ಭದ್ರಾವತಿ ವಿಐಎಸ್‌ಎಲ್ ಕಾರ್ಖಾನೆ
ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಗುತ್ತಿಗೆ ಕಾರ್ಮಿಕ ಸಂಘ(ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್)ದ 3 ವರ್ಷಗಳ ಅವಧಿಗೆ ಮೇ.25ರಂದು ಚುನಾವಣೆ ನಡೆಯುತ್ತಿದ್ದು, ಹಲವು ಸಂಕಷ್ಟಗಳ ನಡುವೆ ಗುತ್ತಿಗೆ ಕಾರ್ಮಿಕರು ಬಲಿಷ್ಠ ಸಂಘಟನೆಗಾಗಿ ತಮ್ಮ ನಾಯಕರ ಆಯ್ಕೆಯಲ್ಲಿ ತೊಡಗಿರುವುದು ಗಮನ ಸೆಳೆಯುತ್ತಿದೆ.
ಸುಮಾರು 30 ತಿಂಗಳಿನಿಂದ ಕಾರ್ಖಾನೆ ಮುಚ್ಚುವ ಪ್ರಕ್ರಿಯೆ ಹಿಂಪಡೆಯುವಂತೆ, ಅಗತ್ಯವಿರುವ ಬಂಡವಾಳ ತೊಡಗಿಸುವಂತೆ, ಗುತ್ತಿಗೆ ಕಾರ್ಮಿಕರಿಗೆ ಪೂರ್ಣಾವಧಿ ಉದ್ಯೋಗ ಕಲ್ಪಿಸಿಕೊಡುವಂತೆ ಹಾಗು ಇನ್ನಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಖಾನೆ ಮುಂಭಾಗದಲ್ಲಿ ನಿರಂತರವಾಗಿ ಹೋರಾಟದಲ್ಲಿ ತೊಡಗಿರುವ ಗುತ್ತಿಗೆ ಕಾರ್ಮಿಕರು ಇದೀಗ ತಮ್ಮ ಹೊಸ ನಾಯಕರನ್ನು ಆಯ್ಕೆ ಮಾಡಿಕೊಳ್ಳುವ ಕಾರ್ಯದಲ್ಲಿ ನಿರತರಾಗಿದ್ದಾರೆ.
ಒಟ್ಟು ಕಾರ್ಖಾನೆಯಲ್ಲಿ 1300ಕ್ಕೂ ಅಧಿಕ ಗುತ್ತಿಗೆ ಕಾರ್ಮಿಕರಿದ್ದು, ಈ ಪೈಕಿ ಸಂಘದಲ್ಲಿ 1044 ಮಂದಿ ಸದಸ್ಯರಿದ್ದಾರೆ. ಉಳಿದಂತೆ ಗುತ್ತಿಗೆ ಕಾರ್ಮಿಕರು ಎಐಟಿಯುಸಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ತಮ್ಮ 3 ವರ್ಷಗಳ ಅಧಿಕಾರಾವಧಿಯಲ್ಲಿ ಬಹುತೇಕ ಅವಧಿ ಹೋರಾಟದಲ್ಲಿಯೇ ಕಳೆದಿದ್ದಾರೆ. ಆದರೆ ಕಾರ್ಖಾನೆ ಪರಿಸ್ಥಿತಿ ಮಾತ್ರ ಬದಲಾಗಿಲ್ಲ. ಆಡಳಿತ ನಡೆಸುತ್ತಿರುವ ಸರ್ಕಾರಗಳಿಂದ ಕೇವಲ ಭರವಸೆಗಳ ಮಹಾಪೂರವೇ ಹರಿದು ಬಂದಿದೆ ಹೊರತು ಯಾವುದೇ ಭರವಸೆ ಇದುವರೆಗೂ ಈಡೇರಿಲ್ಲ ಎಂಬುದು ವಿಪರ್ಯಾಸದ ಸಂಗತಿಯಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಪುನಃ ಹೊಸ ನಾಯಕರ ಆಯ್ಕೆಯಲ್ಲಿ ಗುತ್ತಿಗೆ ಕಾರ್ಮಿಕರು ತೊಡಗಿಸಿಕೊಂಡಿರುವುದು ಕ್ಷೇತ್ರದಲ್ಲಿ ಇದೀಗ ಗಮನ ಸೆಳೆಯುತ್ತಿದೆ.
ಗುರುವಾರ ರಾತ್ರಿ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ಅಂತಿಮ ಪಟ್ಟಿ ಬಿಡುಗಡೆಯಾಗಿದ್ದು, ಮೇ.25ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೂ ನ್ಯೂಟೌನ್ ಸರ್ಕಾರಿ ಕಿರಿಯ ತಾಂತ್ರಿಕ ಶಾಲೆ (ಜೆಟಿಎಸ್)ಯಲ್ಲಿ ಮತದಾನ ನಡೆಯಲಿದ್ದು, ನಂತರ ಮತ ಎಣಿಕೆ ನಡೆಯಲಿದೆ. ಸಹಪ್ರಾಧ್ಯಾಪಕ ಡಾ. ಎಸ್. ಸುಮಂತ್ ಕುಮಾರ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಈ ಬಾರಿ ಅಧ್ಯಕ್ಷ ಸ್ಥಾನಕ್ಕೆ ಸುರೇಶ್ ಮತ್ತು. ಬಿ.ಆರ್ ಸುನಿಲ್ ಕುಮಾರ್ ಸ್ಪರ್ಧಿಸಿದ್ದು, 2 ಉಪಾಧ್ಯಕ್ಷ ಸ್ಥಾನಕ್ಕೆ ವಿನೋದ್ ಕುಮಾರ್, ಮಂಜುನಾಥ್, ಎನ್. ಶ್ರೀನಿವಾಸ್, ಶ್ರೀಧರ್, ನವೀನ್ ಕುಮಾರ್, ಸಂಪತ್ ಕುಮಾರ್, ವೆಂಕಟೇಶ್ ಮತ್ತು ವಿಕ್ಟರ್ ಸೇರಿದಂತೆ ಒಟ್ಟು 8 ಜನ ಹಾಗು ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಕೇಶ್ ಮತ್ತು ಸತೀಶ್ ಕೆ.ಎಸ್ ಸ್ಪರ್ಧಿಸಿದ್ದಾರೆ.
ಉಳಿದಂತೆ ಖಜಾಂಚಿ ಸ್ಥಾನಕ್ಕೆ ಆನಂದ ಮತ್ತು ಶ್ರೀನಿವಾಸ್ ಎಚ್.ಪಿ ಹಾಗೂ ದೇವರಾಜ್ ಒಟ್ಟು 3 ಜನ ಸ್ಪರ್ಧಿಸಿದ್ದಾರೆ. ೩ ಸಹಕಾರ್ಯದರ್ಶಿ ಸ್ಥಾನಗಳಿಗೆ , ಅಂತೋಣಿ ದಾಸ್, ವಾಸುದೇವ ಬಿ.ಟಿ, ಯೋಗಾನಂದ, ಪರಶುರಾಮ್, ಮಂಜುನಾಥ್ ಎನ್.ಬಿ, ತ್ಯಾಗರಾಜ್ ಎಚ್.ಡಿ, ಪ್ರಸನ್ನ ಬಾಬು, ಸಂತೋಷ್ ಕುಮಾರ್, ಕಾಸಿಂವಲಿ ಮತ್ತು ಶೇಷಪ್ಪಗೌಡ ಸೇರಿದಂತೆ ಒಟ್ಟು 10 ಜನ ಹಾಗು 12 ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಅಕ್ಷಯ್ ಮತ್ತು ನವೀನ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದಂತೆ 22 ಜನ ಸ್ಪರ್ಧಿಸಿದ್ದಾರೆ.