Saturday, November 27, 2021

ಲಾರಿಗೆ ಬೈಕ್ ಡಿಕ್ಕಿ : ೭ ವರ್ಷದ ಮಗು ಸಾವು



ಭದ್ರಾವತಿ ಬೈಪಾಸ್ ರಸ್ತೆ ಉಜ್ಜನಿಪುರದಲ್ಲಿ ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನವೊಂದು ಡಿಕ್ಕಿ ಹೊಡೆದಿರುವುದು.
 
ಭದ್ರಾವತಿ, ನ. ೨೭: ಚಲಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಬಂದ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ಸುಮಾರು ೭ ವರ್ಷದ ಮಗು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಶನಿವಾರ ನಗರದ ಬೈಪಾಸ್ ರಸ್ತೆ ಉಜ್ಜನಿಪುರದಲ್ಲಿ ನಡೆದಿದೆ. 
ಬೈಕ್ ಸವಾರ ಶಿವಮೊಗ್ಗ ಮಿಳ್ಳಘಟ್ಟದ ನಿವಾಸಿ ಎಂದು ಗುರುತಿಸಲಾಗಿದ್ದು, ಈತ ಪತ್ನಿ ಹಾಗು ಇಬ್ಬರು ಮಕ್ಕಳೊಂದಿಗೆ ದ್ವಿಚಕ್ರ ವಾಹನದಲ್ಲಿ ಕಾರ್ಯ ನಿಮಿತ್ತ ಚಿಕ್ಕಮಗಳೂರಿಗೆ ತೆರಳಿದ್ದು, ಪುನಃ ಹಿಂದಿರುಗಿ ಶಿವಮೊಗ್ಗಕ್ಕೆ ಹೋಗುವಾಗ ಉಜ್ಜನಿಪುರ ಎಂಪಿಎಂ ಬಡಾವಣೆ ಬಳಿ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಈತನಿಗೆ ಗಂಬೀರ ಗಾಯಗಳಾಗಿದ್ದು, ಉಳಿದಂತೆ ಪತ್ನಿ ಮತ್ತು ಇನ್ನೊಂದು ೩ ವರ್ಷದ ಮಗುವಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಕಾಗದನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.  

ಮುಂದಿನ ೬ ತಿಂಗಳಲ್ಲಿ ರಾಜ್ಯದಲ್ಲಿ ಪುನಃ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ : ಆರ್. ಪ್ರಸನ್ನಕುಮಾರ್


