ಭದ್ರಾವತಿ ನಗರಸಭೆ
ಭದ್ರಾವತಿ, ಮೇ. ೨೨ : ವಿಧಾನಸಭಾ ಚುನಾವಣೆ ಘೋಷಣೆಯಾದ ಹಿನ್ನಲೆಯಲ್ಲಿ ಕಳೆದ ೨ ತಿಂಗಳಿನಿಂದ ನಗರಸಭೆ ಸಾಮಾನ್ಯ ಸಭೆ ನಡೆದಿಲ್ಲ. ಇದರಿಂದಾಗಿ ವಾರ್ಡ್‌ಗಳಲ್ಲಿ ಸಮಸ್ಯೆಗಳು ಉಲ್ಬಣಗೊಂಡಿವೆ.
೩೫ ವಾರ್ಡ್‌ಗಳನ್ನು ಒಳಗೊಂಡಿರುವ ನಗರಸಭೆಯಲ್ಲಿ ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕಲ್ಪಿಸಿಕೊಡಲು ಸಾಧ್ಯವಾಗುತ್ತಿಲ್ಲ. ಪ್ರತಿ ಬಾರಿ ಸಾಮಾನ್ಯ ಸಭೆಯಲ್ಲಿ ಸದಸ್ಯರು ಕುಡಿಯುವ ನೀರು, ರಸ್ತೆ, ತ್ಯಾಜ್ಯ ವಿಲೇವಾರಿ ಸೇರಿದಂತೆ ಹಲವು ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ಕೈಗೊಳ್ಳುವಂತೆ ಆಗ್ರಹಿಸಿಕೊಂಡು ಬರುತ್ತಿದ್ದಾರೆ.
ಮಾ.೧೮ರಂದು ನಡೆದ ಸಾಮಾನ್ಯ ಸಭೆಯಲ್ಲಿ ಬಹುತೇಕ ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒಕ್ಕೊರಲಿನಿಂದ ಆಗ್ರಹಿಸಿದ್ದರು. ಪ್ರಸ್ತುತ ೨ ತಿಂಗಳು ಮುಕ್ತಾಯಗೊಂಡಿದ್ದು, ಈ ನಡುವೆ ಇದೀಗ ಮತ್ತಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಬಹುತೇಕ ಚರಂಡಿ, ರಸ್ತೆಗಳು ಹಾಳಾಗಿದ್ದು, ಬೇಸಿಗೆ ಮುಕ್ತಾಯಗೊಂಡು ಮಳೆಗಾಲ ಎದುರಾಗುತ್ತಿರುವ ಹಿನ್ನಲೆಯಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕಾಗಿದೆ. ವಿಧಾನಸಭಾ ಚುನಾವಣೆ ಎಲ್ಲಾ ಪ್ರಕ್ರಿಯೆಗಳು ಇದೀಗ ಮುಕ್ತಾಯಗೊಂಡಿದ್ದು, ವಿಳಂಬ ಮಾಡದೆ ತಕ್ಷಣ ಸಾಮಾನ್ಯಸಭೆ ನಡೆಸಬೇಕಾಗಿದೆ.
ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ನೆನೆಗುದಿಗೆ ಬಿದ್ದಿರುವ ಕಾಮಗಾರಿಗಳಿಗೆ ಮರು ಚಾಲನೆ ನೀಡಬೇಕಾಗಿದೆ. ಇದರ ಜೊತೆಗೆ ಹೊಸ ಕಾಮಗಾರಿಗಳಿಗೆ ಸಂಬಂಧಿಸಿದಂತೆ ರೂಪುರೇಷೆ ಸಿದ್ದಪಡಿಸಿಕೊಳ್ಳಬೇಕಾಗಿದೆ. ಈ ಹಿನ್ನಲೆಯಲ್ಲಿ ನಗರಸಭೆ ಆಡಳಿತ ಗಮನ ಹರಿಸಬೇಕಾಗಿದೆ.
No comments:
Post a Comment