ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಗೆ ತೆರಳಿ ಪೋಷಕರಿಂದ ಮನವಿ
![](https://blogger.googleusercontent.com/img/a/AVvXsEjYlSXZfCzsQpjWxvynTcORLPNF_UBcFU1R0qlDmPXSj-twRLuIYxpsGQLBncFlkbH58D7l_uB1DzAq5MfcqPedEnCKRqIngjjAYKQdj4Slmey9X2JRFay30KE5LdFuba0SVP_ZsnhvLREDjD_2Iy8FrZpfpmRhJqsd-Aycbz7h3p1MZNp0oZKOsiNwFKwV=w400-h241-rw)
ಭದ್ರಾವತಿ ನಗರದ ಆಂಜನೇಯ ಅಗ್ರಹಾರ ಕೂಲಿಬ್ಲಾಕ್ ಶೆಡ್ ನಿವಾಸಿ, ರಾಷ್ಟ್ರಮಟ್ಟದ ದೇಹದಾರ್ಢ್ಯ ಪಟುವಿನ ಸಾವಿನ ಪ್ರಕರಣ ಮರುತನಿಖೆಗೆ ಆಗ್ರಹಿಸಿ ಪೋಷಕರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಘಟನೆ ನಡೆದಿದೆ.
ಭದ್ರಾವತಿ: ನಗರದ ಆಂಜನೇಯ ಅಗ್ರಹಾರ ಕೂಲಿಬ್ಲಾಕ್ ಶೆಡ್ ನಿವಾಸಿ, ರಾಷ್ಟ್ರಮಟ್ಟದ ದೇಹದಾರ್ಢ್ಯ ಪಟುವಿನ ಸಾವಿನ ಪ್ರಕರಣ ಮರುತನಿಖೆಗೆ ಆಗ್ರಹಿಸಿ ಪೋಷಕರು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಘಟನೆ ನಡೆದಿದೆ.
ದೇಹದಾರ್ಢ್ಯ ಪಟು ರತಿಲ ಕುಮಾರ್ ಮೇ.೧೩, ೨೦೨೩ರಂದು ಸಾವನ್ನಪ್ಪಿದ್ದರು. ಇವರ ಮೃತದೇಹ ಸಿರಿಯೂರು ವೀರಾಪುರ ನಾಲೆಯಲ್ಲಿ ಪತ್ತೆಯಾಗಿತ್ತು. ಈ ಸಂಬಂಧ ಗ್ರಾಮಾಂತರ ಠಾಣೆ ಪೊಲೀಸರು ಯುಡಿಆರ್ ಪ್ರಕರಣ ದಾಖಲಿಸಿಕೊಂಡಿದ್ದರು.
ಇದೀಗ ರತಿಲ ಕುಮಾರ್ ಅವರ ತಂದೆ ಇಂದ್ರೇಶ್ ಅವರು, ಅಂದು ಮದುವೆಗೆ ಹೋಗಿದ್ದ ರತಿಲ ಕುಮಾರ್‌ಗೆ ಬಾರ್ ಒಂದರಲ್ಲಿ ಕುಡಿಸಿ ಗಲಾಟೆ ಮಾಡಲಾಗಿತ್ತು. ನಂತರ ನಾಲೆಯ ಬಳಿ ಕರೆದುಕೊಂಡು ಹೋಗಿ ತಲೆಗೆ ಬಲವಾಗಿ ಹೊಡೆದು ನೀರಿಗೆ ತಳ್ಳಿ ಕೊಲೆ ಮಾಡಲಾಗಿದೆ. ಪೊಲೀಸರು ಯುಡಿಆರ್ ಪ್ರಕರಣವೆಂದು ದಾಖಲಿಸಿ ತನಿಖೆ ಸರಿಯಾಗಿ ನಡೆಸುತ್ತಿಲ್ಲ ಎಂದು ಆರೋಪಿಸಿದ್ದಾರೆ.
ರತಿಲ ಕುಮಾರ್ ಸ್ನೇಹಿತರೊಂದಿಗೆ ಪೋಷಕರು ಜಿಲ್ಲಾ ರಕ್ಷಣಾಧಿಕಾರಿಗಳ ಕಛೇರಿಗೆ ತೆರಳಿ ಕಳೆದ ಸುಮಾರು ೮ ತಿಂಗಳಿನಿಂದ ನ್ಯಾಯಕ್ಕಾಗಿ ಅಲೆಯುತ್ತಿದ್ದು, ಈಗಾಗಲೇ ಜಿಲ್ಲಾಧಿಕಾರಿ, ಜಿಲ್ಲಾ ರಕ್ಷಣಾಧಿಕಾರಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಇದೀಗ ಮತ್ತೊಮ್ಮೆ ಮನವಿ ಸಲ್ಲಿಸುತ್ತಿದ್ದು, ಐಪಿಸಿ ಸೆಕ್ಷನ್ ೩೦೨ರಡಿ ಕೊಲೆ ಪ್ರಕರಣ ದಾಖಲಿಸಿ ಮರು ತನಿಖೆ ಕೈಗೊಳ್ಳುವಂತೆ ಎಎಸ್‌ಪಿ ಕರಿಯಪ್ಪರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದಾರೆ.
ರತಿಲ ಕುಮಾರ್ ಸಹೋದರಿ ದೀಪ್ತಿ, ಸ್ನೇಹಿತರಾದ ಅಂತೋಣಿ ವಿಲ್ಸನ್, ಮಂಜುನಾಥ್, ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.