ಭದ್ರಾವತಿ ಹೃದಯ ಭಾಗದಲ್ಲಿರುವ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನ.
ಭದ್ರಾವತಿ, ಜೂ. ೭: ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ, ನಗರದ ಹೃದಯ ಭಾಗದಲ್ಲಿರುವ ಹಳೇನಗರದ ೧೨ನೇ ಶತಮಾನದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನ ಸೋಮವಾರದಿಂದ ತೆರೆಯುವ ಲಕ್ಷಣಗಳು ಕಂಡು ಬರುತ್ತಿಲ್ಲ. ಇದುವರೆಗೂ ದೇವಸ್ಥಾನ ಆರಂಭಿಸುವ ಸಂಬಂಧ ಯಾವುದೇ ಆದೇಶ ಮುಜರಾಯಿ ಇಲಾಖೆಯಿಂದ ಬಂದಿಲ್ಲ.
ತಾಲೂಕಿನಲ್ಲಿ ಒಟ್ಟು ೭೧ ದೇವಸ್ಥಾನಗಳು ಮುಜರಾಯಿ ಇಲಾಖೆ ಅಧೀನದಲ್ಲಿದ್ದು, ಎಲ್ಲಾ ದೇವಸ್ಥಾನಗಳು ‘ಸಿ’ ಗ್ರೂಪ್ ಶ್ರೇಣಿಯಲ್ಲಿವೆ. ಇವುಗಳಲ್ಲಿ ಲಕ್ಷ್ಮೀನರಸಿಂಹಸ್ವಾಮಿ ಸ್ವಾಮಿ ದೇವಸ್ಥಾನ ಪ್ರಮುಖವಾಗಿದ್ದು, ವಾರ್ಷಿಕ ಸುಮಾರು ೧೦ ಲಕ್ಷದ ವರೆಗೆ ಆದಾಯ ಬರುತ್ತದೆ. ತಾಲೂಕಿನ ಇತಿಹಾಸವನ್ನು ಈ ದೇವಸ್ಥಾನ ತನ್ನ ಒಡಲಿನಲ್ಲಿ ಬಚ್ಚಿಟ್ಟುಕೊಂಡಿದೆ. ವಿಶೇಷ ಎಂದರೆ ನಗರಕ್ಕೆ ಆಗಮಿಸುವ ಪ್ರಮುಖ ರಾಜಕಾರಣಿಗಳು, ಚಲನಚಿತ್ರ ನಟರು, ಉದ್ಯಮಿಗಳು ಸೇರಿದಂತೆ ಗಣ್ಯ ವ್ಯಕ್ತಿಗಳು ಈ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸುವುದು ವಾಡಿಕೆಯಾಗಿದೆ. ಮಹಾರಥೋತ್ಸವ, ವೈಕುಂಠ ಏಕಾದಶಿಗಳಂದು ಸಾವಿರಾರು ಭಕ್ತಧಿಗಳು ಪಾಲ್ಗೊಳ್ಳುತ್ತಾರೆ.
ಕೊರೋನಾ ವೈರಸ್ ಹಿನ್ನಲೆಯಲ್ಲಿ ಕಳೆದ ಸುಮಾರು ೨ ತಿಂಗಳಿನಿಂದ ದೇವಸ್ಥಾನಕ್ಕೆ ಭಕ್ತಾಧಿಗಳ ಪ್ರವೇಶ ನಿರ್ಬಂಧಿಸಲಾಗಿದ್ದು, ದೇವಸ್ಥಾನ ಅರ್ಚಕರು, ಕುಟುಂಬದವರು ಮಾತ್ರ ಪ್ರತಿ ದಿನ ಬೆಳಿಗ್ಗೆ ಒಂದು ಗಂಟೆ ಸಮಯ ದೇವಸ್ಥಾನ ಬಾಗಿಲು ತೆರೆದು ನಿತ್ಯದ ಪೂಜಾ ಕಾರ್ಯಕ್ರಮಗಳನ್ನು ನೆರವೇರಿಸಿಕೊಂಡು ಬರುತ್ತಿದ್ದಾರೆ. ರಾಜ್ಯದ ಇತರೆಡೆ ಪ್ರಮುಖ ಧಾರ್ಮಿಕ ಕೇಂದ್ರಗಳು ಸರ್ಕಾರದ ಮಾರ್ಗಸೂಚಿಗಳನ್ವಯ ಸೋಮವಾರದಿಂದ ಆರಂಭಗೊಳ್ಳುತ್ತಿವೆ. ಆದರೆ ಈ ದೇವಸ್ಥಾನದಲ್ಲಿ ಇದುವರೆಗೂ ಯಾವುದೇ ಸಿದ್ದತೆಗಳನ್ನು ಕೈಗೊಂಡಿಲ್ಲ. ಅಷ್ಟಕ್ಕೂ ಈ ದೇವಸ್ಥಾನದಲ್ಲಿ ಇನ್ನೂ ಉಸ್ತುವಾರಿ ಸಮಿತಿ ರಚನೆಯಾಗಿಲ್ಲ. ಎಲ್ಲಾ ಸಿದ್ದತೆಗಳನ್ನು ಮುಜರಾಯಿ ಇಲಾಖೆಯೇ ಕೈಗೊಳ್ಳಬೇಕಾಗಿದೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ದೇವಸ್ಥಾನದ ಸಹಾಯಕ ಅರ್ಚಕ ಶ್ರೀನಿವಾಸ್, ಮುಜರಾಯಿ ಇಲಾಖೆಯಿಂದ ಈ ಹಿಂದೆ ಕೊರೋನಾ ವೈರಸ್ ಹಿನ್ನಲೆಯಲ್ಲಿ ದೇವಸ್ಥಾನ ಮುಚ್ಚಲು ಆದೇಶ ಬಂದಿತ್ತು. ಆದರೆ ಆರಂಭಕ್ಕೆ ಇದುವರೆಗೂ ಯಾವುದೇ ಆದೇಶ ಬಂದಿಲ್ಲ. ಯಾವುದೇ ಸಿದ್ದತೆ ಮಾಡಬೇಕಾದರೂ ಮುಜರಾಯಿ ಇಲಾಖೆಯೇ ಮಾಡಬೇಕಾಗಿದೆ ಎಂದರು.
ಸರ್ಕಾರದಿಂದ ಇದುವರೆಗೂ ಯಾವುದೇ ಮಾರ್ಗಸೂಚಿ ಬಂದಿಲ್ಲ. ಈ ಹಿನ್ನಲೆಯಲ್ಲಿ ಯಾವುದೇ ಸಿದ್ದತೆಗಳನ್ನು ಕೈಗೊಂಡಿಲ್ಲ. ಮಾರ್ಗಸೂಚಿ ಬಂದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಅಧಿಕಾರಿಯಾಗಿರುವ ತಾಲೂಕು ದಂಡಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.