Saturday, February 26, 2022

ದ.ರಾ. ಬೇಂದ್ರೆ ಶತಮಾನ ಕಳೆದರೂ ಸಿಗಲಾರದ ಅಪರೂಪದ ಕವಿ : ಡಾ. ಸರ್ಫ್ರಾಜ್ ಚಂದ್ರಗುತ್ತಿ

ಭದ್ರಾವತಿ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಭೂಮಿಕಾ ವೇದಿಕೆ ವತಿಯಿಂದ ಶನಿವಾರ ಹಮ್ಮಿಕೊಳ್ಳಲಾಗಿದ್ದ 'ದ.ರಾ.ಬೇಂದ್ರೆ ಸವಿ ನೆನಪು' ಅಂಗವಾಗಿ ಅಂಬಿಕಾತನಯತ್ತ ಗೀತಗಾಯನ ಕಾರ್ಯಕ್ರಮದಲ್ಲಿ ಉಪನ್ಯಾಸಕ, ಸಾಹಿತಿ ಡಾ. ಸರ್ಫ್ರಾಜ್ ಚಂದ್ರಗುತ್ತಿ  ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಫೆ. ೨೬: ವರಕವಿ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕನ್ನಡ ನಾಡಿನ ಅಪರೂಪದ ಕವಿ ಎಂದರೆ ತಪ್ಪಾಗಲಾರದು. ಇಂತಹ ಕವಿ ಶತಮಾನ ಕಳೆದರೂ ಸಿಗಲಾರರು ಎಂದು ಉಪನ್ಯಾಸಕ, ಸಾಹಿತಿ ಡಾ. ಸರ್ಫ್ರಾಜ್ ಚಂದ್ರಗುತ್ತಿ ಹೇಳಿದರು.
    ಅವರು ಶನಿವಾರ ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಭೂಮಿಕಾ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 'ದ.ರಾ.ಬೇಂದ್ರೆ ಸವಿ ನೆನಪು' ಅಂಗವಾಗಿ ಅಂಬಿಕಾತನಯತ್ತ ಗೀತಗಾಯನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ದ.ರಾ. ಬೇಂದ್ರೆಯವರು ತಮ್ಮ ಬದುಕನ್ನು ಪ್ರತಿಕ್ಷಣ, ಪ್ರತಿದಿನ ಉತ್ಸಾಹದೊಂದಿಗೆ ಕವಿತೆಗಳ ರಚನೆಯಲ್ಲಿ ಕಳೆದವರು. ಎಂದಿಗೂ ಉತ್ಸಾಹದಿಂದ ವಿಮುಖರಾದವರಲ್ಲ. ಅವರ ಪ್ರತಿಯೊಂದು ಕವಿತೆ ಅಪರೂಪದ ವಿಶೇಷತೆಗಳನ್ನು ಒಳಗೊಂಡಿವೆ. ಕವಿತೆ ಎಂದರೆ ಬೇಂದ್ರೆ, ಬೇಂದ್ರೆ ಎಂದರೆ ಕವಿತೆ ಎಂಬ ಅಭಿಪ್ರಾಯವನ್ನು ಬಹಳಷ್ಟು ವಿಮರ್ಶಕರು ವ್ಯಕ್ತಪಡಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಬೇಂದ್ರೆಯವರ ಸಾಧನೆ ಅಸಾಧಾರಣ ಎಂದು ಬಣ್ಣಿಸಿದರು.
    ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆ ಅಧ್ಯಕ್ಷ, ವೈದ್ಯ ಸಾಹಿತಿ ಡಾ. ಕೃಷ್ಣ ಎಸ್. ಭಟ್, ವೇದಿಕೆ ವತಿಯಿಂದ ಪ್ರತಿ ವರ್ಷ ವರಕವಿ ದ.ರಾ. ಬೇಂದ್ರೆಯವರನ್ನು ನೆನಪು ಮಾಡಿಕೊಳ್ಳುವ ಕಾರ್ಯಕ್ರಮಗಳನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ಅವರ ಜನ್ಮದಿನದಂದು ನಡೆಯಬೇಕಾದ ಕಾರ್ಯಕ್ರಮವನ್ನು ಇದೀಗ ಆಚರಿಸಲಾಗುತ್ತಿದೆ ಎಂದರು. ವೇದಿಕೆ ಕಾರ್ಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿರುವ ಹೊಸಬರನ್ನು ಕಾರ್ಯಕಾರಿ ಸಮಿತಿಗೆ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ವಿಭಿನ್ನವಾದ ಸಾಹಿತ್ಯಪರ ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ. ವೇದಿಕೆಯ ಕಾರ್ಯಚಟುವಟಿಕೆಗಳಿಗೆ ಎಲ್ಲರೂ ಹೆಚ್ಚಿನ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದರು.
    ಆಕಾಶವಾಣಿ ಕಲಾವಿದ ಗುರುಮೂರ್ತಿ ಅಂಬಿಕಾತನಯದತ್ತ ಗೀತಗಾಯನ ನಡೆಸಿಕೊಟ್ಟರು. ವೇದಿಕೆ ಪ್ರಧಾನ ಕಾರ್ಯದರ್ಶಿ ಅಪರಂಜಿ ಶಿವರಾಜ್ ಸ್ವಾಗತಿಸಿದರು. ಕಾರ್ಯದರ್ಶಿ ಡಾ. ವೀಣಾಭಟ್, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ. ನಾಗರಾಜ್, ಎಂ. ಪ್ರಕಾಶ್, ಎಚ್. ಮಲ್ಲಿಕಾರ್ಜುನ, ಟಿ.ಎ ರಮೇಶ್, ಶಾರದ ಶ್ರೀನಿವಾಸ್, ವಿಶ್ವ ಹಿಂದೂ ಪರಿಷತ್ ಪ್ರಾಂತ್ಯ ಉಪಾಧ್ಯಕ್ಷ ಹಾ. ರಾಮಪ್ಪ, ವಿಐಎಸ್‌ಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಎಲ್. ಪ್ರವೀಣ್‌ಕುಮಾರ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.  ಪುಷ್ಪ ಸುಬ್ರಹ್ಮಣ್ಯ ಮತ್ತು ರಾಧಾ ಕೃಷ್ಣಭಟ್ ಪ್ರಾರ್ಥಿಸಿದರು. ಅನ್ನಪೂರ್ಣ ಇತ್ತೀಚೆಗೆ ನಿಧನ ಭಾರತರತ್ನ, ಗಾನ ಕೋಗಿಲೆ ಲತಾಮಂಗೇಶ್ಕರ್‌ರವರ ಕನ್ನಡ ಚಲನಚಿತ್ರ ಗೀತೆ ಸುಶ್ರಾವ್ಯವಾಗಿ ಹಾಡಿದರು.
    ಕಾರ್ಯಕ್ರಮ ಆರಂಭದಲ್ಲಿ ಲತಾಮಂಗೇಶ್ಕರ್‌ರವರ ನಿಧನ ಸಂತಾಪ ಸೂಚಿಸಿ ಮೌನಾಚರಣೆ ನಡೆಸಲಾಯಿತು.



ಬಿ.ಎಸ್.ವೈ ಹುಟ್ಟುಹಬ್ಬ : ಅಭಿಮಾನಿ ಬಳಗದಿಂದ ವಿಶೇಷ ಪೂಜೆ

    ಭದ್ರಾವತಿ, ಫೆ. ೨೬: ನಾನು ಕಂಡ ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಹುಟ್ಟುಹಬ್ಬದ ಅಂಗವಾಗಿ ಯಡಿಯೂರಪ್ಪ ಅಭಿಮಾನಿಗಳ ಬಳಗದ ವತಿಯಿಂದ ಫೆ.೨೭ರ ಭಾನುವಾರ ಬೆಳಿಗ್ಗೆ ೮ ಗಂಟೆಗೆ ಹೊಸಮನೆ ಹಿಂದೂ ಮಹಾಸಭಾ ಗಣಪತಿ ದೇವಸ್ಥಾನದಲ್ಲಿ ವಿಶೇಷ ಹಮ್ಮಿಕೊಳ್ಳಲಾಗಿದೆ.
    ಪ್ರತಿ ವರ್ಷ ಯಡಿಯೂರಪ್ಪ ಹುಟ್ಟುಹಬ್ಬವನ್ನು ಅಭಿಮಾನಿಗಳ ಬಳಗದಿಂದ ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಈ ಬಾರಿ ಬಡ ವರ್ಗದ ಅಸಹಾಯಕರಿಗೆ ಮಲಗುವ ಹೊದಿಕೆ(ಬ್ಲಾಂಕೆಟ್) ವಿತರಣೆ ಕಾರ್ಯಕ್ರಮ ಸಹ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಅಭಿಮಾನಿ ಬಳಗದ ವತಿಯಿಂದ ಯುವ ಮುಖಂಡ ಕೆ. ಮಂಜುನಾಥ್ ಕದಿರೇಶ್ ಕೋರಿದ್ದಾರೆ.

