Saturday, April 1, 2023

ಏ.೨ರಂದು ಜಿಲ್ಲಾ ಗೌರ‍್ನರ್ ಡಾ.ಎಂ.ಕೆ ಭಟ್ ಅಧಿಕೃತ ಭೇಟಿ

ಲಯನ್ಸ್ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್
    ಭದ್ರಾವತಿ, ಏ. ೧:  ನಗರದ ಲಯನ್ಸ್ ಮತ್ತು ಲಿಯೋ ಕ್ಲಬ್‌ಗೆ ಏ.೨ರ ಭಾನುವಾರ ಲಯನ್ಸ್ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್ ಅಧಿಕೃತ ಭೇಟಿ ನೀಡಲಿದ್ದು, ಹಲವು ಸೇವಾಕಾರ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
    ನ್ಯೂಟೌನ್ ಉಂಬ್ಳೆಬೈಲು ರಸ್ತೆ ಲಯನ್ಸ್ ಭವನದಲ್ಲಿ ಬೆಳಿಗ್ಗೆ ೯.೩೦ಕ್ಕೆ ಜಿಲ್ಲಾ ಗೌರ‍್ನರ್ ಡಾ. ಎಂ.ಕೆ ಭಟ್‌ರವರಿಗೆ ಸ್ವಾಗತ ನಡೆಯಲಿದ್ದು, ನಂತರ ೧೦ ಗಂಟೆಗೆ ಹೊಸಸೇತುವೆ ರಸ್ತೆ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ ಬಳಿ ನೂತನವಾಗಿ ನಿರ್ಮಿಸಲಾಗಿರುವ ಬಸ್ ತಂಗುದಾಣ ಡಾ.ಎಂ.ಕೆ ಭಟ್ ಉದ್ಘಾಟಿಸಲಿದ್ದಾರೆ.
    ೧೦.೩೦ಕ್ಕೆ ಹಳೇನಗರದ ಪುರಾಣ ಪ್ರಸಿದ್ದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯಕ್ಕೆ ಚಾಲನೆ ನೀಡಿದ್ದಾರೆ. ೧೧ ಗಂಟೆಗೆ ಬಿ.ಎಚ್ ರಸ್ತೆ ರೈಲ್ವೆ ನಿಲ್ದಾಣದ ಮುಂಭಾಗ ನೂತನವಾಗಿ ನಿರ್ಮಿಸಲಾಗಿರುವ ಕ್ಲಾಕ್ ಟವರ್ ಮತ್ತು  ೧೧.೩೦ಕ್ಕೆ ಜನ್ನಾಪುರ ಜಯಶ್ರೀ ಕಲ್ಯಾಣ ಮಂಪಟ ಸಮೀಪದಲ್ಲಿರುವ ಕಾರುಣ್ಯ ಚಾರಿಟಬಲ್ ಟ್ರಸ್ಟ್‌ನಲ್ಲಿ ಅಳವಡಿಸಲಾಗಿರುವ ಎಲೆಕ್ಟ್ರಿಕ್ ಗೀಸರ್ ಉದ್ಘಾಟಿಸಲಿದ್ದಾರೆ. ನಂತರ ೧೨ ಗಂಟೆಗೆ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಬಾಟಲ್‌ಗಳನ್ನು ವಿತರಿಸಲಿದ್ದಾರೆ.
    ಸಂಜೆ ೭ ಗಂಟೆಗೆ ಲಯನ್ಸ್ ಭವನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಮಾಜಿ ಜಿಲ್ಲಾ ಗೌರ‍್ನರ್ ಬಿ. ದಿವಾಕರ ಶೆಟ್ಟಿ, ವಿಭಾಗ-೨, ವಲಯ-೨ರ ಅಧ್ಯಕ್ಷ ಕೆ.ವಿ ಚಂದ್ರಶೇಖರ್ ಉಪಸ್ಥಿತರಿರುವರು. ಲಯನ್ಸ್ ಕ್ಲಬ್ ಅಧ್ಯಕ್ಷ ಎ.ಎನ್ ಕಾರ್ತಿಕ್ ಅಧ್ಯಕ್ಷತೆ ವಹಿಸಲಿದ್ದಾರೆ.

