Friday, April 2, 2021

೪ನೇ ಪೋಸ್ಟಲ್ ಕ್ರಿಕೆಟ್ ಲೀಗ್ ಪಂದ್ಯಾವಳಿ : ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಥಮ ಬಹುಮಾನ

ಪ್ರಧಾನ ಅಂಚೆ ಕಛೇರಿ ಮನೋರಂಜನಾ ಕೂಟ ವತಿಯಿಂದ ಭದ್ರಾವತಿ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ೪ನೇ ಪೋಸ್ಟಲ್ ಕ್ರಿಕೆಟ್ ಲೀಗ್ ೨೦೨೧ ಪಂದ್ಯಾವಳಿಯಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.
   ಭದ್ರಾವತಿ, ಏ. ೨: ಪ್ರಧಾನ ಅಂಚೆ ಕಛೇರಿ ಮನೋರಂಜನಾ ಕೂಟ ವತಿಯಿಂದ ನಗರದ ನ್ಯೂಟೌನ್ ವಿಐಎಸ್‌ಎಲ್ ಕ್ರೀಡಾಂಗಣದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ೪ನೇ ಪೋಸ್ಟಲ್ ಕ್ರಿಕೆಟ್ ಲೀಗ್ ೨೦೨೧ ಪಂದ್ಯಾವಳಿಯಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಥಮ ಬಹುಮಾನ ಪಡೆದುಕೊಂಡಿತು.
    ಅಂತಿಮ ಘಟ್ಟದ ರೋಚಕ ಪಂದ್ಯದಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ಮತ್ತು ಸಾಗರ್ ಸೀ ಬರ್ಡ್ಸ್ ತಂಡ ಪ್ರಶಸ್ತಿಗಾಗಿ ಸೆಣಸಾಟ ನಡೆಸಿದವು. ಕೊನೆಯ ಹಂತದಲ್ಲಿ ಭದ್ರಾವತಿ ಬ್ಲಾಸ್ಟರ್‍ಸ್ ತಂಡ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
    ಬೆಳಿಗ್ಗೆ ೭.೩೦ ರಿಂದ ಸಂಜೆ ೬ ಗಂಟೆವರೆಗೂ ನಡೆದ ಪಂದ್ಯಾವಳಿಯಲ್ಲಿ ಭದ್ರಾವತಿ ಬುಲ್ಸ್, ಯೂನಿಟೆಡ್ ಕ್ರಿಕೆಟರ್‍ಸ್ ಗೋಪಾಲ, ಚನ್ನಗಿರಿ ರೆಬೆಲ್ಸ್, ಕೊಡಚಾದ್ರಿ ಬ್ರದರ್‍ಸ್, ಡಪ್ ಕಬ್ಸ್ ಹೊನ್ನಾಳಿ, ವಿನೋಬನಗರ್, ಮಾಸ್ಟರ್ ಬ್ಲಾಸ್ಟರ್ ಕ್ರಿಕೆಟರ್‍ಸ್, ಶಿಕಾರಿಪೂರ್ ಶೂಟರ್‍ಸ್, ಇಲೆವೆನ್ ಮೇಲ್ಸ್ ಕ್ರಿಕೆಟರ್‍ಸ್, ಭದ್ರಾವತಿ ಬ್ಲಾಸ್ಟರ್‍ಸ್, ಸಾಗರ್ ಸೀ ಬರ್ಡ್ಸ್, ಸಾಗರ್ ಸ್ಟ್ರಿಕರ್‍ಸ್, ಆರ್ ಭಟ್  ಟೀಮ್, ಲೋಸರ್ ಮತ್ತು ಸ್ಟಾರ್ ಇಲೆವೆನ್ ತೀರ್ಥಹಳ್ಳಿ ಸೇರಿದಂತೆ ಒಟ್ಟು ೧೫ ತಂಡಗಳು ಪಾಲ್ಗೊಂಡಿದ್ದವು. ಒಟ್ಟು ೨೧ ಪಂದ್ಯಗಳು ಜರುಗಿದವು. ೪ ಜನ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
     ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ಶಿವಮೊಗ್ಗ ಅಂಚೆ ಅಧೀಕ್ಷಕ ಜಿ. ಹರೀಶ್ ಪ್ರಧಾನ ಮಾಡಿದರು. ಅಂಚೆ ಪಾಲಕ ವಿ. ಶಶಿಧರ ಅಧ್ಯಕ್ಷತೆ ವಹಿಸಿದ್ದರು. ವಿಐಎಸ್‌ಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರವೀಣ್‌ಕುಮಾರ್, ಪ್ರಮುಖರಾದ ಶ್ರೀನಿವಾಸ್, ಎಸ್.ಎಸ್ ಮಂಜುನಾಥ್, ಪ್ರಕಾಶ್‌ರಾವ್, ಕೆ.ಆರ್ ಉಷಾ, ಪ್ರಹ್ಲಾದ ನಾಯಕ, ಉದಯ ಆಚಾರ್, ನಾಗರಾಜ ಪೂಜಾರ, ಎಚ್.ವಿ ರಾಜ್‌ಕುಮಾರ್, ಟಿ.ಕೆ ಗೋಪಾಲ್, ಜಿ. ರಾಘವೇಂದ್ರ, ಜೆ. ಮಂಜುನಾಥ್, ಎಚ್.ಆರ್ ಈಶ್ವರಪ್ಪ, ಆರ್. ವೆಂಕಟೇಶ್, ಕೆ. ಪ್ರಹ್ಲಾದ್ ರಾವ್, ಸಿ.ಆಋ ಪಾಟೀಲ್, ಕೆ. ಲಿಂಗರಾಜು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.


