Monday, June 8, 2020

ಕೊರೋನಾ ಆರ್ಥಿಕ ಸಮಸ್ಯೆಗೆ ಹಲವು ಪರಿಹಾರ ‘ವೆಬಿನಾರ್’ನಲ್ಲಿ ಆರ್ಥಿಕ ತಜ್ಞರ ಅಭಿಪ್ರಾಯ

ಯಶಸ್ವಿಯಾಗಿ ಜರುಗಿದ ೨ ದಿನಗಳ ಅಂತರಾಷ್ಟ್ರೀಯ ವಿಚಾರ ಸಂಕಿರಣ 

ಭದ್ರಾವತಿ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ದಿ ಇಂಡಿಯನ್ ಎಕನಾಮಿಕ್ ಅಸೋಸಿಯೇಷನ್ ಸಹಕಾರದೊಂದಿಗೆ ಎರಡು ದಿನಗಳ ಅಂತರರಾಷ್ಟ್ರೀಯ ವೆಬಿನಾರ್(ಆನ್ ಲೈನ್ ವಿಚಾರ ಸಂಕಿರಣ) ಆಯೋಜಿಸಲಾಗಿತ್ತು.
ಭದ್ರಾವತಿ, ಜೂ. ೨: ಪ್ರಪಂಚದಾದ್ಯಂತ ಮಹಾಮಾರಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ಕೊರೋನಾ ವೈರಸ್ ನಿರ್ಮೂಲನೆಗಾಗಿ ಒಂದೆಡೆ ಹಗಲಿರುಳು ಸಂಶೋಧನೆಗಳು ನಡೆಯುತ್ತಿವೆ.  ಮತ್ತೊಂದೆಡೆ ಮಾನವ ಸಮಾಜದ ಇಡೀ ಆರ್ಥಿಕ ವ್ಯವಸ್ಥೆ ಕುಸಿತು ಬಿದ್ದು ಇತಿಹಾಸದ ಕರಾಳ ದಿನಗಳು ಮರುಕಳುಹಿಸುತ್ತಿವೆ. ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ಸಂಕಷ್ಟಗಳಿಂದ ಹೊರಬರುವಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಕುರಿತು ಚಿಂತನೆಗಳು ನಡೆಯುತ್ತಿವೆ. ಈ ನಿಟ್ಟಿನಲ್ಲಿ ನಗರದ ನ್ಯೂಟೌನ್ ಸರ್.ಎಂ.ವಿ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗ ಮತ್ತು ಐಕ್ಯೂಎಸಿ ವತಿಯಿಂದ ದಿ ಇಂಡಿಯನ್ ಎಕನಾಮಿಕ್ ಅಸೋಸಿಯೇಷನ್ ಸಹಕಾರದೊಂದಿಗೆ ಆಯೋಜಿಸಲಾಗಿದ್ದ ಎರಡು ದಿನಗಳ ಅಂತರರಾಷ್ಟ್ರೀಯ ವೆಬಿನಾರ್(ಆನ್ ಲೈನ್ ವಿಚಾರ ಸಂಕಿರಣ) ಸೋಮವಾರ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಹಲವು ಮಹತ್ವದ ವಿಚಾರಗಳು ಸಮಾಜದ ಮುಖ್ಯವಾಹಿನಿಗೆ ತಲುಪಿವೆ. 
ಜೂ.೪ ಮತ್ತು ೮ ಎರಡು ದಿನಗಳ ಕಾಲ  ‘ಕೋವಿಡ್-೧೯’ ಫಿಸ್ಕಲ್ ಮ್ಯಾನೇಜ್ಮೆಂಟ್, ವೇಸ್ ಅಂಡ್ ಚಾಲೆಂಚೆಸ್ ಅಹೆಡ್ (Covid-19 Fiscal Management Ways & Challenges ahead)  ವಿಷಯ ಕುರಿತು ನಡೆದ ವಿಚಾರ ಸಂಕಿರಣದಲ್ಲಿ ದೇಶ-ವಿದೇಶಗಳ ಅಂತರರಾಷ್ಟ್ರೀಯ ಮಟ್ಟದ ಆರ್ಥಿಕ ತಜ್ಞರು, ಸಂಶೋಧಕರು, ವಿವಿಧ ವಿಶ್ವ ವಿದ್ಯಾಲಯಗಳ ಕುಲಪತಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು. ನೂರಾರು ಪ್ರಬಂಧಗಳು ಆನ್ಲೈನ್ ಮೂಲಕ ಮಂಡನೆಯಾದವು. 
ಅರ್ಥಶಾಸ್ತ್ರಜ್ಞರಾದ ಬಾಂಗ್ಲಾದೇಶದ ಪ್ರೊ. ನಜುರುಲ್ ಇಸ್ಲಾಂ, ಜಮ್ಮು ಮತ್ತು ಕಾಶ್ಮೀರದ ಪ್ರೊ. ಸುಪ್ರಾನ್ ಶರ್ಮ, ಚೈನ್ನೈನ ಪ್ರೊ. ಚಂದ್ರಮೋಹನ್, ಡಾ. ಅನಿಲ್ಕುಮಾರ್ ಠಾಕೂರ್, ಪ್ರೊ. ತಪಾನ್ಕುಮಾರ್ ಶಾಂಡಿಲ್ಯ, ಒಡಿಸ್ಸಾ ಡಾ. ಸಂಧ್ಯಾ ರಾಣಿ ದಾಸ್, ಧಾರವಾಡದ ಪ್ರೊ. ಆರ್.ಆರ್ ಬಿರಾದಾರ್, ಕುವೆಂಪು ವಿ.ವಿ ಪ್ರೊ. ಎಸ್.ಎನ್ ಯೋಗೇಶ್ ಸೇರಿದಂತೆ ಇನ್ನಿತರರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು. 
ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ ಉಮಾಶಂಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಡಾ. ಬಿ.ಎಂ ನಾಸಿರ್ಖಾನ್, ಪ್ರೊ. ಮೊಹಮ್ಮದ್ ನಜೀಬ್, ಡಾ. ಧನಂಜಯ, ಡಾ. ಆರ್. ಸೀಮಾ, ಡಾ. ದಾಕ್ಷಾಯಣಿ ಎಂ. ಡೋಂಗ್ರೆ, ಪ್ರೊ. ಎಸ್. ವರದರಾಜ, ಡಾ. ಮಂಜುನಾಥ್ ಸೇರಿದಂತೆ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು. 
ಗೂಗಲ್ ವೆಬ್ ಜೂಮ್ ತಂತ್ರಜ್ಞಾನ ಬಳಸಿ ಹಮ್ಮಿಕೊಳ್ಳಲಾಗಿದ್ದ ವೆಬಿನಾರ್ ಯಾವುದೇ ತಾಂತ್ರಿಕ ದೋಷವಿಲ್ಲದೆ ಎಲ್ಲರೂ ನೇರವಾಗಿ ಸಂವಾದದಲ್ಲಿ ಪಾಲ್ಗೊಳ್ಳಲು ಸಹಕಾರಿಯಾಯಿತು. 

