Wednesday, May 5, 2021

ಭದ್ರಾವತಿ ವಿಐಎಸ್ಎಲ್ ಸ ಕಾರ್ಖಾನೆಗೆ ಸಚಿವರ ಭೇಟಿ

 ಭದ್ರಾವತಿ : ಕೊರೋನಾ ಸೋಂಕು 2ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್ ಕೊರತೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿರುವ ಜಿಲ್ಲಾಡಾಳಿತ ಸಚಿವರ ನೇತೃತ್ವದಲ್ಲಿ ಗುರುವಾರ ನಗರದ ವಿಐಎಸ್ ಎಲ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.   ಸಚಿವರಾದ ಜಗದೀಶ್ ಶೆಟ್ಟರ್, ಕೆ ಎಸ್ ಈಶ್ವರಪ್ಪ ವಿಐಎಸ್ಎಲ್ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಂಎಸ್ ಪಿಎಲ್ ಗ್ಯಾಸ್ ಉತ್ಪಾದನಾ  ಕಂಪೆನಿಯೊಂದಿಗೆ  ಮಾತುಕತೆ ನಡೆಸಿದರು.  ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಶಾಸಕ ಬಿ.ಕೆ ಸಂಗಮೇಶ್ವರ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎಂ.ಎಲ್ ವೈಶಾಲಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

       

ಬಿಜೆಪಿ ಕಾರ್ಯಕರ್ತ ಹತ್ಯೆ ಖಂಡಿಸಿ ಪ್ರತಿಭಟನೆ

ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ  ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಬುಧವಾರ ಭದ್ರಾವತಿ ನ್ಯೂಟೌನ್ ಜಯಶ್ರೀ ವೃತ್ತದಲ್ಲಿ ಬಿಜೆಪಿ ಜನ್ನಾಪುರ ಮಹಾಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
    ಭದ್ರಾವತಿ, ಮೇ. ೫: ಪಶ್ಚಿಮ ಬಂಗಾಳದಲ್ಲಿ ಭಾರತೀಯ ಜನತಾ  ಪಕ್ಷದ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆಯನ್ನು ಖಂಡಿಸಿ ಬುಧವಾರ ನಗರದ ನ್ಯೂಟೌನ್ ಜಯಶ್ರೀ ವೃತ್ತದಲ್ಲಿ ಬಿಜೆಪಿ ಜನ್ನಾಪುರ ಮಹಾಶಕ್ತಿ ಕೇಂದ್ರದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
      ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಜನ್ನಾಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಕುಮಾರ್, ಪ್ರಮುಖರಾದ ಶಿವಕುಮಾರ್, ಸುರೇಶ್, ಗಾಯತ್ರಿ,  ಚಿನ್ಮ, ಮಂಜುನಾಥ್,  ಶಿವಕುಮಾರ್ ರವರು, ರೂಪ ನಾಗರಾಜ್, ಬೂತ್ ಅಧ್ಯಕ್ಷ ರಕ್ಷಿತ್, ಪ್ರದೀಪ್, ಕಿರಣ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
        ಹೊಸಮನೆ ಶಕ್ತಿ ಕೇಂದ್ರ :
    ಹೊಸಮನೆ ಶಕ್ತಿ ಕೇಂದ್ರದ ವತಿಯಿಂದ ಹೊಸಮನೆ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು. ಹೊಸಮನೆ ಶಕ್ತಿ ಕೇಂದ್ರದ ಅಧ್ಯಕ್ಷ ರಾಮನಾಥ್ ಬರ್ಗೆ, ಮಂಡಲ ಅಧ್ಯಕ್ಷ ಎಂ. ಪ್ರಭಾಕರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ಲಿಕ್ವಿಡ್ ಆಕ್ಸಿಜನ್ : ದಿ ಸದರನ್ ಗ್ಯಾಸ್ ಲಿಮಿಟೆಡ್ ಜೊತೆಗೆ ಜಿಲ್ಲಾಡಳಿತ ಚರ್ಚಿಸಲಿ