ಮಂಜೂರಾತಿ ಪ್ರಕ್ರಿಯೆಯಲ್ಲಿರುವಾಗಲೇ ಶಾಸಕರಿಂದ ಕಾಮಗಾರಿಗಳಿಗೆ ಗುದ್ದಲಿ ಪೂಜೆ

ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಆರೋಪ

ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮಾತನಾಡಿದರು.
    ಭದ್ರಾವತಿ, ಏ. ೨: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ತರಾತುರಿಯಲ್ಲಿ ಕಾಮಗಾರಿಗಳ ಗುದ್ದಲಿಪೂಜೆ ನೆರವೇರಿಸಲು ಮುಂದಾಗಿರುವುದು ಖಂಡನೀಯ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹೇಳಿದರು.
     ಅವರು ಶುಕ್ರವಾರ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತಾತ್ಮಕವಾಗಿ ಇನ್ನೂ ಸರಿಯಾಗಿ ಮಂಜೂರಾತಿಯಾಗದೆ ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ. ಇದು ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ನಡೆಸುತ್ತಿರುವ ರಾಜಕೀಯ ಕುತಂತ್ರ ಎಂದು ಆರೋಪಿಸಿದರು.
     ಸಂಸದ ಬಿ.ವೈ ರಾಘವೇಂದ್ರ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ಪರಿಶ್ರಮದಿಂದಾಗಿ ರಾಜ್ಯ ಸರ್ಕಾರ ಹಾಗು ನಗರಸಭೆ ಅನುದಾನ ಬಳಸಿಕೊಂಡು ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ನೂತನ ಖಾಸಗಿ ಬಸ್ ನಿಲ್ದಾಣ ಹಾಗು ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮೃತದೇಹಗಳ ಅಂತ್ಯಕ್ರಿಯೆಗೆ ಅತ್ಯಾಧುನಿಕ ತಂತ್ರಜ್ಞಾನದ ವಿದ್ಯುತ್ ಯಂತ್ರ ಅಳವಡಿಕೆ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಆದರೆ ಕಾಮಗಾರಿಗಳು ಇನ್ನೂ ಮಂಜೂರಾತಿ ಪ್ರಕ್ರಿಯೆಯಲ್ಲಿದ್ದು, ಈ ಹಂತದಲ್ಲಿ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದಂತೆ ಶಾಸಕರು ಗುದ್ದಲಿ ಪೂಜೆಗೆ ಮುಂದಾಗಿದ್ದಾರೆ. ಅಲ್ಲದೆ ಕಾಮಗಾರಿಗಳಿಗೆ ನಿಗದಿಪಡಿಸಲಾಗಿರುವ ಅನುದಾನಗಳ ಕುರಿತು ಸಹ ತಪ್ಪು ಅಂಕಿ ಅಂಶಗಳನ್ನು ನೀಡುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ಪಕ್ಷ ಖಂಡಿಸುವ ಜೊತೆಗೆ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರ್‌ಗೆ ಹಾಗು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದರು.
   ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್ ಮಾತನಾಡಿ, ಕೆಲವೇ ದಿನಗಳಲ್ಲಿ ನಗರಸಭೆ ಚುನಾವಣೆ ನೀತಿ ಸಂಹಿತೆ ಬರಲಿದೆ. ಈ ಹಂತದಲ್ಲಿ ಈ ರೀತಿ ನಡೆಯುತ್ತಿರುವುದು ಸರಿಯಲ್ಲ. ಈ ವಿಚಾರ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಶಾಸಕರ ಅಣತಿಯಂತೆ ವರ್ತಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
    ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಕರ್ನಾಟಕ ರಾಜ್ಯ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಸೂಡಾ ಸದಸ್ಯ ವಿ. ಕದಿರೇಶ್, ಜಿ. ಆನಂದಕುಮಾರ್, ರಾಮಚಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ಚನ್ನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕುರುಬರ ಸಂಘದ ಮಾಜಿ ಅಧ್ಯಕ್ಷ ಹೊನ್ನೂರಪ್ಪ ನಿಧನ

