Monday, October 4, 2021

ಇಬ್ರಾಹಿಂ ಮಾತೃಪಕ್ಷಕ್ಕೆ ಮರಳಿ ಬಂದಲ್ಲಿ ಕ್ಷೇತ್ರದ ಮಟ್ಟಿಗೆ ಶಾರದ ಅಪ್ಪಾಜಿಗೆ ಸಂಕಷ್ಟ

ಸಿ.ಎಂ ಇಬ್ರಾಹಿಂ ಮತ್ತು ಕುಮಾರಸ್ವಾಮಿ
    * ಅನಂತಕುಮಾರ್
    ಭದ್ರಾವತಿ: ಮೂಲತಃ ಭದ್ರಾವತಿ ವಿಧಾನಸಭಾ ಕ್ಷೇತ್ರದವರಾದ ವಿಧಾನ ಪರಿಷತ್ ಸದಸ್ಯ, ಮಾಜಿ ಕೇಂದ್ರ ಸಚಿವ ಸಿ.ಎಂ ಇಬ್ರಾಹಿಂ ಇತ್ತೀಚೆಗೆ ಪುನಃ ತಮ್ಮ ಮಾತೃಪಕ್ಷಕ್ಕೆ ಮರಳುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಈ ರೀತಿಯ ಹೇಳಿಕೆಗಳನ್ನು ಈ ಹಿಂದೆ ಸಹ ನೀಡಿದ್ದರು ಎಂಬುದನ್ನು ಗಮನಿಸಬೇಕಾದ ಸಂಗತಿಯಾಗಿದೆ. ಇಬ್ರಾಹಿಂ ಇದುವರೆಗೂ ಕಾಂಗ್ರೆಸ್ ಬಿಟ್ಟು ಹೊರಬಂದಿಲ್ಲ. ಮುಂದೆ ಸಹ ಬರುವ ನಿರೀಕ್ಷೆ ಇಲ್ಲ. ಆದರೂ ಕ್ಷೇತ್ರದ ಮಟ್ಟಿಗೆ ಅವರ ಹೇಳಿಕೆಗಳು ಇದೀಗ ಸಕ್ರಿಯ ರಾಜಕಾರಣಕ್ಕೆ ಮರಳಿರುವ ಶಾರದ ಅಪ್ಪಾಜಿ ಅವರಿಗೆ ಹಿನ್ನಡೆಯನ್ನುಂಟು ಮಾಡುವುದು ಮಾತ್ರ ಖಚಿತವಾಗಿದೆ.
    ಇಬ್ರಾಹಿಂ ಅವರು ಭದ್ರಾವತಿ ವಿಧಾನಸಭಾ ಕ್ಷೇತ್ರದವರೇ ಆದರೂ ಸಹ ಇದುವರೆಗೂ ಕ್ಷೇತ್ರದಲ್ಲಿ ನೆಲೆಕಾಣಲು ಸಾಧ್ಯವಾಗಿಲ್ಲ. ಈ ನಡುವೆ ಅವರ ಮಾತೃಪಕ್ಷ ಜಾತ್ಯಾತೀತ ಜನತಾದಳ ಅವರನ್ನು ಎಂದಿಗೂ ಕೈಬಿಟ್ಟಿಲ್ಲ ಎಂಬುದು ಸಹ ನೂರಕ್ಕೆ ನೂರರಷ್ಟು ಸತ್ಯ. ಇದಕ್ಕೆ ಉದಾಹರಣೆ ಪಕ್ಷದ ವರಿಷ್ಠ ಎಚ್.ಡಿ ದೇವೇಗೌಡರು ದೇಶದ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಇಬ್ರಾಹಿಂ ಕೇಂದ್ರ ಸಚಿವರಾಗಲು ಸಾಧ್ಯವಾಯಿತು. ಈಗಲೂ ಸಹ ಅವರ ಮೇಲೆ ಪಕ್ಷ ಅಷ್ಟೆ ಪ್ರೀತಿ, ವಿಶ್ವಾಸವನ್ನು ಹೊಂದಿದೆ ಎಂದರೆ ತಪ್ಪಾಗಲಾರದು. ಇದಕ್ಕೆ ಪೂರಕವೆಂಬಂತೆ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿಯವರು ಇತ್ತೀಚೆಗೆ ಇಬ್ರಾಹಿಂ ಕುರಿತು ನೀಡುತ್ತಿರುವ ಹೇಳಿಕೆಗಳು ಹೆಚ್ಚು ಗಮನ ಸೆಳೆಯುತ್ತಿವೆ.


