ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಆರೋಪ
ಭದ್ರಾವತಿಯಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಮಾತನಾಡಿದರು.
ಭದ್ರಾವತಿ, ಏ. ೨: ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ತರಾತುರಿಯಲ್ಲಿ ಕಾಮಗಾರಿಗಳ ಗುದ್ದಲಿಪೂಜೆ ನೆರವೇರಿಸಲು ಮುಂದಾಗಿರುವುದು ಖಂಡನೀಯ ಎಂದು ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಹೇಳಿದರು.
ಅವರು ಶುಕ್ರವಾರ ಹಳೇನಗರದ ಪತ್ರಿಕಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಆಡಳಿತಾತ್ಮಕವಾಗಿ ಇನ್ನೂ ಸರಿಯಾಗಿ ಮಂಜೂರಾತಿಯಾಗದೆ ಪ್ರಕ್ರಿಯೆಯಲ್ಲಿರುವ ಕಾಮಗಾರಿಗಳ ಗುದ್ದಲಿ ಪೂಜೆ ನೆರವೇರಿಸಲಾಗುತ್ತಿದೆ. ಇದು ನಗರಸಭೆ ಚುನಾವಣೆ ಹಿನ್ನಲೆಯಲ್ಲಿ ನಡೆಸುತ್ತಿರುವ ರಾಜಕೀಯ ಕುತಂತ್ರ ಎಂದು ಆರೋಪಿಸಿದರು.
ಸಂಸದ ಬಿ.ವೈ ರಾಘವೇಂದ್ರ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ಪರಿಶ್ರಮದಿಂದಾಗಿ ರಾಜ್ಯ ಸರ್ಕಾರ ಹಾಗು ನಗರಸಭೆ ಅನುದಾನ ಬಳಸಿಕೊಂಡು ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪ ನೂತನ ಖಾಸಗಿ ಬಸ್ ನಿಲ್ದಾಣ ಹಾಗು ಹೊಳೆಹೊನ್ನೂರು ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಮೃತದೇಹಗಳ ಅಂತ್ಯಕ್ರಿಯೆಗೆ ಅತ್ಯಾಧುನಿಕ ತಂತ್ರಜ್ಞಾನದ ವಿದ್ಯುತ್ ಯಂತ್ರ ಅಳವಡಿಕೆ ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಆದರೆ ಕಾಮಗಾರಿಗಳು ಇನ್ನೂ ಮಂಜೂರಾತಿ ಪ್ರಕ್ರಿಯೆಯಲ್ಲಿದ್ದು, ಈ ಹಂತದಲ್ಲಿ ಸಂಸದರು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಾರದಂತೆ ಶಾಸಕರು ಗುದ್ದಲಿ ಪೂಜೆಗೆ ಮುಂದಾಗಿದ್ದಾರೆ. ಅಲ್ಲದೆ ಕಾಮಗಾರಿಗಳಿಗೆ ನಿಗದಿಪಡಿಸಲಾಗಿರುವ ಅನುದಾನಗಳ ಕುರಿತು ಸಹ ತಪ್ಪು ಅಂಕಿ ಅಂಶಗಳನ್ನು ನೀಡುವ ಮೂಲಕ ಕ್ಷೇತ್ರದ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಇದನ್ನು ಪಕ್ಷ ಖಂಡಿಸುವ ಜೊತೆಗೆ ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ, ತಹಸೀಲ್ದಾರ್‌ಗೆ ಹಾಗು ಚುನಾವಣಾಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ಕೆ ಶ್ರೀನಾಥ್ ಮಾತನಾಡಿ, ಕೆಲವೇ ದಿನಗಳಲ್ಲಿ ನಗರಸಭೆ ಚುನಾವಣೆ ನೀತಿ ಸಂಹಿತೆ ಬರಲಿದೆ. ಈ ಹಂತದಲ್ಲಿ ಈ ರೀತಿ ನಡೆಯುತ್ತಿರುವುದು ಸರಿಯಲ್ಲ. ಈ ವಿಚಾರ ಅಧಿಕಾರಿಗಳಿಗೆ ತಿಳಿದಿದ್ದರೂ ಸಹ ಶಾಸಕರ ಅಣತಿಯಂತೆ ವರ್ತಿಸುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ಧರ್ಮಪ್ರಸಾದ್, ಕರ್ನಾಟಕ ರಾಜ್ಯ ನೀರು ಸರಬರಾಜು, ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಸೂಡಾ ಸದಸ್ಯ ವಿ. ಕದಿರೇಶ್, ಜಿ. ಆನಂದಕುಮಾರ್, ರಾಮಚಂದ್ರ, ತಾಲೂಕು ಪ್ರಧಾನ ಕಾರ್ಯದರ್ಶಿ ಚನ್ನೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
No comments:
Post a Comment