Thursday, April 21, 2022

ಕುಟುಂಬದಲ್ಲಿ ಉತ್ತಮ ವಾತಾವರಣ ರೂಪುಗೊಳ್ಳಲು ಸಂಗೀತ ಸಹಕಾರಿ : ಶಿವರಾಜ್

ವೀರಶೈವ ಲಿಂಗಾಯಿತ ಮಹಿಳಾ ವೇದಿಕೆ ವತಿಯಿಂದ ಭದ್ರಾವತಿ ಹಳೇನಗರದ ಶ್ರೀ ವೀರಶೈವ ಸಮುದಾಯ ಭವನದಲ್ಲಿ  ವಚನ ಗಾಯನ ಸ್ಪರ್ಧೆ ಆಯೋಜಿಸಲಾಗಿತ್ತು.
    ಭದ್ರಾವತಿ, ಏ. ೨೧: ಕುಟುಂಬದಲ್ಲಿ ಉತ್ತಮ ವಾತಾವರಣ ರೂಪುಗೊಳ್ಳಲು ಸಂಗೀತ ಸಹಕಾರಿಯಾಗಿದ್ದು, ಸಂಗೀತದಂತಹ ಕ್ಷೇತ್ರಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿಂದೂಸ್ತಾನಿ, ಶಾಸ್ತ್ರೀಯ ಸಂಗೀತ ಗಾಯಕ ಶಿವರಾಜ್ ಹೇಳಿದರು.
    ಅವರು ವೀರಶೈವ ಲಿಂಗಾಯಿತ ಮಹಿಳಾ ವೇದಿಕೆ ವತಿಯಿಂದ ಹಳೇನಗರದ ಶ್ರೀ ವೀರಶೈವ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಚನ ಗಾಯನ ಸ್ಪರ್ಧೆ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಪಾಲ್ಗೊಂಡು ಮಾತನಾಡಿದರು.
    ಇಂದು ನಾವು ಪಾಶ್ಚಿಮಾತ್ಯ ಸಂಗೀತದ ಕಡೆ ಹೆಚ್ಚಿನ ಒಲುವು ತೋರುತ್ತಿದ್ದೇವೆ. ಆದರೆ ಅದಕ್ಕಿಂತ ನಮ್ಮ ಸನಾತನ ಪರಂಪರೆಯ ಸಂಗೀತ, ವಚನಗಳು ಮನಸ್ಸಿಗೆ ನೀಡುವ ಸಂತೋಷ, ನೆಮ್ಮದಿ ಅವುಗಳು ನೀಡುವುದಿಲ್ಲ ಎಂದರು.
ಸಂಗೀತದಿಂದ ಹಲವು ಖಾಯಿಲೆಗಳಿಗೆ ಚಿಕಿತ್ಸೆ ನೀಡುವ ಮೂಲಕ ಗುಣಪಡಿಸಿದ ಹಲವಾರು ಘಟನೆಗಳು ವೈಜ್ಞಾನಿಕವಾಗಿ ಸಾಕ್ಷಿಯಾಗಿವೆ. ಇಂತಹ ವಿಶಿಷ್ಟವಾದ ಮಾಂತ್ರಿಕ ಶಕ್ತಿ ಹೊಂದಿರುವಂತಹ ಕ್ಷೇತ್ರದತ್ತ ಒಲವು ಬೆಳೆಸಿಕೊಳ್ಳಿ ಎಂದರು.
    ಸಂಗೀತ ವಿದೂಷಿಗಳಾದ ಗಾಯಿತ್ರಿ ಹಾಗು ಗಿರಿಜಾ ಮಾತನಾಡಿ, ಮಹಿಳೆಯರು ರಾಗ, ತಾಳ, ಭಾವ, ಸಾಹಿತ್ಯದೊಂದಿಗೆ ಸಂಗೀತದ ಜೊತೆ ವಚನಗಳನ್ನು ಹೇಳುವ ಅಭ್ಯಾಸ ಬೆಳೆಸಿಕೊಂಡಾಗ ಮಾತ್ರ ಅಂತಹವರಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಉತ್ತಮ ವೇದಿಕೆಗಳು ದೊರೆಯುತ್ತವೆ ಎಂದರು.
    ಸಂಗೀತ ಹಾಗು ವಚನಗಳನ್ನು ಕಲಿಯಲು ವಯಸ್ಸಿನ ಮಿತಿ ಇಲ್ಲ. ಆದರೆ ಕಲಿಯುವ ಆಸಕ್ತಿ ಬಹುಮುಖ್ಯ. ಇಂತಹ ಕಾರ್ಯಕ್ರಮ ಮತ್ತು ಶಿಬಿರಗಳಲ್ಲಿ ಭಾಗವಹಿಸಿದಾಗ ಮನಸ್ಸಿಗೆ ನೆಮ್ಮದಿ, ಆನಂದ ದೊರೆಯುತ್ತದೆ. ಅಲ್ಲದೆ ಪರಸ್ಪರರಲ್ಲಿ ಸ್ನೇಹ ಭಾವದ ಸಂಬಂಧ ಹೆಚ್ಚಾಗುತ್ತದೆ ಎಂದರು.
    ಆರ್.ಎಸ್ ಶೋಭಾ ಅಧ್ಯಕ್ಷತೆ ವಹಿಸಿದ್ದರು. ಸುಲೋಚನಾ ಪ್ರಾರ್ಥಿಸಿದರು. ನಾಗರತ್ನ ವಿ ಕೋಠಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಶಾಂತ ವಂದಿಸಿದರು. ಭಾಗ್ಯ, ಪುಟ್ಟಮ್ಮ, ಉಷಾ, ಶೃತಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮಹಿಳೆಯರು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತಗೊಳ್ಳಬಾರದು : ಮಹಾದೇವ್

