ಭಾನುವಾರ, ಆಗಸ್ಟ್ 10, 2025

ಆ.೧೬ರಂದು ಆಡಿ ಕೃತಿಕ ಕಾವಡಿ ಜಾತ್ರಾ ಉತ್ಸವ


    ಭದ್ರಾವತಿ : ಇಲ್ಲಿಗೆ ಸಮೀಪದ ಶ್ರೀ ಕ್ಷೇತ್ರ ಭದ್ರಗಿರಿ ಶ್ರೀ ಶಿವಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ಬಾರಿ ಸಹ ಆ.೧೬ರ ಶನಿವಾರ ಆಡಿ ಕೃತಿಕ ಕಾವಡಿ ಜಾತ್ರಾ ಉತ್ಸವ ನಡೆಯಲಿದೆ.  
    ಶ್ರೀ ಕ್ಷೇತ್ರದ ಶಿವೈಕ್ಯರಾದ ಶ್ರೀ ಮಹಾ ಸಿದ್ದರ್ ಸ್ವಾಮಿಯವರ ಭಕ್ತಿ ಪೂರ್ವಕ ನಮನಗಳೊಂದಿಗೆ ಆ.೧೧ ರಿಂದ ೧೮ರವರೆಗೆ ಜಾತ್ರಾ ಮಹೋತ್ಸವ ನಡೆಯಲಿದ್ದು, ೧೧ರ ಬೆಳಿಗ್ಗೆ ೬ರಂದು ಧ್ವಜಾರೋಹಣದ ಮೂಲಕ ಜಾತ್ರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ೧೫ರಂದು ಭರಣಿ ಕಾವಡಿ ಉತ್ಸವ, ಬೆಳಗಿನ ಜಾವ ೪ ಗಂಟೆಯಿಂದ ವಿಶ್ವರೂಪ ದರ್ಶನ ಆರಂಭ, ೫ ರಿಂದ ಮಹಾಪೂಜೆ, ೮ ಗಂಟೆಗೆ ಸಂಧಿಪೂಜೆ, ೧೨ಕ್ಕೆ ಉಚ್ಚಿಕಾಲ ಪೂಜೆ, ಸಂಜೆ ೫.೩೦ಕ್ಕೆ ದೀಪಾರಧನೆ, ರಾತ್ರಿ ೯ಕ್ಕೆ ಸಂಧಿಪೂಜೆ, ೧೨ಕ್ಕೆ ವಿಶೇಷ ಅಭಿಷೇಕ, ಆರಾಧನೆ ನಡೆಯಲಿದೆ. 
    ಆ.೧೬ರಂದು ಆಡಿಕೃತಿಕಾ ಕಾವಡಿ ಉತ್ಸವ ಬೆಳಗಿನ ಜಾವ ೪ ಗಂಟೆಯಿಂದ ವಿಶ್ವರೂಪ ದರ್ಶನ ಮತ್ತು ಅಭಿಷೇಕ, ೫ ರಿಂದ ಉತ್ಸವ ಪೂಜೆ ಹಾಗು ಕಾವಡಿ ಹರಕೆ ಸಮರ್ಪಣೆ, ಮಧ್ಯಾಹ್ನ ೧೨ಕ್ಕೆ ಮಹಾಪೂಜೆ, ಸಂಜೆ ೫.೩೦ ರಿಂದ ದೀಪಾರಾಧನೆ, ರಾತ್ರಿ ೧೦ಕ್ಕೆ ಅರ್ಧ ಜಾಮಪೂಜೆ ಜರುಗಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸ್ವಾಮಿಯ ಕೃಪೆಗೆ ಪಾತ್ರರಾಗುವಂತೆ ಕೋರಲಾಗಿದೆ. 

