ಭದ್ರಾವತಿ ನಗರಸಭೆ ೨ನೇ ವಾರ್ಡಿನ ಕವಲಗುಂದಿ ಗ್ರಾಮದಲ್ಲಿ ಭದ್ರಾ ನದಿ ಪ್ರವಾಹದಿಂದಾಗಿ ಮನೆಗಳು ಸಂಪೂರ್ಣವಾಗಿ ಜಲಾವೃತಗೊಂಡಿರುವುದು.
ಭದ್ರಾವತಿ, ಆ. ೯: ಭದ್ರಾ ಜಲಾಶಯದಿಂದ ಹೆಚ್ಚುವರಿ ನೀರು ನದಿಗೆ ಬಿಟ್ಟಿರುವ ಹಿನ್ನಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ೨ನೇ ಬಾರಿಗೆ ಪ್ರವಾಹ ಉಂಟಾಗಿದ್ದು, ನದಿ ತೀರದ ತಗ್ಗು ಪ್ರದೇಶದಲ್ಲಿನ ಸುಮಾರು ೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಸೋಮವಾರ ರಾತ್ರಿ ಹೆಚ್ಚಿನ ಪ್ರಮಾಣದ ನೀರು ನದಿಗೆ ಬಿಡಲಾಗಿದ್ದು, ಇದರಿಂದಾಗಿ ನಗರ ವ್ಯಾಪ್ತಿಯಲ್ಲಿ ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿ ತಗ್ಗು ಪ್ರದೇಶದಲ್ಲಿನ ಮನೆಗಳು ಜಲಾವೃತಗೊಂಡಿವೆ. ಪ್ರವಾಹ ನಿಯಂತ್ರಿಸುವಲ್ಲಿ ನಗರಸಭೆ, ತಾಲೂಕು ಪಂಚಾಯಿತಿ ಮತ್ತು ತಾಲೂಕು ಆಡಳಿತಗಳು ಕಾರ್ಯಾಚರಣೆಯಲ್ಲಿ ತೊಡಗಿವೆ.
ಸೋಮವಾರ ಮಧ್ಯ ರಾತ್ರಿಯಿಂದಲೇ ನೀರಿನ ಮಟ್ಟ ಏರಿಕೆಯಾದ ಹಿನ್ನಲೆಯಲ್ಲಿ ತಗ್ಗು ಪ್ರದೇಶದಲ್ಲಿನ ನಿವಾಸಿಗಳನ್ನು ತಕ್ಷಣ ಸುರಕ್ಷಿತ ಸ್ಥಳಗಳಿಗೆ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಯಿತು.
೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತ್ತ :
ಗುಂಡೂರಾವ್ ಶೆಡ್‌ನಲ್ಲಿ ಸುಮಾರು ೧೦, ಎಕಿನ್ಸಾ ಕಾಲೋನಿಯಲ್ಲಿ ಸುಮಾರು ೨೫, ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ನಗರದಲ್ಲಿ ಸುಮಾರು ೩೫ ಹಾಗು ಕವಲಗುಂದಿ ಎ.ಕೆ ಕಾಲೋನಿಯಲ್ಲಿ ಸುಮಾರು ೩೨ ಮನೆಗಳು ಸೇರಿದಂತೆ ಒಟ್ಟು ಸುಮಾರು ೧೦೦ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.
೨ ಕಾಳಜಿ ಕೇಂದ್ರ, ೧೫೦ಕ್ಕೂ ಹೆಚ್ಚು ಮಂದಿ ಆಶ್ರಯ :
ಸದ್ಯದ ಪರಿಸ್ಥಿತಿಯಲ್ಲಿ ನಗರಸಭೆ ವ್ಯಾಪ್ತಿಯ ತರೀಕೆರೆ ರಸ್ತೆಯಲ್ಲಿರುವ ವಳ್ಳುವರ್ ಕಲ್ಯಾಣ ಮಂಟಪ ಮತ್ತು ಕವಲಗುಂದಿಯಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯ ೨ ಕಡೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಅಗತ್ಯ ಬಿದ್ದಲ್ಲಿ ಇನ್ನೂ ಹೆಚ್ಚಿನ ಕಾಳಜಿ ಕೇಂದ್ರಗಳನ್ನು ತೆರೆಯಲು ತೀರ್ಮಾನಿಸಲಾಗಿದೆ.
ವಯೋವೃದ್ಧರು, ಮಹಿಳೆಯರು, ಮಕ್ಕಳು ಸೇರಿದಂತೆ ಸುಮಾರು ೧೫೦ಕ್ಕೂ ಹೆಚ್ಚು ಮಂದಿ ತಾತ್ಕಾಲಿಕ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ. ಈ ನಡುವೆ ಬಿಸಿಎಂ ವಿದ್ಯಾರ್ಥಿ ನಿಲಯದ ಕಾಳಜಿ ಕೇಂದ್ರದಲ್ಲಿ ನವಜಾತ ಶಿಶುವಿನೊಂದಿಗೆ ಬಾಣಂತಿ ಮಹಿಳೆ ಇದ್ದು, ಇವರ ಪರದಾಟ ಹೇಳತಿಹದು. ಈ ನಡುವೆ ಅಂಬೇಡ್ಕರ್ ನಗರದ ಸಂತ್ರಸ್ಥರು ಕಾಳಜಿ ಕೇಂದ್ರಗಳಿಗೆ ತೆರಳಲು ನಿರಾಕರಿಸಿದ್ದು, ಇವರಿಗೆ ಇಲ್ಲಿಯೇ ಊಟ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಕಾಳಜಿ ಕೇಂದ್ರಗಳಲ್ಲಿ ಆರೋಗ್ಯ ಸಿಬ್ಬಂದಿಗಳನ್ನು ನಿಯೋಜನೆಗೊಳಿಸಲಾಗಿದೆ.
