Saturday, July 24, 2021

೧೨ ಕೊರೋನಾ ಸೋಂಕು : ೩ ಬಲಿ

   ಭದ್ರಾವತಿ, ಜು. ೨೪: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಮಾಣದಲ್ಲಿ ಪುನಃ ಏರಿಕೆ ಕಂಡು ಬಂದಿದ್ದು, ಶನಿವಾರ ೧೨ ಪ್ರಕರಣಗಳು ಪತ್ತೆಯಾಗಿವೆ. ಸೋಂಕಿಗೆ ೩ ಮಂದಿ ಬಲಿಯಾಗಿದ್ದು, ಇದರಿಂದಾಗಿ ಆತಂಕ ಹೆಚ್ಚಾಗಿದೆ.
    ಶುಕ್ರವಾರ ಕೇವಲ ೩ ಪ್ರಕರಣಗಳು ಪತ್ತೆಯಾಗಿದ್ದು, ಒಂದೇ ದಿನಕ್ಕೆ ೯ ಪ್ರಕರಣಗಳು ಹೆಚ್ಚಾಗಿವೆ. ಗ್ರಾಮಾಂತರ ಭಾಗದಲ್ಲಿ ೧ ಹಾಗು ನಗರ ಭಾಗದಲ್ಲಿ ೧೧ ಪ್ರಕರಣಗಳು ಪತ್ತೆಯಾಗಿವೆ. ಗ್ರಾಮಾಂತರ ಭಾಗದಲ್ಲಿ ಒಬ್ಬರು ಹಾಗು ನಗರ ಭಾಗದಲ್ಲಿ ಇಬ್ಬರು ಸೇರಿದಂತೆ ಒಟ್ಟು ೩ ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

೮೦೦ ವರ್ಷಗಳ ಪುರಾತನ ಸರ್ಕಾರಿ ಹಿರೇಕೆರೆ ಭರ್ತಿ

ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ಭದ್ರಾವತಿ ನಗರಸಭೆ ವ್ಯಾಪ್ತಿಯ ತಮ್ಮಣ್ಣ ಕಾಲೋನಿಯ ಪುರಾತನ ಸರ್ಕಾರಿ ಹಿರೇಕೆರೆ ಕೋಡಿ ಹೊಡೆದಿದ್ದು, ಸಮೀಪದಲ್ಲಿರುವ ರಸ್ತೆ ಮೇಲೆ ನೀರು ಹರಿಯುತ್ತಿರುವುದು.
    ಭದ್ರಾವತಿ, ಜು. ೨೪: ಸುಮಾರು ೮೦೦ ವರ್ಷಗಳ ಇತಿಹಾಸ ಹೊಂದಿರುವ ನಗರಸಭೆ ವ್ಯಾಪ್ತಿಯ ತಮ್ಮಣ್ಣ ಕಾಲೋನಿಯ ಪುರಾತನ ಸರ್ಕಾರಿ ಹಿರೇಕೆರೆ ಕೋಡಿ ಹೊಡೆದಿದ್ದು, ಸಮೀಪದಲ್ಲಿರುವ ರಸ್ತೆ ಮೇಲೆ ನೀರು ಹರಿಯುತ್ತಿದೆ. ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ.
    ಈ ಸರ್ಕಾರಿ ಹಿರೇಕೆರೆ ಸರ್ವೆ ನಂ. ೧೧೨ರಲ್ಲಿ ೫೦ ಎಕರೆ, ೨೦ ಗುಂಟೆ ವಿಸ್ತೀರ್ಣ ಹೊಂದಿದ್ದು, ನಗರಸಭಾ ವ್ಯಾಪ್ತಿಯಲ್ಲಿರುವ ಬೃಹತ್ ಕೆರೆಗಳಲ್ಲಿ ಇದು ಸಹ ಒಂದಾಗಿದೆ. ಕಳೆದ ೫-೬ ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಕೆರೆ ಸಂಪೂರ್ಣವಾಗಿ ತುಂಬಿಕೊಂಡು ಕೋಡಿ ಹೊಡೆದಿದೆ. ಕೆರೆ ಸಮೀಪದಲ್ಲಿರುವ ರಸ್ತೆ ಮೇಲೆ ನೀರು ಹರಿಯುತ್ತಿದೆ. ಅಲ್ಲದೆ ಕಸಕಡ್ಡಿ ಕಟ್ಟಿಕೊಂಡಿರುವ ಹಿನ್ನಲೆಯಲ್ಲಿ ನೀರು ಸರಾಗವಾಗಿ ಮುಂದೆ ಹರಿಯದೆ ನಿಂತುಕೊಂಡಿದ್ದು, ಇದರಿಂದಾಗಿ ಸಂಚಾರಕ್ಕೆ ತೊಂದರೆಯಾಗಿದೆ. ಸ್ಥಳೀಯರು ಜೆಸಿಬಿ ಮೂಲಕ ಕಸಕಡ್ಡಿ ತೆರವುಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಕ್ರಮ ಕೈಗೊಂಡಿದ್ದಾರೆ.

ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಸತ್ಯನಾರಾಯಣ ಪೂಜೆ, ಗುರುಪಾದುಕೆ ಪೂಜೆ

ಗುರು ಪೂರ್ಣಿಮೆ ಅಂಗವಾಗಿ ಶನಿವಾರ ಭದ್ರಾವತಿ ನ್ಯೂಟೌನ್ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಸತ್ಯನಾರಾಯಣ ಪೂಜೆ, ಗುರುಪಾದುಕೆ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
   ಭದ್ರಾವತಿ, ಜು. ೨೪: ಗುರು ಪೂರ್ಣಿಮೆ ಅಂಗವಾಗಿ ಶನಿವಾರ ನಗರದ ನ್ಯೂಟೌನ್ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಸತ್ಯನಾರಾಯಣ ಪೂಜೆ, ಗುರುಪಾದುಕೆ ಪೂಜೆ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು.
    ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಪ್ರತಿದಿನ ಪೂಜಾ ಕಾರ್ಯಕ್ರಮಗಳು ಜರಗುತ್ತಿದ್ದು, ಹಬ್ಬ ಹರಿದಿನಗಳನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
    ಪ್ರತಿವರ್ಷ ಸೇವಾ ಕ್ಷೇತ್ರದಲ್ಲಿ ಗುರು ಪೂರ್ಣೆಮೆಯನ್ನು ವಿಶೇಷವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ವಿದ್ಯಾರ್ಥಿಗಳಿಂದ ಗುರುಗಳ ಪಾದ ಪೂಜೆ ನೇರವೇರಿಸುವುದು ವಿಶೇಷವಾಗಿದೆ. ಈ ಬಾರಿ ಕೋವಿಡ್-೧೯ರ ಹಿನ್ನಲೆಯಲ್ಲಿ ಶ್ರೀ ಶಿವ ಸಾಯಿ ಕೃಪಾ ಧಾಮದಲ್ಲಿ ಗುರು ಪೂರ್ಣಿಮೆಯನ್ನು ಆಚರಿಸಲಾಯಿತು.
   ಶಿವಲಿಂಗ ಹಾಗು ಶಿರಡಿ ಸಾಯಿಬಾಬಾರವರ ಪ್ರತಿಮೆಗಳಿಗೆ ವಿಶೇಷ ಆಲಂಕಾರ ಕೈಗೊಳ್ಳಲಾಗಿತ್ತು. ಪಲ್ಲಕ್ಕಿ ಸೇವೆ, ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳು ಜರುಗಿದವು.