ಅನಾಥ ಹೆಣ್ಣು ಮಕ್ಕಳಿಗೆ ನೆರವಾದ ಮನೆ ಮನೆಗೆ ಪೊಲೀಸ್

ಭದ್ರಾವತಿ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯ ಮುಸ್ಲಿಂ ಕ್ಯಾಂಪ್ ಗ್ರಾಮದಲ್ಲಿ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದಡಿ ಸಮಸ್ಯೆಗಳನ್ನು ಆಲಿಸುವಾಗ ೯ ಮತ್ತು ೩ ವರ್ಷದ ಇಬ್ಬರು ಅನಾಥ ಹೆಣ್ಣು ಮಕ್ಕಳು ಪತ್ತೆಯಾಗಿದ್ದು, ಇವರನ್ನು ಡಾನ್ ಬೋಸ್ಕೋ ಸಂಸ್ಥೆ ಮೂಲಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಘೋಷಕತ್ವದಿಂದ ವಂಚಿತರಾಗಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಮೂಲಕ ಪೊಲೀಸ್ ಇಲಾಖೆ ಮಾನವೀಯತೆ ಮೆರೆದಿದೆ. 
ಭದ್ರಾವತಿ : ಪೊಲೀಸ್ ಇಲಾಖೆ ವತಿಯಿಂದ ಇತ್ತೀಚೆಗೆ ನೂತನವಾಗಿ ಆರಂಭಿಸಿರುವ ಮನೆ ಮನೆಗೆ ಪೊಲೀಸ್ ಯೋಜನೆ ನಾಗರಿಕ ಸಮಾಜಕ್ಕೆ ಹೆಚ್ಚಿನ ಸಹಕಾರಿಯಾಗಿದ್ದು, ಘಟನೆಯೊಂದರ ಮೂಲಕ ಪೊಲೀಸ್ ಇಲಾಖೆ ಸಹ ಮಾನವೀಯತೆ ಎತ್ತಿ ಹಿಡಿಯುವ ಜೊತೆಗೆ ನಿಮ್ಮೊಂದಿಗೆ ನಾವು ಸದಾ ಇದ್ದೇವೆಂಬ ಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿದೆ. 
ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಲಾಖೆ ಸಿಬ್ಬಂದಿ ಕಾನ್ಸ್‌ಸ್ಟೇಬಲ್ ಎಚ್.ವಿ ಆನಂದ್‌ರವರು ಮನೆ ಮನೆಗೆ ತೆರಳಿ ಜನರ ಸಮಸ್ಯೆಗಳನ್ನು ಆಲಿಸುವಾಗ ಗ್ರಾಮ ಗಸ್ತು ಸಂಖ್ಯೆ ೪ರ ಮುಸ್ಲಿಂ ಕ್ಯಾಂಪ್ ಗ್ರಾಮದಲ್ಲಿ ೯ ಮತ್ತು ೩ ವರ್ಷದ ಇಬ್ಬರು ಅನಾಥ ಹೆಣ್ಣು ಮಕ್ಕಳು ಪತ್ತೆಯಾಗಿದ್ದಾರೆ. ಈ ಇಬ್ಬರು ಹೆಣ್ಣು ಮಕ್ಕಳ ತಂದೆ-ತಾಯಿ ಸುಮಾರು ೧ ವರ್ಷದ ಹಿಂದೆ ಮರಣ ಹೊಂದಿದ್ದಾರೆ. ಇದರಿಂದಾಗಿ ಅನಾಥರಾಗಿದ್ದು, ಪೋಷಕತ್ವದಿಂದ ವಂಚಿತರಾಗಿದ್ದಾರೆ.    
ಅನಾಥ ಮಕ್ಕಳಿಗೆ ನೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಯಗತವಾಗಿರುವ ಇಲಾಖೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ ಮಿಥುನ್‌ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿಗಳಾದ ಎ.ಜಿ ಕಾರಿಯಪ್ಪ ಮತ್ತು ಎಸ್. ರಮೇಶ್ ಕುಮಾರ್‌ರವರ ಮಾರ್ಗದರ್ಶನದಲ್ಲಿ ನಗರದ ಡಾನ್ ಬೋಸ್ಕೋ ಜಿಲ್ಲಾ ಸಂಯೋಜಕ ರಂಗನಾಥ್‌ರವರನ್ನು ಸಂಪರ್ಕಿಸಿ, ಅನಾಥ ಮಕ್ಕಳ ಕುರಿತು ಮಾಹಿತಿ ನೀಡುವ ಮೂಲಕ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ಕಳುಹಿಸಿಕೊಡಲಾಗಿದೆ. ಈ ಮೂಲಕ ಘೋಷಕತ್ವದಿಂದ ವಂಚಿತರಾಗಿರುವ ಇಬ್ಬರು ಹೆಣ್ಣು ಮಕ್ಕಳಿಗೆ ಆಶ್ರಯ ಕಲ್ಪಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದೆ.