Monday, May 22, 2023

ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಉಲ್ಬಣ : ತುರ್ತಾಗಿ ಸಾಮಾನ್ಯ ಸಭೆ ನಡೆಯಲಿ

ಭದ್ರಾವತಿ ನಗರಸಭೆ 
    ಭದ್ರಾವತಿ, ಮೇ. ೨೨ : ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಕಳೆದ ೨ ತಿಂಗಳಿನಿಂದ ನಗರಸಭೆ ಸಾಮಾನ್ಯ ಸಭೆ ನಡೆದಿಲ್ಲ. ಇದರಿಂದಾಗಿ ವಾರ್ಡ್‌ಗಳಲ್ಲಿ ಸಮಸ್ಯೆಗಳು ಉಲ್ಬಣಗೊಂಡಿವೆ.
    ೩೫ ವಾರ್ಡ್‌ಗಳನ್ನು ಒಳಗೊಂಡಿರುವ ನಗರಸಭೆಯಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಬಾರಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕುಡಿಯುವ ನೀರು, ರಸ್ತೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಆಗ್ರಹಿಸಿಕೊಂಡು ಬರುತ್ತಿದ್ದಾರೆ.
    ಮಾ.೧೮ರಂದು ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದ್ದರು. ಪ್ರಸ್ತುತ ೨ ತಿಂಗಳು ಮುಕ್ತಾಯಗೊಂಡಿದ್ದು, ಈ ನಡುವೆ ಇದೀಗ ಮತ್ತಷ್ಟು  ಸಮಸ್ಯೆಗಳು ಎದುರಾಗುತ್ತಿವೆ. ಬಹುತೇಕ ಚರಂಡಿ, ರಸ್ತೆಗಳು ಹಾಳಾಗಿದ್ದು,  ಬೇಸಿಗೆ ಮುಕ್ತಾಯಗೊಂಡು ಮಳೆಗಾಲ ಎದುರಾಗುತ್ತಿರುವ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ವಿಧಾನಸಭಾ ಚುನಾವಣೆ ಎಲ್ಲಾ ಪ್ರಕ್ರಿಯೆಗಳು ಇದೀಗ ಮುಕ್ತಾಯಗೊಂಡಿದ್ದು, ವಿಳಂಬ ಮಾಡದೆ ತಕ್ಷಣ ಸಾಮಾನ್ಯಸಭೆ ನಡೆಸಬೇಕಾಗಿದೆ.
    ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಮರು ಚಾಲನೆ ನೀಡಬೇಕಾಗಿದೆ. ಇದರ ಜೊತೆಗೆ ಹೊಸ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂಪುರೇಷೆ ಸಿದ್ದಪಡಿಸಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗಮನ ಹರಿಸಬೇಕಾಗಿದೆ.

ನೆಲಕ್ಕುರುಳುವ ಸ್ಥಿತಿಯಲ್ಲಿ ತೆಂಗಿನ ಮರ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

ಭದ್ರಾವತಿ ಹಳೇನಗರದ ಬಸವೇಶ್ವರ ವೃತ್ತ ಮಾರುಕಟ್ಟೆ ಸಮೀಪದ ರಸ್ತೆಯೊಂದರಲ್ಲಿ ಬೃಹತ್ ಗಾತ್ರದ ತೆಂಗಿನ ಮರ ನೆಲಕ್ಕುರುಳುವ ಸ್ಥಿತಿಯಲ್ಲಿದ್ದು, ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ.
    ಭದ್ರಾವತಿ, ಮೇ. ೨೨: ಹಳೇನಗರದ ಬಸವೇಶ್ವರ ವೃತ್ತ ಮಾರುಕಟ್ಟೆ ಸಮೀಪದ ರಸ್ತೆಯೊಂದರಲ್ಲಿ ಬೃಹತ್ ಗಾತ್ರದ ತೆಂಗಿನ ಮರ ನೆಲಕ್ಕುರುಳುವ ಸ್ಥಿತಿಯಲ್ಲಿದ್ದು, ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಾಗಿದೆ.
    ಮಾರುಕಟ್ಟೆಯಿಂದ ನ್ಯಾಯಾಲಯದ ಮುಂಭಾಗದ ರಸ್ತೆಗೆ ಸಂಪರ್ಕಗೊಂಡಿರುವ ಕಿರು ರಸ್ತೆ ಇದಾಗಿದ್ದು, ಈ ರಸ್ತೆಯಲ್ಲಿ ಪಾದಚಾರಿಗಳು ಹೆಚ್ಚಾಗಿ ಸಂಚರಿಸುತ್ತಾರೆ. ಈ ರಸ್ತೆಯಲ್ಲಿ ತೆಂಗಿನ ಮರ ಬಹುತೇಕ ಒಂದೆಡೆ ಬಾಗಿದ್ದು, ಮಳೆ ಬಿರುಗಾಳಿಗೆ ನೆಲಕ್ಕುರುಳುವ ಸಾಧ್ಯತೆ ಹೆಚ್ಚಾಗಿದೆ.
    ಒಂದು ವೇಳೆ ತೆಂಗಿನ ಮರ ನೆಲಕ್ಕುರುಳಿದ್ದಲ್ಲಿ ಕಟ್ಟಡಕ್ಕೆ ಹಾನಿ ಉಂಟಾಗಲಿದ್ದು, ಅಲ್ಲದೆ ಕೆಳ ಭಾಗದಲ್ಲಿರುವ ವಿದ್ಯುತ್ ಕಂಬ ಮುರಿದು ಬಿದ್ದು, ವಿದ್ಯುತ್ ತಂತಿ ಕತ್ತರಿಸಿ ಹೋಗಲಿದೆ. ಅಲ್ಲದೆ ಪ್ರಾಣಹಾನಿಯಂತಹ ದುರ್ಘಟನೆ ಸಹ ಸಂಭವಿಸುವ ಸಾಧ್ಯತೆ ಇದ್ದು, ಈ ಹಿನ್ನಲೆಯಲ್ಲಿ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ.