ಭದ್ರಾವತಿ ಎಂಪಿಎಂ ಕಾರ್ಖಾನೆ ಸಮೀಪದಲ್ಲಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್.
    ಭದ್ರಾವತಿ, ಮೇ. ೫: ಕೊರೋನಾ ೨ನೇ ಅಲೆ ಪರಿಣಾಮ ವೈದ್ಯಕೀಯ ಉದ್ದೇಶಗಳಿಗೆ ಬಳಸುವ ಲಿಕ್ವಿಡ್ ಆಕ್ಸಿಜನ್(ದ್ರವ ರೂಪದ ಆಮ್ಲಜನಕ)ಗೆ ಇದೀಗ ಹೆಚ್ಚಿನ ಬೇಡಿಕೆಗಳು ಬರುತ್ತಿದ್ದು, ಜಿಲ್ಲೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಕೊರತೆ ಎದುರಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಗರದ ದಿ ಸದರನ್ ಗ್ಯಾಸ್ ಲಿಮಿಟೆಡ್‌ನಲ್ಲಿ ಪುನಃ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವ ಸಂಬಂಧ ಕಂಪನಿಯೊಂದಿಗೆ  ಚರ್ಚಿಸುವುದು ಸೂಕ್ತವಾಗಿದೆ.
     ಜಿಲ್ಲೆಯಲ್ಲಿ ಲಿಕ್ವಿಡ್ ಆಕ್ಸಿಜನ್ ಕೊರತೆ ಉಂಟಾಗದಂತೆ ಎಚ್ಚರ ವಹಿಸಿರುವ ಜಿಲ್ಲಾಡಳಿತ ಈಗಾಗಲೇ ನಗರದ ವಿಐಎಸ್‌ಎಲ್ ಕಾರ್ಖಾನೆಯಲ್ಲಿರುವ ಬಾಲ್ದೋಟ ಒಡೆತನದ ಎಂಎಸ್‌ಪಿಎಲ್ ಖಾಸಗಿ ಆಕ್ಸಿಜನ್ ಉತ್ಪಾದನಾ ಕಂಪನಿಯೊಂದಿಗೆ ಸದ್ಯಕ್ಕೆ ಮಾತುಕತೆ ನಡೆಸಿದೆ. ಆದರೆ ಉತ್ಪಾದನೆ ಇನ್ನೂ ಆರಂಭಗೊಂಡಿಲ್ಲ.  ಕಳೆದ ವರ್ಷ ಕೊರೋನಾ ಸೋಂಕು ಕಾಣಿಸಿಕೊಂಡ ಆರಂಭದಲ್ಲಿಯೇ ಈ ಕಾರ್ಖಾನೆಯನ್ನು ಪುನಃ ಆರಂಭಿಸುವ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪನವರ ನೇತೃತ್ವದಲ್ಲಿ ಮಾತುಕತೆಗಳು ನಡೆದಿದ್ದವು. ಆದರೆ ಹಲವು ಕಾರಣಗಳಿಂದ ಆರಂಭಗೊಂಡಿರಲಿಲ್ಲ. ಇದೀಗ ತುರ್ತಾಗಿ ಆರಂಭಿಸುವ ಲಕ್ಷಣಗಳು ಕಂಡು ಬರುತ್ತಿವೆ.  ಒಂದು ವೇಳೆ ಉತ್ಪಾದನೆ ಆರಂಭಗೊಂಡರೂ ಸಹ ಹಲವು ಸಮಸ್ಯೆಗಳು ಎದುರಾಗಲಿವೆ. ಮುಖ್ಯವಾಗಿ ಈ ಕಂಪನಿ ಉತ್ಪಾದಿಸುತ್ತಿರುವುದು ಕಾರ್ಖಾನೆಗಳಿಗೆ ಪೂರೈಸುವ ಆಕ್ಸಿಜನ್ ಆಗಿದ್ದು, ಇದನ್ನು ವೈದ್ಯಕೀಯ ಉದ್ದೇಶಗಳಿಗೆ ಬಳಸಲು ದ್ರವ ರೂಪಕ್ಕೆ ಪರಿವರ್ತಿಸಬೇಕಾಗಿದೆ. ಆದರೆ ಈ ವ್ಯವಸ್ಥೆ ಕಾರ್ಖಾನೆ ಹೊಂದಿಲ್ಲ. ಈ ಹಿನ್ನಲೆಯಲ್ಲಿ ಕಾರ್ಖಾನೆ ಆರಂಭಗೊಂಡರೂ ಸಹ ಆಧುನೀಕರಣಗೊಳಿಸಬೇಕಾಗಿದೆ. ಈ ಕುರಿತಂತೆ ಚರ್ಚಿಸಲು ಸಚಿವ ಜಗದೀಶ್ ಶೆಟ್ಟರು ಗುರುವಾರ ಕಾರ್ಖಾನೆಗೆ ಭೇಟಿ ನೀಡುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ. ಒಟ್ಟಾರೆ ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡು ಉತ್ಪಾದನೆ ಆರಂಭಗೊಳ್ಳಲು ಕನಿಷ್ಠ ೫-೬ ದಿನಗಳಾದರೂ ಬೇಕಾಗುತ್ತದೆ.
    ಇದು ಒಂದೆಡೆ ಇರಲಿ, ಮತ್ತೊಂದೆಡೆ ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಕಾಗದ ಕಾರ್ಖಾನೆ ಸಮೀಪದಲ್ಲಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್‌ನಲ್ಲಿ ಪ್ರಸ್ತುತ ವೈದಕೀಯ ಉದ್ದೇಶಗಳಿಗೆ ಬಳಸುವ ಲಿಕ್ವಿಡ್ ಆಕ್ಸಿಜನ್ ಉತ್ಪಾದನೆ ಸ್ಥಗಿತಗೊಂಡಿದ್ದು, ಈ ಕಾರ್ಖಾನೆಯಲ್ಲಿ ಆರಂಭದಿಂದಲೂ ಒಡಂಬಡಿಕೆ ಮಾಡಿಕೊಂಡು ಲಿಕ್ವಿಡ್ ಆಕ್ಸಿಜನ್ ಖರೀದಿಸುತ್ತಿರುವ ಆಸ್ಪತ್ರೆಗಳಿಗೆ ಪ್ರಸ್ತುತ ಕಂಪನಿಯ ಇತರೆ ಘಟಕಗಳಿಂದ ಲಿಕ್ವಿಡ್ ಆಕ್ಸಿಜನ್ ಸರಬರಾಜು ಮಾಡಿಕೊಂಡು ಪೂರೈಸಲಾಗುತ್ತಿದೆ. ಇದೀಗ ಹೆಚ್ಚಿನ ಬೇಡಿಕೆಗಳು ಬರುತ್ತಿರುವ ಕಾರಣ ಕಾರ್ಖಾನೆಯಲ್ಲಿ ಪುನಃ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವ ಸಾಧ್ಯತೆ ಹೆಚ್ಚಾಗಿದೆ.
    ೧೯೭೭ರಲ್ಲಿ ಆರಂಭಗೊಂಡಿರುವ ದಿ ಸದರನ್ ಗ್ಯಾಸ್ ಲಿಮಿಟೆಡ್ ೪ ದಶಕಗಳಿಂದ ವೈದ್ಯಕೀಯ ಉದ್ದೇಶಗಳಿಗೆ ಹಾಗು ಕಾರ್ಖಾನೆಗಳಿಗೆ ಅಗತ್ಯವಿರುವ ಆಕ್ಸಿಜನ್ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿದೆ. ಈ ಹಿನ್ನಲೆಯಲ್ಲಿ ಈ ಭಾಗದ ಮಧ್ಯಮ ಹಾಗು ಸಣ್ಣ ಪ್ರಮಾಣದ ಉದ್ಯಮಗಳು, ಆಸ್ಪತ್ರೆಗಳು ಆಕ್ಸಿಜನ್‌ಗಾಗಿ ಈ ಕಾರ್ಖಾನೆಯನ್ನು ಅವಲಂಬಿಸಿವೆ. ಜಿಲ್ಲಾಡಳಿತ ತಕ್ಷಣ ಈ ಕಾರ್ಖಾನೆ ಆಡಳಿತ ಮಂಡಳಿಯನ್ನು ಸಂಪರ್ಕಿಸಿ ತುರ್ತಾಗಿ ಲಿಕ್ವಿಡ್ ಆಕ್ಸಿಜನ್ ಉತ್ಪಾದಿಸುವ ಸಂಬಂಧ ಚರ್ಚಿಸುವುದು ಸೂಕ್ತ ಎಂಬ ಸಲಹೆಗಳು ವ್ಯಕ್ತವಾಗುತ್ತಿವೆ.



