Monday, January 20, 2025

ಯೋಗ ಕ್ಷೇತ್ರದಲ್ಲಿ ಸಾಧನೆ : ಡಿ. ನಾಗರಾಜ್‌ಗೆ ಕುವೆಂಪು ವಿ.ವಿ ಗೌರವ ಡಾಕ್ಟರೇಟ್ ಪದವಿ

ಭದ್ರಾವತಿ ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್‌ನ ಅಂತರಾಷ್ಟ್ರೀಯ ಯೋಗ ಗುರು ಡಿ. ನಾಗರಾಜ್‌ರವರು ಯೋಗ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕುವೆಂಪು ವಿಶ್ವ ವಿದ್ಯಾನಿಲಯ ಜ.೨೨ರಂದು ಆಯೋಜಿಸಿರುವ ೩೪ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲಿದೆ. ಕುಲಸಚಿವ ಎಸ್.ಎಂ ಗೋಪಿನಾಥ್‌ರವರು ನಾಗರಾಜ್‌ರವರ ನಿವಾಸಕ್ಕೆ ತೆರಳಿ ಪದವಿ ಸ್ವೀಕಾರಕ್ಕೆ ಆಹ್ವಾನಿಸಿದ್ದಾರೆ. 
    ಭದ್ರಾವತಿ : ನಗರದ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್‌ನ ಅಂತರಾಷ್ಟ್ರೀಯ ಯೋಗ ಗುರು ಡಿ. ನಾಗರಾಜ್‌ರವರು ಯೋಗ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಕುವೆಂಪು ವಿಶ್ವ ವಿದ್ಯಾನಿಲಯ ಜ.೨೨ರಂದು ಆಯೋಜಿಸಿರುವ ೩೪ನೇ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲಿದೆ. 
    ನಾಗರಾಜ್‌ರವರು ಯೋಗ ಕಲಿಕೆಯೊಂದಿಗೆ ಉತ್ತಮ ಸಾಧನೆ ಮಾಡುವ ಜೊತೆಗೆ ನಗರದಲ್ಲಿ ವಿವೇಕಾನಂದ ಯೋಗ ಶಿಕ್ಷಣ ಟ್ರಸ್ಟ್ ಆರಂಭಿಸುವ ಮೂಲಕ ಯೋಗಪಟುಗಳನ್ನು ಪೋತ್ಸಾಹಿಸುವ ಜೊತೆಗೆ ಅವರು ಸಮಾಜದಲ್ಲಿ ಗುರುತಿಸಿಕೊಳ್ಳಲು ಕಾರಣಕರ್ತರಾಗಿದ್ದಾರೆ. ಅಲ್ಲದೆ ಉಚಿತ ಯೋಗ ತರಬೇತಿಗಳನ್ನು ಆಯೋಜಿಸಿ ಯೋಗದ ಮಹತ್ವ ತಿಳಿಸಿಕೊಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. 
    ನಾಗರಾಜ್‌ರವರು ರಾಜ್ಯಮಟ್ಟ, ರಾಷ್ಟ್ರಮಟ್ಟ ಹಾಗು ಅಂತರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಹಲವಾರು ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ, ಜಿಲ್ಲಾಡಳಿತ, ತಾಲೂಕು ಆಡಳಿತ ಹಾಗು ವಿವಿಧ ಸಂಘ-ಸಂಸ್ಥೆಗಳು ಪ್ರಶಸ್ತಿ, ಬಿರುದುಗಳನ್ನು ನೀಡಿ ಗೌರವಿಸಿವೆ. 
    ಇದೀಗ ಕುವೆಂಪು ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್ ಪದವಿ ನೀಡಲಿದ್ದು, ಕುಲಸಚಿವ ಎಸ್.ಎಂ ಗೋಪಿನಾಥ್‌ರವರು ನಾಗರಾಜ್‌ರವರ ನಿವಾಸಕ್ಕೆ ತೆರಳಿ ಪದವಿ ಸ್ವೀಕಾರಕ್ಕೆ ಆಹ್ವಾನಿಸಿದ್ದಾರೆ. ಘಟಿಕೋತ್ಸವದಲ್ಲಿ ವಿಶ್ವ ವಿದ್ಯಾನಿಲಯದ ಕುಲಾಧಿಪತಿಗಳಾದ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್‌ರವರು ಪದವಿ ಪ್ರಧಾನ ಮಾಡಲಿದ್ದಾರೆ. 