ಮಾತೃ ಭಾಷೆ ಭವಿಷ್ಯದ ಬೆಳವಣಿಗೆಗೆ ಪೂರಕ : ಕೋಗಲೂರು ತಿಪ್ಪೇಸ್ವಾಮಿ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸಾಯಿ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಶ್ವ ಮಾತೃ ಭಾಷಾ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮಾತೃ ಭಾಷಾ ಮಹತ್ವ ಕಾರ್ಯಕ್ರಮವನ್ನು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ  ಉದ್ಘಾಟಿಸಿದರು.
    ಭದ್ರಾವತಿ, ಫೆ. ೨೬: ತಾಯಿಯಂತೆ ಮಾತೃ ಭಾಷೆಯನ್ನು ಪ್ರೀತಿಸಬೇಕು. ಮಾತೃ ಭಾಷೆ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸಾಯಿ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಶ್ವ ಮಾತೃ ಭಾಷಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಾತೃ ಭಾಷಾ ಮಹತ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಖಂಡ ಭಾರತ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಾಗಿ ವಿಭಜನೆಯಾದ ಸಂದರ್ಭದಲ್ಲಿ ಮಾತೃ ಭಾಷಾ ಸಮಸ್ಯೆ ಉಲ್ಬಣವಾಯಿತು. ಈ ಸಂದರ್ಭದಲ್ಲಿ ನಡೆದ ಹೋರಾಟದ ಹಿನ್ನಲೆಯಲ್ಲಿ ವಿಶ್ವ ಮಾತೃ ಭಾಷಾ ದಿನಾಚರಣೆ ಅಸ್ತಿತ್ವಕ್ಕೆ ಬಂದಿತು. ಮಾತೃ ಭಾಷೆಯ ಮಹತ್ವ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಪ್ರತಿಯೊಬ್ಬರು ಅವರವರ ಮಾತೃಭಾಷೆಯಲ್ಲಿ ಕಲಿಕೆ ಆರಂಭಿಸಿದಾಗ ಮಾತ್ರ ನಮ್ಮ ಬೆಳವಣಿಗೆಯಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯ. ಈ ಹಿನ್ನಲೆಯಲ್ಲಿ ಮಾತೃ ಭಾಷೆಯ ಮಹತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಶಾಲಾ ಮಕ್ಕಳು ಇದರ ಸದುಪಯೋಗಪಡೆದುಕೊಳ್ಳಬೇಕೆಂದರು.
    ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ ಸೋಮಶೇಖರಯ್ಯ, ವೇದಿಕೆ ಉಪಾಧ್ಯಕ್ಷ ವಿಠಲ್‌ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ವಿಜಯಲಕ್ಷ್ಮಿ ಪ್ರಾರ್ಥಿಸಿದರು. ವೇದಿಕೆ ಉಪಾಧ್ಯಕ್ಷೆ ಸುಮತಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
    ಕಸಾಪ ತಾಲೂಕು ಕಾರ್ಯದರ್ಶಿ ಎಚ್. ತಿಮ್ಮಪ್ಪ, ಬಿ. ಗುರು, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಪ್ರಜ್ಞಾವಂತ ಯುವ ಸದಸ್ಯರ ಪಡೆಯನ್ನು ರೂಪಿಸಲು ಡಿಜಿಟಲ್ ಸದಸ್ಯತ್ವ ಅಭಿಯಾನ : ಕೆ. ಶಿವಮೂರ್ತಿ

