ಪೊಲೀಸ್ ಉಮೇಶ್ ನೇತೃತ್ವದಲ್ಲಿ ಯುವಕರಿಂದ ಗುರುವಂದನೆ
ಭದ್ರಾವತಿಯಲ್ಲಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಭೂ ಸೇನೆಗೆ ಸೇರಲು ಉಚಿತ ದೈಹಿಕ ಹಾಗು ಲಿಖಿತ ಪರೀಕ್ಷೆ ತರಬೇತಿ ನೀಡಲಾಗುತ್ತಿದ್ದು, ಸೋಮವಾರ ತರಬೇತಿ ಪಡೆದ ಯುವಕರು ಗುರುವಂದನೆ ಮೂಲಕ ತರಬೇತಿದಾರರಿಗೆ ಹಾಗು ಆಯೋಜಕರಿಗೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸಿದರು.
ಭದ್ರಾವತಿ, ಮಾ. ೧೫: ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಭಾರತೀಯ ಭೂ ಸೇನೆಗೆ ಸೇರಲು ಉಚಿತ ದೈಹಿಕ ಹಾಗು ಲಿಖಿತ ಪರೀಕ್ಷೆ ತರಬೇತಿ ನೀಡಲಾಗುತ್ತಿದ್ದು, ಸೋಮವಾರ ತರಬೇತಿ ಪಡೆದ ಯುವಕರು ಗುರುವಂದನೆ ಸಲ್ಲಿಸುವ ಮೂಲಕ ವಿಶೇಷವಾಗಿ ಗಮನ ಸೆಳೆದರು.
ಹಲವಾರು ವರ್ಷಗಳಿಂದ ಮಾಜಿ ಸೈನಿಕರ ಸಂಘದ ವತಿಯಿಂದ ಉಚಿತ ತರಬೇತಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಸಹ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ತರಬೇತಿ ನಡೆಯಿತು. ನಗರ ಹಾಗು ಗ್ರಾಮಾಂತರ ಭಾಗದ ಸುಮಾರು ೪೨ ಯುವಕರು ಪ್ರತಿದಿನ ಬೆಳಿಗ್ಗೆ ತರಬೇತಿಯಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಂಡರು.
ತರಬೇತಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ಬಿ.ಎಚ್ ರಸ್ತೆ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ತರಬೇತಿ ನೀಡಿದ ತರಬೇತುದಾರರಿಗೆ ಹಾಗು ಆಯೋಜಕರಿಗೆ ವಿಶೇಷವಾಗಿ ಗುರುವಂದನೆ ಮೂಲಕ ಕೃತಜ್ಞತೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ತರಬೇತಿ ಪಡೆದ ಯುವಕರು ಮಾತನಾಡಿ, ಭೂ ಸೇನೆಗೆ ಸೇರಲು ತರಬೇತಿ ಪಡೆಯಲು ದೂರದ ಊರುಗಳಿಗೆ ತೆರಳಬೇಕಾಗುತ್ತದೆ. ಅಲ್ಲದೆ ಸಾಕಷ್ಟು ಹಣ ಖರ್ಚಾಗುತ್ತದೆ. ಇಲ್ಲಿಯೇ ಉಚಿತ ತರಬೇತಿ ನೀಡುತ್ತಿರುವುದರಿಂದ ಹೆಚ್ಚಿನ ಅನುಕೂಲವಾಗಿದೆ. ಅಲ್ಲದೆ ತರಬೇತಿ ಅವಧಿಯಲ್ಲಿ ತರಬೇತಿದಾರರು ಹಾಗು ಆಯೋಜಕರ ಹೆಚ್ಚಿನ ಕಾಳಜಿ ಹಾಗು ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಬಾರಿ ತರಬೇತಿ ಯಶಸ್ವಿಗೆ ಹೆಚ್ಚಿನ ಸಹಕಾರ ನೀಡುವ ಮೂಲಕ ಯುವಕರಿಗೆ ಸ್ಪೂರ್ತಿದಾಯಕರಾಗಿರುವ ಸ್ನೇಹ ಜೀವಿ ಬಳಗದ ಪೊಲೀಸ್ ಉಮೇಶ್ ಮಾತನಾಡಿ, ಯುವಕರು ತಮ್ಮ ಗುರಿ ತಲುಪಿದಾಗ ಮಾತ್ರ ತರಬೇತಿ ಸಾರ್ಥಕಗೊಳ್ಳುತ್ತದೆ. ಸೇನಾ ರ್‍ಯಾಲಿಯಲ್ಲಿ ಆಯ್ಕೆಯಾಗುವ ಮೂಲಕ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವಂತಾಗಬೇಕು. ಇದು ನಮ್ಮ ಆಶಯವಾಗಿದ್ದು, ಮುಂದಿನ ದಿನಗಳಲ್ಲಿ ತರಬೇತಿಗೆ ಇನ್ನೂ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಅಶೋಕ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವೆಂಕಟಗಿರಿ, ಬೋರೇಗೌಡ, ಅಹಮದ್, ಗೋವಿಂದಪ್ಪ, ಹಿರಿಯ ನಗರಸಭಾ ಸದಸ್ಯ ಕೆ.ಎನ್ ಭೈರಪ್ಪಗೌಡ, ಮಾಜಿ ಸೈನಿಕರ ಸಂಘ ಹಾಗು ಸ್ನೇಹಿ ಜೀವಿ ಬಳಗದ ಪ್ರಮುಖರು ಉಪಸ್ಥಿತರಿದ್ದರು.