Monday, November 23, 2020

ಕರ್ತವ್ಯ ಲೋಪ : ಮಾವಿನಕಟ್ಟೆ ವಲಯ ಅರಣ್ಯಾಧಿಕಾರಿ ವಿರುದ್ಧ ದೂರು

ದಿನಗೂಲಿ/ಪಿಸಿಪಿ ನೌಕರರಿಂದ ಸ್ವಂತ ಜಮೀನಿನಲ್ಲಿ ಜೋಳ ಮುರಿದು ತುಂಬಿಸುವ ಕೆಲಸಕ್ಕೆ

ಅರಣ್ಯ ಇಲಾಖೆಯ ದಿನಗೂಲಿ/ಪಿಸಿಪಿ ನೌಕರರನ್ನು ಮೀರಿ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಜೋಳ ಮುರಿದು ತುಂಬಿಸುವ ಕೆಲಸದಲ್ಲಿ ತೊಡಗಿಸಿಕೊಂಡಿರುವುದು.
ಭದ್ರಾವತಿ, ನ. ೨೩: ಅರಣ್ಯ ಇಲಾಖೆಯ ಮಾವಿನಕಟ್ಟೆ ವಲಯ(ಶಾಂತಿಸಾಗರ)ದ ವಲಯ ಅರಣ್ಯಾಧಿಕಾರಿಯೊಬ್ಬರು ಕರ್ತವ್ಯ ಲೋಪ ವೆಸಗಿದ್ದು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತಾಲೂಕಿನ ಉಕ್ಕುಂದ ಗ್ರಾಮದ ಸಾಮಾಜಿಕ ಹೋರಾಟಗಾರ ಶಿವಕುಮಾರ್ ಶಿವಮೊಗ್ಗ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೋಮವಾರ ದೂರು ಸಲ್ಲಿಸಿದ್ದಾರೆ.
     ವಲಯ ಅರಣ್ಯಾಧಿಕಾರಿಯವರು ತಮ್ಮ ವಲಯದ ಎಲ್ಲಾ ದಿನಗೂಲಿ/ಪಿಸಿಪಿ ನೌಕರರನ್ನು ತಮ್ಮ ವಲಯದ ವ್ಯಾಪ್ತಿ ಮೀರಿ ಚನ್ನಗಿರಿ ತಾಲೂಕಿನ ಚಿಕ್ಕಗಂಗೂರು ಗ್ರಾಮದಲ್ಲಿ ತಮ್ಮ ಸ್ವಂತ ಜಮೀನಿನಲ್ಲಿ ಜೋಳ ಮುರಿದು ತುಂಬಿಸುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕೆಲಸ ಮಾಡುವ ಜಮೀನಿನ ಸ್ಥಳಕ್ಕೆ ತೆರಳಿ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ. ಈ ಕುರಿತು ಈಗಾಗಲೇ ನ.೧೯ರಂದು ದೂರವಾಣಿ ಮೂಲಕ ಮಾಹಿತಿ ಸಹ ನೀಡಲಾಗಿದೆ. ವಲಯ ಅರಣ್ಯಾಧಿಕಾರಿಗಳು ಕೆಲಸಕ್ಕೆ ಕರೆತಂದಿರುವ ಸತ್ಯ ಸಂಗತಿಯನ್ನು ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಪಿಸಿಪಿ ನೌಕರರು ಹೊರ ಹಾಕಿದ್ದಾರೆ. ಅಲ್ಲದೆ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಸಹ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
     ಈ ಎಲ್ಲಾ ವಿಚಾರಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಮಾಡಿರುವ ನಷ್ಟ, ದ್ರೋಹದ ಹಿನ್ನಲೆಯಲ್ಲಿ ತಕ್ಷಣ ಅವರನ್ನು ಸೇವೆಯಿಂದ ಅಮಾನತ್ತುಗೊಳಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.  



