Saturday, August 15, 2020

೫೫ ಲಕ್ಷ ರು. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಕನಕಮಂಟಪ ಲೋಕಾರ್ಪಣೆ

ಭದ್ರಾವತಿ ಹಳೇನಗರದಲ್ಲಿ ಸುಮಾರು ೫೫ ಲಕ್ಷ ರು. ವೆಚ್ಚದಲ್ಲಿ ಪುನರ್ ನಿರ್ಮಾಣಗೊಂಡ ಕನಕಮಂಟಪವನ್ನು ಶನಿವಾರ ಶಾಸಕ ಬಿ.ಕೆ ಸಂಗಮೇಶ್ವರ್, ತಹಸೀಲ್ದಾರ್ ಎಚ್.ಸಿ ಶಿವಕುಮಾರ್, ಪೌರಾಯುಕ್ತ ಮನೋಹರ್, ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಕನಕಮಂಟಪ ಲೋಕಾರ್ಪಣೆಗೊಳಿಸಿದರು.
ಭದ್ರಾವತಿ, ಆ. ೧೫: ಸುಮಾರು ೫ ದಶಕಗಳಷ್ಟು ಹಳೇಯದಾದ ತನ್ನದೇ ಆದ ವೈಶಿಷ್ಟತೆಯನ್ನು ಹೊಂದಿರುವ ರಂಗ ಚಟುವಟಿಕೆಗಳಿಗೆ ನೆಲೆಯಾಗಿರವ ಕನಕ ಮಂಟಪ ಸುಮಾರು ೫೫ ಲಕ್ಷ ರು. ವೆಚ್ಚದಲ್ಲಿ ನವೀಕರಣಗೊಂಡಿದ್ದು, ಸ್ವಾತಂತ್ರ್ಯೋತ್ಸವ ದಿನವಾದ ಶನಿವಾರ ಲೋಕಾರ್ಪಣೆಗೊಂಡಿತು.
         ಈ ಹಿಂದೆ ನಿರ್ಮಾಣಗೊಂಡಿದ್ದ ಕಟ್ಟಡ ಶಿಥಿಲಗೊಂಡ ಪರಿಣಾಮ ಸುಮಾರು ೨ ದಶಕಗಳಿಂದ ರಂಗ ಚಟುವಟಿಕೆಗಳು ಹಾಗು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸೂಕ್ತ ವೇದಿಕೆ ಇಲ್ಲದೆ ಸಾಕಷ್ಟು ಕಲಾತಂಡಗಳು ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳುವಲ್ಲಿ ಹಿನ್ನಡೆ ಕಂಡುಕೊಂಡಿದ್ದವು.
         ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಹಾಗು ನಗರಸಭೆ ಪೌರಾಯುಕ್ತ ಮನೋಹರ್ ನೇತೃತ್ವದ ತಂಡ ಕೈಗೊಂಡ ಪರಿಶ್ರಮದ ಫಲವಾಗಿ ಶಿಥಿಲಗೊಂಡ ಕಟ್ಟಡ ನೆಲಸಮಗೊಂಡು ಹೊಸ ಕಟ್ಟಡ ನಿರ್ಮಾಣಗೊಂಡಿದೆ. ಈ ಕಟ್ಟಡ ೫೪ ಅಡಿ ಸುತ್ತಳತೆಯಲ್ಲಿ ನಿರ್ಮಾಣಗೊಂಡಿದ್ದು,  ೩೨ ಅಡಿ ವೇದಿಕೆಯನ್ನು ಹೊಂದಿದೆ. ೨ ಪ್ರತ್ಯೇಕ ಕೊಠಡಿ, ಮಧ್ಯಭಾಗದಲ್ಲಿ ವಿಶಾಲವಾದ ಕೊಠಡಿ, ೨ ಪ್ರತ್ಯೇಕ ಶೌಚಾಲಯಗಳನ್ನು ಹೊಂದಿದೆ. ಅಲ್ಲದೆ ಹೊರ ಭಾಗದಲ್ಲಿ ಆಕರ್ಷಕ ಕಲಾಕೃತಿಗಳೊಂದಿಗೆ ಕಂಗೊಳಿಸುತ್ತಿದೆ.