ಭದ್ರಾವತಿ, ಏ. ೨: ನಿವೃತ್ತ ಸಹಾಯಕ ತಹಸೀಲ್ದಾರ್, ತಾಲೂಕು ಕುರುಬರ ಸಂಘದ ಮಾಜಿ ಅಧ್ಯಕ್ಷ ಹೊನ್ನೂರಪ್ಪ(೭೫) ಶುಕ್ರವಾರ ನಿಧನ ಹೊಂದಿದರು.
ಓರ್ವ ಪುತ್ರಿ, ಇಬ್ಬರು ಪುತ್ರರನ್ನು ಹೊಂದಿದ್ದರು. ನಗರದ ಕನಕನಗರದ ನಿವಾಸಿಯಾಗಿರುವ ಹೊನ್ನೂರಪ್ಪ ಕುರುಬ ಸಮಾಜದ ಹಿರಿಯ ಮುಖಂಡರಾಗಿ ಗುರುತಿಸಿಕೊಳ್ಳುವ ಜೊತೆಗೆ ಸಂಘದ ಅಧ್ಯಕ್ಷರಾಗಿ ಹಾಗೂ ಚನ್ನಗಿರಿ ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾಗಿ ಮತ್ತು ಇನ್ನಿತರರ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವೆ ಸಲ್ಲಿಸಿದ್ದರು.
ಇವರ ನಿಧನಕ್ಕೆ ತಾಲೂಕು ಕುರುಬರ ಸಂಘದ ಅಧ್ಯಕ್ಷ ಬಿ.ಎಂ ಸಂತೋಷ್ ಹಾಗು ಪದಾಧಿಕಾರಿಗಳು ಮತ್ತು ನಗರದ ವಿವಿಧ ಸಂಘಟನೆಗಳ ಪ್ರಮುಖರು, ಗಣ್ಯರು ಸಂತಾಪ ಸೂಚಿಸಿದ್ದಾರೆ. ಇವರ ಅಂತ್ಯಕ್ರಿಯೆ ಶನಿವಾರ ಬೆಳಿಗ್ಗೆ ಹುತ್ತಾಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಲಿದೆ.  