ವಿವಾಹ ಎಂಬುದು ಕೇವಲ ಎರಡು ದೇಹಗಳ ನಡುವಿನ ಸಂಬಂಧವಲ್ಲ

೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಡಾ.ಬಿ.ಜಿ.ಧನಂಜಯ

ವಿಶ್ವ ಹಿಂದು ಪರಿಷದ್, ವಿಶ್ವಭಾರತಿ ವಿಶ್ವಸ್ಥ ಮ೦ಡಳಿವತಿಯಿಂದ ಭದ್ರಾವತಿ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
    ಭದ್ರಾವತಿ, ಮೇ. ೨೨ : ಭದ್ರಾವತಿ : ವಿಶ್ವದಲ್ಲಿಯೇ ತನ್ನದೇ ಆದ ವೈಶಿಷ್ಟ್ಯತೆಯಿಂದ ಜಗತ್ತಿನ ಗಮನ ಸೆಳೆದಿರುವ ಭಾರತ ದೇಶದಲ್ಲಿ ವಿವಾಹಕ್ಕೆ ಅತ್ಯಂತ ಮಹತ್ವದ ಸ್ಥಾನವಿದ್ದು, ಪರಿಣಾಮವಾಗಿ ಪಾಶ್ಚಿಮಾತ್ಯರು ಸಹ ಭಾರತೀಯರ ವಿವಾಹ ಪದ್ಧತಿ ಅನುಸರಿಸುತ್ತಿರುವುದು ಹೆಚ್ಚಾಗಿ ಕಂಡು ಬರುತ್ತಿದೆ ಎಂದು ಹೊನ್ನಾಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಿ ಧನಂಜಯ ಹೇಳಿದರು.
    ವಿಶ್ವ ಹಿಂದು ಪರಿಷದ್, ವಿಶ್ವಭಾರತಿ ವಿಶ್ವಸ್ಥ ಮ೦ಡಳಿವತಿಯಿಂದ ಸಿದ್ಧಾರೂಢ ನಗರದ ಧರ್ಮಶ್ರೀ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ೩೯ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಅವರು ಪಾಲ್ಗೊಂಡು ಪ್ರಾಸ್ತಾವಿಕವಾಗಿ ಮಾತನಾಡಿದರು.
    ಸದೃಢ ಕುಟುಂಬದಿಂದ ಮಾತ್ರ ಸಶಕ್ತರಾಷ್ಟ್ರ ನಿರ್ಮಾಣ ಸಾಧ್ಯ. ಈ ಹಿನ್ನೆಲೆಯಲ್ಲಿ ಬೆಳೆಯುವ ಹಂತದಲ್ಲಿಯೇ ಸಂಸ್ಕೃತಿ ಹಾಗೂ ಸಂಸ್ಕಾರ ಅತ್ಯಗತ್ಯ ಎಂದರು. ವಿವಾಹ ಎಂದರೆ ಕೇವಲ ಗಂಡು-ಹೆಣ್ಣಿನ ನಡುವಿನ ದೈಹಿಕ ಸಂಬಂಧ ಮಾತ್ರವಲ್ಲ ಎಂದ ಅವರು, ಈ ಕುರಿತಾಗಿ ವಿವರಣೆ ನೀಡಿದರು.
    