Monday, December 28, 2020

ಬಿಪಿಎಲ್ ಕ್ರಿಕೆಟ್ ಪಂದ್ಯಾವಳಿ : ಪ್ರೈಮ್ ಪ್ಯಾಂಟಮ್ಸ್ ತಂಡಕ್ಕೆ ಮೊದಲನೇ ಬಹುಮಾನ

ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸಹಯೋಗದೊಂದಿಗೆ ದಿ ವಾಲ್ ಸಿಸಿ ಕ್ರಿಕೆಟ್ ಕ್ಲಬ್ ತಂಡದ ಮೈಕಲ್ ಮತ್ತು ಬಾಬುರವರು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಭದ್ರಾವತಿ ಪ್ರೀಮಿಯರ್ ಲೀಗ್(ಬಿಪಿಎಲ್) ಸೀಸನ್-೧ರ ಪಂದ್ಯಾವಳಿಯಲ್ಲಿ  ಪ್ರೈಮ್ ಪ್ಯಾಂಟಮ್ಸ್ ತಂಡ ಮೊದಲನೇ ಬಹುಮಾನ ಪಡೆದುಕೊಂಡಿದೆ.
    ಭದ್ರಾವತಿ, ಡಿ. ೨೮: ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಮತ್ತು ಶಾಸಕ ಬಿ.ಕೆ ಸಂಗಮೇಶ್ವರ್ ಸಹಯೋಗದೊಂದಿಗೆ ದಿ ವಾಲ್ ಸಿಸಿ ಕ್ರಿಕೆಟ್ ಕ್ಲಬ್ ತಂಡದ ಮೈಕಲ್ ಮತ್ತು ಬಾಬುರವರು ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಲೆದರ್ ಬಾಲ್ ಕ್ರಿಕೆಟ್ ಭದ್ರಾವತಿ ಪ್ರೀಮಿಯರ್ ಲೀಗ್(ಬಿಪಿಎಲ್) ಸೀಸನ್-೧ರ ಪಂದ್ಯಾವಳಿಯಲ್ಲಿ  ಪ್ರೈಮ್ ಪ್ಯಾಂಟಮ್ಸ್ ತಂಡ ಮೊದಲನೇ ಬಹುಮಾನ ಪಡೆದುಕೊಂಡಿದೆ.
    ಪಂದ್ಯಾವಳಿಯಲ್ಲಿ ದಿ ವಾಲ್ ಸಿಸಿ, ವೆಂಕಿ ಇಲೆವೆನ್, ಪ್ರೈಮ್ ಪ್ಯಾಂಟಮ್ಸ್, ರೈಸಿಂಗ್ ಪೋನಿಕ್ಸ್ ಮತ್ತು ಸ್ನೇಹ ಜೀವಿ ಕ್ರಿಕೆಟರ‍್ಸ್ ಒಟ್ಟು ೫ ತಂಡಗಳು ಭಾಗವಹಿಸಿದ್ದವು. ಈ ಪೈಕಿ ಪ್ರೈಮ್ ಪ್ಯಾಂಟಮ್ಸ್ ಮೊದಲನೇ ಬಹುಮಾನದೊಂದಿಗೆ ೩೦,೦೦೦ ರು. ನಗದು ಹಾಗು ಟ್ರೋಫಿ ತನ್ನದಾಗಿಸಿಕೊಂಡಿತು.
ಪಂದ್ಯಾವಳಿಯಲ್ಲಿ ಸ್ನೇಹ ಜೀವಿ ಕ್ರಿಕೆಟರ‍್ಸ್ ತಂಡದ ಅಭ್ಯುದಯ ಉಪಾಧ್ಯಾಯ ಉತ್ತಮ ಆಲ್ ರೌಂಡರ್ ಆಟಗಾರ, ಪ್ರೈಮ್ ಪ್ಯಾಂಟಮ್ಸ್ ತಂಡದ ಅಬು ತಲೀಬ್ ಮತ್ತು ವೆಂಕಿ ಇಲೆವೆನ್ ತಂಡದ ಅದೇಶ್ ಆರ್ ಗೌಡ  ಉತ್ತಮ ಬ್ಯಾಟ್ಸ್‌ಮೆನ್ ಪ್ರಶಸ್ತಿಗೆ ಭಾಜನರಾದರು.
   ಶಾಸಕ ಬಿ.ಕೆ ಸಂಗಮೇಶ್ವರ ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು. ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ಎಲ್ ದೇವರಾಜ್, ನಿವೃತ್ತ ಕ್ರೀಡಾ ತರಬೇತಿ ಅಧಿಕಾರಿ ವೆಂಕಟೇಶ್, ಕೇಸರಿ ಪಡೆ ಅಧ್ಯಕ್ಷ ಗಿರೀಶ್, ಯುವ ಮುಖಂಡ ಬಿ.ಎಸ್ ಗಣೇಶ್, ಆಯೋಜಕರಾದ ಮೈಕಲ್ ಮತ್ತು ಬಾಬು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.



ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ನೂತನ ಪದಾಧಿಕಾರಿಗಳು

ಅಧ್ಯಕ್ಷರಾಗಿ ಸೂಡಾ ಸದಸ್ಯ, ಬಿಜೆಪಿ ಮುಖಂಡ ಬಿ.ಜೆ ರಾಮಲಿಂಗಯ್ಯ

ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ನೂತನವಾಗಿ ಆಯ್ಕೆಯಾಗಿರುವ ೧೫ ಮಂದಿ ಪದಾಧಿಕಾರಿಗಳು.
     ಭದ್ರಾವತಿ, ಡಿ. ೨೮: ನಗರದ ನ್ಯೂಟೌನ್ ವಿಐಎಸ್‌ಎಲ್ ನಿವೃತ್ತ ನೌಕರರ ಕಲ್ಯಾಣ ಕೇಂದ್ರಕ್ಕೆ ೧೫ ಮಂದಿ ನೂತನ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
     ಕಲ್ಯಾಣ ಕೇಂದ್ರದ ಸರ್ವ ಸದಸ್ಯರ ಸಭೆಯಲ್ಲಿ ಚುನಾವಣಾಧಿಕಾರಿಯಾದ ಹಿರಿಯ ನ್ಯಾಯವಾದಿ ಕೆ.ಎಂ ಸತೀಶ್ ೧೫ ಮಂದಿ ನೂತನ ಪದಾಧಿಕಾರಿಗಳ ಹೆಸರನ್ನು ಘೋಷಿಸಿದರು. ಅಧ್ಯಕ್ಷರಾಗಿ ಬಿ.ಜಿ ರಾಮಲಿಂಗಯ್ಯ, ಉಪಾಧ್ಯಕ್ಷರಾಗಿ ಎಸ್. ಅಡವೀಶಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಆರ್ ನಾಗರಾಜ್, ಕಾರ್ಯದರ್ಶಿಗಳಾಗಿ ಎಸ್.ಎಚ್ ಹನುಮಂತರಾವ್ ಮತ್ತು ಡಿ. ನಂಜಪ್ಪ ಹಾಗೂ ಖಜಾಂಚಿಯಾಗಿ ಎಲ್. ಬಸವರಾಜಪ್ಪ, ಗೌರವಾಧ್ಯಕ್ಷರಾಗಿ ಜೆ.ಎಸ್ ನಾಗಭೂಷಣ್ ಹಾಗು ಸದಸ್ಯರಾಗಿ ನರಸಿಂಹಯ್ಯ ಎಚ್. ರಾಮಪ್ಪ, ಕೆಂಪಯ್ಯ, ಜಿ. ಶಂಕರ್, ಎಸ್.ಎಸ್ ಭೈರಪ್ಪ, ಗಂಗಾಧರ, ಮಹೇಶ್ವರಪ್ಪ ಮತ್ತು  ಎಸ್. ನರಸಿಂಹಚಾರ್ ಆಯ್ಕೆಯಾಗಿದ್ದಾರೆ.

ಅಡುಗೆ ಅನಿಲ ದರ ಏರಿಕೆ ಖಂಡಿಸಿ ಏಕಾಂಗಿ ಹೋರಾಟ

ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸಂಯುಕ್ತ ಜನತಾದಳ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೋಮವಾರ ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಏಕಾಂಗಿಯಾಗಿ ಉಪವಾಸ ಸತ್ಯಗ್ರಹ ನಡೆಸಿದರು.
   ಭದ್ರಾವತಿ, ಡಿ. ೨೮: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸಂಯುಕ್ತ ಜನತಾದಳ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೋಮವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಏಕಾಂಗಿಯಾಗಿ ಉಪವಾಸ ಸತ್ಯಗ್ರಹ ನಡೆಸಿದರು.
   ಅಡುಗೆ ಅನಿಲ ಬೆಲೆ ಮಾರ್ಚ್ ತಿಂಗಳಿನಲ್ಲಿ ರು.೫೫೦ ಇದ್ದು, ಇದೀಗ ಡಿಸೆಂಬರ್ ತಿಂಗಳಿನಲ್ಲಿ ರು. ೭೦೮ ತಲುಪಿದೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿನ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಸುಮಾರು ೨೦ ಕೋಟಿ ಕುಟುಂಬಗಳಿದ್ದು, ಬೆಲೆ ಏರಿಕೆಯಿಂದಾಗಿ ಬಡ ವರ್ಗದವರಿಗೆ ಹೆಚ್ಚಿನ ಹೊರೆಯಾಗುತ್ತಿದೆ ಎಂದು ಅಳಲು ವ್ಯಕ್ತಪಡಿಸಿದರು.
    ಪ್ರಸ್ತುತ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಪ್ರತಿದಿನ ಪರಿಷ್ಕರಣೆಯಾಗುವ ಮಾದರಿಯಲ್ಲಿ ೨೦೨೧ ರಿಂದ ಅಡುಗೆ ಅನಿಲ ಬೆಲೆ ಸಹ ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರ ತೈಲ ಕಂಪನಿಗಳ ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿದೆ. ಈಗಾಗಲೇ ಕೊರೋನಾ ಮಹಾಮಾರಿಯಿಂದ ದೇಶದ ಬಡವರ್ಗದವರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನ ಬಡವರ್ಗದವರ ಮೇಲೆ ಮರಣ ಶಾಸನ ಬರೆದಂತಾಗಿದೆ. ಮುಂದಿನ ದಿನಗಳಲ್ಲಿ ಅಡುಗೆ ಸಿಲಿಂಡರ್ ದರ ರು. ೧,೨೦೦ಕ್ಕೂ ಅಧಿಕ ಹೆಚ್ಚಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
   ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬಡವರ್ಗದವರ ನೆರವಿಗೆ ಮುಂದಾಗಬೇಕು. ಅಡುಗೆ ಅನಿಲ ದರ ಹೆಚ್ಚಾಗದಂತೆ ನಿಯಂತ್ರಿಸಬೇಕೆಂದು ಸಂಯುಕ್ತ ಜನಾತದಳ ಆಗ್ರಹಿಸುತ್ತದೆ ಎಂದರು.