ಶಾರದ ಅಪ್ಪಾಜಿ
    ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ಆತ್ಮೀಯ ಸ್ನೇಹ ಬಾಂಧವ್ಯ ಇಬ್ರಾಹಿಂ ಮಾತೃಪಕ್ಷದಿಂದ ಕಳಚಿಕೊಳ್ಳುವಂತೆ ಮಾಡಿತ್ತು. ಸಿದ್ದಾರಾಮಯ್ಯ ಸಹ ಇಬ್ರಾಹಿಂ ಅವರನ್ನು ಎಂದಿಗೂ ಕಡೆಗಣಿಸಿಲ್ಲ. ಹಲವು ಬಾರಿ ಕಾಂಗ್ರೆಸ್ ಪಕ್ಷದಲ್ಲಿನ ಅಹಿತಕರ ಬೆಳವಣಿಗಳಿಂದ ಇಬ್ರಾಹಿಂ ಮನನೊಂದಿದ್ದರು. ಜೊತೆಗೆ ಪುನಃ ಮಾತೃಪಕ್ಷಕ್ಕೆ ಮರಳುವ ಇಂಗಿತ ವ್ಯಕ್ತಪಡಿಸಿದ್ದರು. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲೂ ಸೂಕ್ತ ಸ್ಥಾನಮಾನಗಳನ್ನು ಕಲ್ಪಿಸಿಕೊಡುವ ಜೊತೆಗೆ ಈ ಹಿಂದಿನ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಪ್ರಬಲವಾಗಿ, ರಾಜಕೀಯವಾಗಿ ಅಸ್ತಿತ್ವ ಕಂಡುಕೊಂಡಿರುವ ಬಿ.ಕೆ ಸಂಗಮೇಶ್ವರ್ ಅವರಿಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸಿ ಇಬ್ರಾಹಿಂ ಸ್ಪರ್ದಿಸಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಆದರೆ ಇಬ್ರಾಹಿಂ ಚುನಾವಣೆಯಲ್ಲಿ ೩ನೇ ಸ್ಥಾನ ಕಾಯ್ದುಕೊಂಡಿದ್ದರು. ಇಬ್ರಾಹಿಂ ಇಂತಹ ಪರಿಸ್ಥಿತಿಯಲ್ಲೂ ವಿಧಾನ ಪರಿಷತ್‌ಗೆ ಆಯ್ಕೆಯಾಗಿದ್ದರು. ಈ ಮೂಲಕ ಸಿದ್ದರಾಮಯ್ಯ ಸ್ನೇಹ ಬಾಂಧವ್ಯ ಮತ್ತಷ್ಟು ಗಟ್ಟಿ ಮಾಡಿಕೊಂಡಿದ್ದರು.
    ಕ್ಷೇತ್ರದಲ್ಲಿ ಮಾಜಿ ಶಾಸಕ ದಿವಂಗತ ಎಂ.ಜೆ ಅಪ್ಪಾಜಿ ತಮ್ಮದೇ ಆದ ವರ್ಚಸ್ಸಿನ ಮತಗಳನ್ನು ಹೊಂದಿದ್ದರು. ಅವರ ನಿಧನದ ನಂತರ ಅವರ ಸ್ಥಾನವನ್ನು ತುಂಬಬಹುದಾದ ಸಮರ್ಥ ನಾಯಕನ ಹುಡುಕಾಟದಲ್ಲಿ ತೊಡಗಿದ್ದ ಜೆಡಿಎಸ್ ಒಂದು ವರ್ಷದ ಬಳಿಕೆ ಅಪ್ಪಾಜಿಯವರ ವರ್ಚಸ್ಸಿನ ಮತ ಹಾಗು ಅನುಕಂಪದ ಮತಗಳನ್ನು ಸೆಳೆಯಲು ಅಪ್ಪಾಜಿ ಅವರ ಪತ್ನಿ ಶಾರದ ಅಪ್ಪಾಜಿಗೆ ನಾಯಕತ್ವ ವಹಿಸಿಕೊಡುವ ಜೊತೆಗೆ ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಘೋಷಿಸಿದೆ. ಕ್ಷೇತ್ರದಲ್ಲಿ  ಇಬ್ರಾಹಿಂ ಅಗತ್ಯವಿಲ್ಲದೆ ಮುಂಬರುವ ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲುವ ಲಕ್ಷಣದ ವಾತಾವರಣ ಇದೀಗ ಕಂಡು ಬರುತ್ತಿದೆ. ಇಂತಹ ಸಂದರ್ಭದಲ್ಲಿ ಒಂದು ವೇಳೆ ಇಬ್ರಾಹಿಂ ಮಾತೃಪಕ್ಷಕ್ಕೆ ಮರಳಿ ಬಂದಲ್ಲಿ ಕ್ಷೇತ್ರದ ಮಟ್ಟಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಿದೆ. ಅದರಲ್ಲೂ ಶಾರದ ಅಪ್ಪಾಜಿಗೆ ಹಿನ್ನಡೆಯಾಗುವುದು ಬಹುತೇಕ ಖಚಿತವಾಗಿದೆ ಎಂಬ ಲೆಕ್ಕಚಾರಗಳ ರಾಜಕೀಯ ವಿಶ್ಲೇಷಣೆಗಳು ನಡೆಯುತ್ತಿವೆ. ಇಷ್ಟಕ್ಕೂ ಕಾಂಗ್ರೆಸ್ ಯಾವುದೇ ರೀತಿ ದ್ರೋಹ ಬಗೆದಿಲ್ಲ. ಆದರೂ ಇಬ್ರಾಹಿಂ ಮಾತೃಪಕ್ಷಕ್ಕೆ ಮರಳುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಮೇಲ್ನೋಟಕ್ಕೆ ಇಂದೊಂದು ರೀತಿಯ  ಅಪರೇಷನ್ ಕಾಂಗ್ರೆಸ್ ರೀತಿಯಲ್ಲಿ ಕಂಡು ಬರುತ್ತಿದೆ.

ಸುಲ್ತಾನ್‌ಮಟ್ಟಿ ಸರ್ಕಾರಿ ಶಾಲೆಯಲ್ಲಿ ನೂತನ ಪ್ರಯೋಗಾಲಯ ಉದ್ಘಾಟನೆ

ಭದ್ರಾವತಿ ತಾಲೂಕಿನ ಸುಲ್ತಾನ್‌ಮಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೋಮವಾರ ವಿಜ್ಞಾನ ಶಾಸ್ತ್ರ ಮತ್ತು ಗಣಿತ ಶಾಸ್ತ್ರದ ನೂತನ ಪ್ರಯೋಗಾಲಯವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಇನ್ನಿತರರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
    ಭದ್ರಾವತಿ, ಅ. ೪: ತಾಲೂಕಿನ ಸುಲ್ತಾನ್‌ಮಟ್ಟಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೋಮವಾರ ವಿಜ್ಞಾನ ಶಾಸ್ತ್ರ ಮತ್ತು ಗಣಿತ ಶಾಸ್ತ್ರದ ನೂತನ ಪ್ರಯೋಗಾಲಯವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಉದ್ಘಾಟಿಸಿದರು.
    ಶಾಲೆಯ ಶೈಕ್ಷಣಿಕ ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕರು ಪ್ರಯೋಗಾಲಯ ನಿರ್ಮಾಣಕ್ಕೆ ಸುಮಾರು ೪೦ ಸಾವಿರ ರು. ಸ್ವಂತ ಹಣ ವ್ಯಯ ಮಾಡಿರುವ ರಾಜ್ಯ ಶಿಕ್ಷಕ ಪ್ರಶಸ್ತಿ ಪುರಸ್ಕೃತ ರೇವಣಪ್ಪ ಮತ್ತು ಸಹ ಶಿಕ್ಷಕ ಆನಂದ್‌ರವರನ್ನು ಅಭಿನಂದಿಸಿದರು.
