Thursday, May 4, 2023

ಅಭ್ಯರ್ಥಿಗಳೊಂದಿಗೆ ಮೇ.೬ರಂದು ಸಂವಾದ : ಸೂಚನೆ

ಮೇ.೫ರ ಮಧ್ಯಾಹ್ನದೊಳಗೆ ಹೆಸರು ನೋಂದಾಯಿಸಿ


    ಭದ್ರಾವತಿ, ಮೇ. ೪ : ಮೈಸೂರು ಕಾಗದ ಕಾರ್ಖಾನೆ ನೊಂದ ನಿವೃತ್ತ ಕಾರ್ಮಿಕರ ಹೋರಾಟ ವೇದಿಕೆ ವತಿಯಿಂದ ಮೇ.೬ರಂದು ಬೆಳಿಗ್ಗೆ ೧೧.೧೫ ರಿಂದ ೧೨.೩೦ರವರೆಗೆ ಹಳೇನಗರದ ಶ್ರೀ ಬಸವೇಶ್ವರ ವೃತ್ತದ ಸಮೀಪದಲ್ಲಿರುವ ಶ್ರೀ ಅಕ್ಕಮಹಾದೇವಿ ಸಮುದಾಯ ಭವನದಲ್ಲಿ ಮತದಾನ ಜಾಗೃತಿ ಮತ್ತು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
    ಮೈಸೂರು ಕಾಗದ ಕಾರ್ಖಾನೆ ಪುನರ್ ಆರಂಭಿಸುವುದು. ನಿವೃತ್ತ ಕಾರ್ಮಿಕರಿಗೆ ಬರಬೇಕಾಗಿರುವ ಲಕ್ಷಾಂತರ ರು. ಬಾಕಿ ಹಣ ಕೊಡಿಸುವ ಕುರಿತು ಮತ್ತು ಕಾರ್ಖಾನೆಯನ್ನು ಮುಚ್ಚುವ ಸ್ಥಿತಿಗೆ ತಂದು ಈಗಲೂ ಭ್ರಷ್ಟಾಚಾರದೊಂದಿಗೆ ಹಿಂಬಾಗಿಲಿಂದ ಅಧಿಕಾರದ ಚುಕ್ಕಾಣಿ ಹೊತ್ತಿರುವವರ ಮೇಲೆ ಕ್ರಮ ಕೈಗೊಳ್ಳುವ ಬಗ್ಗೆ ಸ್ಪಷ್ಟ ನಿಲುವು ಹಾಗು ಮುಂದಿನ ನಡೆಯ ಬಗ್ಗೆ ಸಂವಾದದಲ್ಲಿ ಚರ್ಚಿಸುವ ಅವಕಾಶ ಒದಗಿ ಬಂದಿದೆ. ಈ ಅವಕಾಶ ಕ್ಷೇತ್ರದ ಮತದಾರರಾದ ಕಾರ್ಮಿಕರು ಸದುಪಯೋಗಪಡಿಸಿಕೊಳ್ಳುವುದು.
    ಸಂವಾದದಲ್ಲಿ ಪಾಲ್ಗೊಳ್ಳಲು ಇಚ್ಛೆ ಇರುವ ಕಾರ್ಮಿಕರು ಮೇ.೫ರ ಮಧ್ಯಾಹ್ನ ೧೨ ಗಂಟೆಯೊಳಗಾಗಿ ತಿಳಿಸುವುದು. ಹೆಸರು ನೋಂದಾಯಿಸಿದವರು ಮಾತ್ರ ಸಂವಾದದಲ್ಲಿ ಭಾಗವಹಿಸಬಹುದಾಗಿದೆ. ಒಬ್ಬ ಅಭ್ಯರ್ಥಿಯೊಂದಿಗೆ ಅವರ ಅನುಯಾಯಿಗಳಲ್ಲಿ ಕೇವಲ ಒಬ್ಬರಿಗೆ ಮಾತ್ರ ಪ್ರವೇಶವಿರುತ್ತದೆ. ಮೊತ್ತಮೊದಲ ಬಾರಿಗೆ ಎಲ್ಲಾ ಅಭ್ಯರ್ಥಿಗಳನ್ನು ಒಂದೇ ವೇದಿಕೆಯ ಮೇಲೆ ಕೂರಿಸುವ ಮೂಲಕ ಕ್ಷೇತ್ರದ ಒಗ್ಗಟ್ಟನ್ನು ಪ್ರದರ್ಶಿಸುವುದು ನಮ್ಮ ಉದ್ದೇಶವಾಗಿದೆ. ವೇದಿಕೆಯಲ್ಲಿ ವೈಯಕ್ತಿಕ ನಿಂದನೆ ಮತ್ತು ಗಲಾಟೆಗಳಿಗೆ ಆಸ್ಪದ ನೀಡದಂತೆ ಸಹಕರಿಸುವುದು. ಹೆಚ್ಚಿನ ಮಾಹಿತಿಗೆ ಮೊ: ೯೪೮೧೪೯೩೯೮೩ ಸಂಖ್ಯೆಗೆ ಕರೆಮಾಡಬಹುದಾಗಿದೆ ಎಂದು ವೇದಿಕೆ ಪ್ರಧಾನ ಸಂಚಾಲಕ ಟಿ.ಜಿ ಬಸವರಾಜಯ್ಯ ತಿಳಿಸಿದ್ದಾರೆ.

