Tuesday, January 16, 2024

`ಭದ್ರಾವತಿಯ ಕರಾಳ ದಿನ' ಆಚರಣೆ : ವಿಐಎಸ್‌ಎಲ್ ಗುತ್ತಿಗೆ ಕಾರ್ಮಿಕರಿಂದ ಪಂಚಿನ ಮೆರವಣಿಗೆ

ಸಂಸದ ಬಿ.ವೈ ರಾಘವೇಂದ್ರ ಕಾರ್ಖಾನೆ ಉಳಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸಲಿ


ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ೧೬ ಜನವರಿ ೨೦೨೩ರಂದು ಉಕ್ಕು ಪ್ರಾಧಿಕಾರ ತೀರ್ಮಾನ ತೆಗೆದುಕೊಂಡಿತ್ತು. ಇದನ್ನು ವಿರೋಧಿಸಿ ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ  ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದು, ಹೋರಾಟ ೧ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಮಂಗಳವಾರ `ಭದ್ರಾವತಿಯ ಕರಾಳ ದಿನ' ಆಚರಿಸಲಾಯಿತು. ಸಂಜೆ ನಡೆದ ಪಂಜಿನ ಮೆರವಣಿಗೆಯಲ್ಲಿ ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಪಾಲ್ಗೊಂಡಿದ್ದರು.
    ಭದ್ರಾವತಿ : ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಉಳಿಸುವ ನಿಟ್ಟಿನಲ್ಲಿ ಸಂಸದ ಬಿ.ವೈ ರಾಘವೇಂದ್ರ ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಶಾಸಕ ಬಿ.ಕೆ ಸಂಗಮೇಶ್ವರ್ ಸೇರಿದಂತೆ ಕಾಂಗ್ರೆಸ್ ಮುಖಂಡರು ಆಗ್ರಹಿಸಿದರು.
    ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು ಶಾಶ್ವತವಾಗಿ ಮುಚ್ಚಲು ಕೇಂದ್ರ ಸರ್ಕಾರದ ಆದೇಶದ ಮೇರೆಗೆ ೧೬ ಜನವರಿ ೨೦೨೩ರಂದು ಉಕ್ಕು ಪ್ರಾಧಿಕಾರ ತೀರ್ಮಾನ ತೆಗೆದುಕೊಂಡಿತ್ತು. ಇದನ್ನು ವಿರೋಧಿಸಿ ವಿಐಎಸ್‌ಪಿ ಕಾಂಟ್ರಾಕ್ಟ್ ವರ್ಕರ್ಸ್ ಯೂನಿಯನ್ ವತಿಯಿಂದ  ನಿರಂತರವಾಗಿ ಹೋರಾಟ ನಡೆಸಿಕೊಂಡು ಬರಲಾಗುತ್ತಿದ್ದು, ಹೋರಾಟ ೧ ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ಮಂಗಳವಾರ `ಭದ್ರಾವತಿಯ ಕರಾಳ ದಿನ' ಆಚರಿಸಲಾಯಿತು. ಸಂಜೆ ನಡೆದ ಪಂಜಿನ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದ ಬಿ.ಕೆ ಸಂಗಮೇಶ್ವರ್ ಹಾಗು ಕಾಂಗ್ರೆಸ್ ಮುಖಂಡರು, ಬಿ.ವೈ ರಾಘವೇಂದ್ರ ಅವರು ಈಗಲೂ ಸುಳ್ಳು ಭರವಸೆಗಳನ್ನು ನೀಡುತ್ತಿದ್ದಾರೆ ಹೊರತು ಕಾರ್ಖಾನೆಯನ್ನು ಉಳಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿಲ್ಲ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.  


