Saturday, April 26, 2025

ಇಬ್ಬರ ಮೇಲೆ ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನ

    ಭದ್ರಾವತಿ : ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಇಬ್ಬರು ಸವಾರರ ಮೇಲೆ ಐವರು ಯುವಕರ ಗುಂಪು ಮಾರಾಕಾಸ್ತ್ರಗಳಿಂದ ಹಲ್ಲೆಗೆ ಯತ್ನಿಸಿ ಪರಾರಿಯಾಗಿರುವ ಘಟನೆ ಶುಕ್ರವಾರ ಸಂಜೆ ಹಳೇನಗರ ವ್ಯಾಪ್ತಿಯಲ್ಲಿ ನಡೆದಿದೆ. 
    ಶ್ರೀ ಹಳದಮ್ಮ ದೇವಿ ಬೀದಿ ನಿವಾಸಿಗಳಾದ ವಿಶ್ವ ಅಲಿಯಾಸ್ ಮುದ್ದೆ ಮತ್ತು ಸಂದೀಪ ಅಲಿಯಾಸ್ ಕಡ್ಡಿ ಸಂದೀಪ ಇಬ್ಬರು ಸಂಜೆ ದ್ವಿಚಕ್ರ ವಾಹನದಲ್ಲಿ ಕಂಚಿಬಾಗಿಲ ವೃತ್ತದ ಮೂಲಕ ಹಾದು ಹೋಗುತ್ತಿದ್ದಾಗ ಕಾರಿನಲ್ಲಿ ಬಂದ ಐವರು ಯುವಕರ ಗುಂಪು ಬೈಕಿನ ಹಿಂಬಾಗಕ್ಕೆ ಡಿಕ್ಕಿಹೊಡೆದಿದ್ದಾರೆ. ಕೆಳಗೆ ಬಿದ್ದ ವಿಶ್ವ ಮತ್ತು ಸಂದೀಪ ಮೇಲೆ ಕಾರಿನಿಂದ ಕೆಳಗೆ ಇಳಿದ ಐವರು ಯುವಕರು ಕೈಯಲ್ಲಿ ಮಚ್ಚು, ಲಾಂಗು ಸೇರಿದಂತೆ ಮಾರಕಾಸ್ತ್ರಗಳನ್ನು ಹಿಡಿದು ಹಲ್ಲೆಗೆ ಯತ್ನಿಸಿದ್ದಾರೆ. ಅಷ್ಟರಲ್ಲಿ ಇಬ್ಬರು ಹಲ್ಲೆಯಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾರೆ. ಘಟನೆ ಸ್ಥಳಕ್ಕೆ ಸುತ್ತಮುತ್ತಲ ಜನರು ಜಮಾಯಿಸುತ್ತಿದ್ದಂತೆ ಕಾರಿನಲ್ಲಿ ಬಂದಿದ್ದ ಯುವಕರು ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
    ದ್ವಿಚಕ್ರ ವಾಹನ ಕೆಳಗೆ ಬಿದ್ದು ಸ್ವಲ್ಪ ಗಾಯಗೊಂಡಿರುವ ವಿಶ್ವ ಮತ್ತು ಸಂದೀಪ ಇಬ್ಬರನ್ನು ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದ್ದು, ಘಟನೆ ಕುರಿತಂತೆ ಹಳೇನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ಹಲ್ಲೆಗೆ ಕಾರಣ ತಿಳಿದು ಬರಬೇಕಿದೆ. 

ಕಡದಕಟ್ಟೆ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆ : ನಗರದ ಭವಿಷ್ಯದ ಬೆಳವಣಿಗೆಗೆ ಸಹಕಾರಿ

