ಭದ್ರಾವತಿ ವಿಐಎಸ್‌ಎಲ್ ಅತಿಥಿಗೃಹ ಸಭಾಂಗಣದಲ್ಲಿ ನಗರದ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗಾಗಿ ನೂತನವಾಗಿ ಜಾರಿಗೆ ತಂದಿರುವ `ಕಾರುಣ್ಯ ದಾರಿ ದೀಪ ಯೋಜನೆ' ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
ಭದ್ರಾವತಿ: ವೃದ್ಧರ ಸೇವೆ ಮಾಡುವ ಮನೋಭಾವವಿದ್ದಾಗ ಮಾತ್ರ. ವೃದ್ದಾಶ್ರಮಗಳಲ್ಲೂ ನೆಮ್ಮದಿ ಕಾಣಲು ಸಾಧ್ಯ. ಇಂತಹ ಸಮಾಜಮುಖಿ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ಅವರು ಗುರುವಾರ ವಿಐಎಸ್‌ಎಲ್ ಅತಿಥಿಗೃಹ ಸಭಾಂಗಣದಲ್ಲಿ ನಗರದ ಜನ್ನಾಪುರ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗಾಗಿ ನೂತನವಾಗಿ ಜಾರಿಗೆ ತಂದಿರುವ `ಕಾರುಣ್ಯ ದಾರಿ ದೀಪ ಯೋಜನೆ' ಉದ್ಘಾಟಿಸಿ ಮಾತನಾಡಿದರು.
ಎಲ್ಲರ ಸಹಕಾರದೊಂದಿಗೆ ವೃದ್ಧಾಶ್ರಮಗಳನ್ನು ತೆರೆಯುವುದು ಸುಲಭ. ಆದರೆ ಆ ವೃದ್ಧಾಶ್ರಮಗಳಲ್ಲಿ ವೃದ್ಧರ ಸೇವೆ ಮಾಡುವವರ ಅಗತ್ಯವಿದೆ. ಇಂದು ನಮ್ಮನ್ನು ಬೆಳೆಸಿದ ತಂದೆ ತಾಯಿಯರನ್ನೇ ಅವರ ವೃದ್ದಾಪ್ಯದಲ್ಲಿ ನೋಡಿ ಕೊಳ್ಳುವುದು ಕಷ್ಟ. ಅಂತಹ ದಿನಗಳಲ್ಲಿ ಕಾರುಣ್ಯ ಚಾರಿಟೇಬಲ್ ಟ್ರಸ್ಟ್ ವಯೋವೃದ್ದರನ್ನು ಗೌರವಿಸಿ, ಪೋಷಣೆ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದರು.
ಮಕ್ಕಳು ತಮ್ಮ ಶಿಕ್ಷಣ ಹಾಗೂ ಆರೋಗ್ಯದ ಕಡೆ ಹೆಚ್ಚು ಗಮನಹರಿಸಬೇಕು. ಸರ್ಕಾರದಿಂದ ಸಾಕಷ್ಟು ಸೌಲಭ್ಯ ದೊರೆಯುತ್ತಿದ್ದು, ಅವುಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಪ್ರಜೆಗಳಾಗಿ ಹೊರಹೊಮ್ಮಬೇಕು. ಟ್ರಸ್ಟ್ ಜಾರಿಗೆ ತಂದಿರುವ ನೂತನ ಯೋಜನೆ ಯಶಸ್ವಿಯಾಗಿ ಮುನ್ನಡೆಯಲು ಎಲ್ಲಾ ರೀತಿಯ ಸಹಕಾರ ನೀಡಲಾಗುವುದು. ಟ್ರಸ್ಟ್ ಸೇವಾ ಕಾರ್ಯಗಳು ಇನ್ನೂ ಹೆಚ್ಚಿನ ರೀತಿಯಲ್ಲಿ ನಡೆಯುವಂತಾಗಬೇಕು.
ಟ್ರಸ್ಟ್ ಮುನ್ನಡೆಸಿಕೊಂಡು ಹೋಗುತ್ತಿರುವ ಜಿ. ರಾಜುರವರು ಮೂಲತಃ ಹೋರಾಟದಿಂದ ಬೆಳೆದುಬಂದವರು. ಇದೀಗ ಸೇವಾಮನೋಭಾವನೆಯೊಂದಿಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸೇವಾಕಾರ್ಯಕ್ಕೆ ಅಭಿನಂದನೆ ಸಲ್ಲಿಸುವ ಜೊತೆಗೆ ಶಾಸಕರು ಟ್ರಸ್ಟ್‌ಗೆ ೫ ಲಕ್ಷ ರು. ನೆರವು ನೀಡಿದ್ದು, ಅದನ್ನು ಸ್ವೀಕರಿಸಿ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೋರಿದರು. ಅಲ್ಲದೆ ಮುಂದಿನ ದಿನಗಳಲ್ಲಿ ಟ್ರಸ್ಟ್‌ಗೆ ಶಾಶ್ವತ ನೆಲೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಲಾಗುವುದು ಭರವಸೆ ನೀಡಿದರು.
