ನೀಡದೇ ಇರುವವರಿಗೆ ತಕ್ಷಣ ಸಾಗುವಳಿ ಮತ್ತು ಖಾತೆ ಮಾಡಿಕೊಡಬೇಕು. ಹೊನ್ನಟ್ಟಿ ಹೊಸೂರು ಸರ್ವೆ ನಂ.29ರ ಸರ್ಕಾರಿ ಭೂಮಿಯಲ್ಲಿ 30-40 ವರ್ಷಗಳಿಂದ ಸಾಗುವಳಿ ಮಾಡುತ್ತಿರುವವರಿಗೆ ತಕ್ಷಣ ಸಾಗುವಳಿ ನೀಡಬೇಕು. ಕೂಡ್ಲಿಗೆರೆ ಸರ್ವೆ ನಂ.66ರ ಸಾಗುವಳಿ ನೀಡಿರುವ ಕುಟುಂಬಗಳಿಗೆ ತಕ್ಷಣ ಖಾತೆ ಮಾಡಿಕೊಡಬೇಕೆಂದು ಆಗ್ರಹಿಸಿದರು.

    ಹಿರಿಯೂರು ಗ್ರಾಮದಲ್ಲಿ ಮಂಜೂರಾಗಿರುವ ಹಿಂದೂ ರುದ್ರಭೂಮಿಗೆ ತಕ್ಷಣ ಮೂಲಭೂತ ಸೌಲಭ್ಯ ಒದಗಿಸಬೇಕು. ಕೂಡ್ಲಿಗೆರೆ ಹೋಬಳಿ ಸಿದ್ದರಮಟ್ಟಿ ಗ್ರಾಮದ ಸರ್ವೆ ನಂ.34, 35ರಲ್ಲಿರುವ ಸರ್ಕಾರಿ ಭೂಮಿಯಲ್ಲಿ ಹಿಂದೂ ರುದ್ರಭೂಮಿ ಮಂಜೂರು ಮಾಡಿಕೊಡಬೇಕು. ಕಸಬಾ-1ನೇ ಹೋಬಳಿ ಶೆಟ್ಟಿಹಳ್ಳಿ ಅಂಚೆ, ಹಾತಿಕಟ್ಟೆ ಗ್ರಾಮಕ್ಕೆ ಹಿಂದೂ ರುದ್ರಭೂಮಿ ಮಂಜೂರು ಮಾಡುವುದು ಹಾಗು ಕಸಬಾ-2ನೇ ಹೋಬಳಿ ಎಚ್.ಕೆ ಜಂಕ್ಷನ್ ಸರ್ವೆ ನಂ. 42ರಲ್ಲಿ ಹಿಂದೂ ರುದ್ರಭೂಮಿ ಅವಶ್ಯಕತೆ ಇದ್ದು, 4 ಎಕರೆ ಜಮೀನು ಮಂಜೂರು ಮಾಡಬೇಕು. ಈ ಎಲ್ಲಾ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಲಾಯಿತು.

    ಪ್ರತಿಭಟನೆಯಲ್ಲಿ ಉದ್ಯಮಿ ಬಿ.ಕೆ ಜಗನ್ನಾಥ್, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ವಿರೂಪಾಕ್ಷಪ್ಪ, ಡಿಎಸ್ಎಸ್ ತಾಲೂಕು ಸಂಯೋಜಕ ಕೆ. ರಾಜು, ಸಂಘಟನಾ ಸಂಯೋಜಕರಾದ ಅಣ್ಣಾದೊರೆ, ಮೂರ್ತಿ, ರಂಗಸ್ವಾಮಿ ಸೇರಿದಂತೆ ಇನ್ನಿತರ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.