Sunday, November 22, 2020

ಸರ್.ಎಂ ವಿಶ್ವೇಶ್ವರಾಯ ವಿವಿದೋದ್ದೇಶ ಸಹಕಾರ ಸಂಘ ರು. ೬೨,೪೮೫ ಲಾಭ

ಭದ್ರಾವತಿ ನ್ಯೂಟೌನ್ ಸರ್.ಎಂ ವಿಶ್ವೇಶ್ವರಾಯ ವಿವಿದೋದ್ದೇಶ ಸಹಕಾರ ಸಂಘದ ಸರ್ವ ಸದಸ್ಯರ ೫೪ನೇ ವಾರ್ಷಿಕ ಮಹಾಸಭೆ ಭಾನುವಾರ ನಡೆಯಿತು.
ಭದ್ರಾವತಿ, ನ. ೨೨: ಮಾಜಿ ಶಾಸಕ ದಿವಂಗತ ಅಬ್ದುಲ್ ಖುದ್ದೂಸ್ ಅನ್ವರ್‌ರವರ ಪರಿಶ್ರಮದಿಂದ ಸ್ಥಾಪಿತವಾಗಿ ೫ ದಶಕಗಳನ್ನು ಪೂರೈಸಿರುವ ನಗರದ ನ್ಯೂಟೌನ್ ಸರ್.ಎಂ ವಿಶ್ವೇಶ್ವರಾಯ ವಿವಿದೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ ರು. ೬೨,೪೮೫ ಲಾಭ ಗಳಿಸಿದ್ದು, ಸದಸ್ಯರುಗಳಿಗೆ ಹೊಸ ಯೋಜನೆಗಳನ್ನು ರೂಪಿಸಿಕೊಂಡಿದೆ ಎಂದು ಸಂಘದ ಅಧ್ಯಕ್ಷ ಎಚ್.ಎಸ್ ಸಿದ್ದಯ್ಯ ತಿಳಿಸಿದರು.
    ಅವರು ಭಾನುವಾರ ಸಂಘದ ಆವರಣದಲ್ಲಿ ಏರ್ಪಡಿಸಲಾಗಿದ್ದ ೫೪ನೇ ವರ್ಷದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಸದಸ್ಯರುಗಳಿಂದ ಒಟ್ಟು ರು. ೪೬ ಲಕ್ಷ ಠೇವಣಿ ಇದ್ದು, ರು. ೧೦.೬೭ ಲಕ್ಷ ಷೇರು ಬಂಡವಾಳ ಹೊಂದಲಾಗಿದೆ. ಒಟ್ಟು ರು.೬೮,೯೯,೩೭೦ ಸಾಲ ನೀಡಲಾಗಿದ್ದು, ರು. ೫೯,೧೦,೮೮೬ ವಸೂಲಾತಿ ಮಾಡಲಾಗಿದೆ. ಬಾಕಿ ಸಾಲದ ಮೊತ್ತ ರು.೭೩,೫೦,೩೯೮ ಬರಬೇಕಾಗಿದ್ದು, ಈ ನಡುವೆ ಬೈಲಾ ತಿದ್ದುಪಡಿ ಮಾಡಿ ಸಂಘದ ಕಾರ್ಯವ್ಯಾಪ್ತಿಯಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೂ ಸದಸ್ಯತ್ವ ನೀಡಲು ಕ್ರಮ ಕೈಗೊಳ್ಳಲಾಗಿದೆ. ಸದಸ್ಯರುಗಳಿಗೆ ಸಂಬಳ ಆಧಾರ ಸಾಲ, ಜಾಮೀನು ಆಧಾರ ಸಾಲ, ನಿವೇಶನ/ಗೃಹ ಖರೀದಿ/ರಿಪೇರಿ ಸಾಲ ಸ್ವಸಹಾಯ ಗುಂಪುಗಳ ಸಾಲ ಮತ್ತು ವ್ಯಾಪಾರ ಉತ್ತೇಜಕ ಸಾಲಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದರು.
   ಸಂಘದ ಸಂಸ್ಥಾಪಕ ಅಧ್ಯಕ್ಷ ಮಾಜಿ ಶಾಸಕ ದಿವಂಗತ ಅಬ್ದುಲ್ ಖುದ್ದೂಸ್ ಅನ್ವರ್‌ರವರ ಪುತ್ರ, ಸಂಘದ ಅಧ್ಯಕ್ಷರಾಗಿದ್ದ ಸಿ.ಕೆ ಅಸ್ಮತ್‌ಪಾಷರವರು ಕಳೆದ ೨ ತಿಂಗಳ ಹಿಂದೆ ನಿಧನ ಹೊಂದಿದ್ದು, ಇವರಿಗೆ ಸಂತಾಪ ಸೂಚಿಸಲಾಯಿತು.
    ಸಂಘದ ಛೇರ‍್ಮನ್ ಬೋರೇಗೌಡ, ಕಾರ್ಯದರ್ಶಿ ಮುಕುಂದಪ್ಪ, ಖಜಾಂಚಿ ಸಿ. ದಾಸಿ, ನಿರ್ದೇಶಕರಾದ ಎನ್. ರಂಗಸ್ವಾಮಿ, ಎಚ್. ಮಲ್ಲೇಶ್, ರಾಜ, ಗಂಗಾಧರ ಗೌಡ, ಮಹಮ್ಮದ್  ಬುಡೇನ್, ಮಂಜುನಾಥ ಮತ್ತು ಶಾರದಮ್ಮ ಉಪಸ್ಥಿತರಿದ್ದರು.

