Monday, August 1, 2022

ಸ್ಮಶಾನ ಜಾಗಕ್ಕೆ ಆಗ್ರಹಿಸಿ ತಮ್ಮಡಿಹಳ್ಳಿ ಗ್ರಾಮದಲ್ಲಿ ಪ್ರತಿಭಟನಾ ಧರಣಿ ಸತ್ಯಾಗ್ರಹ

ಭದ್ರಾವತಿ ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗದ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ಭದ್ರಾವತಿ, ಆ. ೧:  ತಾಲೂಕಿನ ಕಂಬದಾಳ್ ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಮ್ಮಡಿಹಳ್ಳಿ ಗ್ರಾಮ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗದ ಅಕ್ರಮ ಒತ್ತುವರಿದಾರರನ್ನು ತೆರವುಗೊಳಿಸುವಂತೆ ಆಗ್ರಹಿಸಿ ಸೋಮವಾರ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಪ್ರತಿಭಟನಾ ಧರಣಿ ಸತ್ಯಾಗ್ರಹ ನಡೆಸಲಾಯಿತು.
    ೧೯೯೮-೯೯ರಲ್ಲಿ ತಹಸೀಲ್ದಾರ್‌ರವರು ಅಧಿಕೃತವಾಗಿ ಪಹಣಿಯಲ್ಲಿ ಗ್ರಾಮದ ಸರ್ವೆ ನಂ.೨೨ರ ೪ ಎಕರೆ ಸ್ಮಶಾನ ಜಾಗ ಎಂದು ನಮೂದಿಸಿದ್ದಾರೆ. ಆದರೂ ಸಹ ಕೆಲವರು ಯಾವುದೇ ಸೂಕ್ತ ದಾಖಲೆಗಳು ಇಲ್ಲದಿದ್ದರೂ ಸಹ ಈ ಜಾಗ ನಮ್ಮದು ಎಂದು ಕಬಳಿಸಲು ಯತ್ನಿಸುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಅಧಿಕಾರಿಗಳು ಹಾಗು ರಾಜಕಾರಣಿಗಳು ವರ್ತಿಸುತ್ತಿದ್ದಾರೆಂದು ಆರೋಪಿಸಲಾಯಿತು.
    ೨೦೧೭ರಲ್ಲಿ ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಲೋಕೇಶ್‌ರವರು ಮನವಿಗೆ ಸ್ಪಂದಿಸಿ ಖುದ್ದಾಗಿ ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸುವ ಜೊತೆಗೆ ಸ್ಮಶಾನ ಜಾಗದ ಹದ್ದುಬಸ್ತು ಮಾಡಿ ಗಡಿ ಗುರುತಿಸಿ ಅಳತೆ ಮಾಡುವಂತೆ ಹಾಗು ಒತ್ತುದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಹಸೀಲ್ದಾರ್ ಅವರಿಗೆ ಆದೇಶಿಸಿದ್ದರು. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಲಾಯಿತು.
     ಗ್ರಾಮಗಳಿಗೆ ಅಗತ್ಯವಿರುವ ಸ್ಮಶಾನ ಜಾಗ ಕಡ್ಡಾಯವಾಗಿ ಕಲ್ಪಿಸಿಕೊಡುವಂತೆ ಸರ್ಕಾರ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಆದೇಶಿಸಿದೆ. ಈ ಹಿನ್ನಲೆಯಲ್ಲಿ ಬಿ.ಆರ್.ಪಿ, ಗ್ಯಾರೇಜ್ ಕ್ಯಾಂಪ್, ಶಾಂತಿನಗರ ಗ್ರಾಮಗಳ ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ತಕ್ಷಣ ಸ್ಮಶಾನ ಜಾಗ ಕಲ್ಪಿಸಿಕೊಡುವಂತೆ ಆಗ್ರಹಿಸಲಾಯಿತು.
    ಸಮಿತಿ ಅಧ್ಯಕ್ಷ ಬಿ.ಎನ್ ರಾಜು ಪ್ರತಿಭಟನಾ ಧರಣಿ ಸತ್ಯಾಗ್ರಹ ನೇತೃತ್ವ ವಹಿಸಿದ್ದರು. ಪ್ರಮುಖರಾದ ಶಶಿಕುಮಾರ್ ಗೌಡ, ಈ. ಕೃಷ್ಣ, ಅಭಿಮನ್ಯು, ಕೃಷ್ಣಮೂರ್ತಿ, ಜಿ. ಸಂತೋಷ್, ಎಲ್.ಬಿ ನಂದಕುಮಾರ್, ಎಂ.ಬಿ ವಿಶ್ವನಾಥ್, ಶ್ರೀನಿವಾಸ್, ನೇತ್ರಾ, ಜಲಜಾಕ್ಷಿ, ಮೀನಾ, ಸಿದ್ದಮ್ಮ, ಚಲುವಿ, ಭಾಗ್ಯ, ಲಕ್ಷ್ಮಮ್ಮ, ಲಲಿತಾ, ಗಂಗಮ್ಮ, ಯಲ್ಲಮ್ಮ, ಎಂ.ಕೆ ಪುಷ್ಪ, ವಾಣಿ, ವರಲಕ್ಷ್ಮಿ, ಮುನಿಯಮ್ಮ, ಸುಲೋಚನ, ಶಕೀಲ, ಮಹೇಶ್ವರಿ ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.