ಭದ್ರಾವತಿ ನಗರಸಭೆ ೨ನೇ ವಾರ್ಡಿನ ಕವಲಗುಂದಿ ಗ್ರಾಮದಲ್ಲಿ ಭದ್ರಾ ನದಿ ಪ್ರವಾದಿಂದಾಗಿ ಸಂತ್ರಸ್ಥರಾದವರು ಬಿಸಿಎಂ ವಿದ್ಯಾರ್ಥಿ ನಿಲಯದ ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿರುವುದು.
ಶಾಸಕರ ವಿರುದ್ಧ ಸಂತ್ರಸ್ಥರ ಆಕ್ರೋಶ :
ಗುಂಡೂರಾವ್ ಶೆಡ್ ಸಂತ್ರಸ್ಥರು ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭದ್ರಾ ನದಿಗೆ ತಡೆಗೋಡೆ ನಿರ್ಮಿಸುವಂತೆ ಹಲವಾರು ವರ್ಷಗಳಿಂದ ಒತ್ತಾಯಿಸಿಕೊಂಡು ಬರಲಾಗುತ್ತಿದೆ. ಆದರೂ ಸಹ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಚುನಾವಣೆ ಸಂದರ್ಭದಲ್ಲಿ ಮಾತ್ರ ಭರವಸೆ ನೀಡಿ ಹೋಗುತ್ತಾರೆ. ಪುನಃ ಈ ಕಡೆ ತಿರುಗಿ ನೋಡುವುದಿಲ್ಲ. ಪ್ರತಿ ವರ್ಷ ಮನೆಗಳು ಜಲಾವೃತಗೊಳ್ಳುತ್ತಿವೆ. ಇದರಿಂದಾಗಿ ಸಾಕಷ್ಟು ಸಂಕಷ್ಟ ಎದುರಿಸುವಂತಾಗಿದೆ. ನಮಗೆ ಬೇರೆ ಕಡೆ ನಿವೇಶನ ನೀಡಿ ತೆರವುಗೊಳಿಸಬಹುದು. ಆದರೆ ಮನೆ ನಿರ್ಮಿಸಿಕೊಳ್ಳುವಷ್ಟು ಹಣ ನಮ್ಮ ಬಳಿ ಇಲ್ಲ ಎಂದು ತಮ್ಮ ಅಳಲು ತೋರ್ಪಡಿಸಿಕೊಳ್ಳುವ ಜೊತೆಗೆ ತಕ್ಷಣ ತಡೆಗೋಡೆ ನಿರ್ಮಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮುಳುಗಡೆಗೊಂಡ ಹೊಸ ಸೇತುವೆ ವೀಕ್ಷಿಸಲು ಜನರ ದಂಡು :
ನಗರದ ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದ ಸಮೀಪದಲ್ಲಿರುವ ಹೊಸಸೇತುವೆ ೩ನೇ ಬಾರಿಗೆ ಪುನಃ ಮುಳುಗಡೆಗೊಂಡಿದ್ದು, ಸೇತುವೆಯನ್ನು ವೀಕ್ಷಿಸಲು ನಗರದ ವಿವಿಧೆಡೆಗಳಿಂದ ಜನರ ದಂಡು ಆಗಮಿಸುತ್ತಿದೆ. ಕೆಲವರು ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಿಕೊಳ್ಳುವುದು ಕಂಡು ಬಂದರೇ, ಮತ್ತೆ ಕೆಲವರು ಸೆಲ್ಫಿ ತೆಗೆದುಕೊಳ್ಳುವುದು ಕಂಡು ಬಂದಿತು.
ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಗಿದ್ದು, ಸೇತುವೆ ಎರಡು ಬದಿಯಲ್ಲೂ ಬ್ಯಾರಿಗೇಡ್‌ಗಳನ್ನು ಅಳವಡಿಸಲಾಗಿದೆ.
ವಾಹನ ದಟ್ಟಣೆ :
ಪ್ರವಾಹದಿಂದ ಹೊಸಸೇತುವೆ ಮುಳುಗಡೆಗೊಂಡಿರುವ ಹಿನ್ನಲೆಯಲ್ಲಿ ನಗರದಲ್ಲಿ ವಾಹನ ದಟ್ಟಣೆ ಅಧಿಕವಾಗಿದ್ದು, ಎಲ್ಲಾ ವಾಹನಗಳು ಹಳೇ ಸೇತುವೆ ಮೇಲೆ ಸಂಚರಿಸುವಂತಾಗಿದೆ. ಬಿ.ಎಚ್ ರಸ್ತೆ ಹಾಗು ಸಿ.ಎನ್ ರಸ್ತೆ ಗಳಲ್ಲಿ ವಾಹನ ದಟ್ಟಣೆ ಅಧಿಕವಾಗಿದೆ.
ಭದ್ರಾವತಿ ಹೃದಯ ಭಾಗದಲ್ಲಿರುವ ಹೊಸ ಸೇತುವೆ ಸಂಪೂರ್ಣವಾಗಿ ಮುಳುಗಡೆಗೊಂಡಿದ್ದು, ಭದ್ರಾ ನದಿಯಲ್ಲಿ ಪ್ರವಾಹ ಉಂಟಾಗಿರುವುದು.