    ಶಾಲೆಯ ಮುಖ್ಯ ಶಿಕ್ಷಕರು ಹಾಗು ಎಸ್‌ಡಿಎಂಸಿ ಅಧ್ಯಕ್ಷರು ಮತ್ತು ಸದಸ್ಯರು ಮಾತನಾಡಿ, ಮುಂಬರುವ ಶೈಕ್ಷಣಿಕ ಸಾಲಿನಿಂದ ಪ್ರತಿ ವರ್ಷ ಶಾಲೆಗೆ ಹೊಸದಾಗಿ ದಾಖಲಾಗುವ ಪ್ರತಿ ಮಗುವಿಗೆ ೨೦೦೦ ರು. ಉಚಿತ ಬಾಂಡ್ ನೀಡುವ ವಿನೂತನ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ತಿಳಿಸಿದರು.
    ಕ್ಷೇತ್ರ ಶಿಕ್ಷಣ ಸಂಪನ್ಮೂಲ ಸಮನ್ವಯಾಧಿಕಾರಿ ಗಣೇಶ್, ಸಿಆರ್‌ಪಿ ಲಿಂಗರಾಜ್, ಗ್ರಾಮ ಪಂಚಾಯಿತಿ ಅಧ್ಯಕ್ಷ ಉತ್ತರೇಶ್ ಹಾಗು ಸದಸ್ಯರು, ಕಾಂಗ್ರೆಸ್ ಯುವ ಮುಖಂಡ ಗಣೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವಿಇಎಸ್ ವಿದ್ಯಾಸಂಸ್ಥೆಯಲ್ಲಿ ಮಹಾತ್ಮಗಾಂಧಿ, ಲಾಲ್‌ಬಹದ್ದೂರು ಶಾಸ್ತ್ರಿ ಜಯಂತಿ


ಭದ್ರಾವತಿ ಹೊಸಸೇತುವೆ ರಸ್ತೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಮತ್ತು 'ಲೋಕ್ ಅದಾಲತ್' ಉಪಯೋಗಗಳ ಕುರಿತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಇ .ಮೋಹನ್ ಗೌಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಭದ್ರಾವತಿ, ಅ. ೪: ನಗರದ ಹೊಸಸೇತುವೆ ರಸ್ತೆಯ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆಶ್ರಿತದ ವಿಶ್ವೇಶ್ವರಾಯ ವಿದ್ಯಾಸಂಸ್ಥೆಯಲ್ಲಿ ಅಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ ಮತ್ತು 'ಲೋಕ್ ಅದಾಲತ್' ಉಪಯೋಗಗಳ ಕುರಿತ ಕಾರ್ಯಕ್ರಮ ಆಯೋಜಿಸಲಾಗಿತ್ತು.
    ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಎಂ.ಇ .ಮೋಹನ್ ಗೌಡ ಮಹಾತ್ಮ ಗಾಂಧಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿ, 'ಲೋಕ್ ಅದಾಲತ್' ಉಪಯೋಗಗಳ ಕುರಿತು ಮಾಹಿತಿ ನೀಡುವ ಜೊತೆಗೆ ಉಚಿತ ಕಾನೂನು ಸೇವೆಗಳನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಕರೆ ನೀಡಿದರು.
    ಬಿ.ಇಡಿ ವಿಭಾಗದ ಉಪನ್ಯಾಸಕಿ ಚೈತ್ರರವರು ಮಹಾತ್ಮ ಗಾಂಧಿ ಅವರ ತತ್ವ ಮತ್ತು ಆದರ್ಶಗಳನ್ನು ಕುರಿತ ಮಾತನಾಡಿದರು. 
    ವಕೀಲರ ಸಂಘದ ಕಾರ್ಯದರ್ಶಿ ಟಿ.ಎಸ್ ರಾಜು, ಖಜಾಂಚಿ ಎನ್. ರಂಗಪ್ಪ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾಹಿತಿ ನೀಡಿದರು.  ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಶಾಖೆ ಅಧ್ಯಕ್ಷ ಬಿ. ಸಿದ್ದಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್ ಬಸವರಾಜ್, ಶಿವಾಜಿರಾವ್, ಸಿಆರ್‌ಪಿ ಸುನಿತಾ, ಪ್ರತಿಭಾ, ವಿದ್ಯಾಸಂಸ್ಥೆ ಆಡಳಿತಾಧಿಕಾರಿ ಡಾ. ಎಸ್.ಪಿ. ರಾಕೇಶ್, ಪಿಯು ವಿಭಾಗಗಳ ಪ್ರಾಂಶುಪಾಲ ವರದರಾಜ ಹಾಗೂ ಎಲ್ಲಾ ವಿಭಾಗಗಳ ಮುಖ್ಯಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
    ವಿದ್ಯಾ ಸಂಸ್ಥೆಯ ಸಂಸ್ಥಾಪಕ ಛೇರ್ಮನ್ ಬಿ.ಎಲ್ ರಂಗಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಆಡಳಿತಧಿಕಾರಿ ಶಿವಲಿಂಗೇಗೌಡ  ಸ್ವಾಗತಿಸಿದರು.  ಆಶಾ ಪ್ರಾರ್ಥಿಸಿದರು. ಉಪನ್ಯಾಸಕಿ ಶೋಭಾ ನಿರೂಪಿಸಿ, ವೀಣಾ ವಂದಿಸಿದರು.