ವಿಐಎಸ್‌ಎಲ್ ಖಾಸಗಿಕರಣ ಭೀತಿ : ವಾಸದ ಗೃಹಗಳನ್ನು ನಿವೃತ್ತ ಕಾರ್ಮಿಕರಿಗೆ ವಹಿಸಿಕೊಡಿ

ಸಹಿ ಅಭಿಯಾನದ ಮೂಲಕ ಪ್ರಧಾನಿ ನರೇಂದ್ರ ಮೋದಿಗೆ ಮನವಿ


ಕೇಂದ್ರ ಉಕ್ಕು ಪ್ರಾಧಿಕಾರದ ಭದ್ರಾವತಿ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯ ವಸತಿ ಗೃಹಗಳನ್ನು ಶಾಶ್ವತವಾಗಿ ನಿವೃತ್ತ ಕಾರ್ಮಿಕರಿಗೆ ವಹಿಸಿಕೊಡಲು ಪತ್ರದ ಮೂಲಕ ಸಹಿ ಅಭಿಯಾನ ನಡೆಸಲಾಗುತ್ತಿದೆ.

      ಭದ್ರಾವತಿ, ನ. ೨೩: ಕೇಂದ್ರ ಉಕ್ಕು ಪ್ರಾಧಿಕಾರದ ನಗರದ ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಪುನಃ ಖಾಸಗಿಕರಣಗೊಳ್ಳುವ ಭೀತಿ ಎದುರಾಗಿದ್ದು, ಮುಂದಿನ ಹೋರಾಟಗಳ ಬಗ್ಗೆ ರೂಪುರೇಷೆಗಳು ಸಿದ್ದಗೊಳ್ಳುತ್ತಿರುವ ನಡುವೆ ನಿವೃತ್ತ ಕಾರ್ಮಿಕರು ತಮ್ಮ ಭವಿಷ್ಯದ ಬದುಕಿನ ಸೂರಿಗಾಗಿ ಎದುರು ನೋಡುವ ಪರಿಸ್ಥಿತಿ ನಿರ್ಮಾಣವಾಗಿದೆ.
      ದೇಶದ ಬೃಹತ್ ಕೈಗಾರಿಕೆಗಳಲ್ಲಿ ಒಂದಾಗಿರುವ ವಿಐಎಸ್‌ಎಲ್ ಕಾರ್ಖಾನೆ ಇದೀಗ ಖಾಸಗಿಯವರಿಗೆ ವಹಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ಸುಕವಾಗಿದ್ದು, ಈ ನಿಟ್ಟಿನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗಳು ಕಾರ್ಮಿಕ ವಲಯವನ್ನು ಆತಂಕಕ್ಕೆ ಎಡೆ ಮಾಡಿಕೊಟ್ಟಿವೆ. ಈ ಹಿಂದೆ ಸಹ ಖಾಸಗಿಕರಣಗೊಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿತ್ತು. ಕಾರ್ಮಿಕ ಸಂಘಟನೆಗಳು, ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಸಂಘ-ಸಂಸ್ಥೆಗಳು, ಮಠಮಂದಿರಗಳು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಸೇರಿದಂತೆ ಸಮಸ್ತ ನಾಗರೀಕರು ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಖಾಸಗಿಕರಣ ಕೈಬಿಡಲಾಗಿತ್ತು. ಇದೀಗ ಪುನಃ ಹೋರಾಟದ ಲಕ್ಷಣಗಳು ಎದ್ದು ಕಾಣುತ್ತಿವೆ.
     ಕಾರ್ಖಾನೆಯಲ್ಲಿ ಸುಮಾರು ೩೦-೪೦ ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಕಾರ್ಮಿಕರು ತಮಗೆ ಬಂದ ನಿವೃತ್ತಿ ಹಣದಲ್ಲಿ ಬದುಕು ಕಟ್ಟಿಕೊಂಡಿದ್ದು, ಯಾವುದೇ ಸ್ವಂತ ಸೂರಿಲ್ಲದ ಬಹುತೇಕ ನಿವೃತ್ತ ಕಾರ್ಮಿಕರು ಲಕ್ಷಾಂತರ ರು. ವೆಚ್ಚದಲ್ಲಿ ಕಾರ್ಖಾನೆಯ ಹಾಳಾದ ವಸತಿ ಗೃಹಗಳನ್ನು ವಾಸಿಸಲು ಯೋಗ್ಯವಾದ ರೀತಿಯಲ್ಲಿ ದುರಸ್ತಿಪಡಿಸಿಕೊಂಡು ವಾಸಿಸುತ್ತಿದ್ದಾರೆ. ಇದೀಗ ಈ ಮನೆಗಳನ್ನು ಸಹ ಖಾಸಗಿಯವರಿಗೆ ವಹಿಸಿಕೊಡುವ ಭೀತಿ ಎದುರಾಗಿದೆ. ಈ ಹಿನ್ನಲೆಯಲ್ಲಿ ನಿವೃತ್ತ ಕಾರ್ಮಿಕರು ವಾಸದ ಗೃಹಗಳನ್ನು ಶಾಶ್ವತವಾಗಿ ತಮಗೆ ವಹಿಸಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿಯವರ ಗಮನ ಸೆಳೆಯಲು ಮುಂದಾಗಿದ್ದಾರೆ.
     ನಿವೃತ್ತ ಕಾರ್ಮಿಕರು ಪತ್ರದ ಮೂಲಕ ಸಹಿ ಅಭಿಯಾನ ಕೈಗೊಂಡು ನರೇಂದ್ರ ಮೋದಿಯವರಿಗೆ ಮನವಿ ಸಲ್ಲಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಕಳೆದ ಸುಮಾರು ಒಂದು ವಾರದಿಂದ ಪ್ರತಿಯೊಂದು ಮನೆಗೆ ತೆರಳಿ ಸಹಿ ಸಂಗ್ರಹಿಸುತ್ತಿದ್ದು, ಈ ಕಾರ್ಯದಲ್ಲಿ ನಿವೃತ್ತ ಕಾರ್ಮಿಕರಾದ ನರಸಿಂಹಚಾರ್, ರಾಜಪ್ಪ, ಜಗದೀಶ್, ನಂಜಪ್ಪ, ಸುಬ್ರಮಣ್ಯ, ಕೆಂಪಯ್ಯ, ನಾಗರಾಜ್, ವಿ ಪ್ರಸಾದ್ ಸೇರಿದಂತೆ ಇನ್ನಿತರರು ತೊಡಿಗಿಸಿಕೊಂಡಿದ್ದಾರೆ.

ರು.೫೦ ಲಕ್ಷ ವೆಚ್ಚದಲ್ಲಿ ೧೧ ಅಡಿ ಎತ್ತರದ ಅಂಬೇಡ್ಕರ್ ಕಂಚಿನ ಪ್ರತಿಮೆ ಪ್ರತಿಸ್ಥಾಪನೆಗೆ ಆಗ್ರಹ

ಡಿಎಸ್‌ಎಸ್‌ವತಿಯಿಂದ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ

ಭದ್ರಾವತಿ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ವೃತ್ತವನ್ನು ಅಭಿವೃದ್ಧಿಪಡಿಸಿ ಹೆಚ್ಚಿನ ಅನುದಾನ ಬಳಸಿ ಸುಮಾರು ೧೧ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘಷ ಸಮಿತಿ ವತಿಯಿಂದ ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
ಭದ್ರಾವತಿ, ನ. ೨೩: ನಗರದ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ವೃತ್ತವನ್ನು ಅಭಿವೃದ್ಧಿಪಡಿಸಿ ಹೆಚ್ಚಿನ ಅನುದಾನ ಬಳಸಿ ಸುಮಾರು ೧೧ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘಷ ಸಮಿತಿ ವತಿಯಿಂದ ಸೋಮವಾರ ಶಾಸಕ ಬಿ.ಕೆ ಸಂಗಮೇಶ್ವರ್‌ಗೆ ಮನವಿ ಸಲ್ಲಿಸಲಾಯಿತು.
    ರಾಜ್ಯ ಖಜಾಂಚಿ ಸತ್ಯ ಮಾತನಾಡಿ, ಸಮಿತಿ ವತಿಯಿಂದ ಈ ಹಿಂದೆ ನಿರಂತರವಾಗಿ ಹೋರಾಟ ನಡೆಸಿದ ಪರಿಣಾಮ ಅಂಡರ್ ಬ್ರಿಡ್ಜ್ ವೃತ್ತಕ್ಕೆ ೨೦೦೪ರಲ್ಲಿ ಅಂದಿನ ಶಾಸಕರಾಗಿದ್ದ ದಿವಂಗತ ಎಂ.ಜೆ ಅಪ್ಪಾಜಿ ಹಾಗು ನಗರಸಭೆ ಆಡಳಿತ ಅಂಬೇಡ್ಕರ್ ವೃತ್ತ ಹೆಸರನ್ನು ಶಿಫಾರಸ್ಸು ಮಾಡಿದ ಪರಿಣಾಮ ಸರ್ಕಾರದಿಂದ ಅಧಿಕೃತವಾಗಿ ನಾಮಕರಣಗೊಳಿಸಿ ಉದ್ಘಾಟಿಸಲಾಯಿತು. ನಂತರ ೨೦೦೬ರಲ್ಲಿ ತಾವು ಶಾಸಕರಾಗಿದ್ದ ಅವಧಿಯಲ್ಲಿ ಪ್ರತಿಮೆ ಪ್ರತಿಷ್ಠಾಪನೆಗೆ ಶಂಕುಸ್ಥಾಪನೆ ನೆರವೇರಿಸಿದ್ದು, ೨೦೦೭ರಲ್ಲಿ ಬಿ.ಎಸ್ ಯಡಿಯೂರಪ್ಪ ೬ ಅಡಿ ಎತ್ತರದ ಅಂಬೇಡ್ಕರ್ ಪ್ರತಿಮೆ ಅನಾವರಣಗೊಳಿಸಿದ್ದರು ಎಂದರು.
   ತದ ನಂತರ ವೃತ್ತವನ್ನು ಅಭಿವೃದ್ಧಿಗೊಳಿಸಿ ೧೧ ಅಡಿ ಎತ್ತರದ ನೂತನ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಹೋರಾಟ ನಡೆಸಲಾಯಿತು. ಇದರ ಪರಿಣಾಮ ನಗರಸಭೆ ಆಡಳಿತ ಸುಮಾರು ರು. ೨೫ ಲಕ್ಷ ಅನುದಾನ ಮೀಸಲಿರಿಸಿತ್ತು. ಅಂದಿನ ಜಿಲ್ಲಾಧಿಕಾರಿಯಾಗಿದ್ದ ವಿ.ಪಿ ಇಕ್ಕೇರಿಯವರು ರು.