ಬಾಡಿಗೆಗೆ ಬಂದಿದ್ದ ಚಾಲಕನ ಕಾರು ಕಳವು : ಪ್ರಕರಣ ದಾಖಲು

    ಭದ್ರಾವತಿ, ಮೇ. ೪: ಶಿವಮೊಗ್ಗಕ್ಕೆ ಬಾಡಿಗೆಗೆ ಬಂದಿದ್ದ ಕಾರು ಚಾಲಕನೋರ್ವ ರಸ್ತೆ ಬದಿ ತನ್ನ ಕಾರು ನಿಲ್ಲಿಸಿ ಸಮೀಪದಲ್ಲಿರುವ ಅಂಗಡಿಗೆ ತೆರಳಿ ಬರುವಷ್ಟರಲ್ಲಿ ಕಾರನ್ನು ಕಳವು ಮಾಡಿಕೊಂಡು ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
    ಬೀರೂರಿನ ಬಳ್ಳಾರಿ ಕ್ಯಾಂಪ್‌ನಿಂದ ಸುಮಾರು ೨೭ ವರ್ಷ ವಯಸ್ಸಿನ ಚಾಲಕ ಎ. ರಜನಿಕಾಂತ್, ಏ.೨೮ರಂದು ಬೆಳಿಗ್ಗೆ ೩ ಗಂಟೆ ಸಮಯದಲ್ಲಿ ಶಿವಮೊಗ್ಗಕ್ಕೆ ಬಾಡಿಗೆಗೆ ತೆರಳಿದ್ದು, ಮಧ್ಯಾಹ್ನ ೩.೪೫ರ ಸಮಯದಲ್ಲಿ ನಗರದ ಹೊರವಲಯದ ರಾಷ್ಟ್ರೀಯ ಹೆದ್ದಾರಿ ಎನ್.ಎಚ್ ೨೦೬ ರಸ್ತೆಯ ಜೇಡಿಕಟ್ಟೆ ಹತ್ತಿರ ಕಾರನ್ನು ಅಲ್ಲೇ ನಿಲ್ಲಿಸಿ ಕಾರಿನ ಕೀ ಅಲ್ಲಿಯೇ ಬಿಟ್ಟು ಅಂಗಡಿಯ ಹತ್ತಿರ ಹೋಗಿ ಬರುವಷ್ಟರಲ್ಲಿ ಕಾರಿನ ಹಿಂಬದಿಯ ಆಸನದಲ್ಲಿ ಕುಳಿತಿದ್ದ ವ್ಯಕ್ತಿಯೋರ್ವ ಡಿಸೈರ್ ಕಾರನ್ನು ಶಿವಮೊಗ್ಗ ಕಡೆಗೆ ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಎ. ರಜನಿಕಾಂತ್ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ನರಸಿಂಹ ಜಯಂತಿ ಉತ್ಸವ

