ಮಾದರಿಯಾದ ಸಮಾಜ ಸೇವಕ ಎ. ಧಮೇಂದ್ರ : ಜೂ. ೧೪ರಂದು ಉಚಿತ ನೋಟ್ ಪುಸ್ತಕ ವಿತರಣೆ

ಎ. ಧಮೇಂದ್ರ
ಭದ್ರಾವತಿ : ಕಳೆದ ೮ ವರ್ಷಗಳಿಂದ ಸರ್ಕಾರಿ ಶಾಲೆ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಸಮಾಜ ಸೇವಕ ಎ. ಧಮೇಂದ್ರರವರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ.
ಶ್ರೀ ವಿನಾಯಕ ಚಾರಿಟೇಬಲ್ ಟ್ರಸ್ಟ್ ಮೂಲಕ ಧಮೇಂದ್ರರವರು ವಿವಿಧ ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದಾರೆ. ೮ ವರ್ಷಗಳ ಹಿಂದೆ ಸರ್ಕಾರಿ ಶಾಲೆಯ ೫೦೦ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದು, ಇದೀಗ ೫೦೦೦ ಮಕ್ಕಳಿಗೆ ಉಚಿತ ನೋಟ್ ಪುಸ್ತಕಗಳನ್ನು ವಿತರಿಸುತ್ತಿದ್ದಾರೆ.
ಅರಳಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೩, ಕೂಡ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೨ ಹಾಗು ನಾಗತಿಬೆಳಗಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸುಮಾರು ೧೧ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸಲಾಗುತ್ತಿದೆ. ಪ್ರತಿ ವರ್ಷ ಸುಮಾರು ೧೫ ರಿಂದ ೧೬ ಸಾವಿರ ಪುಸ್ತಕಗಳನ್ನು ನೀಡುವ ಮೂಲಕ ಸರ್ಕಾರಿ ಶಾಲೆ ಮಕ್ಕಳ ಶಿಕ್ಷಣಕ್ಕೆ ನೆರವಾಗುತ್ತಿದ್ದಾರೆ.
ಕಡು ಬಡತನದಲ್ಲಿ ಹುಟ್ಟಿ ಬೆಳೆದು ಸರ್ಕಾರಿ ಶಾಲೆಯಲ್ಲಿ ಶಿಕ್ಷಣ ಪಡೆದಿರುವ ಧಮೇಂದ್ರರವರು ಸರ್ಕಾರಿ ಶಾಲೆ ಮಕ್ಕಳು ಶಿಕ್ಷಣ ಪಡೆಯಲು ನನ್ನಂತೆ ಸಂಕಷ್ಟಕ್ಕೆ ಒಳಗಾಗಬಾರದು ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕೆಂಬ ಬಯಕೆ ಹೊಂದಿದ್ದಾರೆ. ಈ ಹಿನ್ನಲೆಯಲ್ಲಿ ಉಚಿತ ನೋಟ್ ಪುಸ್ತಕ ವಿತರಿಸುವ ಕಾರ್ಯ ಆರಂಭಿಸಿದ್ದು, ಪ್ರತಿ ವರ್ಷ ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಉಚಿತ ನೋಟ್ ಪುಸ್ತಕಗಳನ್ನು ವಿತರಿಸುವ ಮೂಲಕ ಕಳೆದ ೮ ವರ್ಷಗಳಿಂದ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ.
ಉಚಿತ ನೋಟ್ ಪುಸ್ತಕ ವಿತರಣೆ ಮಾತ್ರವಲ್ಲದೆ ಮಹಾಮಾರಿ ಕೋವಿಡ್-೧೯ರ ಸಂದರ್ಭದಲ್ಲಿ ಉಚಿತ ಅಂಬ್ಯುಲೆನ್ಸ್ ಸೇವೆ ಒದಗಿಸುವ ಮೂಲಕ ಸಂಕಷ್ಟಕ್ಕೆ ಒಳಗಾದವರ ನೆರವಿಗೆ ಧಮೇಂದ್ರರವರು ಮುಂದಾಗಿದ್ದಾರೆ.
ಜೂ.೧೪ರಂದು ಉಚಿತ ನೋಟ್ ಪುಸ್ತಕ ವಿತರಣೆ :
ಜೂ.೧೪ರ ಬೆಳಿಗ್ಗೆ ೯ ರಿಂದ ೧೦ ಗಂಟೆವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅರಳಿಹಳ್ಳಿ ಮತ್ತು ೧೧.೩೦ ರಿಂದ ೧೨.೩೦ರ ವರೆಗೆ ಹರಿಹರೇಶ್ವರ ಪ್ರೌಢಶಾಲೆ, ಕೂಡ್ಲಿಗೆರೆ ಹಾಗೂ ಮಧ್ಯಾಹ್ನ ೨ ಗಂಟೆಯಿಂದ ೩ ಗಂಟೆವರೆಗೆ ನಂಜುಂಡೇಶ್ವರ ಪ್ರೌಢಶಾಲೆ, ನಾಗತಿಬೆಳಗಲು ಉಚಿತ ನೋಟ್ ಪುಸ್ತಕ ವಿತರಣೆ ನಡೆಯಲಿದೆ.
ಶಾಲಾ ಮಕ್ಕಳ ಪೋಷಕರು, ಹಿತೈಷಿಗಳು, ಶಾಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಎ. ಧರ್ಮೇಂದ್ರ ಕೋರಿದ್ದಾರೆ.