ಎಸ್‌ಡಬ್ಲ್ಯೂಐಎಎ ರಾಷ್ಟ್ರ ಪ್ರಶಸ್ತಿ ಮುಡಿಗೇರಿಸಿಕೊಂಡ ರಂಗ ಕಲಾವಿದೆ, ಶಿಕ್ಷಕಿ ಲಕ್ಷ್ಮಿ

ದಕ್ಷಿಣ ಭಾರತೀಯ ಮಹಿಳಾ ಸಾಧನೆಯ ರಾಷ್ಟ್ರ ಪ್ರಶಸ್ತಿ ಎಸ್‌ಡಬ್ಲ್ಯೂಐಎಎ-೨೦೨೪ ಮುಡಿಗೇರಿಸಿಕೊಳ್ಳುವ ಮೂಲಕ ಭದ್ರಾವತಿ ನಗರದ ಲಕ್ಷ್ಮಿ ಭದ್ರಾವತಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
    ಭದ್ರಾವತಿ : ದಕ್ಷಿಣ ಭಾರತೀಯ ಮಹಿಳಾ ಸಾಧನೆಯ ರಾಷ್ಟ್ರ ಪ್ರಶಸ್ತಿ ಎಸ್‌ಡಬ್ಲ್ಯೂಐಎಎ-೨೦೨೪ ಮುಡಿಗೇರಿಸಿಕೊಳ್ಳುವ ಮೂಲಕ ನಗರದ ಲಕ್ಷ್ಮಿ ಭದ್ರಾವತಿ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
    ದಕ್ಷಿಣ ಭಾರತದಲ್ಲೇ ರಂಗಭೂಮಿ ಕಲಾವಿದೆಯ ಸಾಧನೆಯ ಪ್ರಶಸ್ತಿಗೆ ಆಯ್ಕೆಯಾದ ಏಕೈಕ ಕಲಾವಿದೆ ಎಂಬ ಕೀರ್ತಿಗೆ ಲಕ್ಷ್ಮಿ ಪಾತ್ರರಾಗಿದ್ದಾರೆ. ಸೌಂದರ್ಯ ಮತ್ತು ಪ್ರತಿಭೆ ಇವರ ಸಾಧನೆಗೆ ಪೂರಕವಾಗಿವೆ. ತಂದೆಯ ಪ್ರೇರಣೆಯಿಂದ ವಿದ್ಯಾಭ್ಯಾಸದ ಜೊತೆ ಜೊತೆಗೆ ೯ನೇ ತರಗತಿಯಿಂದಲೇ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದು, ಹಲವು ಸಾಧನೆಗಳನ್ನು ಮಾಡಿದ್ದಾರೆ.  
    ವೃತ್ತಿಯಲ್ಲಿ ಶಿಕ್ಷಕಿಯಾಗಿರುವ ಇವರು ಅನೇಕ ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಶಾಲೆ ಮುಗಿದ ಬಳಿಕ ರಂಗ ಶಿಬಿರಗಳಲ್ಲಿ ಭಾಗವಹಿಸುವ ಜೊತೆಗೆ ಅದೆಷ್ಟೋ ಶಾಲಾ ಕಾಲೇಜುಗಳಿಗೆ ಉಚಿತವಾಗಿ ನಾಟಕ ಹಾಗೂ ನೃತ್ಯಗಳನ್ನು ಕಲಿಸಿ ಕೊಡುತ್ತಿದ್ದಾರೆ. ಯಾವುದೇ ವಿಷಯ ನೀಡಿದರೂ ಅದ್ಬುತವಾಗಿ ಉಪನ್ಯಾಸ ಮಂಡಿಸುವ ವಾಕ್ಚಾತುರ್ಯ ಹೊಂದಿರುವುದು ಇವರ ಮತ್ತೊಂದು ವಿಶೇಷತೆಯಾಗಿದೆ.  
    ಇವರು ತಮ್ಮ ಸಾಧನೆಯ ದಾರಿಯಲ್ಲಿ ಸಾಕಷ್ಟು ವೈಫಲ್ಯಗಳನ್ನು ಅನುಭವಿಸಿದ್ದು,  ಪ್ರತಿ ವಿಫಲ ಪ್ರಯತ್ನದಿಂದ ಯಶಸ್ಸು ಕಂಡುಕೊಂಡಿದ್ದಾರೆ. ಕುಟುಂಬದ ಬೆಂಬಲ, ಅಭಿಮಾನಿಗಳ ಪ್ರೀತಿಯಿಂದ ಪ್ರಸ್ತುತ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ನಗರದ ಗಣ್ಯರು, ಅಭಿಮಾನಿಗಳು ಅಭಿನಂದಿಸಿದ್ದಾರೆ. 