ಆ.೨ರಂದು ವಿದ್ಯುತ್ ವ್ಯತ್ಯಯ

ಭದ್ರಾವತಿ, ಆ. ೧: ಮೆಸ್ಕಾಂ ಘಟಕ-೨ರ ವ್ಯಾಪ್ತಿಯ ತರೀಕೆರೆ ರಸ್ತೆ ಮಹಾತ್ಮಗಾಂಧಿ ವೃತ್ತದ ಸಮೀಪದಲ್ಲಿರುವ  ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿರುವ ಪರಿವರ್ತಕ ಮತ್ತು ಎಲ್.ಟಿ ವಿದ್ಯುತ್ ಮಾರ್ಗಗಳನ್ನು ಸ್ಥಳಾಂತರಿಸುವ ಕಾಮಗಾರಿ ಹಮ್ಮಿಕೊಂಡಿರುವ ಹಿನ್ನಲೆಯಲ್ಲಿ  ಆ. ೨ ರಂದು ಬೆಳಗ್ಗೆ ೯.೩೦ ರಿಂದ ಸಂಜೆ ೬.೩೦ ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
    ನಗರಸಭೆ ಕಛೇರಿ ಸುತ್ತಮುತ್ತಲಿನ ಪ್ರದೇಶ, ಭೂತನಗುಡಿ, ಮಾಧವಚಾರ್ ವೃತ್ತ, ಗಾಂಧಿನಗರ, ಮಾಧವನಗರ, ಎನ್.ಎಂ.ಸಿ ರಸ್ತೆ, ಹಳೇ ಸಂತೆಮೈದಾನ, ಕೋಡಿಹಳ್ಳಿ, ಗೌರಾಪುರ, ಲಕ್ಷ್ಮೀಪುರ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಗ್ರಾಹಕರು ಸಹಕರಿಸುವಂತೆ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ. 

