Tuesday, July 14, 2020

ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಆಶಾ ಕಾರ್ಯಕರ್ತೆಯರಿಂದ ಪ್ರತಿಭಟನೆ

ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. 
ಭದ್ರಾವತಿ, ಜು. ೧೪: ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ನಗರದ ರಂಗಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. 
ಆಶಾ ಕಾರ್ಯಕರ್ತೆಯರಿಗೆ ಮಾಸಿಕ ೧೨ ಸಾವಿರ ರು. ಗೌರವ ಧನ, ಕೋವಿಡ್-೧೯ರ ವಿರುದ್ಧ ಹೋರಾಟ ನಡೆಸಲು ಅಗತ್ಯವಿರುವಷ್ಟು ಸುರಕ್ಷತಾ ಸಾಮಗ್ರಿಗಳು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಾರ್ಯಕರ್ತೆಯರು ಆಗ್ರಹಿಸಿದರು. 
ಕಳೆದ ಸುಮಾರು ೧ ತಿಂಗಳಿನಿಂದ ನಿರಂತರವಾಗಿ ತಾಲೂಕು, ಜಿಲ್ಲಾ ಮಟ್ಟದಲ್ಲಿ ಹೋರಾಟ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಹ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ. ತಕ್ಷಣ ಬೇಡಿಕೆ ಈಡೇರಿಸದಿದ್ದಲ್ಲಿ ಮುಂದಿನ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. 
ಜಿಲ್ಲಾಧ್ಯಕ್ಷೆ ರಾಜೇಶ್ವರಿ ನಂದೀಶ್, ತಾಲೂಕು ಅಧ್ಯಕ್ಷೆ ಚಂದ್ರಕಲಾ, ಕಾರ್ಯದರ್ಶಿ ಆಶಾ, ಆರ್. ವಾಸಂತಿ, ಎನ್. ಭಾಗ್ಯ, ಎಚ್. ನೇತ್ರಾವತಿ, ಎನ್. ಕಮಲ, ಪಿ. ಶೃತಿ, ಎನ್. ಸೀಮಾ, ಎಸ್. ಗೀತಾಂಜಲಿ, ಹೇಮಾವತಿ, ಆರ್. ಮಂಜುಳ, ಸುಮಿತ್ರ ಬಾಯಿ, ಫಜಲುನ್ನಿಸಾ, ಎಸ್. ಮಮತ, ವಿ. ಅನಿತಾ, ಬಿ. ದೀಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ಪಿಯುಸಿ ಫಲಿತಾಂಶ : ಅರೋಬಿಂದೋ ಶೇ. ೯೬, ಎಂಪಿಎಂ ಇ.ಎಸ್ ಶೇ.೬೩

ಎಸ್‌ಎವಿ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ 


ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲೆ ವಿದ್ಯಾರ್ಥಿ ಸೈಯದ್ ಗುಲಾಮ್ ಹುಸೈನಿ
ಭದ್ರಾವತಿ ನ್ಯೂಟೌನ್ ಎಸ್‌ಎವಿ ಶಾಲೆ ವಿದ್ಯಾರ್ಥಿನಿ ಯಶಸ್ವಿನಿ ಐ.ಕೆ 

