Saturday, June 4, 2022

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಮಾಜಿಕ ಚಟುವಟಿಕೆಗಳಲ್ಲೂ ಮುಂಚೂಣಿ


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  (ಭದ್ರಾವತಿ-೦೧) ವತಿಯಿಂದ ಭದ್ರಾವತಿ ಬಿ.ಎಚ್ ರಸ್ತೆ, ಹುತ್ತಾ ಕಾಲೋನಿ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.  
    ಭದ್ರಾವತಿ, ಜೂ. ೩ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತವಾಗಿರದೆ ಸಾಮಾಜಿಕ ಚಟುವಟಿಕೆಗಳಲ್ಲೂ ತೊಡಗಿಸಿಕೊಂಡಿದೆ. ಆ ಮೂಲಕ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮುಂದಾಗಿದೆ ಎಂದು ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್ ಹೇಳಿದರು.
    ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್  (ಭದ್ರಾವತಿ-೦೧) ವತಿಯಿಂದ ನಗರದ ಬಿ.ಎಚ್ ರಸ್ತೆ, ಹುತ್ತಾ ಕಾಲೋನಿ ಶ್ರೀ ಭದ್ರೇಶ್ವರ ಸಮುದಾಯ ಭವನದಲ್ಲಿ  ಹಮ್ಮಿಕೊಳ್ಳಲಾಗಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.  
    ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಡೆಯವರ ದೂರದೃಷ್ಟಿ ಫಲವಾಗಿ ಆರಂಭಗೊಂಡಿರುವ ಯೋಜನೆ ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಜೊತೆಗೆ ಸಾಮಾಜಿಕವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಧೂಮಪಾನ, ಮದ್ಯಪಾನ, ತಂಬಾಕು ಪದಾರ್ಥಗಳು ಹಾಗು ಮಾದಕ ವಸ್ತುಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವ ಮೂಲಕ ವ್ಯಸನ ಮುಕ್ತ ಸಮಾಜಕ್ಕೆ ಮುಂದಾಗಿದೆ. ಜನರು ಯೋಜನೆಯ ಆಶಯಗಳನ್ನು ಅರಿತುಕೊಂಡು ದುಶ್ಚಟಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕೆಂದರು.
    ಶಿವಮೊಗ್ಗ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ  ವೈದ್ಯೆ ಡಾ. ನಮ್ರತಾ ಉಡುಪ ಮಾತಾನಾಡಿ,  ತಂಬಾಕು ಪದಾರ್ಥಗಳ ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ  ಮಾಹಿತಿಯನ್ನು ನೀಡಿದರು.  
     ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಆರ್. ಕರುಣಾಮೂರ್ತಿ, ಗೊಂದಿ ಜಯರಾಂ, ಯೋಜನಾಧಿಕಾರಿ ವೈ. ಪ್ರಕಾಶ್, ನಗರಸಭಾ ಸದಸ್ಯರಾದ ಸವಿತಾ ಉಮೇಶ್, ಲತಾ ಚಂದ್ರಶೇಖರ್, ಶಾಂತ ಹಾಗೂ ಸುಧಾ ಮಹಿಳಾ ಸಂತ್ವಾನ ಕೇಂದ್ರದ ಅಧೀಕ್ಷಕರು, ತಾಲೂಕಿನ ವಲಯಗಳ ಮೇಲ್ವಿಚಾರಕರಾದ ಉಮೇಶ್, ವೀರೇಶ್ ಹಾಗೂ ಪ್ರದೀಪ್, ಒಕ್ಕೂಟದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಸೇವಾಪ್ರತಿನಿಧಿಗಳು ಹಾಗೂ ಸಂಘದ ಸದಸ್ಯರು ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