ಚಿತ್ರ: ಡಿ೨-ಬಿಡಿವಿಟಿ೧
ಹೊನ್ನೂರಪ್ಪ

ಕೊರೋನಾ ಪರಿಣಾಮದಿಂದ ಆರೋಗ್ಯದ ಮೇಲೆ ಹೆಚ್ಚಿನ ಕಾಳಜಿ : ಮನೋಹರ್

ಭದ್ರಾವತಿ ಜನ್ನಾಪುರ ಬಬ್ಬೂರುಕಮ್ಮೆ ಸಮುದಾಯ ಭವನದಲ್ಲಿ ಶುಕ್ರವಾರ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರದ ವತಿಯಿಂದ ಯೋಗಪಟುಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭ ಆಯೋಜಿಸಲಾಗಿತ್ತು.
ಭದ್ರಾವತಿ, ಏ. ೨: ಕಳೆದ ಸುಮಾರು ೧ ವರ್ಷದಿಂದ ಕೊರೋನಾ ಸೋಂಕು ಮನುಷ್ಯನ ಆರೋಗ್ಯದ ಜೊತೆ ಆಟವಾಡುತ್ತಿದ್ದು, ಕೊರೋನಾ ಪರಿಣಾಮದಿಂದಾಗಿ ಮನುಷ್ಯ ತನ್ನ ಆರೋಗ್ಯದ ಕಡೆ ಹೆಚ್ಚು ಗಮನಹರಿಸುವಂತಾಗಿದೆ ಎಂದು ಪೌರಾಯುಕ್ತ ಮನೋಹರ್ ತಿಳಿಸಿದರು.
    ಅವರು ಶುಕ್ರವಾರ ಜನ್ನಾಪರು ಬಬ್ಬೂರುಕಮ್ಮೆ ಸಮುದಾಯ ಭವನದಲ್ಲಿ ಹ್ಯಾಪಿ ಲೀವಿಂಗ್ ಲೈಫ್ ಯೋಗ ಕೇಂದ್ರದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಯೋಗಪಟುಗಳಿಗೆ ಪ್ರಶಸ್ತಿ ವಿತರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ಜಂಜಾಟದ ಬದುಕಿನ ನಡುವೆ ಪ್ರಸ್ತುತ ಕೊರೋನಾ ಮನುಷ್ಯನ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ನಮ್ಮ ಆರೋಗ್ಯದ ರಕ್ಷಣೆಗಾಗಿ ಎಲ್ಲಾ ರೀತಿಯ ಪ್ರಯತ್ಸಗಳಿಗೆ ನಾವುಗಳು ಮುಂದಾಗಿದ್ದೇವೆ. ಇಂತಹ ಸಂದರ್ಭದಲ್ಲಿ ಯೋಗ ಸಹ ನಮ್ಮ ಆರೋಗ್ಯ ರಕ್ಷಣೆಗೆ ಪೂರಕವಾಗಿದೆ. ಈ ಹಿನ್ನಲೆಯಲ್ಲಿ ಯೋಗ ಕಲಿಕೆ ಮೂಲಕ ಆರೋಗ್ಯವಂತರಾಗಲು ಕರೆ ನೀಡಿದರು.
   ಯೋಗ ಗುರು ಮಹೇಶ್ ಮಾತನಾಡಿ, ಪ್ರಶಸ್ತಿಗಾಗಿ ಯೋಗ ಸೀಮಿತವಾಗಿಲ್ಲ. ಯೋಗ ಪ್ರತಿಯೊಬ್ಬರಿಗೂ ಅತ್ಯವಶ್ಯಕವಾಗಿದ್ದು, ಎಲ್ಲಾ ರೀತಿಯ ಕಾಯಿಲೆಗಳಿಗೂ ಯೋಗ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ. ಬಹುಮುಖ್ಯವಾಗಿ ಮಾನಸಿಕ, ದೈಹಿಕ ಒತ್ತಡಗಳಿಂದ ಹೊರಬರಲು ಯೋಗ ಹೆಚ್ಚಿನ ಸಹಕಾರಿಯಾಗಿದೆ. ಉತ್ತಮ ಮನಸ್ಸು, ದೇಹದಿಂದ ಉತ್ತಮ ಆರೋಗ್ಯ ಸಹ ಸಾಧ್ಯ. ಈ ಹಿನ್ನಲೆಯಲ್ಲಿ ಸಣ್ಣ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೆ ಎಲ್ಲರೂ ಸಹ ಯೋಗದಲ್ಲಿ ತೊಡಗಿಸಿಕೊಳ್ಳಬಹುದು ಎಂದರು.
  ಬೆಂಗಳೂರಿನ ಶಿವಜ್ಯೋತಿ ಯೋಗ ಕೇಂದ್ರದ ವತಿಯಿಂದ ಆಯೋಜಿಸಲಾಗಿದ್ದ ಯೋಗೋತ್ಸವ-೨೦೨೧ ಸ್ಪರ್ಧೆಯಲ್ಲಿ ಯೋಗ ಕೇಂದ್ರದ ೧೨ ಮಂದಿ  ಭಾಗವಹಿಸಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಪ್ರಶಸ್ತಿಗಳನ್ನು ಸ್ವೀಕರಿಸಿದ ಯೋಗಪಟುಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
   ಸ್ಥಳೀಯ ಮುಖಂಡ ಕೆ. ಮಂಜುನಾಥ್, ಶೃತಿ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.