ಭದ್ರಾವತಿಯಲ್ಲಿ ಸ್ನೇಹ ಮಿಲನ ಮಹಿಳಾ ಸಂಘದ ವತಿಯಿಂದ  ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
    ಭದ್ರಾವತಿ, ಏ. ೨೧: ಮಹಿಳಾ ಸಂಘಗಳು ಕೇವಲ ಆರ್ಥಿಕ ಚಟುವಟಿಕೆಗಳಿಗೆ ಸೀಮಿತಗೊಳ್ಳಬಾರದು ಎಂದು ತಾಲೂಕು ಅಖಿಲ ಭಾರತ ವೀರಶೈವ ಮಹಾಸಭಾ ಯುವ ಘಟಕದ ಉಪಾಧ್ಯಕ್ಷ ಮಹಾದೇವ್ ಹೇಳಿದರು.
     ಅವರು ನಗರದ ಸ್ನೇಹ ಮಿಲನ ಮಹಿಳಾ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಭಾರತರತ್ನ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಹಾಗೂ ಅಕ್ಕಮಹಾದೇವಿ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
    ಸಾಲ ಪಡೆಯುವುದು, ಪಡೆದ ಸಾಲವನ್ನು ತೀರಿಸುವುದು, ಉಳಿತಾಯ ಮಾಡುವುದು ಇಷ್ಟಕ್ಕೆ ಸೀಮಿತವಾಗಬಾರದು. ಮಹಾನ್ ಆದರ್ಶ ವ್ಯಕ್ತಿಗಳ ಜನ್ಮದಿನಾಚರಣೆ, ಸಾಮಾಜಿಕ ಸೇವಾ ಕಾರ್ಯಗಳು ಸೇರಿದಂತೆ ವಿಭಿನ್ನ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ತಮ್ಮ ಬದ್ದತೆಯನ್ನು ಪ್ರದರ್ಶಿಸಬೇಕು. ಈ ನಿಟ್ಟಿನಲ್ಲಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
    ಪ್ರಸ್ತುತ ದಿನಗಳಲ್ಲಿ ಒಂದು ಅಥವಾ ಎರಡು ಪದವಿ ಪಡೆಯುವುದೇ ಹೆಚ್ಚು. ಅಂಬೇಡ್ಕರ್‌ರವರು ಅಂದಿನ ಕಾಲದಲ್ಲಿಯೇ ೨೭ ಪದವಿಗಳನ್ನು ಪಡೆಯುವ ಮೂಲಕ ಮಹಾನ್ ಸಾಧನೆಯನ್ನು ಮಾಡಿ ತೋರಿಸಿದ್ದಾರೆ. ಅವರ ಕಠಿಣ ಪರಿಶ್ರಮ ದೇಶದ ಮಹಾನ್ ವ್ಯಕ್ತಿಯನ್ನಾಗಿ ಮಾಡುವಲ್ಲಿ ಸಹಕಾರಿಯಾಯಿತು. ಇವರ ಸ್ಮರಣೆ ಮಾಡುವುದು ಇಂದಿನ ಅಗತ್ಯವಾಗಿದೆ. ಅಂಬೇಡ್ಕರ್ ಹಾಗು ಅಕ್ಕಮಹಾದೇವಿಯವರ ಜೀವನ ಚರಿತ್ರೆ ನಾವೆಲ್ಲರೂ ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
    ಸಂಘದ ಅಧ್ಯಕ್ಷೆ ಕವಿತಾ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಘದ ಖಜಾಂಚಿ ಬಿ.ಎಸ್ ರೂಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.  ವತ್ಸಲಾ ರಮೇಶ್ ಸ್ವಾಗತಿಸಿದರು.  ರೇಣುಕಾ ಯಶೋಧರ ನಿರೂಪಿಸಿದರು. ಮಂಜುಳಾ ವಂದಿಸಿದರು.
ಕಾರ್ಯಕ್ರಮದಲ್ಲಿ ಯಶೋಧರ,  ಮಂಜುಳ. ಬಿ.ಎಸ್.ರೂಪಾ. ಸೇರಿದಂತೆ ಹಲವರಿದ್ದರು.