ಸಚಿವ ನಾಗೇಶ್‌ರನ್ನು ಸಂಪುಟದಿಂದ ವಜಾಗೊಳಿಸಿ : ಎನ್‌ಎಸ್‌ಯುಐ ವತಿಯಿಂದ ಪ್ರತಿಭಟನೆ

ರಾಜ್ಯದ ಬಿಜೆಪಿ ಸರ್ಕಾರ ಶಾಲಾ ಪಠ್ಯ ಪುಸ್ತಕವನ್ನು ಕೇಸರೀಕರಣಗೊಳಿಸುವ ಹುನ್ನಾರ ನಡೆಸುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಸಂಘ ಪರಿಹಾರದ ಹಿನ್ನಲೆಯುಳ್ಳ ರೋಹಿತ್ ಚಕ್ರತೀರ್ಥ ಅವರನ್ನು ಶಾಲಾ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಶಿಕ್ಷಣ ಸಚಿವ ನಾಗೇಶ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಶನಿವಾರ ಭದ್ರಾವತಿಯಲ್ಲಿ ಎನ್‌ಎಸ್‌ಯುಐ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು. 

    ಭದ್ರಾವತಿ, ಜೂ. ೪: ರಾಜ್ಯದ ಬಿಜೆಪಿ ಸರ್ಕಾರ ಶಾಲಾ ಪಠ್ಯ ಪುಸ್ತಕವನ್ನು ಕೇಸರೀಕರಣಗೊಳಿಸುವ ಹುನ್ನಾರ ನಡೆಸುತ್ತಿದ್ದು, ಇದಕ್ಕೆ ಪೂರಕವೆಂಬಂತೆ ಸಂಘ ಪರಿಹಾರದ ಹಿನ್ನಲೆಯುಳ್ಳ ರೋಹಿತ್ ಚಕ್ರತೀರ್ಥ ಅವರನ್ನು ಶಾಲಾ ಪಠ್ಯ ಪುಸ್ತಕ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಜನರ ದಿಕ್ಕು ತಪ್ಪಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ತಕ್ಷಣ ಶಿಕ್ಷಣ ಸಚಿವ ನಾಗೇಶ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಶನಿವಾರ ಎನ್‌ಎಸ್‌ಯುಐ ವತಿಯಿಂದ ತಾಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.  

    ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ, ರಾಷ್ಟ್ರಕವಿ ಕುವೆಂಪು ಅವರು ಕೊಡುಗೆಯಾಗಿ ನೀಡಿರುವ ನಾಡಗೀತೆಗೆ ಅವಮಾನ ಮಾಡುವಂತಹ ರಾಷ್ಟ್ರದ್ರೋಹಿ, ಸಂಘ ಪರಿಹಾರದ ಹಿನ್ನಲೆಯ ರೋಹಿತ್ ಚಕ್ರತೀರ್ಥರನ್ನು ಪಠ್ಯಪುಸ್ತಕ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಸರ್ಕಾರದ ಕ್ರಮ ಅತ್ಯಂತ ಖಂಡನೀಯವಾಗಿದೆ. ಶಾಲಾ ಪಠ್ಯಪುಸ್ತಕವನ್ನು ಕೇಸರೀಕರಣಗೊಳಿಸಿ ವಿದ್ಯಾರ್ಥಿಗಳಲ್ಲಿ ಕೋಮು ದ್ವೇಷ ಭಾವನೆ ಉಂಟು ಮಾಡಲಾಗುತ್ತಿದೆ. ತಕ್ಷಣ ರೋಹಿತ್ ಚಕ್ರತೀರ್ಥರನ್ನು ಅಮಾನತುಗೊಳಿಸಿ ಪ್ರಕರಣ ದಾಖಲಿಸಬೇಕೆಂದು ಒತ್ತಾಯಿಸಿದರು. 