ಭದ್ರಾವತಿಯಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಶಿವಕುಮಾರ್‌ರವರ ಮಾಧವನಗರದ ಮನೆ ಹಿಂಭಾಗದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಮೇಕೆದಾಟು ಯೋಜನೆಯ ಪೂರ್ವಭಾವಿಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಭದ್ರಾವತಿ, ಫೆ. ೨೬: ಈ ದೇಶದ ಭವಿಷ್ಯದ ಆಡಳಿತಕ್ಕೆ ಕಾಂಗ್ರೆಸ್ ಪಕ್ಷದ ಮಹತ್ವ ಅರಿತುಕೊಂಡಿರುವ ಪ್ರಜ್ಞಾವಂತ ಯುವ ಸದಸ್ಯರ ಪಡೆಯನ್ನು ರೂಪಿಸುವ ನಿಟ್ಟಿನಲ್ಲಿ ಇದೀಗ ಡಿಜಿಟಲ್ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಕೆ. ಶಿವಮೂರ್ತಿ ಹೇಳಿದರು.
    ಅವರು ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಶಿವಕುಮಾರ್‌ರವರ ಮಾಧವನಗರದ ಮನೆ ಹಿಂಭಾಗದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಮೇಕೆದಾಟು ಯೋಜನೆಯ ಪೂರ್ವಭಾವಿಯಲ್ಲಿ ಪಾಲ್ಗೊಂಡು ಮಾತನಾಡಿದರು.
    ಕಾಂಗ್ರೆಸ್ ಪಕ್ಷ ಈ ದೇಶಕ್ಕೆ ನೀಡಿರುವ ಕೊಡುಗೆಗಳನ್ನು ಅರಿತುಕೊಂಡಿರುವ ಪ್ರಜ್ಞಾವಂತರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವ ಮೂಲಕ ಭವಿಷ್ಯದಲ್ಲಿ ಸದೃಢವಾದ ದೇಶ ನಿರ್ಮಾಣಕ್ಕೆ ಮುಂದಾಗಬೇಕು. ಇದೀಗ ಸದಸ್ಯತ್ವ ಶುಲ್ಕ ರು. ೫ ನಿಗದಿಪಡಿಸಲಾಗಿದೆ. ಪಕ್ಷಕ್ಕೆ ಡಿಜಿಟಲ್ ಆಧಾರಿತ ಸದಸ್ಯತ್ವದಿಂದ ಹಲವು ಪ್ರಯೋಜನಗಳಾಗಲಿವೆ. ಈ ಹಿನ್ನಲೆಯಲ್ಲಿ ಡಿಜಿಟಲ್ ಸದಸ್ಯತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
    ಬೃಹತ್ ಮಹಾನಗರವಾಗಿರುವ ಬೆಂಗಳೂರಿನ ಮುಂದಿನ ಭವಿಷ್ಯದ ಆಲೋಚನೆಯೊಂದಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಪಕ್ಷದಿಂದ ಜಾಗೃತಿವಹಿಸಲಾಗುತ್ತಿದೆ. ಈ ನಿಟ್ಟಿನಲ್ಲಿ ಕಾವೇರಿ ನದಿ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಮೇಕೆದಾಟು ಯೋಜನೆಗಾಗಿ ಹೋರಾಟ ನಡೆಸಲಾಗುತ್ತಿದೆ. ಫೆ.೨೭ರಿಂದ ೫ ದಿನಗಳ ವರೆಗೆ ನಡೆಯುವ ಈ ಹೋರಾಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
    ವೇದಿಕೆಯಲ್ಲಿ ಕೆಪಿಸಿಸಿ ಸದಸ್ಯತ್ವ ನೋಂದಣಿ ಹಾಗು ತಾಂತ್ರಿಕ ಸಮಿತಿಯ ಉಸ್ತುವಾರಿಗಳಾದ ಬಾಲಕೃಷ್ಣ, ಟಿ. ಲೋಕೇಶ್‌ನಾಯ್ಕ್, ತಸ್ರೀಫ್, ರೇಖಾ ಶ್ರೀನಿವಾಸ್, ಸ್ಥಳೀಯ ಪ್ರಮುಖರಾದ ಎಚ್.ಸಿ ದಾಸೇಗೌಡ,  ಬಿ.ಕೆ ಮೋಹನ್, ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ಬಾಬಾಜಾನ್, ಫೀರ್‌ಷರೀಫ, ಸಿ.ಎಂ ಖಾದರ್, ಅಮೀರ್‌ಜಾನ್, ಬಿ. ಗಂಗಾಧರ್, ರಮೇಶ್ ಶಂಕರಘಟ್ಟ, ಪ್ರವೀಣ್‌ನಾಯ್ಕ, ವಿನೋದ್‌ಕುಮಾರ್, ಅಫ್ತಾಬ್ ಅಹಮದ್, ಕೃಷ್ಣನಾಯ್ಕ, ಅಭಿಲಾಷ್, ಕಾಂಗ್ರೆಸ್ ಪಕ್ಷದ ಎಲ್ಲಾ ನಗರಸಭಾ ಸದಸ್ಯರು ಸೇರಿದಂತೆ  ಇನ್ನಿತರರು ಉಪಸ್ಥಿತರಿದ್ದರು.
    ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರು, ಡಿಜಿಟಲ್ ನೋಂದಣಿ ವಿಭಾಗದ ಸಿಬ್ಬಂದಿಗಳು ಹಾಗು ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು. ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ ಸ್ವಾಗತಿಸಿದರು.


ಭದ್ರಾವತಿ ಭದ್ರಾವತಿಯಲ್ಲಿ ಶನಿವಾರ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್ ಸಹೋದರ ಬಿ.ಕೆ ಶಿವಕುಮಾರ್‌ರವರ ಮಾಧವನಗರದ ಮನೆ ಹಿಂಭಾಗದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾಂಗ್ರೆಸ್ ಪಕ್ಷದ ಡಿಜಿಟಲ್ ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಮೇಕೆದಾಟು ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿರುವ ಗ್ರಾಮ ಪಂಚಾಯತ್ ಚುನಾಯಿತ ಸದಸ್ಯರು, ಡಿಜಿಟಲ್ ನೋಂದಣಿ ವಿಭಾಗದ ಸಿಬ್ಬಂದಿಗಳು ಹಾಗು ಪಕ್ಷದ ಕಾರ್ಯಕರ್ತರು.