ಭದ್ರಾವತಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ವಿಧಾನ ಪರಿಷತ್ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಮಾತನಾಡಿದರು.
    ಭದ್ರಾವತಿ, ನ. ೨೭: ರಾಜ್ಯದಲ್ಲಿ ಮುಂದಿನ ೬ ತಿಂಗಳಲ್ಲಿ ಪುನಃ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದು, ಶಾಸಕ ಬಿ.ಕೆ ಸಂಗಮೇಶ್ವರ್ ಸಚಿವರಾಗುವುದು ಬಹುತೇಕ ಖಚಿತ ಎಂದು ವಿಧಾನಪರಿಷತ್ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಆರ್. ಪ್ರಸನ್ನಕುಮಾರ್ ಹೇಳಿದರು.
    ಅವರು ಶನಿವಾರ ನಗರದಲ್ಲಿ ಹಮ್ಮಿಕೊಳ್ಳಲಾಗಿದ್ದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು. ಜನರಿಂದ ಆಯ್ಕೆಯಾಗಿ ಸ್ವಾಯತ್ತ ಸಂಸ್ಥೆಗಳಾಗಿರುವ ಗ್ರಾಮ ಪಂಚಾಯಿತಿಗಳನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ಸದಸ್ಯರು ಸ್ವತಂತ್ರವಾಗಿ ತಮ್ಮದೇ ಆದ ನಿರ್ಣಯಗಳನ್ನು ಕೈಗೊಳ್ಳಲಾಗದಂತಹ ಪರಿಸ್ಥಿತಿಗಳನ್ನು ನಿರ್ಮಾಣ ಮಾಡುವ ಜೊತೆಗೆ ಹಲವಾರು ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿರುವ ಸರ್ಕಾರದ ವಿರುದ್ಧ ಇಂದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಪ್ರಸ್ತುತ ರಾಜ್ಯದಲ್ಲಿರುವ ಸರ್ಕಾರ ಮುಂದಿನ ೬ ತಿಂಗಳಲ್ಲಿ ಅಧಿಕಾರ ಕಳೆದುಕೊಳ್ಳಲಿದೆ ಎಂದು ಭವಿಷ್ಯ ನುಡಿದರು.
    ಸಚಿವ ಕೆ.ಎಸ್ ಈಶ್ವರಪ್ಪ ಅವರು ಗ್ರಾಮ ಪಂಚಾಯಿತಿಗಳಿಗೆ ಅನುದಾನ ನೀಡಿರುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಆದರೆ ವಾಸ್ತವವಾಗಿ ಪಂಚಾಯಿತಿ ಸದಸ್ಯರಿಗೆ ಸೇರಿದ ಹಣವನ್ನು ಕಸಿದುಕೊಂಡು ಆ ಹಣದಲ್ಲಿ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಿ ಪಂಚಾಯಿತಿಗಳಿಗೆ ನೀಡಿ ಆ ಮೂಲಕ ಕಮೀಷನ್ ಹಣ ಪಡೆದುಕೊಳ್ಳುತ್ತಿದ್ದಾರೆ. ಪಂಚಾಯಿತಿ ಸದಸ್ಯರಿಗೆ ಯಾವುದೇ ನಿರ್ಣಯ ಕೈಗೊಳ್ಳದಂತೆ ಅಧಿಕಾರ ಮೊಟಕುಗೊಳಿಸಿದ್ದಾರೆ. ೧೪ನೇ ಹಣಕಾಸಿನ ಬದಲು ೧೫ನೇ ಹಣಕಾಸಿನಡಿ ಅಲ್ಪ ಪ್ರಮಾಣದಲ್ಲಿ ಅನುದಾನ ಬಿಡುಗಡೆ ಮಾಡಿ ಆ ಹಣದಲ್ಲೂ  ಲೂಟಿ ಹೊಡೆಯುತ್ತಿದ್ದಾರೆ. ಸರ್ಕಾರ ಗ್ರಾಮ ಪಂಚಾಯಿತಿಗಳಿಗೆ ಇದುವರೆಗೂ ತನ್ನ ಹಣದಲ್ಲಿ ಯಾವುದೇ ಅನುದಾನ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿದರು.
    ರಾಜ್ಯದ ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿಗಳಲ್ಲಿ ಪುನಃ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮಾಹಿತಿ ಸಂಗ್ರಹಿಸಿಕೊಂಡು ಮೀಸಲಾತಿ ರಚಿಸುವ ನೆಪದಲ್ಲಿ ಚುನಾವಣೆ ನಡೆಯದಂತೆ ಕುತಂತ್ರ ನಡೆಸಲಾಗುತ್ತಿದೆ. ಇದನ್ನು ವಿಧಾನ ಸಭೆ ಹಾಗು ವಿಧಾನ ಪರಿಷತ್‌ನಲ್ಲಿ ಚರ್ಚಿಸಲು ಮುಂದಾದರೆ ಕಿವಿ ಕೇಳಿಸದಂತೆ, ಸದಸ್ಯರ ಮಾತುಗಳಿಗೆ ಬೆಲೆಕೊಡದಂತೆ ವರ್ತಿಸುವ ಜೊತೆಗೆ ಸರ್ವಾಧಿಕಾರಿ ಧೋರಣೆಯೊಂದಿಗೆ ಈ ಸಂಬಂಧ ನಿರ್ಣಯ ಕೈಗೊಂಡಿದೆ. ಇಂತಹ ಸರ್ಕಾರಕ್ಕೆ ಪಾಠ ಕಲಿಸಬೇಕಾದರೆ ಕೇವಲ ಚುನಾವಣೆಯಿಂದ ಮಾತ್ರ ಸಾಧ್ಯವಾಗಿದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಂಡು ಈ ಬಾರಿ ಚುನಾವಣೆಯಲ್ಲಿ ನನ್ನನ್ನು, ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುವಂತೆ ಮನವಿ ಮಾಡಿದರು.
       ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬೇಕಾದರೆ ಅದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯವಾಗಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳು ಬಾಕಿ ಉಳಿದಿವೆ. ಬಿಜೆಪಿ ಸರ್ಕಾರ ಸರಿಯಾಗಿ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ನನ್ನನ್ನು ೩ ಬಾರಿ ಆಯ್ಕೆ ಮಾಡಿರುವಂತೆ ಆರ್ ಪ್ರಸನ್ನಕುಮಾರ್ ಅವರನ್ನು ಸಹ ಆಯ್ಕೆ ಮಾಡಬೇಕು. ನಾವಿಬ್ಬರೂ ಜೊತೆಯಲ್ಲಿದ್ದಾಗ ಮಾತ್ರ ಇನ್ನೂ ಹೆಚ್ಚಿನ ಕೆಲಸ ಮಾಡಲು, ಹೆಚ್ಚಿನ ಅನುದಾನ ತರಲು ಸಾಧ್ಯ. ಈ ಹಿನ್ನಲೆಯಲ್ಲಿ ಮತ ನೀಡಿ ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿದರು.
    ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಚ್.ಎಸ್ ಸುಂದರೇಶ್, ತಾಲೂಕು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಟಿ. ಚಂದ್ರೇಗೌಡ, ಗ್ರಾಮಾಂತರ ಅಧ್ಯಕ್ಷ ಎಚ್.ಎಲ್ ಷಡಾಕ್ಷರಿ, ನಗರ ಯುವ ಘಟಕದ ಜಿ. ವಿನೋದ್‌ಕುಮಾರ್, ಗ್ರಾಮಾಂತರ ಯುವ ಘಟಕದ ಅಧ್ಯಕ್ಷ ಆಫ್ತಾಬ್ ಅಹಮದ್, ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ರಾಮಚಂದ್ರ, ಮುಖಂಡರಾದ  ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಪ್ರಮುಖರಾದ ಬಿ.ಕೆ ಮೋಹನ್, ಬಿ.ಟಿ ನಾಗರಾಜ್, ಕೆ. ರಂಗನಾಥ್, ಶಾಂತವೀರನಾಯ್ಕ, ರವಿಕುಮಾರ್, ಇಸ್ಮಾಯಿಲ್ ಖಾನ್, ಟಿಪ್ಪುಸುಲ್ತಾನ್, ಮಣಿ ಎಎನ್‌ಎಸ್, ಗಂಗಾಧರ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
    ನಗರಸಭೆ ಮತ್ತು ಪಂಚಾಯಿತಿಗಳ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು, ವಿವಿಧ ಘಟಕಗಳ ಪದಾಧಿಕಾರಿಗಳು, ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.