ಭದ್ರಾವತಿ, ಜು. ೧೪: ಕಾಗದ ನಗರದ ಎಂಪಿಎಂ ಕಾರ್ಖಾನೆ ಶಿಕ್ಷಣ ಮಂಡಳಿ ಅಧೀನದಲ್ಲಿರುವ ಎಂಪಿಎಂ ಸ್ವತಂತ್ರ ಪದವಿಪೂರ್ವ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೬೩.೭೭ ರಷ್ಟು ಫಲಿತಾಂಶ ಪಡೆದುಕೊಂಡಿದೆ. 
ಕಾಲೇಜಿನ ವಾಣಿಜ್ಯ ವಿಭಾಗದ ೧೦೩ ವಿದ್ಯಾರ್ಥಿಗಳಲ್ಲಿ ೧೦೨ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೫೮ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ.  ವಿಜ್ಞಾನ ವಿಭಾಗ ೩೭ ವಿದ್ಯಾರ್ಥಿಗಳಲ್ಲಿ ೩೬ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಈ ಪೈಕಿ ೩೦ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 
ವಿದ್ಯಾರ್ಥಿಗಳಾದ ಮೌರ್ಯಸೆಲ್ಸ್ .ವಿ(೫೪೫), ಸಹನಾ .ಪಿ(೫೪೨), ಸ್ಮಿತಾ. ಬಿ.ಸಿ(೫೩೫), ಶ್ರೀನಿವಾಸ ಬಿ.ಆರ್(೫೨೩), ಕುಸುಮ .ಟಿ(೫೧೦) ಮತ್ತು ಲಿಖಿತ .ಎನ್(೫೧೦) ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿರುವ ವಿದ್ಯಾರ್ಥಿಗಳಾಗಿದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀಕಾಂತ್ ತಿಳಿಸಿದ್ದಾರೆ. 
ಎಸ್‌ಎವಿ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್: 
ನ್ಯೂಟೌನ್ ಶ್ರೀ ಆದಿಚುಂಚನಗಿರಿ ವಿದ್ಯಾ ಸಂಸ್ಥೆಯ ೨೮ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಪಡೆದುಕೊಂಡಿದ್ದಾರೆ. ಈ ಪೈಕಿ ಸೈಯದ್ ಗುಲಾಮ್ ಹುಸೈನಿ(೫೮೬), ಯಶಸ್ವಿನಿ ಐ.ಕೆ(೫೮೩), ದೃವ ಎಸ್. ದಳವಾಯಿ(೫೮೦), ಮೈತ್ರಿ .ಆರ್(೫೬೫), ಭರತ್ .ಎಂ(೫೫೩), ಸಿಂಚನ ಎಸ್.ಎಲ್(೫೫೩) ಮತ್ತು ಸುಮಂತ್ .ಯು(೫೫೩) ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡ ವಿದ್ಯಾರ್ಥಿಗಳಾಗಿದ್ದಾರೆ. ಗಣಿತದಲ್ಲಿ ೩ ವಿದ್ಯಾರ್ಥಿಗಳು, ಜೀವಶಾಸ್ತ್ರದಲ್ಲಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಭೌತಶಾಸ್ತ್ರದಲ್ಲಿ ಓರ್ವ ವಿದ್ಯಾರ್ಥಿನಿ ಶೇ.೧೦೦ಕ್ಕೆ ೧೦೦ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾರೆ. ಉಳಿದಂತೆ ಪ್ರಥಮ ದರ್ಜೆಯಲ್ಲಿ ೬೧ ಹಾಗೂ ದ್ವಿತೀಯ ದರ್ಜೆಯಲ್ಲಿ ೧೨ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಹರಿಣಾಕ್ಷಿ ತಿಳಿಸಿದ್ದಾರೆ. 
ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜಿನ ವಿದ್ಯಾರ್ಥಿನಿ ಅಫೀಪಾ ತಸ್ಕೀನ್
ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜಿನ ವಿದ್ಯಾರ್ಥಿ ಕೆ. ರಾಜಶೇಖರ್

ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜಿಗೆ ೧೩೧ ಡಿಸ್ಟಿಂಕ್ಷನ್: 
ಇಲ್ಲಿಗೆ ಸಮೀಪದ ಜಾವಳ್ಳಿ ಶ್ರೀ ಅರೋಬಿಂದೋ ಕಾಲೇಜು ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.೯೬.೦೫ ಫಲಿತಾಂಶ ಪಡೆದುಕೊಂಡಿದೆ. 
ಒಟ್ಟು ಪರೀಕ್ಷೆ ಬರೆದ ೩೨೯ ವಿದ್ಯಾರ್ಥಿಗಳ ಪೈಕಿ ೧೩೧ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, ೧೭೨ ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ ೧೩ ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ರಸಾಯನ ಶಾಸ್ತ್ರ ೨, ಭೌತಶಾಸ್ತ್ರ ೫, ಗಣಿತ ೨೩, ಜೀವಶಾಸ್ತ್ರ ೪, ಸಂಖ್ಯಾ ಶಾಸ್ತ್ರ ೩, ಕನ್ನಡ ೧ ಮತ್ತು ಸಂಸ್ಕೃತ ೪ ವಿದ್ಯಾರ್ಥಿಗಳು ಶೇ.೧೦೦ಕ್ಕೆ ೧೦೦ರಷ್ಟು ಅಂಕಗಳೊಂದಿಗೆ ಉತ್ತೀರ್ಣರಾಗಿದ್ದಾರೆ. 
ಅಫೀಪಾ ತಸ್ಕೀನ್(೫೮೭), ರಾಜಶೇಖರ್ ಕೆ(೫೮೬), ಮಾಯ ಎಸ್ ರಾವ್(೫೮೬), ಪ್ರಗತಿ ಎಂ.ಆರ್(೫೮೫), ಶ್ರೇಯ ಉಡುಪ ಕೆ.ಎಸ್(೫೮೨), ಪೂರ್ವಿಕ ಎಸ್.ಎಲ್(೫೮೨), ರಕ್ಷಾ ಎ.ಆರ್(೫೮೧), ಮನು ಎಸ್ ರಾವ್(೫೮೧), ಖಾಜಿ ಮೊಹಮ್ಮದ್ ಸಾವೂದ್(೫೮೦) ಮತ್ತು ಸಚಿನ್ ಎಚ್.ಪಿ(೫೮೦) ಅತಿ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾಗಿದ್ದಾರೆಂದು ಪ್ರಾಂಶುಪಾಲ ಡಾ. ಕೆ. ನಾಗರಾಜ್ ತಿಳಿಸಿದ್ದಾರೆ. 