ಸಂತರಲ್ಲಿ ಶ್ರೇಷ್ಠ ಸಂತ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿ : ಬಿಳಿಕಿ ಶ್ರೀ

ಭದ್ರಾವತಿ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯನವರ ನೇತೃತ್ವದಲ್ಲಿ ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೬ನೇ ಹುಟ್ಟುಹಬ್ಬದ ಅಂಗವಾಗಿ ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಿಸಲಾಯಿತು. ಬಿಳಿಕಿ ಶ್ರೀ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಭದ್ರಾವತಿ, ಏ. ೧ : ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರು ಸಂತರಲ್ಲಿ ಶ್ರೇಷ್ಠ ಸಂತರಾಗಿದ್ದು, ಈ ನಾಡಿಗೆ, ದೇಶಕ್ಕೆ ಚೈತನ್ಯರಾಗಿದ್ದಾರೆ. ಇಂತಹ ಸಂತರನ್ನು ಪಡೆದ ನಾವು ಪುಣ್ಯವಂತರು ಎಂದು ಬಿಳಿಕಿ ಹಿರೇಮಠದ ಶ್ರೀ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
    ಶ್ರೀಗಳು ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಶ್ರೀ ಮರುಳಸಿದ್ದೇಶ್ವರ ಜನ ಕಲ್ಯಾಣ ಟ್ರಸ್ಟ್ ಅಧ್ಯಕ್ಷ ಸಿದ್ದಲಿಂಗಯ್ಯನವರ ನೇತೃತ್ವದಲ್ಲಿ ತುಮಕೂರು ಸಿದ್ದಗಂಗಾ ಮಠದ ಲಿಂಗೈಕ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೬ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಒಳರೋಗಿಗಳಿಗೆ ಹಾಲು, ಹಣ್ಣು, ಬ್ರೆಡ್ ವಿತರಣೆ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.
    ಜಾತಿ, ಮತ, ಪಂಥಗಳನ್ನು ಮೀರಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿ ನಾಡಿನ ಸಂತರ ಗೌರವ ಮತ್ತಷ್ಟು ಹೆಚ್ಚು ಮಾಡಿದ ಕೀರ್ತಿ ಶಿವಕುಮಾರ ಸ್ವಾಮೀಜಿಯವರಿಗೆ ಸಲ್ಲುತ್ತದೆ. ಶ್ರೀಗಳು ವಸತಿ, ಅನ್ನದಾಸೋಹ, ಅಕ್ಷರ ದಾಸೋಹಗಳ ಮೂಲಕ ಲಕ್ಷಾಂತರ ಜನರ ಬದುಕಿಗೆ ಬೆಳಕಾಗಿದ್ದರು. ಪ್ರತಿವರ್ಷ ಇವರ ಜನ್ಮದಿನ ವಿಶಿಷ್ಟವಾಗಿ ಆಚರಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು.
    ನಮ್ಮ ದೇಶದ ಧಾರ್ಮಿಕ ಪರಂಪರೆ ವಿಶಿಷ್ಟವಾಗಿದ್ದು, ಗುರುಗಳನ್ನು ಸ್ಮರಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಶಿವಕುಮಾರ ಸ್ವಾಮೀಜಿಯರು ತೋರಿಸಿಕೊಟ್ಟಿರುವ ಮಾರ್ಗದಲ್ಲಿ ಅವರ ಆದರ್ಶತನಗಳನ್ನು ಮೈಗೂಡಿಸಿಕೊಂಡು ಮುನ್ನಡೆಯಬೇಕೆಂದರು.
    ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಜಿ. ಸುರೇಶಯ್ಯ, ಉದ್ಯಮಿ ಬಿ.ಕೆ ಜಗನ್ನಾಥ್, ಸರ್ಕಾರಿ ಆಸ್ಪತ್ರೆ ವೈದ್ಯರಾದ ಡಾ. ಜಯರಾಜ್, ಡಾ. ಮಯೂರಿ, ಪ್ರಮುಖರಾದ ಮಹಾಸಭಾ ಮಹಿಳಾ ಘಟಕದ ಅಧ್ಯಕ್ಷೆ ರೂಪ ನಾಗರಾಜ್, ಯುವ ಘಟಕದ ಅಧ್ಯಕ್ಷ ಮಂಜುನಾಥ್, ಪ್ರಮುಖರಾದ ರವಿ, ಸತೀಶ್, ಎನ್.ಸಿ ಪ್ರಕಾಶ್, ವಾಗೀಶ್, ಜಗದೀಶ್, ನಾಗರತ್ನ ಸಿದ್ದಲಿಂಗಯ್ಯ, ಮಹಾದೇವ್, ರಾಮನಾಥ್ ಬರ್ಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕವಿತಾ ಸುರೇಶ್ ನಿರೂಪಿಸಿದರು. ಪೂರ್ಣಿಮಾ ನಿರಂಜನ್ ವಂದಿಸಿದರು.