Monday, December 27, 2021

ಕೆ.ಸಿ ವೀರಭದ್ರಗೌಡ್ರುರವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಅಪಾರ : ಬಿ.ಕೆ ಸಂಗಮೇಶ್ವರ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಕಣಕಟ್ಟೆಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕೆ.ಸಿ ವೀರಭದ್ರಗೌಡ್ರುರವರ ಕೈಲಾಸ ಶಿವಗಣಾರಾಧನೆ ಹಾಗು ಸರ್ವಶರಣ ಸಮ್ಮೇಳನದಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಡಿ. ೨೭: ದಿವಂಗತ ಲಯನ್ಸ್ ಕೆ.ಸಿ ವೀರಭದ್ರಗೌಡ್ರುರವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಅಪಾರವಾಗಿದ್ದು, ಇವರ ಆದರ್ಶತನ ಎಲ್ಲರಿಗೂ ಮಾದರಿಯಾಗಿದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಸ್ಮರಿಸಿದರು.
    ಅವರು ಸೋಮವಾರ ನಗರಸಭೆ ವ್ಯಾಪ್ತಿಯ ಭದ್ರಾ ಕಾಲೋನಿ ಕಣಕಟ್ಟೆಯಲ್ಲಿ ಹಮ್ಮಿಕೊಳ್ಳಲಾಗಿದ್ದ ಲಯನ್ಸ್ ಕೆ.ಸಿ ವೀರಭದ್ರಗೌಡ್ರುರವರ ಕೈಲಾಸ ಶಿವಗಣಾರಾಧನೆ ಹಾಗು ಸರ್ವಶರಣ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದರು.
ಸಮಾಜದ ಎಲ್ಲರೊಂದಿಗೆ ಉತ್ತಮ ಬಾಂಧವ್ಯ, ಜೊತೆಗೆ ಸೇವಾ ಮನೋಭಾವನೆ ಹೊಂದಿದ್ದ ವೀರಭದ್ರಗೌಡ್ರುರವರು ಸಮಾಜಕ್ಕೆ ಸಲ್ಲಿಸಿರುವ ಸೇವೆ ಶ್ಲಾಘನೀಯ ಎಂದರು.
    ಚಿತ್ರದುರ್ಗ ಸಿರಿಗೆರೆ ತರಳಬಾಳು ಬೃಹನ್ಮಠದ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು. ರೈತ ಮುಖಂಡ ಎಚ್.ಆರ್ ಬಸವರಾಜಪ್ಪ, ಕರ್ನಾಟಕ ನೀರು ಸರಬರಾಜು, ಒಳಚರಂಡಿ ಮಂಡಳಿ ಸದಸ್ಯ ಮಂಗೋಟೆ ರುದ್ರೇಶ್, ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಪ್ರಧಾನ ಕಾರ್ಯದರ್ಶಿ ಬಿ.ಎಸ್ ಮಹೇಶ್‌ಕುಮಾರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜಾನಕಿ ನಿಧನ

ಜಾನಕಿ
ಭದ್ರಾವತಿ, ಡಿ. ೨೭:  ಹಳೇನಗರದ ಭೂತನಗುಡಿ ನಿವಾಸಿ ಜಾನಕಿ(೬೭) ಭಾನುವಾರ ನಿಧನ ಹೊಂದಿದರು.
ಪತಿ, ಓರ್ವ ಪುತ್ರಿ ಹಾಗು ಇಬ್ಬರು ಪುತ್ರರನ್ನು ಹೊಂದಿದ್ದರು. ಇವರ ಅಂತ್ಯಕ್ರಿಯೆ ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಇವರ ನಿಧನಕ್ಕೆ ನಗರದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸುಗ್ರಾಮ ಅಧ್ಯಕ್ಷೆಗೆ ಅಭಿನಂದನೆ