ಶಿಶುವಿಹಾರ ಕಟ್ಟಡ ದುರಸ್ತಿ, ಹೊಸ ಕಟ್ಟಡ ನಿರ್ಮಾಣಕ್ಕೆ ಆಗ್ರಹಿಸಿ ಮನವಿ

ಭದ್ರಾವತಿ ನಗರಸಭೆ ವಾರ್ಡ್ ನಂ.೩ರ ಗೌಳಿಗರ ಬೀದಿ ೧೩ನೇ ರಸ್ತೆಯಲ್ಲಿರುವ ಶಿಶುವಿಹಾರ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ತಾತ್ಕಾಲಿಕವಾಗಿ ಈ ಕಟ್ಟಡವನ್ನು ದುರಸ್ತಿಗೊಳಿಸಿ ಮಕ್ಕಳ ಕಲಿಕೆಗೆ ನೆರವಾಗುವ ಮೂಲಕ ಹೊಸದಾಗಿ ಶಿಶುವಿಹಾರ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಆಡಳಿತಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
    ಭದ್ರಾವತಿ, ಆ. ೧ : ನಗರಸಭೆ ವಾರ್ಡ್ ನಂ.೩ರ ಗೌಳಿಗರ ಬೀದಿ ೧೩ನೇ ರಸ್ತೆಯಲ್ಲಿರುವ ಶಿಶುವಿಹಾರ ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ತಾತ್ಕಾಲಿಕವಾಗಿ ಈ ಕಟ್ಟಡವನ್ನು ದುರಸ್ತಿಗೊಳಿಸಿ ಮಕ್ಕಳ ಕಲಿಕೆಗೆ ನೆರವಾಗುವ ಮೂಲಕ ಹೊಸದಾಗಿ ಶಿಶುವಿಹಾರ ನಿರ್ಮಿಸುವಂತೆ ಆಗ್ರಹಿಸಿ ಸೋಮವಾರ ನಗರಸಭೆ ಆಡಳಿತಕ್ಕೆ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಮನವಿ ಸಲ್ಲಿಸಲಾಯಿತು.
        ಶಿಶುವಿಹಾರ ಕಟ್ಟಡ ಸುಮಾರು ೪೫ ವರ್ಷಗಳಿಗೂ ಹಳೇಯದಾಗಿದ್ದು, ತುಂಬಾ ಶಿಥಿಲಗೊಂಡಿದೆ. ಮಕ್ಕಳು ಶಿಶುವಿಹಾರಕ್ಕೆ ಹೋಗದೆ ಕಲಿಕೆಯಿಂದ ವಂಚಿತರಾಗುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಥಿಲಗೊಂಡಿರುವ ಕಟ್ಟಡ ತಕ್ಷಣ ದುರಸ್ತಿಗೊಳಿಸದಿದ್ದಲ್ಲಿ ಅನಾಹುತ ಖಚಿತ. ಮಕ್ಕಳ ಭವಿಷ್ಯದ ಹಿನ್ನಲೆಯಲ್ಲಿ ಅಗತ್ಯ ಕ್ರಮ ಕೈಗೊಳ್ಳುವುದು ಹಾಗು ಹೊಸದಾಗಿ ಶಿಶುವಿಹಾರ ನಿರ್ಮಾಣ ಮಾಡುವ ಮೂಲಕ ಮಕ್ಕಳ ಕಲಿಕೆಗೆ ಎಲ್ಲಾ ರೀತಿ ಸೌಲರ್ಭ್ಯಗಳನ್ನು ಕಲ್ಪಿಸಿಕೊಡುವಂತೆ ಆಗ್ರಹಿಸಲಾಗಿದೆ.
    ನಗರಸಭೆ ಅಧ್ಯಕ್ಷೆ ಗೀತಾ ರಾಜ್‌ಕುಮಾರ್, ಉಪಾಧ್ಯಕ್ಷ ಚನ್ನಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷ ಕೆ. ಸುದೀಪ್ ಕುಮಾರ್, ಪೌರಾಯುಕ್ತ ಮನುಕುಮಾರ್ ಅವರಿಗೆ ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಪ್ರಮುಖರಾದ ಫ್ರಾನ್ಸಿಸ್, ಮಂಜುಳಮ್ಮ, ಪ್ರವೀಣ, ಶಿವು, ಭೂಪಾಲ್, ಮದನ್, ಪುರುಷೋತ್ತಮ್, ಗೀತಾ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.