    ಕಲಾವಿದರ ೨ ದಶಕಗಳ ಕನಸು ನನಸಾಗಿದೆ. ಶಾಸಕ ಬಿ.ಕೆ ಸಂಗಮೇಶ್ವರ್, ತಾಲೂಕು ದಂಡಾಧಿಕಾರಿ, ತಹಸೀಲ್ದಾರ್ ಎಚ್.ಸಿ ಶಿವಕುಮಾರ್, ಪೌರಾಯುಕ್ತ ಮನೋಹರ್, ಹಿರಿಯ ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ ಸೇರಿದಂತೆ ಇನ್ನಿತರ ಗಣ್ಯರು ಕನಕಮಂಟಪ ಲೋಕಾರ್ಪಣೆಗೊಳಿಸಿದರು.

ವಿಐಎಸ್‌ಎಲ್ ವತಿಯಿಂದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ

ಕೇಂದ್ರ ಸರ್ಕಾರಿ ಸ್ವಾಮ್ಯದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶನಿವಾರ ಸ್ವಚ್ಛತೆ,  ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
ಭದ್ರಾವತಿ, ಆ. ೧೫: ಕೇಂದ್ರ ಸರ್ಕಾರಿ ಸ್ವಾಮ್ಯದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ವತಿಯಿಂದ ಶನಿವಾರ ಸ್ವಚ್ಛತೆ,  ಮಾಸ್ಕ್ ಬಳಕೆಯೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸರಳವಾಗಿ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಜರುಗಿತು.
     ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕ ಕೆ.ಎಲ್ ಶ್ರೀನಿವಾಸ್ ರಾವ್  ಧ್ವಜಾರೋಹಣ ನೆರವೇರಿಸಿದರು. ಮುಖ್ಯ ಮಹಾಪ್ರಬಂಧಕ(ಸ್ಥಾವರ) ಸುರಜೀತ್ ಮಿಶ್ರಾ, ಪ್ರಭಾರಿ ಮಹಾ ಪ್ರಬಂಧಕ(ಸಿಬ್ಬಂದಿ ಮತ್ತು ಆಡಳಿತ) ಬಿ. ವಿಶ್ವನಾಥ್, ಹಿರಿಯ ಅಧಿಕಾರಿಗಳು, ಕಾರ್ಮಿಕರ ಸಂಘ ಹಾಗೂ ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು, ಗುತ್ತಿಗೆ ಕಾರ್ಮಿಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.
       ಕಾರ್ಖಾನೆಯ ಸಾರ್ವಜನಿಕ ಸಂಪರ್ಕ ಇಲಾಖೆ, ನಗರಾಡಳಿ ಮತ್ತು ರಕ್ಷಣಾ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಹೈಟೆಕ್ ಶೌಚಾಲಯ ಸಾರ್ವಜನಿಕ ಸೇವೆಗೆ ಸಮರ್ಪಣೆ

ಭದ್ರಾವತಿ ನಗರದ ಹೊಸಸೇತುವೆ ಬಳಿ ನಗರಸಭೆ ವತಿಯಿಂದ ಸುಮಾರು ೪.೩೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.
ಭದ್ರಾವತಿ, ಆ. ೧೫: ನಗರದ ಹೊಸಸೇತುವೆ ಬಳಿ ನಗರಸಭೆ ವತಿಯಿಂದ ಸುಮಾರು ೪.೩೦ ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಲಾಗಿರುವ ಹೈಟೆಕ್ ಶೌಚಾಲಯವನ್ನು ಶಾಸಕ ಬಿ.ಕೆ ಸಂಗಮೇಶ್ವರ್ ಶನಿವಾರ ಸಾರ್ವಜನಿಕರ ಸೇವೆಗೆ ಸಮರ್ಪಿಸಿದರು.
      ಶೌಚಾಲಯ ಸಮೀಪದಲ್ಲಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ, ಖಾಸಗಿ ಬಸ್ ನಿಲ್ದಾಣ, ಇಂದಿರಾ ಗಾಂಧಿ ಕ್ಯಾಂಟೀನ್, ಪ್ರವಾಸಿ ವಾಹನ ನಿಲ್ದಾಣ, ಆಟೋ ನಿಲ್ದಾಣ ಹಾಗೂ ಅಂಗಡಿ ಮುಂಗಟ್ಟುಗಳಿದ್ದು, ಈ ಶೌಚಾಲಯದಿಂದ ಹೆಚ್ಚು ಪ್ರಯೋಜನವಾಗಲಿದೆ.