ಸದ್ಬಳಕೆ ಮಾಡಿಕೊಳ್ಳಲು ಸಂಸದ ಬಿ.ವೈ ರಾಘವೇಂದ್ರ ಕರೆ 

ಭದ್ರಾವತಿ ಕಡದಕಟ್ಟೆ ರೈಲ್ವೆ ಗೇಟ್ ಬಳಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆ ಸಂಸದ ಬಿ.ವೈ ರಾಘವೇಂದ್ರ, ಶಾಸಕರಾದ ಬಿ.ಕೆ ಸಂಗಮೇಶ್ವರ್, ಡಿ.ಎಸ್ ಅರುಣ್, ಬಲ್ಕೀಶ್ ಬಾನು ಸೇರಿದಂತೆ ಇನ್ನಿತರರು ಲೋಕಾರ್ಪಣೆಗೊಳಿಸಿದರು. 
    ಭದ್ರಾವತಿ: ಕಡದಕಟ್ಟೆ ರೈಲ್ವೆ ಗೇಟ್ ಬಳಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆ ನಗರದ ಭವಿಷ್ಯದ ಬೆಳವಣಿಗೆಗೆ ಪೂರಕವಾಗಲಿದ್ದು, ಸಾರ್ವಜನಿಕರು ಇದರ ಸದ್ಬಳಕೆ ಮಾಡಿಕೊಳ್ಳುವಂತೆ ಸಂಸದ ಬಿ.ವೈ ರಾಘವೇಂದ್ರ ಹೇಳಿದರು. 
    ಅವರು ಶನಿವಾರ ರೈಲ್ವೆ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿ ಮಾತನಾಡಿದರು. ಕೇಂದ್ರ ಸರ್ಕಾರದ ಶೇ.೬೦ ಮತ್ತು ರಾಜ್ಯ ಸರ್ಕಾರದ ಶೇ.೪೦ ಅನುದಾನದಲ್ಲಿ ಸುಮಾರು ೨೫ ಕೋ. ರು. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಗೊಳಿಸಲಾಗಿದ್ದು, ಭದ್ರಾವತಿ ಅಭಿವೃದ್ಧಿ ಹೊಂದುತ್ತಿರುವ ನಗರ, ಶಿವಮೊಗ್ಗ ಅಭಿವೃದ್ಧಿ ಹೊಂದಿರುವ ಜಿಲ್ಲಾ ಕೇಂದ್ರವಾಗಿದೆ. ಈ ಎರಡು ನಗರಗಳ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೊತೆಯಾಗಿ ಸುಮಾರು ೧೭೫ ಕೋ. ರು. ವೆಚ್ಚದಲ್ಲಿ ರೈಲ್ವೆ ಸೇತುವೆ ಕಾಮಗಾರಿಗಳನ್ನು ಆರಂಭಿಸಲಾಗಿತ್ತು. ೨ ವರ್ಷದ ಹಿಂದೆಯೇ ೩ ಸೇತುವೆಗಳ ಕಾಮಗಾರಿ ಮುಕ್ತಾಯಗೊಂಡಿದ್ದು, ಈ ಸೇತುವೆ ೨.೫ ವರ್ಷ ಕಾಲಾವಧಿಯಲ್ಲಿ ಮುಕ್ತಾಯಗೊಂಡಿದೆ. ಇದರೊಂದಿಗೆ ಇಂದಿಗೆ ಎಲ್ಲಾ ರೈಲ್ವೆ ಸೇತುವೆ ಕಾಮಗಾರಿಗಳು ಮುಕ್ತಾಯಗೊಂಡಂತಾಗಿದೆ ಎಂದರು. 


ಭದ್ರಾವತಿ ಕಡದಕಟ್ಟೆ ರೈಲ್ವೆ ಗೇಟ್ ಬಳಿ ನಿರ್ಮಾಣಗೊಂಡಿರುವ ರೈಲ್ವೆ ಮೇಲ್ಸೇತುವೆ ಸಂಸದ ಬಿ.ವೈ ರಾಘವೇಂದ್ರ ಶನಿವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. 
    ಸೇತುವೆ ಮುಕ್ತಾಯಗೊಳಿಸಲು ಶ್ರಮಿಸಿದ ರೈಲ್ವೆ ಅಧಿಕಾರಿಗಳು ಹಾಗು ಗುತ್ತಿಗೆದಾರರಿಗೆ ಮತ್ತು ಕಾಮಗಾರಿ ಯಶಸ್ವಿಯಾಗಿ ನಡೆಯಲು ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಿಗೆ ಹೊರ ರಾಜ್ಯ, ಜಿಲ್ಲೆಗಳಿಂದ ಬರುವವರಿಗೆ ಯಾವುದೇ ರೀತಿ ಅನಾನುಕೂಲವಾಗದಂತೆ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ನಡೆಯಲಿವೆ ಎಂದರು. 
    ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್ ಅರುಣ್ ಮತ್ತು ಬಲ್ಕೀಶ್ ಬಾನುರವರು ಮಾತನಾಡಿ, ಸಂಸದರು ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯವಿರಲಿ ಯಶಸ್ವಿಯಾಗಿ ಕೈಗೊಳ್ಳುವ ಮೂಲಕ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಮುನ್ನುಡಿ ಬರೆಯುತ್ತಿದ್ದಾರೆ. ಅಭಿವೃದ್ಧಿ ಕಾರ್ಯಗಳಲ್ಲಿ ಪಕ್ಷ, ಬೇಧಭಾವ ತೋರದೆ ಎಲ್ಲರನ್ನು ಒಗ್ಗೂಡಿಸಿಕೊಂಡು ಮುನ್ನಡೆಯುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ರೈಲ್ವೆ ಯೋಜನೆಗಳು ಸೇರಿದಂತೆ ಬಹುತೇಕ ಯೋಜನೆಗಳು ಯಶಸ್ವಿಯಾಗಿ ಮುಕ್ತಾಯಗೊಂಡು ಜಿಲ್ಲೆಯನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದಾರೆಂದು ಬಣ್ಣಿಸಿದರು. 
    ಶಾಸಕ ಬಿ.ಕೆ ಸಂಗಮೇಶ್ವರ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಮಣಿ ಎಎನ್‌ಎಸ್, ಹಿರಿಯ ನಗರಸಭಾ ಸದಸ್ಯ ಬಿ.ಕೆ ಮೋಹನ್, ಮುಖಂಡರಾದ ಶಾರದ ಅಪ್ಪಾಜಿ, ಜಗದೀಶ್, ಎಸ್. ಕುಮಾರ್, ಜಿ. ಧರ್ಮಪ್ರಸಾದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು, ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಗಣ್ಯರು ಪಾಲ್ಗೊಂಡಿದ್ದರು.