ಮೇ.೫ರಂದು ಮಧ್ಯಾಹ್ನ ಬ್ರಹ್ಮರಥೋತ್ಸವ ೮ರಂದು ಸಂಪನ್ನ

ಭದ್ರಾವತಿ ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ.೮ರವರೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಬ್ರಹ್ಮರಥೋತ್ಸವ ನಡೆಯಲಿದ್ದು, ಗುರುವಾರ ಬೆಳಿಗ್ಗೆ ಶ್ರೀ ನರಸಿಂಹ ಜಯಂತಿ ಉತ್ಸವ ನಡೆಯಿತು.
    ಭದ್ರಾವತಿ, ಮೇ. ೪ : ಹಳೇನಗರದ ಪುರಾಣ ಪ್ರಸಿದ್ದ, ಕ್ಷೇತ್ರ ಪಾಲಕ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ.೮ರವರೆಗೆ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿಯವರ ಬ್ರಹ್ಮರಥೋತ್ಸವ ನಡೆಯಲಿದ್ದು, ಗುರುವಾರ ಬೆಳಿಗ್ಗೆ ಶ್ರೀ ನರಸಿಂಹ ಜಯಂತಿ ಉತ್ಸವ ನಡೆಯಿತು.
    ನರಸಿಂಹ ಜಯಂತಿ ಉತ್ಸವ ಅಂಗವಾಗಿ ವಸಂತಸೇವೆ, ಅಷ್ಟಾವಧಾನ, ಮಹಾಮಂಗಳಾರತಿ ಸೇರಿದಂತೆ ಇನ್ನಿತರ ಧಾರ್ಮಿಕ ಆಚರಣೆಗಳು ಜರುಗಿದವು. ಸಂಜೆ ಕಲ್ಯಾಣೋತ್ಸವ ವಿಜೃಂಭಣೆಯಿಂದ ನೆರವೇರಿತು.  
    ಆಡಳಿತಾಧಿಕಾರಿ ಎ.ಟಿ ಬಸವರಾಜ್, ದೇವಸ್ಥಾನದ ಪ್ರಧಾನ ಅರ್ಚಕ ವೇದಬ್ರಹ್ಮ ಎಸ್. ರಂಗನಾಥ ಶರ್ಮ, ಸಹಾಯಕ ಅರ್ಚಕ ಎಸ್. ಶ್ರೀನಿವಾಸ್, ಹರಿ, ಅಭಿನಂದನ್, ಕೃಷ್ಣಪ್ಪ ಸೇರಿದಂತೆ ಭಕ್ತಾಧಿಗಳು ಪಾಲ್ಗೊಂಡಿದ್ದರು.
    ಮೇ.೫ರಂದು ಬ್ರಹ್ಮರಥೋತ್ಸವ :
    ಪ್ರತಿವರ್ಷದಂತೆ ಈ ಬಾರಿ ಸಹ ಮೇ.೫ರಂದು ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ಬ್ರಹ್ಮರಥೋತ್ಸವ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಕೋರಲಾಗಿದೆ.
    ೬ರಂದು ಬೆಳಿಗ್ಗೆ ಗಜವಾಹನೋತ್ಸವ, ಸಂಜೆ ಶೇಷವಾಹನೋತ್ಸವ, ೭ರಂದು ಸಂಜೆ ಹನುಮಂತೋತ್ಸವ, ಪೂರ್ಣಾಹುತಿ ಹಾಗು ೮ರಂದು ಬೆಳಿಗ್ಗೆ ಮಹಾಭಿಷೇಕ, ಸಂಜೆ ಪಲ್ಲಕ್ಕಿ ಉತ್ಸವ ನಡೆಯಲಿದೆ.

ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿಲ್ಲ : ಸ್ಪಷ್ಟನೆ

ಕೋಡ್ಲುಯಜ್ಞಯ್ಯ
    ಭದ್ರಾವತಿ, ಮೇ. ೪ : ಕನ್ನಡ ಸಾಹಿತ್ಯ ಪರಿಷತ್ ಸ್ವತಂತ್ರ ಸಾಂವಿಧಾನಿಕ ಸಂಸ್ಥೆಯಾಗಿದ್ದು, ಯಾವುದೇ ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೋಡ್ಲುಯಜ್ಞಯ್ಯ ಸ್ಪಷ್ಟಪಡಿಸಿದ್ದಾರೆ.
    ಪರಿಷತ್ ಯಾವುದೇ ಪಕ್ಷದ ಮುಖವಾಣಿಯಲ್ಲ. ಇತ್ತೀಚೆಗೆ ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದ್ದು, ಇದು ಸತ್ಯಕ್ಕೆ ದೂರವಾಗಿದೆ. ಯಾವುದೇ ರಾಜಕೀಯ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿಲ್ಲ. ಯಾವುದೇ ರಾಜಕೀಯ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಉದ್ದೇಶ ನಾನು ಹೊಂದಿಲ್ಲ. ಸುಳ್ಳು ಮಾಹಿತಿಗೆ ಕಿವಿಗೊಡದಂತೆ ಮನವಿ ಮಾಡಿದ್ದಾರೆ.