ಸಂಚಿಯ ಹೊನ್ನಮ್ಮ ಬಾಲಕಿಯರ ಕಾಲೇಜು ೧೫೧ ವಿದ್ಯಾರ್ಥಿನಿಯರು ಉತ್ತೀರ್ಣ

ಎಸ್. ಸಿಂಚನ 
ಭದ್ರಾವತಿ, ಜು. ೧೪: ಹಳೇನಗರದ ಸಂಚಿಯ ಹೊನ್ನಮ್ಮ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಈ ಬಾರಿ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದು, ಪರೀಕ್ಷೆಗೆ ಹಾಜರಿದ್ದ ೨೭೨ ವಿದ್ಯಾರ್ಥಿಗಳ ಪೈಕಿ ೧೫೧ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 
೪ ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ ೯೦ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ ಪಡೆದುಕೊಂಡಿದ್ದಾರೆ. ದ್ವಿತೀಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಎಸ್. ಸಿಂಚನ ೫೭೭ ಅಂಕಗಳನ್ನು ಪಡೆದುಕೊಂಡಿದ್ದು, ಭೌತಶಾಸ್ತ್ರ ಮತ್ತು ಗಣಿತ ಶಾಸ್ತ್ರದಲ್ಲಿ ಶೇ.೧೦೦ಕ್ಕೆ ೧೦೦ರಷ್ಟು ಅಂಕಗಳನ್ನು ಪಡೆದುಕೊಂಡಿದ್ದಾಳೆ. 

ತನುಜಾ. ಆರ್
ಕಲಾ ವಿಭಾಗದ ಆರ್. ಚಂದನ(೫೦೭), ಕಾವ್ಯಶ್ರೀ .ಸಿ(೪೫೪), ಕೀರ್ತನಾ(೪೫೩) ಮತ್ತು ವಾಣಿಜ್ಯ ವಿಭಾಗದ ತನುಜಾ .ಆರ್(೫೫೩), ಅಗೇಷಾ ಬಾನು(೫೩೬), ಕುಸುಮ .ಜಿ(೫೦೯), ಅನೂಷ .ಆರ್(೫೦೭), ಕವನ .ಎನ್(೫೦೬), ಸ್ನೇಹ ಎಚ್.ಕೆ(೫೦೨), ದಿವ್ಯ ಎಚ್.ಪಿ(೫೦೦) ಹಾಗೂ ವಿಜ್ಞಾನ ವಿಭಾಗದ ಸಿಂಚನ .ಆರ್(೫೭೭) ಮತ್ತು ಸಹನಾ .ಕೆ.ಆರ್(೫೧೫) ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡಿದ್ದಾರೆಂದು ಕಾಲೇಜಿನ ಪ್ರಾಂಶುಪಾಲ ಮೇಘರಾಜ್ ತಿಳಿಸಿದ್ದಾರೆ. 


