ಭದ್ರಾವತಿ ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಕೊರತೆ, ನಗರಸಭೆ ಕಛೇರಿಯಲ್ಲಿ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಖಂಡಿಸಿ ಹಾಗು ವಿವಿಧೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ನಗರಸಭೆ ಕಛೇರಿ ಮುಂಭಾಗ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಭದ್ರಾವತಿ, ಡಿ. ೨೩: ನಗರಸಭೆ ವ್ಯಾಪ್ತಿಯಲ್ಲಿ ಮೂಲ ಸೌಕರ್ಯಗಳ ಕೊರತೆ, ನಗರಸಭೆ ಕಛೇರಿಯಲ್ಲಿ ಭ್ರಷ್ಟಾಚಾರ, ಮಧ್ಯವರ್ತಿಗಳ ಹಾವಳಿ ಖಂಡಿಸಿ ಹಾಗು ವಿವಿಧೆ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಗುರುವಾರ ನಗರಸಭೆ ಕಛೇರಿ ಮುಂಭಾಗ ಭಾರತೀಯ ಜನತಾ ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಕ್ಷದ ಪ್ರಮುಖರು ಮಾತನಾಡಿ, ಬಿಜೆಪಿಯಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಕಾಂಗ್ರೆಸ್ ಸದಸ್ಯರ ವಾರ್ಡ್‌ಗಳಿಗೆ ಮಾತ್ರ ಹೆಚ್ಚಿನ ಕಾಮಗಾರಿ ನೀಡಲಾಗುತ್ತಿದೆ. ನಗರಸಭೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಹಸ್ತಕ್ಷೇಪ ಹೆಚ್ಚಾಗಿದ್ದು, ಅಭಿವೃದ್ಧಿ ಕಾರ್ಯಗಳಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದರು.
ಮನೆ ಕಂದಾಯ, ನೀರಿನ ಕಂದಾಯ ಹೆಚ್ಚಳ ಮಾಡಲಾಗಿದೆ. ಪ್ರತಿಯೊಂದು ಕೆಲಸಗಳನ್ನು ಸಿಬ್ಬಂದಿಗಳು ಮಧ್ಯವರ್ತಿಗಳ ಮೂಲಕ ನಿರ್ವಹಿಸುತ್ತಿದ್ದಾರೆ. ಸ್ವತ್ತಿನ ಮಾಲೀಕರು ಕಂದಾಯ ಪಾವತಿಸಿರುವುದು ಕಛೇರಿಯ ಪುಸ್ತಕದಲ್ಲಿ ನಮೂದಾಗುತ್ತಿಲ್ಲ. ದಿನ ಕೂಲಿ ನೌಕರರು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಹಾಜರಾತಿ ದಾಖಲೆಯಲ್ಲಿ ವ್ಯತ್ಯಾಸ ಕಂಡು ಬರುತ್ತಿದೆ. ಬೀದಿ ದೀಪಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಮುಖ್ಯ ನಲ್ಲಿ ನೀರಿನ ಸರಬರಾಜಿಗೆ ತಾಂತ್ರಿಕವಾಗಿ ೬ ಇಂಚಿನ ಪೈಲ್‌ಲೈನ್ ಅಳವಡಿಸುವ ಬದಲು ೩ ಇಂಚಿನ ಪೈಪ್‌ಲೈನ್ ಅಳವಡಿಸಲಾಗಿದೆ. ಹೀಗೆ ಹಲವಾರು ಕಾಮಗಾರಿಗಳನ್ನು ಬೇಕಾಬಿಟ್ಟಿಯಾಗಿ ಕೈಗೊಳ್ಳಲಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಕ್ಷಣ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು. ಗಾಂಧಿ ವೃತ್ತದಲ್ಲಿ ಬೀದಿಬದಿ ವ್ಯಾಪಾರಿಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಅವರ ವ್ಯವಹಾರಕ್ಕೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವುದು. ಪಂಪ್‌ಹೌಸ್‌ಗಳಲ್ಲಿ ಹಳೇಯ ಯಂತ್ರಗಳನ್ನು ಬದಲಿಸಿ ಹೊಸ ಯಂತ್ರಗನ್ನು ಅಳವಡಿಸುವುದು. ಯುಜಿಡಿ ಕಾಮಗಾರಿಯನ್ನು ತಕ್ಷಣ ಮುಕ್ತಾಯಗೊಳಿಸುವುದು ಹಾಗು ಮಾಧವ್‌ಚಾರ್ ವೃತ್ತದಿಂದ ಸಿ.ಎನ್ ಅಗಲೀಕರಣ ಕಾರ್ಯ ಕೈಗೊಳ್ಳುವುದು ಸೇರಿದಂತೆ ಇತ್ಯಾದಿ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಲಾಯಿತು. ಕೊನೆಯಲ್ಲಿ ಉಪವಿಭಾಗಾಧಿಕಾರಿ ಟಿ.ವಿ ಪ್ರಕಾಶ್ ಮತ್ತು ತಹಸೀಲ್ದಾರ್ ಆರ್. ಪ್ರದೀಪ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಎಂ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಜಿ. ಧರ್ಮಪ್ರಸಾದ್, ಬಿ.ಕೆ ಶ್ರೀನಾಥ್, ನಗರಸಭಾ ಸದಸ್ಯರಾದ ವಿ. ಕದಿರೇಶ್, ಅನುಪಮ, ಅನಿತಾ ಮಲ್ಲೇಶ್ ಮತ್ತು ಶಶಿಕಲಾ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ಪಾಟೀಲ್, ಪ್ರಮುಖರಾದ ಎನ್. ವಿಶ್ವನಾಥರಾವ್, ಟಿ. ವೆಂಕಟೇಶ್, ನರಸಿಂಹಚಾರ್, ಎಂ. ಮಂಜುನಾಥ್, ರಮೇಶ್, ಕೆ.ಆರ್ ಸತೀಶ್, ಚನ್ನೇಶ್, ಬಿ.ಎಸ್ ಶ್ರೀನಾಥ್, ರಾಮನಾಥ್ ಬರ್ಗೆ, ಬಿ.ಕೆ ಚಂದ್ರಪ್ಪ, ಪಿ. ಗಣೇಶ್‌ರಾವ್, ಅವಿನಾಶ್, ಬಿ.ಎಸ್ ನಾರಾಯಣಪ್ಪ, ಮಂಜು, ಜಗದೀಶ್‌ಪಟೇಲ್, ನಕುಲ್, ಅನ್ನಪೂರ್ಣ ಸಾವಂತ್, ಹೇಮಾವತಿ, ಅನೂಷ, ಕವಿತಾ, ರೇಖಾ, ಸುಶೀಲಾ, ರುಕ್ಮಿಣಿ, ಮಂಗಳಗೌರಿ, ಸರಸ್ವತಿ, ಎಸ್.ಎನ್ ನಾಗಮಣಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.