    ಸೋಮವಾರ ಶಿವಮೊಗ್ಗದಲ್ಲಿರುವ ಸಂಸದರ ನಿವಾಸಕ್ಕೆ ಬೈಕ್ ರ್‍ಯಾಲಿ ಕೈಗೊಂಡಿದ್ದ ಗುತ್ತಿಗೆ ಕಾರ್ಮಿಕರು `ಭದ್ರಾವತಿಯ ಕರಾಳ ದಿನ'ದ ಅಂಗವಾಗಿ ನಗರದ  ಹೊಸಸೇತುವೆ ರಸ್ತೆ, ರಂಗಪ್ಪ ವೃತ್ತ, ಮಾಧವಚಾರ್ ವೃತ್ತ, ಹಾಲಪ್ಪ ವೃತ್ತ ಹಾಗು ಅಂಬೇಡ್ಕರ್ ವೃತ್ತದವರೆಗೂ ಪಂಜಿನ ಮೆರವಣಿಗೆ ನಡೆಸಿದರು. ಪ್ರಮುಖ ವೃತ್ತಗಳಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಸರ್ಕಾರ ಹಾಗು ಉಕ್ಕು ಪ್ರಾಧಿಕಾರದ ಧೋರಣೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಮೆರವಣಿಗೆಯಲ್ಲಿ ಪ್ರಮುಖರಾದ ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಎಸ್. ಕುಮಾರ್, ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ನೇತ್ರಾವತಿ, ನಗರಸಭೆ ಮಾಜಿ ಅಧ್ಯಕ್ಷ ಬಿ.ಕೆ ಮೋಹನ್, ಮುಖಂಡರಾದ ಎಚ್. ರವಿಕುಮಾರ್, ಅಭಿಲಾಷ್, ಗುತ್ತಿಗೆ ಕಾರ್ಮಿಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ನೂರಾರು ಕಾರ್ಮಿಕರು ಪಾಲ್ಗೊಂಡಿದ್ದರು.  