ಗೆಲುವಿನ ಅಂತರದಲ್ಲೂ ಮಹಿಳೆ ಮೊದಲು : ವಾರ್ಡ್ ನಂ.೨೧ರ ವಿಜಯ ಸಾಧನೆ

ಭದ್ರಾವತಿ ವಾರ್ಡ್ ನಂ.೨೧ರ ಜೆಡಿಎಸ್ ಪಕ್ಷದ ಹಿರಿಯ ಮಹಿಳೆ ವಿಜಯ ೩೪ ವಾರ್ಡ್‌ಗಳ ಪೈಕಿ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದು,  ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗು ಬೆಂಬಲಿಗರು ವಿಜಯರನ್ನು ಅಭಿನಂದಿಸಿದರು.
   ಭದ್ರಾವತಿ: ಈ ಬಾರಿ ನಗರಸಭೆ ಚುನಾವಣೆಯಲ್ಲಿ ಹಲವು ದಾಖಲೆಗಳು ರೂಪುಗೊಂಡಿದ್ದು, ಗೆಲುವಿನ ಅಂತರದಲ್ಲೂ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ. ವಾರ್ಡ್ ನಂ.೨೧ರ ಜೆಡಿಎಸ್ ಪಕ್ಷದ ಹಿರಿಯ ಮಹಿಳೆ ವಿಜಯ ೩೪ ವಾರ್ಡ್‌ಗಳ ಪೈಕಿ ಅತಿಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿ ಗಮನ ಸೆಳೆದಿದ್ದಾರೆ.
    ಕಾಗದನಗರ ೬ ಮತ್ತು ೮ನೇ ವಾರ್ಡ್ ವ್ಯಾಪ್ತಿಯ ವಾರ್ಡ್ ನಂ.೨೧ರಲ್ಲಿ ವಿಜಯ ಅವರು ಪುತ್ರ, ಸಮಾಜ ಸೇವಕ ಅಶೋಕ್‌ಕುಮಾರ್ ಹಾಗು ಕುಟುಂಬ ಸದಸ್ಯರ ಸಹಕಾರದೊಂದಿಗೆ ಚುನಾವಣೆಗೆ ಸ್ಪರ್ಧಿಸಿದ್ದು, ಎಲ್ಲರ ನಿರೀಕ್ಷೆಗೂ ಮೀರಿ ಅತಿ ಹೆಚ್ಚು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
     ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ  ಅಭ್ಯರ್ಥಿಗಳು ವಿಜಯ ಅವರಿಗೆ ಪ್ರಬಲ ಪೈಪೋಟಿ ನೀಡಿದ್ದರು. ಅಲ್ಲದೆ ಬಿಜೆಪಿ ಅಭ್ಯರ್ಥಿ ಪರವಾಗಿ ಸ್ವತಃ  ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್ ಈಶ್ವರಪ್ಪ, ಸಂಸದ ಬಿ.ವೈ ರಾಘವೇಂದ್ರ ಸೇರಿದಂತೆ ಪ್ರಮುಖರು ಪ್ರಚಾರ ನಡೆಸಿದ್ದರು. ಅಲ್ಲದೆ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಪ್ರಚಾರ ನಡೆಸಿದ್ದರು. ಈ ನಡೆವೆಯೂ ವಿಜಯರವರು ಒಟ್ಟು ೧೨೮೦ ಮತಗಳನ್ನು ಪಡೆಯುವ ಮೂಲಕ ದಾಖಲೆಯನ್ನು ನಿರ್ಮಿಸಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕೇವಲ ೩೮೬ ಮತಗಳನ್ನು, ಬಿಜೆಪಿ ಅಭ್ಯರ್ಥಿ ೧೭೬ ಮತಗಳನ್ನು  ಪಡೆದುಕೊಂಡಿದ್ದಾರೆ. ವಿಜಯರವರು ಒಟ್ಟು ೮೯೪ ಅತಿ ಹೆಚ್ಚು ಮತಗಳ ಅಂತರದಿಂದ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ.
    ಪತ್ರಿಕೆಯೊಂದಿಗೆ ಮಾತನಾಡಿದ ವಿಜಯರವರು, ವಾರ್ಡ್‌ನಲ್ಲಿರುವ ಸಮಸ್ಯೆಗಳನ್ನು ಚನ್ನಾಗಿ ಅರಿತುಕೊಂಡಿದ್ದೇನೆ. ಎಲ್ಲಾ ಜನರೊಂದಿಗೆ ಆತ್ಮೀಯತೆಯಿಂದ ಗುರುತಿಸಿಕೊಂಡಿದ್ದೇನೆ. ನನ್ನ ಮೇಲೆ ವಿಶ್ವಾಸವಿಟ್ಟು ಹೆಚ್ಚಿನ ಮತಗಳನ್ನು ನೀಡುವ ಮೂಲಕ ಗೆಲುವಿಗೆ ಕಾರಣರಾಗಿರುವ ಮತದಾರರ ಆಶಯದಂತೆ ನಡೆದುಕೊಳ್ಳುತ್ತೇನೆ. ಲಭ್ಯವಾಗುವ ನಗರಸಭೆ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಂಡು ವಾರ್ಡ್ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.