Wednesday, December 29, 2021

ಜಯಕರ್ನಾಟಕ ಸಂಘಟನೆ ವತಿಯಿಂದ ಕುವೆಂಪು ಜನ್ಮದಿನ ಆಚರಣೆ

ಡಿ.೩೧ರ ಕರ್ನಾಟಕ ಬಂದ್‌ಗೆ ಬೆಂಬಲ ಇಲ್ಲ


ಕುವೆಂಪು ಜನ್ಮದಿನದ ಅಂಗವಾಗಿ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಕುವೆಂಪು ಅವರ ಪ್ರತಿಮೆಗೆ ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಡಾ. ದೀಪಕ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಿದ ಸಂಘಟನೆ ಪ್ರಮುಖರು ನಂತರ ಸುದ್ದಿ ಮಾಧ್ಯಮಗಳೊಂದಿಗೆ ಮಾತನಾಡಿದರು.
    ಭದ್ರಾವತಿ: ಜಯಕರ್ನಾಟಕ ಸಂಘಟನೆ ಜಿಲ್ಲಾ ಘಟಕದ ವತಿಯಿಂದ ಬುಧವಾರ ರಾಷ್ಟ್ರಕವಿ ಕುವೆಂಪು ಜನ್ಮದಿನ ಆಚರಿಸಲಾಯಿತು.
    ಕುವೆಂಪು ಜನ್ಮದಿನದ ಅಂಗವಾಗಿ ಶಿವಮೊಗ್ಗ ಕುವೆಂಪು ರಂಗಮಂದಿರದಲ್ಲಿ ಕುವೆಂಪು ಅವರ ಪ್ರತಿಮೆಗೆ ಸಂಘಟನೆ ಜಿಲ್ಲಾಧ್ಯಕ್ಷ ಡಾ. ದೀಪಕ್ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು.
    ಡಾ. ದೀಪಕ್ ಮಾತನಾಡಿ, ಸಂಘಟನೆ ಸದಾ ನಾಡು-ನುಡಿ ಹೋರಾಟಕ್ಕೆ ಬದ್ಧವಾಗಿದೆ. ಡಿ.೩೧ ರಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್‌ಗೆ ಸಂಘಟನೆ ಯಾವುದೇ ರೀತಿ ಬೆಂಬಲ ನೀಡುವುದಿಲ್ಲ. ಆದರೆ ನಮ್ಮ ಹೋರಾಟ ನಿರಂತರವಾಗಿ ನಡೆಯಲಿದೆ ಎಂದರು.
    ಕಾರ್ಯಾಧ್ಯಕ್ಷ ಅಬ್ದುಲ್ ರಹೀಮ್, ಪ್ರಧಾನ ಕಾರ್ಯದರ್ಶಿ ನಾಸಿರ್, ಜಿಲ್ಲಾ ಪ್ರಧಾನ ಸಂಚಾಲಕ ದಿವ್ಯರಾಜ್, ಸಂಘಟನಾ ಕಾರ್ಯದರ್ಶಿ ಶ್ರೀಕಾಂತ್, ನಗರ ಅಧ್ಯಕ್ಷ ಸಿಕಂದರ್, ಹೊಳೆಹೊನ್ನೂರು ಅಧ್ಯಕ್ಷ ಸತೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಶಾರದ ಕಾರಂತ್ ನಿಧನ

ಶಾರದ ಕಾರಂತ್
    ಭದ್ರಾವತಿ, ಡಿ. ೨೯: ನಗರಸಭೆ ವಾರ್ಡ್ ನಂ.೨, ಬಿ.ಎಚ್ ರಸ್ತೆ ನಿವಾಸಿ ಶಾರದ ಕಾರಂತ್(೬೮) ಬುಧವಾರ ನಿಧನ ಹೊಂದಿದರು.
    ಶಾರದ ಅವರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಿಎಸ್‌ಎನ್‌ಎಲ್ ಮಳಿಗೆಯ ಗಣೇಶ್ ಕಾರಂತ್ ಸೇರಿದಂತೆ ೩ ಗಂಡು ಹಾಗು ೩ ಹೆಣ್ಣು ಮಕ್ಕಳನ್ನು ಹೊಂದಿದ್ದರು. ಮೃತರ ಅಂತ್ಯಕ್ರಿಯೆ ಹುತ್ತಾ ಕಾಲೋನಿ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು. ಮೃತರ ನಿಧನಕ್ಕೆ ನಗರದ ಅನೇಕ ನಗರದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಸರ್ಕಾರ ಸರ್ವರ್ ಸಮಸ್ಯೆ ನಿವಾರಿಸಲು ಕ್ರಮ ಕೈಗೊಳ್ಳಲಿ

ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ


ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಬುಧವಾರ ಭದ್ರಾವತಿಯಲ್ಲಿ ಪಡಿತರ ವಿತರಕರ ಸಂಘದ ಪ್ರಮುಖರನ್ನು ಭೇಟಿ ಮಾಡಿ ಮಾತನಾಡಿದರು.
    ಭದ್ರಾವತಿ, ಡಿ. ೨೯: ಪಡಿತರ ವಿತರಕರಿಗೆ ಸರ್ವರ್ ಸಮಸ್ಯೆ ದೊಡ್ಡ ಸಮಸ್ಯೆಯಾಗಿದ್ದು, ರಾಜ್ಯ ಸರ್ಕಾರ ಪ್ರತಿ ಜಿಲ್ಲೆಗಳಲ್ಲೂ ಒಂದೊಂದು ಸರ್ವರ್ ಕೇಂದ್ರಗಳನ್ನು ತೆರೆಯುವಂತೆ ಸರ್ಕಾರಿ ಪಡಿತರ ವಿತರಕರ ಸಂಘದ ರಾಜ್ಯಾಧ್ಯಕ್ಷ ಟಿ. ಕೃಷ್ಣಪ್ಪ ಮನವಿ ಮಾಡಿದರು.
    ಅವರು ಬುಧವಾರ ನಗರದ ಪಡಿತರ ವಿತರಕರ ಸಂಘದ ಪ್ರಮುಖರನ್ನು ಭೇಟಿ ಮಾಡಿ ಮಾತನಾಡಿದರು.
    ಸರ್ಕಾರ ಮೊದಲು ಸರ್ವರ್ ಸಮಸ್ಯೆ ಬಗೆಹರಿಸಬೇಕು. ಸರ್ವರ್ ಸಮಸ್ಯೆಯಿಂದಾಗಿ ಕೂಲಿಗಾರರು, ಬಡ ಕಾರ್ಮಿಕರು ಹಾಗು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರು ತೊಂದರೆ ಅನುಭವಿಸುವಂತಾಗಿದೆ. ಪ್ರಸ್ತುತ ರಾಜ್ಯದಲ್ಲಿ ೪.೭೦ ಕೋಟಿ ಜನರಿಗೆ ಪಡಿತರ ವಿತರಿಸಲಾಗುತ್ತಿದೆ. ದೊಡ್ಡಮಟ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರೂ ಸಹ ಬೆಂಗಳೂರು, ಗುಲ್ಬರ್ಗ ಮತ್ತು ಮೈಸೂರು-ಬೆಳಗಾವಿ ಸೇರಿ ಒಟ್ಟು ೩ ಕಡೆ ಮಾತ್ರ ಸರ್ವರ್ ಕೇಂದ್ರಗಳನ್ನು ಸರ್ಕಾರ ತೆರೆದಿದೆ. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಸರ್ವರ್ ಕೇಂದ್ರಗಳನ್ನು ತೆರೆಯುವುದರಿಂದ ಹೆಚ್ಚಿನ ಅನುಕೂಲವಾಗಲಿದೆ ಎಂದರು.
    ಪಡಿತರ ವಿತರಕರು ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ.  ತಾಂತ್ರಿಕ ಸಮಸ್ಯೆಗಳಿಗೆ ಇಲಾಖೆಗಳ ಅಧಿಕಾರಿಗಳು ವಿತರಕರನ್ನು ಹೊಣೆಗಾರರನ್ನಾಗಿ ಮಾಡುತ್ತಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಯಾವುದೇ ಕಾರಣಕ್ಕೂ ವಿತರಕರನ್ನು ಹೊಣೆಗಾರರನ್ನಾಗಿ ಮಾಡದಿರುವಂತೆ ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ಎಚ್ಚರಿಕೆ ಸಹ ನೀಡಲಾಗಿದೆ ಎಂದರು.
    ರಾಜ್ಯದಲ್ಲಿ ವಿತರಕರಿಗೆ ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಂದ ನಿಗದಿತ ಸಮಯಕ್ಕೆ ಕಮಿಷನ್ ಹಣ ಬರುತ್ತಿಲ್ಲ. ಈ ಹಿಂದೆ ಸಿದ್ದರಾಮಯ್ಯನವರ ಅವಧಿಯಲ್ಲಿ ಈ ರೀತಿ ಸಮಸ್ಯೆ ಕಂಡು ಬರುತ್ತಿರಲಿಲ್ಲ. ಈಗಿನ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ತಿಂಗಳ ಆರಂಭದಲ್ಲಿಯೇ ಕಮಿಷನ್ ಹಣ ನೀಡುವ ವ್ಯವಸ್ಥೆ ಕೈಗೊಳ್ಳಬೇಕೆಂದು ಆಗ್ರಹಿಸಿದರು.
    ಪಡಿತರ ವಿತರಕರ ಸಂಘದ ಪ್ರಮುಖರಾದ ಸಿದ್ದಲಿಂಗಯ್ಯ, ರಾಜು, ಯೋಗೇಶ್‌ನಾಯ್ಕ, ಕುಮಾರ್, ಮುಖಂಡರಾದ ಶ್ರೀನಿವಾಸ್, ನಗರಸಭೆ ಮಾಜಿ ಅಧ್ಯಕ್ಷ ಸಿ.ಎನ್ ರಾಮಕೃಷ್ಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.