ಹೊಸಸಿದ್ದಾಪುರ ಸರ್ಕಾರಿ ಪ್ರೌಢಶಾಲೆ ಗಾಂಧಿ ಜಯಂತಿ, ಲೋಕ್ ಅದಾಲತ್

ಭದ್ರಾವತಿ ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ವತಿಯಿಂದ ಆಯೋಜಿಸಲಾಗಿದ್ದ 'ಅಜಾದಿ ಕಾ ಅಮೃತ್ ಮಹೋತ್ಸವ' ಅಂಗವಾಗಿ ಗಾಂಧಿ ಜಯಂತಿ ಮತ್ತು ʻಲೋಕ್ ಅದಾಲತ್ʼ ಉಪಯೋಗಗಳ ಕುರಿತ ಕಾರ್ಯಕ್ರಮವನ್ನು ಜೆಎಂಎಫ್‌ಸಿ ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಈ ಬಣಕಾರ ಉದ್ಘಾಟಿಸಿದರು.  
    ಭದ್ರಾವತಿ, ಅ. ೪: ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘದ ವತಿಯಿಂದ 'ಅಜಾದಿ ಕಾ ಅಮೃತ್ ಮಹೋತ್ಸವ' ಅಂಗವಾಗಿ ಗಾಂಧಿ ಜಯಂತಿ ಮತ್ತು   ʻಲೋಕ್ ಅದಾಲತ್ʼ ಉಪಯೋಗಗಳ ಕುರಿತ ಕಾ‍ರ್ಯಕ್ರಮವನ್ನು    ಆಯೋಜಿಸಲಾಗಿತ್ತು.
    ಕಾರ್ಯಕ್ರಮವನ್ನು ನಗರದ ಜೆಎಂಎಫ್‌ಸಿ ೨ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರಾದ ಚಂದ್ರಶೇಖರ ಈ ಬಣಕಾರ ಉದ್ಘಾಟಿಸಿದರು.  ವಕೀಲರ ಸಂಘದ ಉಪಾಧ್ಯಕ್ಷ ವೈ. ಜಯರಾಂ, ಕಲ್ಲಹಳ್ಳಿ ಶೈಕ್ಷಣಿಕ ಮಾರ್ಗದರ್ಶಕ ಶೇಖರಪ್ಪ, ನಗರಸಭಾ ಸದಸ್ಯ ಸೈಯದ್ ರಿಯಾಜ್, ಎಸ್.ಡಿ.ಎಸ್.ಸಿ ಕಾರ್ಯಾಧ್ಯಕ್ಷ ರಾಜು ಎಸ್. ರಾಯ್ಕರ್ ಮತ್ತು ಸದಸ್ಯ ಸೋಮಶೇಖರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಕಾರ್ಯಕ್ರಮದಲ್ಲಿ ಲೋಕ್ ಆದಾಲತ್ ಪ್ರಯೋಜನಗಳನ್ನು ವಿವರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಆಋ. ಬಸವರಾಜ ಅಧ್ಯಕ್ಷತೆ ವಹಿಸಿದ್ದರು. ವಿ. ವರ್ಷಾ ಪ್ರಾರ್ಥಿಸಿದರು. ಡಿ. ಮುರುಳೀಧರ ಸ್ವಾಗತಿಸಿ ಎಚ್.ಎಸ್ ಶಕುಂತಲ ನಿರೂಪಿಸಿದರು. ಎಸ್.ಕೆ ಗೀತಾ ವಂದಿಸಿದರು.