  ಪಠ್ಯಪುಸ್ತಕ ಕೇಸರೀಕರಣಗೊಳಿಸುತ್ತಿರುವ ಕ್ರಮ ಖಂಡಿಸಿ ಶಿಕ್ಷಣ ಸಚಿವರ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಎನ್‌ಎಸ್‌ಯುಐ ರಾಜ್ಯಾಧ್ಯಕ್ಷ ಕೀರ್ತಿ ಗಣೇಶ್ ಸೇರಿ ೨೦ ಮಂದಿ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ ಅವರನ್ನು ಜೈಲಿಗಟ್ಟುವ ಮೂಲಕ ರಾಜ್ಯ ಸರ್ಕಾರ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದೆ. ಇದನ್ನು ಎನ್‌ಎಸ್‌ಯುಐ ತೀವ್ರವಾಗಿ ಖಂಡಿಸುತ್ತದೆ. ತಕ್ಷಣ ದಾಖಲಾಗಿರುವ ಸುಳ್ಳು ಮೊಕದ್ದಮೆಯನ್ನು ವಜಾಗೊಳಿಸಿ ಬಂಧಿತರನ್ನು ಬಿಡುಗಡೆಗೊಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಸಿದರು. 

ಎನ್‌ಎಸ್‌ಯುಐ ತಾಲೂಕು ಅಧ್ಯಕ್ಷ ಮುಸ್ವೀರ್ ಬಾಷ ಪ್ರತಿಭಟನೆ ನೇತೃತ್ವ ವಹಿಸಿದ್ದರು. ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಟಿ. ಚಂದ್ರೇಗೌಡ, ನಗರಸಭಾ ಸದಸ್ಯ ಆರ್. ಶ್ರೇಯಸ್(ಚಿಟ್ಟೆ), ಜೆಬಿಟಿ ಬಾಬು ಸೇರಿದಂತೆ ಎನ್‌ಎಸ್‌ಯುಐ ಪ್ರಮುಖರು, ಕಾರ್ಯಕರ್ತರು ಪಾಲ್ಗೊಂಡಿದ್ದರು. 