೧೦ ಲಕ್ಷ ಹೆಚ್ಚಿನ ಅನುದಾನ ಮೀಸಲಿರಿಸುವಂತೆ ನಗರಸಭೆ ಆಡಳಿತಕ್ಕೆ ಸೂಚಿಸಿದ್ದರು. ಪ್ರಸ್ತುತ ವೃತ್ತವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಈ ಹಿನ್ನಲೆಯಲ್ಲಿ  ರು.೩೫ ಲಕ್ಷ ಅನುದಾನದ ಜೊತೆಗೆ ಹೆಚ್ಚುವರಿಯಾಗಿ ರು.೧೫ ಲಕ್ಷ ಸೇರಿಸಿ ಒಟ್ಟು ರು. ೫೦ ಲಕ್ಷ ವೆಚ್ಚದಲ್ಲಿ ನೂತನ ಪ್ರತಿಮೆ ಪ್ರತಿಷ್ಠಾಪಿಸಬೇಕು. ವೃತ್ತವನ್ನು ಮತ್ತಷ್ಟು ವಿಸ್ತರಿಸಿ ನಗರವನ್ನು ಸುಂದರಗೊಳಿಸುವ ಜೊತೆಗೆ ಸುಗಮ ಸಂಚಾರ ವ್ಯವಸ್ಥೆಗೆ ಅನುಕೂಲ ಕಲ್ಪಿಸಿಕೊಡುವಂತೆ ಕೋರಿದರು.
    ಮನವಿ ಸ್ವೀಕರಿಸಿದ ಶಾಸಕ ಬಿ.ಕೆ ಸಂಗಮೇಶ್ವರ್, ನೂತನ ಪ್ರತಿಮೆ ನಿರ್ಮಾಣಕ್ಕೆ ಹೆಚ್ಚಿನ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಭದ್ರಾವತಿ ಬಿ.ಎಚ್ ರಸ್ತೆ ಅಂಡರ್ ಬ್ರಿಡ್ಜ್ ಬಳಿ ಇರುವ ಅಂಬೇಡ್ಕರ್ ವೃತ್ತವನ್ನು ಅಭಿವೃದ್ಧಿಪಡಿಸಿ ಹೆಚ್ಚಿನ ಅನುದಾನ ಬಳಸಿ ಸುಮಾರು ೧೧ ಅಡಿ ಎತ್ತರದ ಕಂಚಿನ ಪ್ರತಿಮೆ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘಷ ಸಮಿತಿ ರಾಜ್ಯ ಖಜಾಂಚಿ ಸತ್ಯ ಮಾತನಾಡಿದರು.
     ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಚಿನ್ನಯ್ಯ, ಮುಖಂಡರಾದ ಡಿ. ರಾಜು, ಈಶ್ವರಪ್ಪ ಸೇರಿದಂತೆ ಇನ್ನಿತರರು ಮಾತನಾಡಿದರು. ತಹಸೀಲ್ದಾರ್ ಗ್ರೇಡ್-೨ ರಂಗಮ್ಮ, ನಗರಸಭೆ ಪೌರಾಯುಕ್ತ ಮನೋಹರ್, ಕಂದಾಯಾಧಿಕಾರಿ ಪ್ರಶಾಂತ್, ಪೊಲೀಸ್ ನಗರವೃತ್ತ ನಿರೀಕ್ಷಕ ರಾಘವೇಂದ್ರ ಕಾಂಡಿಕೆ ಉಪಸ್ಥಿತರಿದ್ದರು.
    ಡಿಎಸ್‌ಎಸ್ ತಾಲೂಕು ಸಂಚಾಲಕ ಕೆ. ರಂಗನಾಥ್, ರಾಜ್ಯ ಸಹ ಸಂಚಾಲಕಿ ಪಿ.ಆರ್ ಶಾಂತಿ, ಅಂಗವಿಕಲರ ವಿಭಾಗದ ಜಿಲ್ಲಾಧ್ಯಕ್ಷ ಕಾಣಿಕ್‌ರಾಜ್, ಜಿಲ್ಲಾ ಸಮಿತಿ ಸದಸ್ಯ ಜಿಂಕ್‌ಲೈನ್ ಮಣಿ, ಶಿವಶಂಕರ್, ಕೆ. ಸುರೇಶ್, ಆರ್. ಸಂದೀಪ, ನರಸಿಂಹ, ಪಿ.ಸಿ ರಾಜು(ದಾಸ), ಅವಿನಾಶ್, ಪ್ರಸನ್ನ, ಪೊಬಾಲನ್, ಕೆ. ಕುಪ್ಪಸ್ವಾಮಿ, ಮಂಜುಮಣಿ, ಗೋವಿಂದ, ಕಬಡ್ಡಿ ಸುಬ್ಬು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.