ಬಸ್ ನಿಲ್ದಾಣ ಪುನರ್ ನಿರ್ಮಾಣಕ್ಕೆ ಆಗ್ರಹಿಸಿ ನಗರಸಭೆಗೆ ಮನವಿ

ಭದ್ರಾವತಿ ಚನ್ನಗಿರಿ ರಸ್ತೆಯ ಉಪನೋಂದಣಾಧಿಕಾರಿಗಳ ಕಛೇರಿ ಮುಂಭಾಗ ನೆಲಸಮಗೊಳಿಸಿರುವ ೨ ಬಸ್ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕನಾ೯ಟಕ ಜನ ಸೈನ್ಯ ವಿದ್ಯಾರ್ಥಿ ಘಟಕದ ವತಿಯಿಂದ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೨೨: ನಗರದ ಚನ್ನಗಿರಿ ರಸ್ತೆಯ ಉಪನೋಂದಣಾಧಿಕಾರಿಗಳ ಕಛೇರಿ ಮುಂಭಾಗ ನೆಲಸಮಗೊಳಿಸಿರುವ ೨ ಬಸ್ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡುವಂತೆ ಆಗ್ರಹಿಸಿ ಕನಾ೯ಟಕ ಜನ ಸೈನ್ಯ ವಿದ್ಯಾರ್ಥಿ ಘಟಕದ ವತಿಯಿಂದ ನಗರಸಭೆ ಆಡಳಿತಕ್ಕೆ ಮನವಿ ಸಲ್ಲಿಸಲಾಯಿತು.
    ಯಾವುದೇ ರೀತಿ ಟೆಂಡರ್ ಕರೆಯದೆ ಬಸ್ ನಿಲ್ದಾಣಗಳನ್ನು ಅನಧಿಕೃತವಾಗಿ ನೆಲಸಮ ಮಾಡಲಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದ್ದು, ತಕ್ಷಣ ತಾತ್ಕಾಲಿಕವಾಗಿ ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡಬೇಕೆಂದು ಹಾಗು ಕಾನೂನು ಬಾಹಿರವಾಗಿ ಬಸ್ ನಿಲ್ದಾಣಗಳನ್ನು ನೆಲಸಮಗೊಳಿಸಿರುವ ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ.
    ಮನವಿ ಸ್ವೀಕರಿಸಿದ ನಗರಸಭೆ ಇಂಜಿನಿಯರ್ ರಂಗರಾಜಪುರೆ ಮುಂದಿನ ಕ್ರಮ ಕೈಗೊಳ್ಳುವ ಭರವಸೆ  ನೀಡಿದರು. ಘಟಕದ ಅಧ್ಯಕ್ಷ ದೀಕ್ಷಿತ್, ಕಾರ್ಯಕರ್ತರಾದ ಸುದೈವ, ಮನೋಜ್, ಮಂಜುನಾಥ್, ಗಿರೀಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.