Saturday, April 19, 2025

ಗೃಹಿಣಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತಪಟ್ಟ ಪ್ರಕರಣ : ಮೃತದೇಹದೊಂದಿಗೆ ಪ್ರತಿಭಟನೆ

    ಭದ್ರಾವತಿ: ತಾಲೂಕಿನ ಹುಣಸೆಕಟ್ಟೆ ಜಂಕ್ಷನ್(ಎಚ್.ಕೆ ಜಂಕ್ಷನ್)ನಲ್ಲಿ ಗೃಹಿಣಿಯೋರ್ವಳು ಮೃತಪಟ್ಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿರುವ ಘಟನೆ ಶನಿವಾರ ನಡೆದಿದೆ.
    ಅಶ್ವಿನಿ ಅಲಿಯಾಸ್ ತೇಜಸ್ವಿನಿ(೨೮) ಎಂಬ ಗೃಹಿಣಿಯ ಮೃತದೇಹ ಅವರ ಮನೆಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಅಶ್ವಿನಿ ತವರು ಮನೆಯವರು ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ಪತಿ, ಮಾವ ಹಾಗು ಅತ್ತೆ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. 
    ಈ ನಡುವೆ ಹುಣಸೆಕಟ್ಟೆ ಜಂಕ್ಷನ್ ರಸ್ತೆಯಲ್ಲಿ ಅಶ್ವಿನಿ ಮೃತದೇಹವಿಟ್ಟು ಪ್ರತಿಭಟನೆ ನಡೆಸುವ ಮೂಲಕ ಪತಿ ಆಸ್ತಿಯಲ್ಲಿ ಮಕ್ಕಳಿಗೆ ಪಾಲು ನೀಡಬೇಕು. ಅಲ್ಲದೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಮೂಲಕ ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಲಾಗಿದೆ. 
 

ಭದ್ರಾವತಿ ತಾಲೂಕಿನ ಹುಣಸೆಕಟ್ಟೆ ಜಂಕ್ಷನ್(ಎಚ್.ಕೆ ಜಂಕ್ಷನ್)ನಲ್ಲಿ ಗೃಹಿಣಿಯೋರ್ವಳು ಮೃತಪಟ್ಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬಸ್ಥರು ಮೃತದೇಹದೊಂದಿಗೆ ಪ್ರತಿಭಟನೆ ನಡೆಸಿರುವ ಘಟನೆ ಶನಿವಾರ ನಡೆದಿದೆ.

ಮನುಷ್ಯರಿಗೆ ದೇಹ, ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ : ಫಾದರ್ ಪಿಯೂಸ್ ಡಿಸೋಜ

ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಹಾಗೂ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಪ್ರಾಯೋಜಕತ್ವದಲ್ಲಿ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಭದ್ರಾವತಿ ಹೊಸಮನೆ ತಮಿಳು ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು.  
    ಭದ್ರಾವತಿ : ದೇಹಕ್ಕೆ ಅಂದ-ಚೆಂದ ಎಷ್ಟು ಮುಖ್ಯವೋ ಅದೇ ರೀತಿ ಆರೋಗ್ಯ ಸಹ ಬಹಳ ಮುಖ್ಯ ಎಂದು ಫಾದರ್ ಪಿಯೂಸ್ ಡಿಸೋಜ ಹೇಳಿದರು. 
    ದಿ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವಿಸ್ ಸೊಸೈಟಿ ಹಾಗೂ ಮಂಗಳೂರಿನ ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ ಪ್ರಾಯೋಜಕತ್ವದಲ್ಲಿ ಸ್ತ್ರೀ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ವತಿಯಿಂದ ಹೊಸಮನೆ ತಮಿಳು ಪ್ರಾಥಮಿಕ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿದರು.  
    ಮನುಷ್ಯನ ಸಂತಸದ ೩ ಸೂತ್ರಗಳನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕು. ದೇಹ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳುವುದು ಅತಿ ಮುಖ್ಯ. ಉತ್ತಮ ಆರೋಗ್ಯದಿಂದ ನೆಮ್ಮದಿ ಕಾಣಲು ಸಾಧ್ಯ. ಪ್ರತಿಯೊಬ್ಬರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದರು. 
    ಶಿಬಿರದಲ್ಲಿ ಶಾಲೆಯ ಮುಖ್ಯೋಪಾಧ್ಯಾಯ ಲಾರೆನ್ಸ್,  ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಹಾಗು ಆಸ್ಪತ್ರೆ ವೈದ್ಯ ಡಾ ಸುಬೋಧ್, ಸಂಯೋಜಕಿ ರೈನಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಐರಿನ್ ಮತ್ತು ಮಮತ ಪ್ರಾರ್ಥಿಸಿ, ಸುನಂದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮರ್ಲಿನ್ ಸ್ವಾಗತಿಸಿ, ಅಂತೋಣಿ ಆರೋಗ್ಯ ಮೇರಿ ನಿರೂಪಿಸಿದರು ರೂಪ ಆರೋಗ್ಯ ಮೇರಿ ವಂದಿಸಿದರು. ಸುಮಾರು ೨೯೮ ಮಂದಿ ಶಿಬಿರದ ಸದುಪಯೋಗಪಡೆದುಕೊಂಡರು. 
    ಸಂಘದ ಸಂಯೋಜಕಿ ಪ್ರಮೀಳ, ಕಾರ್ಯಕರ್ತರಾದ ಪರಿಮಳ, ಪ್ರಮೀಳಾ, ಜ್ಯೋತಿ ವಾಸ್ ಸೇರಿದಂತೆ ಸ್ಥಳೀಯರು ಇನ್ನಿತರರು ಪಾಲ್ಗೊಂಡಿದ್ದರು. 