ವಿಚಾರ ಸಂಕಿರಣದಲ್ಲಿ ಹೊರಬಿದ್ದ ಪ್ರಮುಖರ ಅಭಿಪ್ರಾಯಗಳು: 
ಅರ್ಥವ್ಯವಸ್ಥೆಯಲ್ಲಿ ವಿತ್ತಿಯಾ ಸುಧಾರಣೆಗಳು: 
ಕೋವಿಡ್-೧೯ ಕೇವಲ ಭಾರತದಲ್ಲಿ ಅಷ್ಟೆ ಅಲ್ಲ, ಪ್ರಪಂಚದಾದ್ಯಂತ ತನ್ನ ವಿಕೋಪವನ್ನು ತೋರಿಸುತ್ತಿದ್ದು, ಇಡೀ ಅರ್ಥ ವ್ಯವಸ್ಥೆಯನ್ನು ಆರ್ಥಿಕ ಮುಗ್ಗಟ್ಟಿನತ್ತ ಕೊಂಡೊಯ್ಯುತ್ತಿದೆ. ಈ ರೀತಿಯ ಆರ್ಥಿಕ ಹಿಂಜರಿತ ೧೯೨೯-೩೦ರ ಮುಗ್ಗಟ್ಟಿನ ಸಮಯದಲ್ಲೂ ಕಾಣಿಸಿಕೊಂಡಿರಲಿಲ್ಲ. ಏಕೆಂದರೆ ಕೋವಿಡ್-೧೯ರ ಪ್ರಭಾವ ಕೇವಲ ಆರ್ಥಿಕ ವ್ಯವಸ್ಥೆಗಳ ಮೇಲೆ ಅಲ್ಲದೆ ಇತಿಹಾಸದ ಅತ್ಯಂತ ಕರಾಳ ಮಾನವೀಯ ಸಮಸ್ಯೆಗೂ ದಾರಿ ಮಾಡಿಕೊಟ್ಟಿದೆ. ಈ ಹಿನ್ನಲೆಯಲ್ಲಿ ಅರ್ಥವ್ಯವಸ್ಥೆಯಲ್ಲಿ ವಿತ್ತಿಯಾ ಸುಧಾರಣೆಗಳ ಅವಶ್ಯಕತೆ ಇದೆ. 
                                - ಡಾ. ಎನ್.ಆರ್ ಭಾನುಮೂರ್ತಿ, ನಿಯೋಜಿತ ಕುಲಪತಿ, 
ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್, ಬೆಂಗಳೂರು.