    ಗೌರಮ್ಮ ಎಸ್. ಮಹಾದೇವ
ಭದ್ರಾವತಿ, ಡಿ. ೨೭: ತಾಲೂಕು ಸುಗ್ರಾಮ ಚುನಾಯಿತ ಗ್ರಾಮ ಪಂಚಾಯಿತಿ ಮಹಿಳಾ ಸದಸ್ಯರ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಗೌರಮ್ಮ ಎಸ್. ಮಹಾದೇವ ಅವರನ್ನು ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯರು ಅಭಿನಂದಿಸಿದ್ದಾರೆ.
    ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ಸದಸ್ಯರಾಗಿರುವ ಗೌರಮ್ಮ ಅವರು ಅಧ್ಯಕ್ಷರಾಗಿವುದು ಪಂಚಾಯಿತಿಗೆ ಹೆಮ್ಮೆಯ ವಿಚಾರವಾಗಿದ್ದು, ತಾಲೂಕಿನಾದ್ಯಂತ ಮಹಿಳಾ ಸದಸ್ಯರಿಗೆ ಗ್ರಾಮ ಪಂಚಾಯಿತಿ ಆಡಳಿತದ ಪರಿಕಲ್ಪನೆ ಕುರಿತು ಇನ್ನೂ ಹೆಚ್ಚಿನ ಮಾಹಿತಿ ಒದಗಿಸುವ ಜೊತೆಗೆ ಪಂಚಾಯಿತಿ ಆಡಳಿತ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪ್ರಮುಖ ಪಾತ್ರ ವಹಿಸುವಂತೆ ಮನವಿ ಮಾಡಿದ್ದಾರೆ.
    ಗೌರಮ್ಮ ಅವರಿಗೆ  ಬ್ಲಾಕ್ ಕಾಂಗ್ರೆಸ್ ಸಮಿತಿ ಎಸ್.ಟಿ ಘಟಕದ ತಾಲೂಕು ಅಧ್ಯಕ್ಷ ಎಸ್. ಮಹಾದೇವ ಹಾಗು ಮೇದಾರ ಸಮಾಜದ ಪ್ರಮುಖರು ಸೇರಿದಂತೆ ಇನ್ನಿತರರು ಸಹ ಅಭಿನಂದಿಸಿದ್ದಾರೆ.

ನಗರಸಭೆ ನೂತನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಕೆ. ಸುದೀಪ್‌ಕುಮಾರ್


ಭದ್ರಾವತಿ ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ೧೨ನೇ ವಾರ್ಡ್ ನಗರಸಭಾ ಸದಸ್ಯ ಕೆ. ಸುದೀಪ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.  
    ಭದ್ರಾವತಿ, ಡಿ. ೨೭: ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷರಾಗಿ ೧೨ನೇ ವಾರ್ಡ್ ನಗರಸಭಾ ಸದಸ್ಯ ಕೆ. ಸುದೀಪ್ ಕುಮಾರ್ ಸೋಮವಾರ ಅಧಿಕಾರ ಸ್ವೀಕರಿಸಿದರು.                                    
    ನಗರಸಭೆ ಸಭಾಂಗಣದಲ್ಲಿ ನಡೆದ ಚುನಾವಣೆಯಲ್ಲಿ  ಸುದೀಪ್ ಕುಮಾರ್  ಅವಿರೋಧವಾಗಿ ಆಯ್ಕೆಯಾಗಿದ್ದು, ಚುನಾವಣಾಧಿಕಾರಿಯಾಗಿ ಪೌರಾಯುಕ್ತ ಕೆ. ಪರಮೇಶ್ ಕರ್ತವ್ಯ ನಿರ್ವಹಿಸಿದರು.                                  
      ವಿ.ಕದಿರೇಶ್, ಮಣಿ ಎಎನ್ ಎಸ್, ಬಷೀರ್ ಅಹ್ಮದ್, ಲತಾ ಚಂದ್ರಶೇಖರ್,  ಶೃತಿ ವಸಂತ್, ಜಯಶೀಲ ಸುರೇಶ್, ಕೋಟೇಶ್ವರ ರಾವ್, ಸೈಯದ್ ರಿಯಾಜ್, ರೇಖಾ ಪ್ರಕಾಶ್ ಮತ್ತು ಉದಯ್ ಕುಮಾರ್ ನೂತನ ಸ್ಥಾಯಿ ಸಮಿತಿ ಸದಸ್ಯರಾಗಿ ಆಯ್ಕೆಯಾದರು.                            
   ನೂತನ ಅಧ್ಯಕ್ಷರು ಮತ್ತು ಸದಸ್ಯರನ್ನು  ನಗರಸಭೆ ಅಧ್ಯಕ್ಷೆ ಗೀತಾ ರಾಜ್ ಕುಮಾರ್  ಮತ್ತು  ಉಪಾಧ್ಯಕ್ಷ ಚನ್ನಪ್ಪ ಅಭಿನಂದಿಸಿದರು.