ಏ.೨೦ರಂದು ವಿದ್ಯುತ್ ವ್ಯತ್ಯಯ

    ಭದ್ರಾವತಿ : ಮೆಸ್ಕಾಂ ಲಕ್ಕವಳ್ಳಿ ೬೬/೧೧ ಕೆ.ವಿ ವಿದ್ಯುತ್ ವಿತರಣಾ ಕೇಂದ್ರದ ಸಮೀಪ ವಾಹಕ ಬದಲಾವಣೆ ಮತ್ತು ಜಂಪ್ ಬದಲಾವಣೆ ಕಾರ್ಯ ಹಮ್ಮಿಕೊಂಡಿರುವುದರಿಂದ ಏ.೨೦ರಂದು ಬೆಳಿಗ್ಗೆ ೯.೩೦ ರಿಂದ ಸಂಜೆ ೬ ಗಂಟೆವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. 
    ವದಿಯೂರು, ಗ್ಯಾರೇಜ್ ಕ್ಯಾಂಪ್, ಸಿಂಗನಮನೆ, ಶಂಕರಘಟ್ಟ, ಕುವೆಂಪು ವಿಶ್ವವಿದ್ಯಾನಿಲಯ, ನೆಲ್ಲಿಸರ, ಮಾಳೇನಹಳ್ಳಿ, ಗೋಣಿಬೀಡು, ಶಾಂತಿನಗರ, ತಾವರಘಟ್ಟ, ಮಲ್ಲಿಗೇನಹಳ್ಳಿ, ತಮ್ಮಡಿಹಳ್ಳಿ, ಜಂಕ್ಷನ್, ರಂಗನಾಥಪುರ, ಹುಣಸೆಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಗ್ರಾಹಕರು ಸಹಕರಿಸುವಂತೆ ಗ್ರಾಮೀಣ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಗೃಹಿಣಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆ : ಕೊಲೆ ಪ್ರಕರಣ ದಾಖಲು

    ಭದ್ರಾವತಿ: ತಾಲೂಕಿನ ಹುಣಸೆಕಟ್ಟೆ ಜಂಕ್ಷನ್(ಎಚ್.ಕೆ ಜಂಕ್ಷನ್)ನಲ್ಲಿ ಗೃಹಿಣಿಯೋರ್ವಳು ಮೃತಪಟ್ಟು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. 
    ಅಶ್ವಿನಿ ಅಲಿಯಾಸ್ ತೇಜಸ್ವಿನಿ(೨೮) ಎಂಬ ಗೃಹಿಣಿಯ ಮೃತದೇಹ ಅವರ ಮನೆಯಲ್ಲಿ ಶುಕ್ರವಾರ ಪತ್ತೆಯಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಕೆಯ ಪತಿ, ಅತ್ತೆ ಮತ್ತು ಮಾವನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
    ಅಶ್ವಿನಿ ಮತ್ತು ಪ್ರಮೋದ್ ಸುಮಾರು ೧೦ ವರ್ಷಗಳ ಹಿಂದೆ ವಿವಾಹವಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ದಂಪತಿ ನಡುವೆ ಮೊದಲಿನಿಂದಲೂ ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಜಗಳವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಅಶ್ವಿನಿಯನ್ನು ಕಟ್ಟಿಗೆಯಲ್ಲಿ ಹೊಡೆದು ಕೊಲೆ ಮಾಡಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುವಂತೆ ಮಾಡಲಾಗಿದೆ ಎಂದು ಆರೋಪಿಸಿ ಅಶ್ವಿನಿ ತವರು ಮನೆಯವರು ದೂರು ನೀಡಿದ್ದಾರೆ. 
    ದೂರಿನ ಹಿನ್ನಲೆಯಲ್ಲಿ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಪತಿ ಪ್ರಮೋದ್ ಮತ್ತು ಇವರ ತಂದೆಯನ್ನು ಬಂಧಿಸಿದ್ದಾರೆ. ಘಟನೆ ಸ್ಥಳದಲ್ಲಿ ಪ್ರಮೋದ್ ತಾಯಿ ಇಲ್ಲದಿರುವ ಹಿನ್ನಲೆಯಲ್ಲಿ ಅವರನ್ನು ಇನ್ನೂ ಬಂಧಿಸಿಲ್ಲ.   

ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಜನಿವಾರ ತೆಗೆಸಿ ಅವಮಾನ : ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹ

ಸಿ.ಇ.ಟಿ ಪರೀಕ್ಷೆಗೆ ಹಾಜರಾಗಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಗಾಯತ್ರಿ ದೀಕ್ಷೆ ಪಡೆದ ಜನಿವಾರ ತೆಗೆಸಿ ಅವಮಾನಗೊಳಿಸಿರುವುದು ಖಂಡನೀಯವಾಗಿದ್ದು, ತಕ್ಷಣ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಭದ್ರಾವತಿ ತಾಲೂಕು ಬ್ರಾಹ್ಮಣ ಸಭಾ ಮುಖ್ಯಮಂತ್ರಿಗಳಿಗೆ ಶನಿವಾರ ತಾಲೂಕು ಆಡಳಿತದ ಮೂಲಕ ಮನವಿ ಸಲ್ಲಿಸಿದೆ
    ಭದ್ರಾವತಿ : ಸಿ.ಇ.ಟಿ ಪರೀಕ್ಷೆಗೆ ಹಾಜರಾಗಿದ್ದ ಬ್ರಾಹ್ಮಣ ವಿದ್ಯಾರ್ಥಿಗಳ ಗಾಯತ್ರಿ ದೀಕ್ಷೆ ಪಡೆದ ಜನಿವಾರ ತೆಗೆಸಿ ಅವಮಾನಗೊಳಿಸಿರುವುದು ಖಂಡನೀಯವಾಗಿದ್ದು, ತಕ್ಷಣ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕು ಬ್ರಾಹ್ಮಣ ಸಭಾ ಮುಖ್ಯಮಂತ್ರಿಗಳಿಗೆ ಶನಿವಾರ ತಾಲೂಕು ಆಡಳಿತದ ಮೂಲಕ ಮನವಿ ಸಲ್ಲಿಸಿದೆ. 
    ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಜಿ. ರಮೇಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಏ.೧೬ರಂದು ಶಿವಮೊಗ, ಬೀದರ್ ಹಾಗು ಬೆಂಗಳೂರಿನಲ್ಲಿ ಸಿ.ಇ.ಟಿ ಪರೀಕ್ಷೆಗೆ ಹಾಜರಾಗಲು ಬಂದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಗಾಯತ್ರಿ ದೀಕ್ಷೆ ಪಡೆದ ಜನಿವಾರ ತೆಗೆಸಿ ಅವಮಾನಗೊಳಿಸಲಾಗಿದೆ. ಅಲ್ಲದೆ ಕೆಲವು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗದಂತೆ ಮಾಡಿದ್ದು,  ಈ ಕೃತ್ಯವನ್ನು ಬ್ರಾಹ್ಮಣ ಸಭಾ ಖಂಡಿಸುತ್ತದೆ. 
    ವರ್ಷ ಪೂರ್ತಿ ಕಷ್ಟಪಟ್ಟು ಒಳ್ಳೆಯ ಭವಿಷ್ಯಕ್ಕಾಗಿ ಸಿದ್ಧತೆ ನಡೆಸಿಕೊಂಡು ಬಂದಿದ್ದ ವಿದ್ಯಾರ್ಥಿಗಳನ್ನು ಈ ರೀತಿ ಅವಮಾನಗೊಳಿಸಿರುವುದು ಹಿಂದೂ ವಿರೋಧಿಯಾಗಿದೆ. ಈ ಕೃತ್ಯಕ್ಕೆ ಕಾರಣಕರ್ತರಾಗಿರುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಗಿದೆ.
    ಸಭಾ ಪದಾಧಿಕಾರಿಗಳಾದ ಪ್ರಧಾನ ಕಾರ್ಯದರ್ಶಿ ಕೆ. ಮಂಜುನಾಥ್, ಖಜಾಂಚಿ ಎಸ್. ಶೇಷಾದ್ರಿ, ಕೆ.ಎಸ್ ಸುಬ್ರಮಣ್ಯ, ಎಂ.ಎಸ್ ಜನಾರ್ಧನ ಅಯ್ಯಂಗಾರ್, ಬಿ.ಆರ್ ಇಂದ್ರಸೇನಾರಾವ್, ಎ.ಎನ್ ಕೃಷ್ಣಸ್ವಾಮಿ, ಟಿ.ಎನ್ ರಮೇಶ್, ಗೀತಾ ಮಂಜುನಾಥ್, ವೆಂಟೇಶ್ ಮೂರ್ತಿ, ಪಿ.ಕೆ ಮಂಜುನಾಥ್, ಶ್ರೀಧರ್ ಸರಿದಂತೆ ಇನ್ನಿತರರು ಉಪಸ್ಥಿತರಿದ್ದರು.