ಮೆಸ್ಕಾಂ ವಿಭಾಗೀಯ ಕಛೇರಿಯಿಂದ ಹೆಚ್ಚಿನ ಅನುಕೂಲ : ಬಿ.ಕೆ ಸಂಗಮೇಶ್ವರ್

ಭದ್ರಾವತಿಯಲ್ಲಿ ಜೆಪಿಎಸ್ ಕಾಲೋನಿಯಲ್ಲಿ ಸುಮಾರು ೪೮೧.೬೩ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಸ್ಕಾಂ ವಿಭಾಗಿಯ ಕಛೇರಿಯ ನೂತನ ಕಟ್ಟಡವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಭದ್ರಾವತಿ, ಜು. ೨೪: ನಗರದಲ್ಲಿ ಮೆಸ್ಕಾಂ ವಿಭಾಗೀಯ ಕಛೇರಿ ಆರಂಭದಿಂದಾಗಿ ವಿದ್ಯುತ್ ಸರಬರಾಜಿಗೆ ಸಂಬಂಧಿಸಿದ ಬಹುತೇಕ ಸಮಸ್ಯೆಗಳು ಬಗೆಹರಿದಿವೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
   ಅವರು ಶನಿವಾರ ಜೆಪಿಎಸ್ ಕಾಲೋನಿಯಲ್ಲಿ ಸುಮಾರು ೪೮೧.೬೩ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಮೆಸ್ಕಾಂ ವಿಭಾಗಿಯ ಕಛೇರಿಯ ನೂತನ ಕಟ್ಟಡದ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
    ಪ್ರತಿಯೊಂದು ಕಾರ್ಯಕ್ಕೂ ಶಿವಮೊಗ್ಗಕ್ಕೆ ತೆರಳುವಂತಾಗಿದೆ. ಇಲ್ಲಿಯೇ ವಿಭಾಗೀಯ ಕಛೇರಿ ಆರಂಭಗೊಂಡಲ್ಲಿ ಹೆಚ್ಚಿನ ಅನುಕೂಲವಾಗಲಿದೆ ಎಂದು ಇಲ್ಲಿನ ಮೆಸ್ಕಾಂ ಅಧಿಕಾರಿಗಳು ಈ ಹಿಂದೆ ಹಲವು ಬಾರಿ ನನ್ನ ಗಮನಕ್ಕೆ ತರುವ ಮೂಲಕ ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಅಂದಿನ ಇಂಧನ ಖಾತೆ ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗಿತ್ತು. ಇದರ ಪರಿಣಾಮ ವಿಭಾಗೀಯ ಕಛೇರಿ ಆರಂಭಕ್ಕೆ ಮಂಜೂರಾತಿ ಲಭಿಸಿತು. ನಂತರ ಬಂದ ಬಿಜೆಪಿ ಸರ್ಕಾರ ನೂತನ ಕಟ್ಟಡ ನಿರ್ಮಿಸುವಲ್ಲಿ ಯಶಸ್ವಿಯಾಗಿದೆ. ಈ ಹಿನ್ನಲೆಯಲ್ಲಿ ಸಹಕರಿಸಿದ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
    ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಅವಧಿಯಲ್ಲಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ. ಆದರೆ ಭದ್ರಾವತಿ ತಾಲೂಕಿನಲ್ಲಿ ನಿರೀಕ್ಷಿತ ಮಟ್ಟದಲ್ಲಿ ನಡೆದಿಲ್ಲ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನ ಗಮನಿಸಿದಾಗ ಇದು ಅರ್ಥವಾಗುತ್ತದೆ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು.  
   ಇದಕ್ಕೂ ಮೊದಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವರ್ಚ್ಯೂವಲ್ ಹೋಸ್ಟಿಂಗ್ ಮೂಲಕ ನೂತನ ಕಟ್ಟಡ ಉದ್ಘಾಟಿಸಿದರು. ಮೆಸ್ಕಾಂ ಶಿವಮೊಗ್ಗ ವೃತ್ತದ ಅಧೀಕ್ಷಕ ಇಂಜಿನಿಯರ್ ಶಿವಪ್ರಸಾದ್, ತಹಸೀಲ್ದಾರ್ ಆರ್. ಪ್ರದೀಪ್, ನಗರಸಭೆ ಪೌರಾಯುಕ್ತ ಕೆ. ಪರಮೇಶ್, ಪೊಲೀಸ್ ಉಪಾಧೀಕ್ಷಕ, ಐಪಿಎಸ್ ಅಧಿಕಾರಿ ಸಾಹಿಲ್ ಬಾಗ್ಲಾ, ಮೆಸ್ಕಾಂ ಸ್ಥಳೀಯ ಕಾರ್ಯನಿರ್ವಾಹಕ ಇಂಜಿನಿಯರ್ ಕೆ.ಎಸ್ ಕಿಶೋರ್, ನಗರಸಭಾ ಸದಸ್ಯರಾದ ಜಯಶೀಲ, ವಿಜಯ, ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ನಿರ್ದೇಶಕ ಮಂಗೋಟೆ ರುದ್ರೇಶ್, ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಜಿ. ಆನಂದಕುಮಾರ್, ಹಟ್ಟಿ ಚಿನ್ನದ ಗಣಿ ಕಂಪನಿ ನಿರ್ದೇಶಕ ಕೂಡ್ಲಿಗೆರೆ ಎಸ್. ಹಾಲೇಶ್, ರೈಲ್ವೆ ಸಲಹಾ ಸಮಿತಿ ಸದಸ್ಯ ಎನ್. ವಿಶ್ವನಾಥರಾವ್ ಹಾಗು ಬಿಜೆಪಿ ಪಕ್ಷದ ಮುಖಂಡರು ಮತ್ತು ಮೆಸ್ಕಾಂ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.