ಹೋರಾಟಗಾರ ಕೆ.ಎಲ್ ಅಶೋಕ್ ಮಾತನಾಡಿ, ವೃದ್ದರು ಅನಾಥರಲ್ಲ. ವೃದ್ದರನ್ನು ಹೊರಹಾಕುವವರ ಅನಾಥರು ಎಂಬುದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ. ನಿಸ್ವಾರ್ಥತೆಯಿಂದ ಎಲ್ಲರೊಡನೆ ಬದುಕುವುದು ಕಲಿತಾಗ ಮಾತ್ರ ಸಮಾಜ ಮುಂದುವರೆಯಲು ಸಾಧ್ಯ. ನಿಸ್ವಾರ್ಥ ಸೇವಾ ಮನೋಭಾವದಿಂದ ಆರೋಗ್ಯಯುತ ಸಮಾಜ ನಿರ್ಮಾಣ ಮಾಡಲು ಹೊರಟಿರುವ ಕಾರುಣ್ಯ ಟ್ರಸ್ಟಿನ ಕೆಲಸ ರಾಜ್ಯದ ಉದ್ದಗಲಕ್ಕೂ ಹರಡುವಂತಾಗಲಿ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ನಾಗೇಂದ್ರಪ್ಪ ಮಾತನಾಡಿ, ಮನುಷ್ಯ ಮಾನವೀಯತೆಯನ್ನು ಮೈಗೂಡಿಸಿಕೊಂಡಾಗ ಮಾತ್ರ ಆತ ದೈವತ್ವವನ್ನು ಪಡೆಯಲು ಸಾಧ್ಯ. ಆಗ ಮಾತ್ರ ಅವರ ಮೇಲೆ ಪೂಜ್ಯ ಭಾವನೆ ಮೂಡುತ್ತದೆ. ಈ ನಿಟ್ಟಿನಲ್ಲಿ ಬುದ್ದನ ಶಾಂತಿ ಮಂತ್ರ, ಬಸವಣ್ಣನವರ ಆದರ್ಶ, ಅಂಬೇಡ್ಕರ್‌ರವರ ಜ್ಞಾನದ ದಾರಿಯಲ್ಲಿ ನಾವೆಲ್ಲರೂ ಮುನ್ನಡೆಯಬೇಕು. ೧೫ ಪ್ರೌಢಶಾಲೆಗಳಿಂದ ವಿಶೇಷ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಶಿಕ್ಷಣ ಕೊಡಿಸುವಲ್ಲಿ ಮುಂದಾಗಿರುವ ಕಾರುಣ್ಯ ಟ್ರಸ್ಟ್‌ಗೆ ಶಿಕ್ಷಣ ಇಲಾಖೆ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ನಗರಸಭೆ ಅಧ್ಯಕ್ಷ ಎಂ. ಮಣಿ ಎಎನ್‌ಎಸ್, ಹಿರಿಯ ನ್ಯಾಯವಾದಿ ಕೆ.ಎನ್ ಶ್ರೀಹರ್ಷ, ತಾಲೂಕು ಬಗರ್ ಹುಕುಂ ಸಮಿತಿ ಅಧ್ಯಕ್ಷ ಎಸ್. ಮಣಿಶೇಖರ್, ಸೂಡಾ ಸದಸ್ಯ ಎಚ್. ರವಿಕುಮಾರ್ ಸೇರಿದಂತೆ ಇನ್ನಿತರರು ಮಾತನಾಡಿ, ಟ್ರಸ್ಟ್ ಸೇವಾ ಕಾರ್ಯವನ್ನು ಪ್ರಶಂಸಿಸಿದರು.
ಕಾರುಣ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಜಿ.ರಾಜು ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್ ಪ್ರಮುಖರಾದ ಗೌರವಾಧ್ಯಕ್ಷ ಡಾ. ವಿಜಯ್ ಜಿ. ದುಬೈ, ನಿರ್ದೇಶಕ ವಿ.ಟಿ ರಮೇಶ್, ಡಾ. ನರೇಂದ್ರ ಬಾಬು, ರಘುರಾಮ್, ಸುರೇಶ್(ಕ್ಲಬ್), ಕೆಡಿಪಿ ಸದಸ್ಯ ರಾಜೇಂದ್ರ, ಡಿಎಸ್‌ಎಸ್ ಮುಖಂಡ ವಿ. ವಿನೋದ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕ ಎ. ತಿಪ್ಪೇಸ್ವಾಮಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್ ಖಜಾಂಚಿ ನಾಗವೇಣಿ ಸ್ವಾಗತಿಸಿ, ನಗರಸಭೆ ಮಾಜಿ ಸದಸ್ಯೆ ಅನ್ನಪೂರ್ಣ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪದಾಧಿಕಾರಿಗಳಾದ ನಾಗರಾಜ್, ಭಾಸ್ಕರ್, ಕಾರ್ತಿಕ್ ಸೇರಿದಂತೆ ಇನ್ನಿತರ ಸದಸ್ಯರು ಪಾಲ್ಗೊಂಡಿದ್ದರು.