ಮದುವೆ ಎಂಬುದು ಮಧ್ಯಮ ವರ್ಗಕ್ಕೆ ದುಸ್ತರವಾಗಿದ್ದ ಕಾಲದಲ್ಲಿ ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ೭೦ರ ದಶಕದಲ್ಲಿ ಆರಂಭಿಸಿದ ಉಚಿತ ಸಾಮೂಹಿಕ ವಿವಾಹದಿಂದ ಪ್ರೇರಣೆಗೊಂಡು ವಿಶ್ವ ಹಿಂದು ಪರಿಷದ್ ವತಿಯಿಂದ ನಗರದಲ್ಲಿ ಸುಮಾರು ೩೯ ವರ್ಷಗಳಿಂದ ಉಚಿತ ಸಾಮೂಹಿಕ ವಿವಾಹ ಸಮಾರಂಭ ಆಯೋಜಿಸಿಕೊಂಡು ಬರಲಾಗುತ್ತಿದೆ. ಸಾಮೂಹಿಕ ವಿವಾಹದಲ್ಲಿ ಇದುವರೆಗೂ ಒಟ್ಟು ೭೭೪ ಜೊತೆ ವಿವಾಹ ನಡೆಸಿರುವುದು ಹೆಮ್ಮಯ ಸಂಗತಿಯಾಗಿದೆ ಎಂದರು.
    ಸಮಾರಂಭದ ಸಾನಿಧ್ಯ ವಹಿಸಿದ್ದ ಅರಕೆರೆಯ ವಿರಕ್ತ ಮಠದ ಶ್ರೀ ಕರಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ವಿವಾಹ ಎಂಬುದು ಪವಿತ್ರ ವಾದ ಅನುಬಂಧವಾಗಿದ್ದು, ಸತಿ-ಪತಿಗಳು ಪರಸ್ಪರ ಅರಿತು ಸಮಾಜದಲ್ಲಿ ಸತ್ಪ್ರಜೆಗಳಾಗಿ ಬಾಳುವಂತೆ ಕರೆನೀಡಿದರು.
    ಬಜರಂಗದಳದ ಪ್ರಾಂತ ಸ೦ಯೋಜಕ ಕೆ.ಆರ್ ಸುನಿಲ್ ಮಾತನಾಡಿ, ಹಿಂದೂ ಸಮಾಜವನ್ನು ಜಾಗೃತಿಗೊಳಿಸುವ ನಿಟ್ಟಿನಲ್ಲಿ ವಿಎಚ್‌ಪಿ ಹಾಗೂ ಸಂಘ ಪರಿವಾರ ನಿರಂತರವಾಗಿ ಕೆಲಸಮಾಡುತ್ತಿವೆ ಎಂದರು.
    ವಿಶ್ವ ಹಿಂದು ಪರಿಷದ್ ಅಧ್ಯಕ್ಷ ಪಿ.ವೆಂಕಟರಮಣಶೇಟ್ ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಅಧ್ಯಕ್ಷ ಅನುಸುಧಾ ಮೋಹನ್ ಪಳನಿ, ಸದಸ್ಯರಾದ ಬಿ.ಕೆ ಮೋಹನ್, ವಿ. ಕದಿರೇಶ್, ಜಾರ್ಜ್, ಮಾಜಿ ಅಧ್ಯಕ್ಷ ಆರ್.ಕರುಣಾಮೂರ್ತಿ, ವಿಐಎಸ್‌ಎಲ್ ಕಾರ್ಖಾನೆ ಕಾರ್ಯಪಾಲಕ ನಿರ್ದೇಶಕರಾದ ಬಿ.ಎಲ್ ಚಾಂದ್ವಾನಿ, ಡಾ.ಟಿ.ನರೇಂದ್ರ ಭಟ್, ಹಾ. ರಾಮಪ್ಪ, ನಾರಾಯಣ, ಜಿ.ವರ್ಣೇಕರ್, ಸುಧಾಕರ ಶೆಟ್ಟಿ, ಮುತ್ತು ರಾಮಲಿಂಗಮ್, ದಾನಿ ಶಾರದ ಟ್ರಾನ್ಸ್‌ಪೋರ್ಟ್ ಶಿವಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
    ಸಾಮೂಹಿಕ ವಿವಾಹದಲ್ಲಿ ಸಂತೋಷ್ ಜಾಧವ್ ಮತ್ತು ಎನ್. ಶಿವಲೀಲಾ ಹಾಗೂ ವಿನಯ್ ಡಿ.ಎನ್ ಮತ್ತು ನೇತ್ರಾಬಾಯಿ ಡಿ. ನವಜೀವನಕ್ಕೆ ಕಾಲಿಟ್ಟರು. ಮಂಜುನಾಥ್‌ರಾವ್ ಪವಾರ್ ಸ್ವಾಗತಿಸಿದರು. ವೈ.ಎಸ್ ರಾಮಮೂರ್ತಿ ನಿರೂಪಿಸಿ, ಡಿ.ಆರ್ ಶಿವಕುಮಾರ್ ವಂದಿಸಿದರು.