ಏ.೩೦, ಮೇ.೧ರಂದು ಎರಡು ದಿನ ಕಬಡ್ಡಿ ಪಂದ್ಯಾವಳಿ

ಭದ್ರಾವತಿ, ಏ. ೨೧: ಡಾ. ಬಿ.ಆರ್ ಅಂಬೇಡ್ಕರ್ ಯುವಕರ ಸಂಘ ಹಾಗು ಆರ್‌ಎಸ್‌ಎನ್ ಸ್ಪೋಟ್ಸ್ ಕ್ಲಬ್ ವತಿಯಿಂದ ಏ.೨೩ ಮತ್ತು ೨೪ ಎರಡು ದಿನಗಳ ಕಾಲ ನಗರದ ನ್ಯೂಟೌನ್ ಆಂಜನೇಯ ಅಗ್ರಹಾರ ಡಾ. ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದ ಸಮೀಪ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ಮುಂದೂಡಲಾಗಿದೆ.
    ಏ.೩೦ ಮತ್ತು ಮೇ.೧ರಂದು ಪಂದ್ಯಾವಳಿ ನಡೆಯಲಿದ್ದು, ಕ್ರೀಡಾಪಟುಗಳು ಹಾಗು ಕ್ರೀಡಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಪಂದ್ಯಾವಳಿ ಯಶಸ್ವಿಗೊಳಿಸುವಂತೆ ಕೋರಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ:  ೯೯೦೨೧೯೨೦೨೩ ಅಥವಾ ೯೯೬೪೪೪೬೧೨೩ ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಏ.೨೨ರಂದು ವಿದ್ಯುತ್ ನಿಲುಗಡೆ

    ಭದ್ರಾವತಿ, ಏ. ೨೧: ಮೆಸ್ಕಾಂ ನಗರ ಉಪವಿಭಾಗದ ವತಿಯಿಂದ ಹಳೇನಗರದ ಬಸವೇಶ್ವರ ವೃತ್ತದ ರಸ್ತೆಯಲ್ಲಿರುವ ವಿದ್ಯುತ್ ಕಂಬಗಳನ್ನು ಸ್ಥಳಾಂತರಿಸುವ ಕಾರ್ಯ ಹಮ್ಮಿಕೊಂಡಿರುವುದರಿಂದ ಏ.೨೨ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
    ಬಸವೇಶ್ವರ ವೃತ್ತ, ಖಾಜಿ ಮೊಹಲ್ಲಾ, ಎನ್‌ಎಸ್‌ಟಿ ರಸ್ತೆ, ಮಾಧವಚಾರ್ ವೃತ್ತ, ಕನಕ ಮಂಟಪ ಮೈದಾನ, ಕುರುಬರ ಬೀದಿ, ಬ್ರಾಹ್ಮಣರ ಬೀದಿ, ಸಿ.ಎನ್ ರಸ್ತೆ, ಸಂಚಿ ಹೊನ್ನಮ್ಮ ಸರ್ಕಾರಿ ಬಾಲಕಿಯರ ಕಾಲೇಜು, ಹಳೇನಗರ ಮಾರುಕಟ್ಟೆ ಸೇರಿದಂತೆ ಇತ್ಯಾದಿ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಕೋರಿದ್ದಾರೆ.