ವಿಶೇಷ ಆರ್ಥಿಕ ಪ್ಯಾಕೇಜ್ ಸಹಕಾರಿ: 
ಸರ್ಕಾರದ ವಿಶೇಷ ಆರ್ಥಿಕ ಪ್ಯಾಕೇಜ್ ಸಮಸ್ಯೆ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪ್ಯಾಕೇಜ್ ಜನರ ಕೈಗೆ ನೇರ ವರ್ಗಾವಣೆ ಮಾಡುವ ಮೂಲಕ ಸರಕು ಮತ್ತು ಸೇವೆಗಳಿಗೆ ಬೇಡಿಕೆಯನ್ನು ಹೆಚ್ಚಿಸಿ ಉತ್ಪಾದನಾ ಚಟುವಟಿಕೆಗೆ ಹುರಿದುಂಬಿಸುವ ಕೆಲಸ ಮಾಡುತ್ತದೆ. 
                                                   - ಪ್ರೊ. ಬಿ.ಪಿ ವೀರಭದ್ರಪ್ಪ, ಉಪಕುಲಪತಿ, 
ಕುವೆಂಪು ವಿಶ್ವವಿದ್ಯಾಲಯ, ಶಂಕರಘಟ್ಟ, ಭದ್ರಾವತಿ. 

