ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸಂಯುಕ್ತ ಜನತಾದಳ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೋಮವಾರ ಭದ್ರಾವತಿ ನಗರದ ಅಂಬೇಡ್ಕರ್ ವೃತ್ತದಲ್ಲಿ ಏಕಾಂಗಿಯಾಗಿ ಉಪವಾಸ ಸತ್ಯಗ್ರಹ ನಡೆಸಿದರು.
ಭದ್ರಾವತಿ, ಡಿ. ೨೮: ಅಡುಗೆ ಅನಿಲ ಬೆಲೆ ಏರಿಕೆ ಖಂಡಿಸಿ ಸಂಯುಕ್ತ ಜನತಾದಳ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ಸೋಮವಾರ ನಗರದ ಅಂಬೇಡ್ಕರ್ ವೃತ್ತದಲ್ಲಿ ಏಕಾಂಗಿಯಾಗಿ ಉಪವಾಸ ಸತ್ಯಗ್ರಹ ನಡೆಸಿದರು.
ಅಡುಗೆ ಅನಿಲ ಬೆಲೆ ಮಾರ್ಚ್ ತಿಂಗಳಿನಲ್ಲಿ ರು.೫೫೦ ಇದ್ದು, ಇದೀಗ ಡಿಸೆಂಬರ್ ತಿಂಗಳಿನಲ್ಲಿ ರು. ೭೦೮ ತಲುಪಿದೆ. ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿನ ಬಿಪಿಎಲ್ ಮತ್ತು ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಸುಮಾರು ೨೦ ಕೋಟಿ ಕುಟುಂಬಗಳಿದ್ದು, ಬೆಲೆ ಏರಿಕೆಯಿಂದಾಗಿ ಬಡ ವರ್ಗದವರಿಗೆ ಹೆಚ್ಚಿನ ಹೊರೆಯಾಗುತ್ತಿದೆ ಎಂದು ಅಳಲು ವ್ಯಕ್ತಪಡಿಸಿದರು.
ಪ್ರಸ್ತುತ ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಪ್ರತಿದಿನ ಪರಿಷ್ಕರಣೆಯಾಗುವ ಮಾದರಿಯಲ್ಲಿ ೨೦೨೧ ರಿಂದ ಅಡುಗೆ ಅನಿಲ ಬೆಲೆ ಸಹ ಪರಿಷ್ಕರಣೆ ಮಾಡಲು ಕೇಂದ್ರ ಸರ್ಕಾರ ತೈಲ ಕಂಪನಿಗಳ ಬಂಡವಾಳ ಶಾಹಿಗಳ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿದೆ. ಈಗಾಗಲೇ ಕೊರೋನಾ ಮಹಾಮಾರಿಯಿಂದ ದೇಶದ ಬಡವರ್ಗದವರು ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇದೀಗ ಕೇಂದ್ರ ಸರ್ಕಾರ ಕೈಗೊಂಡಿರುವ ತೀರ್ಮಾನ ಬಡವರ್ಗದವರ ಮೇಲೆ ಮರಣ ಶಾಸನ ಬರೆದಂತಾಗಿದೆ. ಮುಂದಿನ ದಿನಗಳಲ್ಲಿ ಅಡುಗೆ ಸಿಲಿಂಡರ್ ದರ ರು. ೧,೨೦೦ಕ್ಕೂ ಅಧಿಕ ಹೆಚ್ಚಾಗಬಹುದೆಂದು ಆತಂಕ ವ್ಯಕ್ತಪಡಿಸಿದರು.
ಈ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬಡವರ್ಗದವರ ನೆರವಿಗೆ ಮುಂದಾಗಬೇಕು. ಅಡುಗೆ ಅನಿಲ ದರ ಹೆಚ್ಚಾಗದಂತೆ ನಿಯಂತ್ರಿಸಬೇಕೆಂದು ಸಂಯುಕ್ತ ಜನಾತದಳ ಆಗ್ರಹಿಸುತ್ತದೆ ಎಂದರು.
No comments:
Post a Comment