Tuesday, January 2, 2024

ವಿದ್ಯಾರ್ಥಿಗಳಿಗೆ ಆದರ್ಶ ಮೌಲ್ಯಗಳನ್ನು ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿ : ಡಾ. ಚಂದ್ರಶೇಖರ್

ಭದ್ರಾವತಿ ನಗರಸಭೆ ವ್ಯಾಪ್ತಿ ಹಳೇಸೀಗೆಬಾಗಿಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಎಜ್ಯುಕೇಷನ್ ಟ್ರಸ್ಟ್, ರಾಜೀವ್‌ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಂಗಳವಾರ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ : ಬಿ.ಇಡಿ ತರಬೇತಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಸಂಸ್ಕಾರಭರಿತವಾದ ಆದರ್ಶ ಮೌಲ್ಯಗಳನ್ನು ತುಂಬುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕೆಂದು ಕುವೆಂಪು ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ಚಂದ್ರಶೇಖರ್ ಹೇಳಿದರು.
    ಅವರು ಮಂಗಳವಾರ ನಗರಸಭೆ ವ್ಯಾಪ್ತಿ ಹಳೇಸೀಗೆಬಾಗಿಯಲ್ಲಿರುವ ಡಾ. ಬಿ.ಆರ್ ಅಂಬೇಡ್ಕರ್ ಎಜ್ಯುಕೇಷನ್ ಟ್ರಸ್ಟ್, ರಾಜೀವ್‌ಗಾಂಧಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಇಂದಿನ ವಿದ್ಯಾರ್ಥಿಗಳಲ್ಲಿ ಸಂಸ್ಕೃತಿಗಿಂತ ಸಂಸ್ಕಾರಭರಿತವಾದ ಆದರ್ಶ ಮೌಲ್ಯಗಳನ್ನು ತುಂಬುವ ಅಗತ್ಯವಿದ್ದು, ಇದು ಭವಿಷ್ಯದಲ್ಲಿ ಸಮಸಮಾಜ ನಿರ್ಮಾಣಕ್ಕೆ ಪೂರಕವಾಗಲಿದೆ ಎಂದರು.
    ಹಿರಿಯ ಜಾನಪದ ಕಲಾವಿದ ಯುಗಧರ್ಮ ರಾಮಣ್ಣ ಮಾತನಾಡಿ, ಶಿಕ್ಷಕರು ಸಾಮಾಜಿಕ ಜೀವನದ ಹೊಂದಾಣಿಕೆ ಕೌಶಲ್ಯ ಹಾಗು ಸಂಸ್ಕಾರಯುತವಾದಂತಹ ಆದರ್ಶ ಜೀವನ ರೂಪಿಸಿಕೊಳ್ಳಬೇಕಂದು ಕರೆ ನೀಡಿದರು.
    ಟ್ರಸ್ಟ್ ಕಾರ್ಯದರ್ಶಿ ವಾಣಿ ರವಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಕರಾಗಿ ಸಮಾಜಕ್ಕೆ ಮತ್ತು ಮುಂದಿನ ದಿನಮಾನಗಳಲ್ಲಿ ಒಳಿತನ್ನುಂಟುಮಾಡಬೇಕೆಂದರು.
    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಪ್ರಾಂಶುಪಾಲ ಎಸ್. ಹನುಮಂತಪ್ಪ ಮಾತನಾಡಿ, ಶಿಕ್ಷಕ ವೃತ್ತಿಯ ಗುರಿ ತಲುಪಲು ಮಾನವೀಯತೆ, ವಿಭಿನ್ನ ಕೌಶಲ್ಯಗಳನ್ನು ಬೆಳೆಸಿಕೊಳ್ಳಬೇಕೆಂದರು.
    ಟಿ. ಪೂಜಿ ಮತ್ತು ಸಂಗೀತ ಕಾರ್ಯಕ್ರಮ ನಿರೂಪಿಸಿದರು. ರಂಜಿತಾ ಪ್ರಾರ್ಥಿಸಿ, ಎಂ.ಬಿ ಸಂಗೀತ ಸ್ವಾಗತಿಸಿದರು. ಉಪನ್ಯಾಸಕ ಹಾಗು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕನ್ನಡ ಸಾಹಿತ್ಯದ ಉಳಿವಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣ : ವಿಷಾದ

೧೦ನೇ ತಾಲೂಕು ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿದ್ಯಾರ್ಥಿನಿ ಸಿಂಚನ

ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಶ್ರೀಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಭದ್ರಾವತಿ ನ್ಯೂಟೌನ್ ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲೂಕು ೧೦ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಭದ್ರಾಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ ಉದ್ಘಾಟಿಸಿದರು.