ರೈತರು ಜೂ.೩೦ರೊಳಗೆ ಅಸಲು ಪಾವತಿಸಿದರೆ ಬಡ್ಡಿ ಮನ್ನಾ

ಭದ್ರಾವತಿ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ನಿರ್ದೇಶಕರು. 
 ಭದ್ರಾವತಿ: ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ವತಿಯಿಂದ ರೈತರು ಪಡೆದ ಸಾಲದ ಅಸಲು ಜೂ.೩೦ರೊಳಗೆ ಪಾವತಿಸಿದರೆ ಬಡ್ಡಿಯನ್ನು ಸಂಪೂರ್ಣವಾಗಿ ಮನ್ನಾ ಮಾಡುವ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಸುಸ್ತಿದಾರರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಬ್ಯಾಂಕಿನ ಅಧ್ಯಕ್ಷ  ಎಸ್. ಕೃಷ್ಣಪ್ಪ ತಿಳಿಸಿದರು. 
ಅವರು ಸೋಮವಾರ ಬ್ಯಾಂಕಿನಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಈಗಾಗಲೇ ಈ ಸಂಬಂಧ ಸಚಿವರು ಆದೇಶ ಹೊರಡಿಸಿದ್ದು, ಮಾರ್ಚ್ ೩೧ರ ವರೆಗೆ ನಿಗದಿಪಡಿಸಲಾಗಿದ್ದ ಯೋಜನೆಯನ್ನು ಕೊರೋನಾ ವೈರಸ್ ಹಿನ್ನಲೆಯಲ್ಲಿ ವಿಸ್ತರಿಸಿ ಆದೇಶ ಹೊರಡಿಸಲಾಗಿದೆ ಎಂದರು. 
ಬ್ಯಾಂಕಿನ ವತಿಯಿಂದ ಕೃಷಿ ಯೋಜನೆಯಲ್ಲಿ ದೀರ್ಘಾವಧಿ ಸಾಲ ನೀಡಲಾಗಿದ್ದು, ಮಾ.೩೧ರವರೆಗೆ ೧೧೯೧.೮೬ ಲಕ್ಷ ರು. ಸಾಲ ನೀಡಲಾಗಿದೆ. ಈ ಪೈಕಿ ೧೫೮.೧೧ ಲಕ್ಷ ರು. ವಸೂಲಾಗಿದ್ದು, ೧೦೩೩.೭೫ ಲಕ್ಷ ರು. ಬಾಕಿ ಉಳಿದಿದೆ. ಈ ಅವಧಿಯಲ್ಲಿ ಅಸಲು ಪೂರ್ಣ ಪಾವತಿಸಿರುವ ರೈತರು ಒಟ್ಟು ೯೯.೨೪ ಲಕ್ಷ ರು. ಬಡ್ಡಿ ರಿಯಾಯಿತಿ ಪಡೆದುಕೊಂಡಿದ್ದಾರೆ. ಜ.೩೧ರ ವರೆಗೆ ಸುಸ್ತಿಯಾಗಿರುವ ಎಲ್ಲಾ ರೈತರು ಅಸಲು ಪಾವತಿಸಿ ಬಡ್ಡಿ ರಿಯಾಯಿತಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.  
ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಎ.ಬಿ ಆಶಾ, ನಿರ್ದೇಶಕರಾದ ಎಚ್.ಎನ್ ಲೋಹಿತೇಶ್ವರಪ್ಪ, ವಿರುಪಾಕ್ಷಪ್ಪ, ಕೆ. ಗೋಪಾಲಪ್ಪ, ಕೆ. ಮಂಜಪ್ಪ, ಕೆ.ಎಂ ಕಾವೇರಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. 

ವೀರಾಪುರ ಗ್ರಾ.ಪಂ. ಅಧ್ಯಕ್ಷೆಯಾಗಿ ರೇಣುಕಮ್ಮ

ಭದ್ರಾವತಿ, ಜೂ. ೮: ತಾಲೂಕಿನ ವೀರಾಪುರ ಗ್ರಾಮ ಪಂಚಾಯಿತಿಯಲ್ಲಿ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ರೇಣುಕಮ್ಮ  ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷೆ ಮಂಗಳಮ್ಮ ಮೇ.೧೨ರಂದು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದರು. ಉಪವಿಭಾಗಾಧಿಕಾರಿಗಳು ನಿಯಮಾನುಸಾರ ಚುನಾವಣೆ ನಡೆಸಿದ್ದು, ಮಹಿಳಾ ಮೀಸಲಾತಿ ಹೊಂದಿದ್ದ ಅಧ್ಯಕ್ಷ ಸ್ಥಾನಕ್ಕೆ ರೇಣುಕಮ್ಮ ಮಾತ್ರ ಸ್ಪರ್ಧಿಸಿ ನಾಮಪತ್ರ ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದು, ಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.