ವಿಐಎಸ್‌ಎಲ್ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಚಾಲನೆ ನೀಡಿದರು.
    ಭದ್ರಾವತಿ : ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಾರ್ಖಾನೆಯ ಕಾರ್ಯಪಾಲಕ ನಿರ್ದೇಶಕ ಬಿ.ಎಲ್ ಚಂದ್ವಾನಿ ಚಾಲನೆ ನೀಡಿದರು.
    ಶ್ರೇಷ್ಠ ತಂತ್ರಜ್ಞ (ಇಂಜಿನಿಯರ್), ರಾಜನೀತಿಜ್ಞ, ನಗರದ ಅನ್ನದಾತ, ಭಾರತರತ್ನ ಸರ್.ಎಂ ವಿಶ್ವೇಶ್ವರಾಯರವರ ಮಾರ್ಗದರ್ಶನದಲ್ಲಿ ಅಂದಿನ ಮೈಸೂರು ಮಹಾರಾಜರಾದ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ನೇತೃತ್ವದಲ್ಲಿ ಜ.೧೮, ೧೯೧೮ ರಲ್ಲಿ ಮೈಸೂರು ವುಡ್ ಡಿಸ್ಟಿಲೇಷನ್ ಮತ್ತು ಐರನ್ ವರ್ಕ್ಸ್ ಹೆಸರಿನಲ್ಲಿ ಶಂಕುಸ್ಥಾಪನೆಗೊಂಡಿದ್ದು, ಕಾರ್ಖಾನೆ ವತಿಯಿಂದ ಈ ದಿನವನ್ನು ಪ್ರತಿವರ್ಷ ಸಂಸ್ಥಾಪಕರ ದಿನವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. 
    ಬೆಳಿಗ್ಗೆ ಕಾರ್ಖಾನೆ ಆಡಳಿತ ಕಛೇರಿ ಆವರಣದಲ್ಲಿರುವ ಸರ್.ವಿ ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ಸೂಚಿಸಲಾಯಿತು.  ನಂತರ ನುಗ್ಗೆ, ಅಡಕೆ, ಪಪ್ಪಾಯಿ, ಹೊಂಗೆ, ಹಲಸು ಮತ್ತು ಮಾವು ಸೇರಿದಂತೆ ಸುಮಾರು ೨೫೦ ಸಸಿಗಳನ್ನು ಕಾರ್ಖಾನೆಯ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.
    ಸಂಜೆ ನ್ಯೂಟೌನ್ ವಿಐಎಸ್‌ಎಲ್ ರಜತ ಮಹೋತ್ಸವ ಕ್ರೀಡಾಂಗಣದ ಅಮೃತ ಮಹೋತ್ಸವ ವೇದಿಕೆಯಲ್ಲಿ ಸಂಸ್ಥಾಪಕ ದಿನಾಚರಣೆ ಅಂಗವಾಗಿ ಸುಮಾರು ೪೦ ದಿನಗಳ ಕಾಲ ಆಯೋಜಿಸಲಾಗಿರುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಲಾಯಿತು. 
    ಕಾರ್ಖಾನೆಯ ಮುಖ್ಯ ಮಹಾಪ್ರಬಂಧಕರು (ಸ್ಥಾವರ) ಕೆ.ಎಸ್ ಸುರೇಶ್, ಮಹಾಪ್ರಬಂಧಕರು (ಹೆಚ್.ಆರ್ ಮತ್ತು ಸಾರ್ವಜನಿಕ ಸಂಪರ್ಕ) ಎಲ್. ಪ್ರವೀಣ್ ಕುಮಾರ್, ಕಾರ್ಮಿಕರ ಸಂಘದ ಅಧ್ಯಕ್ಷ ಜೆ. ಜಗದೀಶ,  ಅಧಿಕಾರಿಗಳ ಸಂಘದ ಅಧ್ಯಕ್ಷ ಪಾರ್ಥಸಾರಥಿ ಮಿಶ್ರ, ಮಹಾಪ್ರಬಂಧಕರು (ನಗರಾಡಳಿತ) ಮೋಹನ್ ರಾಜ್ ಶೆಟ್ಟಿ, ಮಹಾಪ್ರಬಂಧಕರು (ಹಣಕಾಸು ಮತ್ತು ಲೆಕ್ಕ) ಶೋಭ ಶಿವಶಂಕರನ್, ಉಪ ಮಹಾಪ್ಬಂಧಕರು (ಗಣಿಗಳು) ಅನಿಲ್ ಕುಮಾರ್ ರೆಡ್ಡಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 
    ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕೋಲಾಟ ಮತ್ತು ಸಮೂಹ ಗಾಯನ ಕಾರ್ಖಾನೆಯ ಮಹಿಳಾ ಮತ್ತು ಪುರುಷ ಕಾರ್ಮಿಕರು ನಡೆಸಿಕೊಟ್ಟರು,  ಕಾರ್ಖಾನೆಯ ಇಳಯರಾಜ ಮತ್ತು ಕೃಷ್ಣರವರ ಪುತ್ರಿಯರಾದ ಮೋನಿಕಾ ಮತ್ತು ಲೇಖನ ಅವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು.
 

ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ಸರ್.ಎಂ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ಸಂಸ್ಥಾಪಕರ ದಿನ ಆಚರಣೆ ಹಿನ್ನಲೆಯಲ್ಲಿ ನುಗ್ಗೆ, ಅಡಕೆ, ಪಪ್ಪಾಯಿ, ಹೊಂಗೆ, ಹಲಸು ಮತ್ತು ಮಾವು ಸೇರಿದಂತೆ ಸುಮಾರು ೨೫೦ ಸಸಿಗಳನ್ನು ಕಾರ್ಖಾನೆಯ ಕಾಯಂ ಹಾಗು ಗುತ್ತಿಗೆ ಕಾರ್ಮಿಕರು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.