ಲಯನ್ಸ್ ಸೇವಾ ಕಾರ್ಯ ಶ್ಲಾಘನೀಯ : ಬಿ. ಸಿದ್ದಬಸಪ್ಪ

ಭದ್ರಾವತಿ ಸರ್ಕಾರಿ ನೌಕರರ ಸಂಘ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ಮಲ್ನಾಡ್ ಕಾನ್ಸರ್ ಆಸ್ಪತ್ರೆ, ಮೀನಾ ನರ್ಸಿಂಗ್ ಹೋಂ, ಲಯನ್ಸ್ ರಕ್ತ ನಿಧಿ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವದಿನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕ್ಯಾನ್ಸರ್ ಜಾಗೃತಿ ಉಪನ್ಯಾಸ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಬಿ.ಎಲ್ ರಂಗಸ್ವಾಮಿ ಸ್ವಾಮಿ, ಬಿ. ಸಿದ್ದಬಸಪ್ಪ ಸೇರಿದಂತೆ ಇನ್ನಿತರರು ಉದ್ಘಾಟಿಸಿದರು.
    ಭದ್ರಾವತಿ: ಲಯನ್ಸ್ ಒಂದು ಸೇವಾಧಾರಿತ ಸಂಸ್ಥೆ, ತಮ್ಮ ಕಾರ್ಯದ ಒತ್ತಡದ ನಡುವೆಯೂ ಕೂಡ ಸಂಸ್ಥೆಯು ನೂರಾರು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ಸ್ವಾಮಿ ವಿವೇಕಾನಂದ ಜಯಂತಿಯನ್ನು ರಕ್ತದಾನ ಹಾಗೂ ಆರೋಗ್ಯ ಶಿಬಿರ ಮೂಲಕ ನಡೆಸುತ್ತಿರುವುದು ಶ್ಲಾಘನೀಯ ಎಂದು ವಿಶ್ವೇಶ್ವರಾಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಬಿ.ಸಿದ್ದಬಸಪ್ಪ ಹೇಳಿದರು.
    ಸರ್ಕಾರಿ ನೌಕರರ ಸಂಘ, ವಿಶ್ವೇಶ್ವರಾಯ ವಿದ್ಯಾಸಂಸ್ಥೆ, ಮಲ್ನಾಡ್ ಕಾನ್ಸರ್ ಆಸ್ಪತ್ರೆ, ಮೀನಾ ನರ್ಸಿಂಗ್ ಹೋಂ, ಲಯನ್ಸ್ ರಕ್ತ ನಿಧಿ ಇವರ ಸಹಯೋಗದಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಯುವದಿನ, ಉಚಿತ ವೈದ್ಯಕೀಯ ತಪಾಸಣಾ ಶಿಬಿರ, ಕ್ಯಾನ್ಸರ್ ಜಾಗೃತಿ ಉಪನ್ಯಾಸ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರದ ಅಧ್ಯಕ್ಷತೆವಹಿಸಿ ಮಾತನಾಡಿದರು.
    ರಕ್ತದಾನ ಹಾಗು ಆರೋಗ್ಯ ಶಿಬಿರ ಜಾಗತಿಕ ಆದರ್ಶ ರೂಪಿ, ವೀರ ಸನ್ಯಾಸಿ ಸ್ವಾಮಿ ವಿವೇಕಾನಂದರಿಗೆ ನಾವು ಸಲ್ಲಿಸುತ್ತಿರುವ ಗೌರವದ ಸಮರ್ಪಣೆಯಾಗಿದೆ ಎಂದು ತಿಳಿಸಲು ಹೆಮ್ಮೆಯಾಗಿದೆ. ಲಯನ್ಸ್ ಕ್ಲಬ್ ಮಾದರಿಯಲ್ಲಿ ಎಲ್ಲಾ ಸ್ವಯಂ ಸೇವಾ ಸಂಸ್ಥೆಗಳು ಸಾಮಾಜಿಕ ಸೇವಾ ಕಾರ್ಯಗಳನ್ನು ಕೈಗೊಂಡಲ್ಲಿ ಭಾರತ ದೇಶ ಆರೋಗ್ಯಪೂರ್ಣರಾಷ್ಟ್ರವಾಗುವುದರಲ್ಲಿ ಸಂಶಯವಿಲ್ಲ. ಆರೋಗ್ಯವೇ ಮಹಾಭಾಗ್ಯ, ರಕ್ತದಾನ ಮಹಾದಾನ ಎಂದು ಲಯನ್ಸ್ ಕ್ಲಬ್ ಸೇವೆಯನ್ನು ಪ್ರಶಂಸಿಸಿದರು.
    ಮಾಜಿ ಜಿಲ್ಲಾ ಗವರ್ನರ್ ದಿವಾಕರ್ ಶೆಟ್ಟಿ ಮಾತನಾಡಿ, ರಾಷ್ಟ್ರೀಯ ಯುವದಿನವನ್ನು ರಕ್ತದಾನ ಶಿಬಿರದ ಮೂಲಕ ಆಚರಿಸುತ್ತಿರುವುದು ಸಂತಸದ ವಿಷಯ ಎಂದರು.
    ವಿದ್ಯಾಸಂಸ್ಥೆ ಸಂಸ್ಥಾಪಕ ಬಿ.ಎಲ್ ರಂಗಸ್ವಾಮಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ವೈದ್ಯರಾದ ಮೊಹಮ್ಮದ್ ಇಸ್ಮಾಯಿಲ್ ಶರೀಫ್ ಹಾಗೂ ಭರತ್ ಕ್ಯಾನ್ಸರ್ ತಡೆಗಟ್ಟುವ ಮಾರ್ಗೋಪಾಯಗಳು ಹಾಗೂ ಜೀವನ ಶೈಲಿ ಕುರಿತು ಪಿಪಿಟಿ ಮೂಲಕ ಜಾಗೃತಿ ಮೂಡಿಸಿದರು.
    ರಕ್ತನಿಧಿ ಅಧ್ಯಕ್ಷ ಮೌನೇಶ್, ರವಿಚಂದ್ರ ರಕ್ತದಾನ ಶಿಬಿರ ಹಾಗು ಮೀನಾ ನರ್ಸಿಂಗ್ ಹೋಂ ವೈದ್ಯರಾದ ಡಾ.ವರ್ಷಾ ಹಾಗೂ ಹಿತೇಶ್ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ಯಶಸ್ವಿಯಾಗಿ ನಡೆಸಿಕೊಟ್ಟರು.
    ಪ್ರಾಂತೀಯ ಅಧ್ಯಕ್ಷ ಎಲ್. ದೇವರಾಜ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆಶಾ ಸ್ವಾಗತಿಸಿ, ಕಾರ್ಯದರ್ಶಿ ಎಂ. ದಿವಾಕರ್ ನಿರೂಪಿಸಿ, ಬಿ.ಎಸ್ ರಾಜೇಶ್ ವಂದಿಸಿದರು. ಶ್ರೀನಿವಾಸ್, ಎಸ್.ಕೆ ಮೋಹನ್, ನಾಗರಾಜ್, ಶ್ರೀನಿವಾಸ್, ಅಶೋಕ್, ರಾಜ್‌ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮಾಜಿ ಸೈನಿಕರಿಂದ ಭಾರತೀಯ ಭೂ ಸೇನಾ ದಿನಾಚರಣೆ