   ನಗರಸಭೆ ಪೌರಾಯುಕ್ತ ಮನೋಹರ್, ಗುತ್ತಿಗೆದಾರ ಜಿ. ಹಾಲೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕೊರೋನಾ ವೈರಸ್ ನಿರ್ಮೂಲನೆಯೊಂದಿಗೆ ದೇಶದ ಅಭಿವೃದ್ಧಿಗೆ ಶ್ರಮಿಸಿ : ಎಚ್.ಸಿ ಶಿವಕುಮಾರ್

ಭದ್ರಾವತಿಯಲ್ಲಿ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ  ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಭದ್ರಾವತಿ, ಆ. ೧೫: ಎಲ್ಲರೂ ಒಗ್ಗಟ್ಟಾಗಿ ಕೊರೋನಾ ವೈರಸ್ ನಿರ್ಮೂಲನೆಗೆ ಪಣತೊಡುವ ಮೂಲಕ ದೇಶದ ಸಮಗ್ರ ಅಭಿವೃದ್ಧಿಗೆ ಶ್ರಮಿಸಬೇಕೆಂದು ತಾಲೂಕು ದಂಡಾಧಿಕಾರಿ ತಹಸೀಲ್ದಾರ್ ಎಚ್.ಸಿ ಶಿವಕುಮಾರ್ ತಿಳಿಸಿದರು.
       ಅವರು ಶನಿವಾರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ೭೪ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ವ್ಯಾಪಾರಕ್ಕಾಗಿ ದೇಶಕ್ಕೆ ಬಂದ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯಲು ಸುಧೀರ್ಘ ಹೋರಾಟ ನಡೆಸಲಾಗಿದೆ. ಮಹಾತ್ಮಗಾಂಧಿ ಅವರ ನೇತೃತ್ವದಲ್ಲಿ ಆಹಿಂಸಾ ಮಾರ್ಗದ ಹೋರಾಟದ ಜೊತೆಗೆ ತ್ಯಾಗ-ಬಲಿದಾನಗಳು ನಡೆದಿವೆ. ದೇಶದ ಸ್ವಾತಂತ್ರ್ಯದ ಮಹತ್ವ ಪ್ರತಿಯೊಬ್ಬರು ಅರಿತುಕೊಳ್ಳಬೇಕೆಂದರು.
    ಪ್ರಸ್ತುತ ವಿಶ್ವದೆಲ್ಲೆಡೆ ಭಯೋತ್ಪಾದನೆ ಚಟುವಟಿಕೆಗಳು ಹೆಚ್ಚಾಗುತ್ತಿದ್ದು, ಈ ಹಿನ್ನಲೆಯಲ್ಲಿ ಭಯೋತ್ಪಾದನೆ ನಿರ್ಮೂಲನೆಯಾಗಬೇಕು. ದೇಶದಲ್ಲಿ ಎಲ್ಲಾ ಧರ್ಮದವರು ಸೌಹಾರ್ದತೆಯಿಂದ, ಶಾಂತಿಯಿಂದ ಒಗ್ಗಟ್ಟಾಗಿ ಬದುಕಬೇಕಾಗಿದೆ. ಮಹಾತ್ಮಗಾಂಧಿ ಅವರ ರಾಮರಾಜ್ಯದ ಕನಸು ನನಸಾಗಬೇಕು. ಇದೀಗ ವಿಶ್ವದ ಎಲ್ಲಾ ರಾಷ್ಟ್ರಗಳಲ್ಲೂ ಜನರನ್ನು ಭಯಭೀತರನ್ನಾಸುತ್ತಿರುವ, ಸಂಕಷ್ಟಕ್ಕೆ ತಳ್ಳುತ್ತಿರುವ ಕೆಟ್ಟ ಮಹಾಮಾರಿ ಕೊರೋನಾ ವೈರಸ್ ದೇಶದಿಂದ ನಿರ್ಮೂಲನೆಯಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ತಮ್ಮ ಜವಾಬ್ದಾರಿಗಳನ್ನು ಅರಿತು ಇದರ ನಿರ್ಮೂಲನೆ ಮುಂದಾಗಬೇಕೆಂದರು.  
    ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಬಿ.ಕೆ ಸಂಗಮೇಶ್ವರ್ ಮಾತನಾಡಿ, ಕ್ಷೇತ್ರದ ಸರ್ವತೋಮುಖ ಅಭಿವೃದ್ದಿಗೆ ಹೆಚ್ಚಿನ ಗಮನ ನೀಡಲಾಗುತ್ತಿದೆ. ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳು, ವಿವಿಧ ಇಲಾಖೆಗಳ ಅಧಿಕಾರಿಗಳು ಜನರ ಸಮಸ್ಯೆಗಳನ್ನು ಅರಿತು ಸ್ಪಂದಿಸಬೇಕು. ಪ್ರಸ್ತುತ ಕ್ಷೇತ್ರದಲ್ಲಿ ವಿಐಎಸ್‌ಎಲ್ ಮತ್ತು ಎಂಪಿಎಂ ಎರಡು ಕಾರ್ಖಾನೆಗಳು ಸಂಕಷ್ಟಕ್ಕೆ ಒಳಗಾಗಿದ್ದು, ಎಂಪಿಎಂ ಕಾರ್ಖಾನೆ ಪುನರ್ ಆರಂಭಗೊಳ್ಳಬೇಕು. ಆ ಮೂಲಕ ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸಬೇಕು ಎಂದರು.
     ತಾಲೂಕು ಪಂಚಾಯಿತಿ ಅಧ್ಯಕ್ಷೆ ಡಿ. ಲಕ್ಷ್ಮೀದೇವಿ, ಕಾರ್ಯನಿರ್ವಹಣಾಧಿಕಾರಿ ಡಾ. ಜಿ. ಮಂಜುನಾಥ್, ನಗರಸಭೆ ಪೌರಾಯುಕ್ತ ಮನೋಹರ್, ಜಿಲ್ಲಾಪಂಚಾಯಿತಿ ಸದಸ್ಯ ಎಸ್. ಮಣಿಶೇಖರ್, ಪೊಲೀಸ್ ಉಪಾಧೀಕ್ಷಕ ಸುಧಾಕರ ಎಸ್. ನಾಯ್ಕ, ಎಪಿಎಂಸಿ ಅಧ್ಯಕ್ಷ ಐ.ಈ ಲವೇಶ್‌ಗೌಡ, ವಲಯ ಅರಣ್ಯಾಧಿಕಾರಿ ಮಂಜುನಾಥ್, ರಂಗದಾಸೋಹಿ ಎಸ್.ಜಿ ಶಂಕರಮೂರ್ತಿ, ಮುಖಂಡರಾದ ರಮಾಕಾಂತ, ಗಂಗಾಧರ್, ಬಾಷಾ, ಮಂಜುಳರಾಮಚಂದ್ರಪ್ಪ, ರೂಪನಾರಾಯಣ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
       ಇದಕ್ಕೂ ಮೊದಲು ಧ್ವಜಾರೋಹಣ ಕಾರ್ಯಕ್ರಮದಲ್ಲಿ ನಗರದ ಸಶಸ್ತ್ರ ಮೀಸಲುಪಡೆ ಪೊಲೀಸ್ ಠಾಣಾಧಿಕಾರಿ ರಂಗಸ್ವಾಮಿ ಧ್ವಜವಂದನೆ ಗೌರವ ಸ್ವೀಕರಿಸಿದರು. ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ ಪಾಲ್ಗೊಂಡಿದ್ದವು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೆ ಉಚಿತವಾಗಿ ಮಾಸ್ಕ್, ಹ್ಯಾಂಡ್‌ಗ್ಲೋಸ್‌ಗಳನ್ನು ವಿತರಿಸಲಾಯಿತು.
    ತಾಲೂಕು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಕಾರ್ಯಕ್ರಮ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್ ಸೋಮಶೇಖರಯ್ಯ ಸ್ವಾಗತಿಸಿದರು.