Saturday, February 26, 2022

ಮಾತೃ ಭಾಷೆ ಭವಿಷ್ಯದ ಬೆಳವಣಿಗೆಗೆ ಪೂರಕ : ಕೋಗಲೂರು ತಿಪ್ಪೇಸ್ವಾಮಿ

ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸಾಯಿ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಶ್ವ ಮಾತೃ ಭಾಷಾ ದಿನಾಚರಣೆ ಅಂಗವಾಗಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮಾತೃ ಭಾಷಾ ಮಹತ್ವ ಕಾರ್ಯಕ್ರಮವನ್ನು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ  ಉದ್ಘಾಟಿಸಿದರು.
    ಭದ್ರಾವತಿ, ಫೆ. ೨೬: ತಾಯಿಯಂತೆ ಮಾತೃ ಭಾಷೆಯನ್ನು ಪ್ರೀತಿಸಬೇಕು. ಮಾತೃ ಭಾಷೆ ಭವಿಷ್ಯದ ಬೆಳವಣಿಗೆಗೆ ಪೂರಕವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕೋಗಲೂರು ತಿಪ್ಪೇಸ್ವಾಮಿ ಹೇಳಿದರು.
    ಅವರು ಶನಿವಾರ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಸಾಯಿ ಮಂದಿರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ವತಿಯಿಂದ ವಿಶ್ವ ಮಾತೃ ಭಾಷಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಮಾತೃ ಭಾಷಾ ಮಹತ್ವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಅಖಂಡ ಭಾರತ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳಾಗಿ ವಿಭಜನೆಯಾದ ಸಂದರ್ಭದಲ್ಲಿ ಮಾತೃ ಭಾಷಾ ಸಮಸ್ಯೆ ಉಲ್ಬಣವಾಯಿತು. ಈ ಸಂದರ್ಭದಲ್ಲಿ ನಡೆದ ಹೋರಾಟದ ಹಿನ್ನಲೆಯಲ್ಲಿ ವಿಶ್ವ ಮಾತೃ ಭಾಷಾ ದಿನಾಚರಣೆ ಅಸ್ತಿತ್ವಕ್ಕೆ ಬಂದಿತು. ಮಾತೃ ಭಾಷೆಯ ಮಹತ್ವ ಪ್ರತಿಯೊಬ್ಬರು ಅರಿತುಕೊಳ್ಳಬೇಕು. ಪ್ರತಿಯೊಬ್ಬರು ಅವರವರ ಮಾತೃಭಾಷೆಯಲ್ಲಿ ಕಲಿಕೆ ಆರಂಭಿಸಿದಾಗ ಮಾತ್ರ ನಮ್ಮ ಬೆಳವಣಿಗೆಯಲ್ಲಿ ಪರಿಪೂರ್ಣತೆ ಸಾಧಿಸಲು ಸಾಧ್ಯ. ಈ ಹಿನ್ನಲೆಯಲ್ಲಿ ಮಾತೃ ಭಾಷೆಯ ಮಹತ್ವ ತಿಳಿಸಿಕೊಡುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಶಾಲಾ ಮಕ್ಕಳು ಇದರ ಸದುಪಯೋಗಪಡೆದುಕೊಳ್ಳಬೇಕೆಂದರು.
    ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕ ಡಿ. ಪ್ರಭಾಕರ ಬೀರಯ್ಯ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಅಧ್ಯಕ್ಷತೆ ವಹಿಸಿದ್ದರು.
    ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ ಸೋಮಶೇಖರಯ್ಯ, ವೇದಿಕೆ ಉಪಾಧ್ಯಕ್ಷ ವಿಠಲ್‌ರಾವ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿ ವಿಜಯಲಕ್ಷ್ಮಿ ಪ್ರಾರ್ಥಿಸಿದರು. ವೇದಿಕೆ ಉಪಾಧ್ಯಕ್ಷೆ ಸುಮತಿ ಕಾರಂತ್ ಕಾರ್ಯಕ್ರಮ ನಿರೂಪಿಸಿದರು.
    ಕಸಾಪ ತಾಲೂಕು ಕಾರ್ಯದರ್ಶಿ ಎಚ್. ತಿಮ್ಮಪ್ಪ, ಬಿ. ಗುರು, ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯ ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

No comments:

Post a Comment