ಭದ್ರಾವತಿಯಲ್ಲಿ ಭಾರತೀಯ ಭೂ ಸೇನಾ ದಿನಾಚರಣೆ ಅಂಗವಾಗಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಸೋಮವಾರ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿ ದೇಶಕ್ಕಾಗಿ ಸೈನಿಕರು ಸಲ್ಲಿಸುತ್ತಿರುವ ಸೇವೆ ಹಾಗು ಅವರ ದೇಶಭಕ್ತಿ ಸ್ಮರಣೆಯೊಂದಿಗೆ ಸಂಭ್ರಮಿಸಲಾಯಿತು. ಅಲ್ಲದೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಾಗು ನ್ಯೂಟೌನ್ ದಯಾಸಾಗರ್ ಟ್ರಸ್ಟ್‌ನಲ್ಲಿ ವಯೋವೃದ್ಧರು, ಅಶಕ್ತರಿಗೆ ಹಣ್ಣು ಹಂಪಲು ವಿತರಿಸಲಾಯಿತು.
    ಭದ್ರಾವತಿ: ಭಾರತೀಯ ಭೂ ಸೇನಾ ದಿನಾಚರಣೆ ಅಂಗವಾಗಿ ತಾಲೂಕು ಮಾಜಿ ಸೈನಿಕರ ಸಂಘದ ವತಿಯಿಂದ ಸೋಮವಾರ ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್ ಜಾಥಾ ನಡೆಸಿ ದೇಶಕ್ಕಾಗಿ ಸೈನಿಕರು ಸಲ್ಲಿಸುತ್ತಿರುವ ಸೇವೆ ಹಾಗು ಅವರ ದೇಶಭಕ್ತಿ ಸ್ಮರಣೆಯೊಂದಿಗೆ ಸಂಭ್ರಮಿಸಲಾಯಿತು. ಅಲ್ಲದೆ ಹಳೇನಗರದ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಒಳರೋಗಿಗಳಿಗೆ ಹಾಗು ನ್ಯೂಟೌನ್ ದಯಾಸಾಗರ್ ಟ್ರಸ್ಟ್‌ನಲ್ಲಿ ವಯೋವೃದ್ಧರು, ಅಶಕ್ತರಿಗೆ ಹಣ್ಣು ಹಂಪಲು ವಿತರಿಸಲಾಯಿತು.
    ನಗರಸಭೆ ವಾಡ್ ನಂ.೨೯ರ ಸಿದ್ದಾಪುರದಲ್ಲಿರುವ ಮಾಜಿ ಸೈನಿಕರ ಸಂಘದ ಕಛೇರಿಯಿಂದ ಆರಂಭಗೊಂಡ ಬೈಕ್ ಜಾಥಾ ಜಯಶ್ರೀ ಮುಖ್ಯ ರಸ್ತೆ ಮೂಲಕ ಜಯಶ್ರೀ ವೃತ್ತ, ವಿಐಎಸ್‌ಎಲ್ ಕಾರ್ಖಾನೆ ಮುಂಭಾಗದಿಂದ ಡಬ್ಬಲ್ ರಸ್ತೆ ಮೂಲಕ ಬಿ.ಎಚ್ ರಸ್ತೆ, ಅಂಬೇಡ್ಕರ್ ವೃತ್ತ, ಹಾಲಪ್ಪ ವೃತ್ತ, ಮಾಧವಚಾರ್ ವೃತ್ತ ಹಾಗು ರಂಗಪ್ಪ ವೃತ್ತ ಮೂಲಕ ತಾಲೂಕು ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ತಲುಪಿತು.
    ಸಂಘದ ಅಧ್ಯಕ್ಷ ಸುಬೇದಾರ್ ಗುಲ್ಗುಲೆ, ಉಪಾಧ್ಯಕ್ಷ ಮಹೇಶ್‌ಕುಮಾರ್, ಪ್ರಧಾನ ಕಾರ್ಯದರ್ಶಿ ವೆಂಕಟಗಿರಿ, ಸಹಕಾರ್ಯದರ್ಶಿ ಹರೀಶ್, ಹಿರಿಯ ಮಾಜಿ ಸೈನಿಕರಾದ ಗೋವಿಂದಪ್ಪ,  ವಾಸುದೇವನ್, ಮುದುಗಲ ರಾಮರೆಡ್ಡಿ, ಕೃಷ್ಣೋಜಿರಾವ್, ಸುರೇಶ್, ಅಭಿಲಾಷ್, ಗಿರಿ, ಶ್ರೀಧರ, ಉಮೇಶ್, ರಮೇಶ್, ದಿನೇಶ್, ಶೇಷಾಚಲ, ಉದಯ್,  ಸ್ಥಳೀಯರಾದ ರಾಜಶೇಖರ್, ಈಶ್ವರ್ ರಾವ್ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.