ನಾಲ್ವಡಿ ಕೃಷ್ಣರಾಜ ಒಡೆಯರ್ ಜನಪರ ಕಾಳಜಿ ಇಂದಿನವರಿಗೆ ಅವಶ್ಯಕ



ಭದ್ರಾವತಿ : ರಾಜರ್ಷಿ  ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ಕೊಡುಗೆ ಅಪಾರವಾಗಿದ್ದು,   ಅವರು ಹೊಂದಿದ್ದ ಜನಪರ ಕಾಳಜಿ ಇಂದು ಆಡಳಿತ ನಡೆಸುವವರಿಗೆ ಮಾರ್ಗದರ್ಶನವಾಗಿದೆ. ಇವರ ಜನ್ಮದಿನಾಚರಣೆ ನಾಡಿನಾದ್ಯಂತ ಶಾಲಾ-ಕಾಲೇಜುಗಳಲ್ಲಿ ಆಚರಿಸುವಂತಾಗಬೇಕು ಎಂದು ಮೈಸೂರು ಮಹಾರಾಜ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವೆಂಕಟೇಶ್ ಹೇಳಿದರು.
   ಅವರು ಶನಿವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಮ್ಮಿಕೊಳ್ಳಲಾಗಿದೆ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾಡಿದರು.
      ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಚಿಕ್ಕವಯಸ್ಸಿನಲ್ಲಿಯೇ ರಾಜನಾಗುವ ಮೂಲಕ ಎಲ್ಲರಿಗೂ ಮಾದರಿಯಾಗುವಂತಹ ಉತ್ತಮ ಆಡಳಿತ ನೀಡುವಲ್ಲಿ ಯಶಸ್ವಿಯಾಗಿದ್ದರು.  ಅವರ ದೂರದೃಷ್ಟಿಯ ಫಲವಾಗಿ ನಗರದಲ್ಲಿ  ವಿಐಎಸ್ಎಲ್ ಮತ್ತು ಎಂಪಿಎಂ  ಕಾರ್ಖಾನೆಗಳ ಆರಂಭಕ್ಕೆ ಕಾರಣರಾಗುವ ಮೂಲಕ ಲಕ್ಷಾಂತರ ಜನರಿಗೆ ಅನ್ನದಾತರಾಗಿದ್ದರು. ಅಲ್ಲದೆ ನಾಡಿನಾದ್ಯಂತ ಹಲವಾರು ಜನಪರ ಕಾರ್ಯಗಳನ್ನು ಕೈಗೊಳ್ಳುವ ಮೂಲಕ ಇಂದಿಗೂ ಜನರ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಇಂತಹ ಮಹಾನ್ ವ್ಯಕ್ತಿಯ ಜನ್ಮದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಬಾರದು.  ಅವರ ಜನ್ಮದಿನಾಚರಣೆ ಮುಂಬರುವ ದಿನ ಶಾಲಾ-ಕಾಲೇಜುಗಳಲ್ಲಿ ನಡೆಯುವ ಮೂಲಕ ಅವರ ಚಿಂತನೆಗಳು ಎಲ್ಲರಿಗೂ ತಲುಪುವಂತಾಗಬೇಕು ಎಂದರು.
     ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್,  ಬಾಲಕೃಷ್ಣ, ಕೆ ಮಂಜುನಾಥ್, ವಿಶ್ವೇಶ್ವರ ಗಾಯಕ್ವಾಡ್ ಸೇರಿದಂತೆ ಇನ್ನಿತರರು ಮಾತನಾಡಿ, ನಾಲ್ವಡಿ ಕೃಷ್ಣರಾಜ ಒಡೆಯರ್ ಹಲವಾರು ಸಾಮಾಜಿಕ ಬದ್ಧತೆಗಳ ಮೂಲಕ ಮಾದರಿಯಾಗಿದ್ದಾರೆ. ಸರ್ವರನ್ನು ಸಮಾನತೆಯಿಂದ ಕಾಣುವ ಮೂಲಕ ನಾಡಿಗೆ ಹಲವಾರು ಕೊಡುಗೆಗಳನ್ನು ನೀಡಿದ್ದಾರೆ. ಪ್ರಸ್ತುತ ಅವರು ನಗರದಲ್ಲಿ ಆರಂಭಿಸಿದ ಎರಡು ಕಾರ್ಖಾನೆಗಳು ಅವನತಿಯ ದಾರಿ ಹಿಡಿದಿದ್ದು, ಇಂತಹ ಸಂದರ್ಭದಲ್ಲಿ ಅವರಿಗೆ ಗೌರವಿಸುವಂತಹ ಕಾರ್ಯಗಳು ನಡೆಯಬೇಕಾಗಿದೆ. ನಗರದಲ್ಲಿ ಅವರ ಪುತ್ಥಳಿ ಅನಾವರಣಗೊಳ್ಳಬೇಕಾಗಿದೆ. ಅಲ್ಲದೆ ಅವರ ಹೆಸರನ್ನು ಅಜರಾಮರವಾಗಿಸುವ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ.
     ಶಿರಸ್ತೇದಾರ್ ರಾಧಾಕೃಷ್ಣ ಭಟ್ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಪ್ರಮುಖರಾದ ಮಾನವ ಹಕ್ಕುಗಳ ಹೋರಾಟ ಸಮಿತಿ ಅಧ್ಯಕ್ಷ ಬಿ ಎನ್ ರಾಜು, ಟಿ.ವಿ ಗೋವಿಂದಸ್ವಾಮಿ, ಚನ್ನಪ್ಪ, ಎಸ್.ಎನ್  ಶಿವಪ್ಪ, ಸಾವಂತ್, ಗಿರಿ ನಾಯ್ಡು, ಎನ್. ಮಂಜುನಾಥ್, ಉಪ ತಹಶೀಲ್ದಾರ್ ಗಳಾದ ಮಂಜನಾಯ್ಕ, ಅರಸು, ನಾರಾಯಣಗೌಡ, ಆಹಾರ ನಿರೀಕ್ಷಕ ಎ.ಟಿ ಬಸವರಾಜು ಹಾಗು ತಾಲೂಕು ಕಚೇರಿ ಸಿಬ್ಬಂದಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.