ಮೈಕ್ರೋ ಫೈನಾನ್ಸ್ ಸಿಬ್ಬಂದಿಗಳಿಗೆ ಕೊರೋನಾ ತಪಸಾಣೆ ಕಡ್ಡಾಯಗೊಳಿಸಿ

ಭದ್ರಾವತಿ ತಾಲೂಕಿನಲ್ಲಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳಿಗೆ ಮಹಾಮಾರಿ ಕೊರೋನಾ ವೈರಸ್ ತಪಾಸಣೆ ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿ ಮಂಗಳವಾರ ಸಯುಕ್ತ ಜನತಾದಳ ರಾಜ್ಯ ಮುಖಂಡ ಶಶಿಕುಮಾರ್ ಎಸ್ ಗೌಡ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಿದರು. 
ಭದ್ರಾವತಿ, ಜು. ೧೪: ತಾಲೂಕಿನಲ್ಲಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಸಿಬ್ಬಂದಿಗಳಿಗೆ ಮಹಾಮಾರಿ ಕೊರೋನಾ ವೈರಸ್ ತಪಾಸಣೆ ಕಡ್ಡಾಯಗೊಳಿಸಬೇಕೆಂದು ಒತ್ತಾಯಿಸಿ ಮಂಗಳವಾರ ಸಯುಕ್ತ ಜನತಾದಳ ರಾಜ್ಯ ಮುಖಂಡ ಶಶಿಕುಮಾರ್ ಎಸ್ ಗೌಡ ತಹಸೀಲ್ದಾರ್ ಶಿವಕುಮಾರ್‌ಗೆ ಮನವಿ ಸಲ್ಲಿಸಿದರು. 
ಜಿಲ್ಲೆಯ ಸಾಗರ ತಾಲೂಕಿನ ರಿಬ್ಬನ್‌ಪೇಟೆ ಬಿಎಸ್‌ಎಸ್ ಮೈಕ್ರೋ ಫೈನಾನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು ೨೬ ವರ್ಷದ ವ್ಯಕ್ತಿಗೆ ಕೊರೋನಾ ವೈರಸ್ ಸೋಂಕು ಹರಡಿರುವುದು ಪತ್ತೆಯಾಗಿದೆ. ಈ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಮುನ್ನಚ್ಚರಿಕೆ ವಹಿಸುವ ಅಗತ್ಯವಿದೆ. ತಾಲೂಕಿನಲ್ಲಿರುವ ಲೀಡ್ ಬ್ಯಾಂಕ್ ವ್ಯಾಪ್ತಿಗೆ ಒಳಪಡುವ ಸಣ್ಣ ಬ್ಯಾಂಕ್‌ಗಳು ಹಾಗೂ ಚಿನ್ನದ ಮೇಲೆ ಸಾಲ ನೀಡುವ ಮುತ್ತೂಟ್, ಐಐಎಫ್‌ಎಲ್, ಮಣಪುರಂ ಹಾಗೂ ಉಜ್ಜೀವನ್, ಬಿಎಸ್‌ಎಸ್, ಎಸ್‌ಕೆಎಸ್, ನಿರಂತರ, ಗ್ರಾಮೀಣ ಕೂಟ, ಗ್ರಾಮ ಶಕ್ತಿ, ಸ್ಪಂದನ, ಬೆಲ್‌ಸ್ಟಾರ್ ಸೇರಿದಂತೆ ಎಲ್ಲಾ ಮೈಕ್ರೋ ಫೈನಾನ್ಸ್‌ಗಳ ಸಿಬ್ಬಂದಿಗಳಿಗೆ ಕೊರೋನಾ ವೈರಸ್ ತಪಾಸಣೆ ನಡೆಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಬೇಕೆಂದು ಆಗ್ರಹಿಸಿದರು. 
ಇತ್ತೀಚೆಗೆ ಮೈಕ್ರೋ ಫೈನಾನ್ಸ್ ಕಂಪನಿಗಳ ಸಭೆ ನಡೆದಿದ್ದು, ಈ ಸಭೆಯಲ್ಲಿ ಆಗಸ್ಟ್ ತಿಂಗಳ ವರೆಗೆ ಯಾವುದೇ ಕಾರಣಕ್ಕೂ ಬಲವಂತವಾಗಿ ಸಾಲ ವಸೂಲಾತಿ ಮಾಡುವುದಿಲ್ಲ ಎಂದು ಮೈಕ್ರೋ ಫೈನಾನ್ಸ್ ಕಂಪನಿಗಳು ಭರವಸೆ ನೀಡಿದ್ದವು. ಆದರೂ ಸಹ ತಾಲೂಕಿನಲ್ಲಿ ಸಾಲ ವಸೂಲಾತಿ ಮಾಡಲಾಗುತ್ತಿದೆ. ತಾಲೂಕಿನ ಹಲವೆಡೆ ಈಗಾಗಲೇ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗಿದ್ದು, ಸೀಲ್‌ಡೌನ್ ಮಾಡಲಾಗಿದೆ. ಈ ಪರಿಸ್ಥಿತಿಯಲ್ಲಿ ಸಾಲ ವಸೂಲಾತಿ ಮಾಡುವುದು ಸರಿಯಲ್ಲ. ಇದರಿಂದ ಕೊರೋನಾ ಸೋಂಕು ವ್ಯಾಪಕವಾಗಿ ಹಬ್ಬುವ ಸಾಧ್ಯತೆ ಇದೆ.  ಈ ಹಿನ್ನಲೆಯಲ್ಲಿ ತಕ್ಷಣ ಆರೋಗ್ಯ ಇಲಾಖೆಗೆ ಸೂಕ್ತ ನಿರ್ದೇಶನ ನೀಡುವ ಜೊತೆಗೆ ಕಡ್ಡಾಯವಾಗಿ ತಪಾಸಣೆ ನಡೆಸುವಂತೆ ಸೂಚಿಸಬೇಕು. ಇಲ್ಲವಾದಲ್ಲಿ ಜು.೨೦ರಿಂದ ಪಕ್ಷದ ವತಿಯಿಂದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು. 
ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಬಿ.ವಿ ಗಿರೀಶ್, ವಾಟಾಳ್ ರಮೇಶ್, ಮಂಜುನಾಥ್ ಮತ್ತು ಪುಷ್ಪರಾಜ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.