ಭದ್ರಾವತಿ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಪೂರಕ ಪ್ರಣಾಳಿಕೆ

ಗೆಲುವು ಸಾಧಿಸುವ ಮೂಲಕ ಭರವಸೆ ಈಡೇರಿಸುವ ವಿಶ್ವಾಸ

ಭದ್ರಾವತಿಯಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಜನತಾ ಪಕ್ಷದ ಜಿಲ್ಲಾ ಪ್ರಮುಖರು, ವೈದ್ಯರಾದ ಡಾ. ಧನಂಜಯ ಸರ್ಜಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು.
    ಭದ್ರಾವತಿ, ಮೇ. ೪: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲೇ ಬೇಕೆಂಬ ಹಠಕ್ಕೆ ಬಿದ್ದಿರುವ ಭಾರತೀಯ ಜನತಾ ಪಕ್ಷ ಇದೀಗ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪ್ರಣಾಳಿಕೆ ಬಿಡುಗಡೆಗೊಳಿಸಿದೆ.
    ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಮುಖರು, ವೈದ್ಯರಾದ ಡಾ. ಧನಂಜಯ ಸರ್ಜಿ ಪ್ರಣಾಳಿಕೆ ಬಿಡುಗಡೆಗೊಳಿಸಿದರು. ಕೃಷಿ, ಕೈಗಾರಿಕೆ, ಆರೋಗ್ಯ, ಶಿಕ್ಷಣ, ಆಡಳಿತ ಮತ್ತು ಅಭಿವೃದ್ಧಿ ಹಾಗು ವಿಶೇಷ ಆದ್ಯತೆಗಳಡಿ ಹಲವಾರು ಭರವಸೆಗಳನ್ನು ನೀಡಿದೆ.
    ಪ್ರಮುಖವಾಗಿ ವಿಐಎಸ್‌ಎಲ್ ಮತ್ತು ಎಂಪಿಎಂ ಬೆಳವಣಿಗೆಗೆ ಆದ್ಯತೆ, ಕೆಆರ್‌ಎಸ್ ಮಾದರಿಯಲ್ಲಿ ಭದ್ರಾ ಜಲಾಶಯ ಸಮಗ್ರ ಅಭಿವೃದ್ಧಿ, ಕೈಗಾರಿಕಾ ವಸಾಹತುಗಳ ಮೇಲ್ದರ್ಜೆ ಮತ್ತು ಗಾರ್ಮೆಂಟರ‍್ಸ್‌ಗಳ ಸ್ಥಾಪನೆ, ಮಹಿಳೆಯರಿಗೆ ಕೈಗಾರಿಕಾ ಕೇಂದ್ರಗಳಿಗೆ ತೆರಳಲು ಬಸ್ ವ್ಯವಸ್ಥೆ, ಸರ್ಕಾರಿ ಹೆರಿಗೆ ಆಸ್ಪತ್ರೆ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಆದ್ಯತೆ, ಸುಸಜ್ಜಿತ ಸರ್ಕಾರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ, ಮೆಡಿಕಲ್ ಹಾಗು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ, ೧೮ ವರ್ಷ ಪೂರ್ಣಗೊಂಡವರಿಗೆ ಕಾಲೇಜುಗಳಲ್ಲೇ ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ(ಡಿ.ಎಲ್) ನೀಡಲು ಆದ್ಯತೆ ಹಾಗು ಕ್ಷೇತ್ರದ ಅನ್ನದಾತ ಸರ್.ಎಂ ವಿಶ್ವೇಶ್ವರಾಯನವರ ಬೃಹತ್ ಪ್ರತಿಮೆ ಸ್ಥಾಪನೆ ಸೇರಿದಂತೆ ಹಲವು ಭರವಸೆಗಳನ್ನು ಈ ಬಾರಿ ಪ್ರಣಾಳಿಕೆಯಲ್ಲಿ ನೀಡಿದೆ.
    ಪಕ್ಷದ ಅಭ್ಯರ್ಥಿ ಮಂಗೋಟೆ ರುದ್ರೇಶ್ ಮಾತನಾಡಿ, ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಣಾಳಿಕೆಯಲ್ಲಿರುವ ಬಹುತೇಕ ಭರವಸೆಗಳನ್ನು  ಈಡೇರಿಸುವ ವಿಶ್ವಾಸ ವ್ಯಕ್ತಪಡಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ತಾಲೂಕು ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಚುನಾವಣಾ ಪ್ರಭಾರಿ ಅಶೋಕ್ ಮೂರ್ತಿ, ಮುಖಂಡರಾದ ಕೂಡ್ಲಿಗೆರೆ ಹಾಲೇಶ್, ತೀರ್ಥಯ್ಯ, ಎಂ. ಮಂಜುನಾಥ್, ಆರ್.ಎಸ್ ಶೋಭಾ, ಎಂ.ಎಸ್ ಸುರೇಶಪ್ಪ, ಮಂಜುನಾಥ್ ಕದಿರೇಶ್, ಸಂಪತ್‌ರಾಜ್ ಬಾಂಟಿಯಾ, ಸುನಿಲ್ ಗಾಯಕ್‌ವಾಡ್, ಕವಿತಾ ರಾವ್, ಕೆ.ಎನ್ ಶ್ರೀಹರ್ಷ, ಬಿ.ಎಸ್ ಶ್ರೀನಾಥ್, ಕವಿತಾ ಸುರೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.