ಭದ್ರಾವತಿ: ಹಿಂದಿನ ಕಾಲದಲ್ಲಿ ಕನ್ನಡ ಸಾಹಿತ್ಯ ಉನ್ನತ ಸ್ಥಿತಿಯಲ್ಲಿದ್ದು, ಇಂದು ಕನ್ನಡ ಸಾಹಿತ್ಯದ ಉಳಿವಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿರುವುದು ದುರಂತದ ಸಂಗತಿ ಎಂದು ಭದ್ರಾಪ್ರೌಢಶಾಲೆ ವಿದ್ಯಾರ್ಥಿನಿ ಸಿಂಚನ ವಿಷಾದ ವ್ಯಕ್ತಪಡಿಸಿದರು.
     ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಘಟಕ, ಶ್ರೀಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಹಾಗು ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಶ್ರೀಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆಯಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ತಾಲೂಕು ೧೦ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
      ಬಾಲ್ಯದಿಂದಲೇ ಸಮಾಜದ ಸರಿತಪ್ಪುಗಳ ಬಗ್ಗೆ ತಿಳುವಳಿಕೆ ಹೊಂದುವುದರಿಂದ ಭವಿಷ್ಯದ ಉತ್ತಮ ಪ್ರಜೆಗಳಾಗಲು ಸಾಧ್ಯ. ಕನ್ನಡ ನಾಡಿನಲ್ಲಿ ಜನಿಸಿರುವ ಪ್ರತಿಯೊಬ್ಬರೂ ಹೆಮ್ಮೆಪಡಬೇಕು. ಕನ್ನಡ ಪುರಾತನ ಇತಿಹಾಸ ಹೊಂದುವುದರ ಜೊತೆಗೆ ಶ್ರೇಷ್ಠ ಕವಿಗಳನ್ನು ನೀಡಿದೆ ಎಂದರು.
    ಸಮ್ಮೇಳನದ ಅಧ್ಯಕ್ಷತೆವಹಿಸಿದ್ದ ಶ್ರೀ ಸತ್ಯಸಾಯಿ ಪ್ರೌಢಶಾಲೆಯ ವಿದ್ಯಾರ್ಥಿನಿ ಕೆ.ಆರ್ ಸೇವಂತಿ ಮಾತನಾಡಿ, ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡಭಾಷೆಯನ್ನು ಮಾತೃಭಾಷೆಯಾಗಿ ಪಡೆದಿರುವ ನಾವೇ ಧನ್ಯರು. ಸಂಪತ್ಭರಿತವಾದ ಕನ್ನಡ ಭಾಷೆಯ ತೇರನ್ನು ಎಳೆಯುವುದು ಪ್ರತಿಯೊಬ್ಬ ಕನ್ನಡಿಗರ ಕರ್ತವ್ಯ ಎಂದರು.
    ಕನ್ನಡಿಗರು ಪರಭಾಷೆ ವಿರೋಧಿಗಳಲ್ಲ. ಆದರೆ ಕನ್ನಡಿಗರು ಭಾಷಾಭಿಮಾನ ಬೆಳೆಸಿಕೊಳ್ಳದಿದ್ದರೆ ಅಪಾಯ ಖಂಡಿತ. ಕನ್ನಡಿಗರು ಕನ್ನಡಾಭಿಮಾನ ಬೆಳೆಸಿಕೊಳ್ಳದಿದ್ದರೆ ಮತ್ಯಾರು ಕನ್ನಡಾಭಿಮಾನ ಬೆಳೆಸಿಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು.
ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಪ್ರಾಸ್ತಾವಿಕವಾಗಿ ಮಾತನಾಡಿ, ವೇದಿಕೆ ವತಿಯಿಂದ ಹಲವಾರು ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರಲಾಗುತ್ತಿದೆ. ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ ಮಕ್ಕಳು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಲು ಸಹಕಾರಿಯಾಗಿದೆ. ಇದರ ಸದುಯೋಪಪಡೆದುಕೊಳ್ಳಬೇಕೆಂದರು.
    ವೇದಿಕೆಯಲ್ಲಿ ನಗರಸಭೆ ಸದಸ್ಯ ಬಿ.ಕೆ ಮೋಹನ್, ಉದ್ಯಮಿ ಬಿ.ಕೆ ಜಗನ್ನಾಥ್, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಿ.ಮಂಜುನಾಥ್, ಪ್ರಶಾಂತಿ ಸೇವಾ ಟ್ರಸ್ಟ್ ಕಾರ್ಯದರ್ಶಿ ಡಿ.ಪ್ರಭಾಕರ್ ಬೀರಯ್ಯ, ನಗರಸಭೆ ಪೌರಾಯುಕ್ತ ಪ್ರಕಾಶ್ ಎಂ ಚನ್ನಪ್ಪನವರ್, ಕ್ಷೇತ್ರಶಿಕ್ಷಣಾಧಿಕಾರಿ ಎ.ಕೆನಾಗೇಂದ್ರಪ್ಪ, ಕಸಾಪ ಹೊಳೆಹೊನ್ನೂರು ಹೋಬಳಿ ಘಟಕದ ಅಧ್ಯಕ್ಷ ಸಿದ್ದಪ್ಪ, ಕರ್ನಾಟಕ ಜಾನಪದ ಪರಿಷತ್ ತಾಲೂಕು ಅಧ್ಯಕ್ಷ ಎಂ.ಆರ್ ರೇವಣಪ್ಪ, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಕಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕೆ. ತೇಜಸ್ ಕುಮಾರ್ ಸಾಗತಿಸಿದರು. ಹರ್ಷವರ್ದನ್ ನಿರೂಪಿಸಿ, ಎಸ್.ಬಿ ಹರಿ ವಂದಿಸಿದರು. ಶಿಕ್ಷಕ ಸೈಯ್ಯದ್ ಫರ್ವೇಜ್ ನಿರ್ವಹಿಸಿದರು.
ನಂತರ ಕವಿಗೋಷ್ಠಿ, ಕಥಾಗೋಷ್ಠಿ ಮತ್ತು ಪ್ರಚಲಿತ ವಿದ್ಯಾಮಾನಗಳು ಕುರಿತ ಗೋಷ್ಠಿಗಳು ಜರುಗಿದವು. ಸಮ್ಮೇಳನ ಉದ್ಘಾಟನೆಗೂ ಮೊದಲು ಪ್ರಶಾಂತಿ ಸೇವಾ ಟ್ರಸ್ಟ್ ಜಂಟಿ ಕಾರ್ಯದರ್ಶಿ ಶಿವಪ್ಪ ರಾಷ್ಟ್ರಧ್ವಜಾರೋಹಣ, ಸಂಚಾರಿ ಪೊಲೀಸ್ ಠಾಣಾಧಿಕಾರಿ ಶಾಂತಲ ನಾಡಧ್ವಜಾರೋಹಣ ಹಾಗು ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ಪ್ರಮುಖರಾದ ಕಾಂತಪ್ಪ, ಎಚ್. ತಿಮ್ಮಪ್ಪ, ಮಾಯಮ್ಮ, ತಿಪ್ಪಮ್ಮ, ಕೋಕಿಲಾ, ಕಮಲಕುಮಾರಿ, ಹೇಮಾವತಿ ವಿಶ್ವನಾಥ್, ಸುಮತಿ ಕಾರಂತ್ ಹಾಗು ಶ್ರೀ ಸತ್ಯಸಾಯಿ ಸಮಗ್ರ ಶಿಕ್ಷಣ ಸಂಸ್ಥೆ ಶಿಕ್ಷಕ ವೃಂದ, ಸಿಬ್ಬಂದಿ ವರ್ಗ ಹಾಗು ವಿದ್ಯಾರ್ಥಿಗಳು  ಸಮ್ಮೇಳನ ಯಶಸ್ವಿಗೆ ಸಹಕರಿಸಿದರು.