ಡಾ. ವಿಜಯದೇವಿಯವರ ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿ
ಭದ್ರಾವತಿ, ಅ. ೭ : ಮೂಲತಃ ನಗರದ ನಿವಾಸಿ, ವಿಜಯಪುರ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರಾಧ್ಯಾಪಕಿ, ಎಮೆರಿಟಸ್ ಪ್ರೊಫೆಸರ್ ಡಾ. ವಿಜಯದೇವಿ ಅವರ ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿ ಕಾಲೇಜಿಗೆ ಅಗತ್ಯವೆನಿಸಿದಲ್ಲಿ ಖರೀದಿಸುವಂತೆ ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.
ಈ ಸಂಬಂಧ ಶಿಕ್ಷಣ ಇಲಾಖೆ ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚಿಸಿದೆ. ಸಾಹಿತ್ಯ ಸುಮಾ ಪ್ರಶಸ್ತಿ ಪಡೆದ ಮೊದಲ ಕೃತಿ ಇದಾಗಿದೆ. ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್ಚಿನ ಜ್ಞಾನಾರ್ಜನೆಗೆ ಈ ಕೃತಿ ಸಹಕಾರಿಯಾಗಿದ್ದು, ಅಲ್ಲದೆ ಮೌಲ್ಯಾಧಾರಿತ ಕೃತಿ ಇದಾಗಿದೆ. ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಕಾಲೇಜುಗಳಲ್ಲಿ ಖರೀದಿಸಲು ಅನುಮತಿ ನೀಡುವಂತೆ ಕೋರಿ ಲೇಖಕ ಡಾ. ಭದ್ರಾವತಿ ರಾಮಾಚಾರಿ ಇಲಾಖೆಗೆ ಮನವಿ ಮಾಡಿದ್ದರು.
ಈ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಪದವಿ ಕಾಲೇಜು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಉಪಯುಕ್ತವಾಗಿದ್ದಲ್ಲಿ ಕಾಲೇಜಿನ ಗ್ರಂಥಾಲಯ ಪುಸ್ತಕ ಸಮಿತಿ ಪರಿಶೀಲಿಸಿ ಅಗತ್ಯವಿದ್ದಲ್ಲಿ ವಾಚನಾಲಯದ ಖಾತೆಯಲ್ಲಿರುವ ಅನುದಾನದ ಲಭ್ಯತೆ ಆಧಾರದಲ್ಲಿ ಖರೀದಿಸುವಂತೆ ಅನುಮತಿ ನೀಡಿದೆ ಎಂದು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸುತ್ತೋಲೆ ಹೊರಡಿಸಿದ್ದಾರೆ.
ಅಲ್ಲಮ ಪ್ರಭುದೇವರು : ಚರಿತ್ರೆ, ಸಂಸ್ಕೃತಿ, ಜ್ಞಾನದ ಶೋಧಗಳು ಕೃತಿಯನ್ನು ಬೆಂಗಳೂರಿನ ಸುಮಾ ಪ್ರಕಾಶನ ಮುದ್ರಿಸಿ ಹೊರತಂದಿದೆ. ಕೆಲವು ತಿಂಗಳ ಹಿಂದೆ ಈ ಕೃತಿಯನ್ನು ಶಿವಮೊಗ್ಗದಲ್ಲಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗಿತ್ತು.